ಲವ್ವೆಲ್ಲಾ ಡವ್ ಅಲ್ಲ

ಈ ಹಿಂದೆ 'ಶಿವಗಂಗಾ', 'ಸಿನಿಮಾ ಅಲ್ಲ ರಿಯಲ್ ಸ್ಟೋರಿ' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜೀವ್ ಕೃಷ್ಣ ಈಗ ಮತ್ತೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಲವ್ವೆಲ್ಲಾ ಸುಳ್ಳಲ್ಲ ಎಂಬ ಹೆಸರಿನ ಈ ಚಿತ್ರವನ್ನು ಸಂಜಯ್ ಸೌಭಾಗ್ಯ ಹಾಗೂ ಗೋಪಾಲಕೃಷ್ಣ ನಿರ್ಮಿಸುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ನಂದಿಬೆಟ್ಟ, ಚಿಂತಾಮಣಿ ಮೊದಲಾದ ಸ್ಥಳಗಳಲ್ಲಿ ಈ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಚಿತ್ರಣ ನಡೆದಿದ್ದು ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲೆಂದೇ ಚಿತ್ರ ತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ಈ ಚಿತ್ರ ಆರಂಭಿಸಿದಾಗಿನಿಂದ ನಿರ್ದೇಶಕ ರಾಜೀವ್ಕೃಷ್ಣ ಮಾತು ಶುರು ಮಾಡಿದರು.
'ನಾನು ಆಸೆ ಪಟ್ಟು ಮಾಡಿದ ಸಿನಿಮಾ ಶಿವಗಂಗಾ ಇನ್ನೂ ಬಿಡುಗಡೆಯಾಗಿಲ್ಲ. ಇನ್ನೊಂದು ಸಿನಿಮಾ ನಿಂತೇ ಹೋಯಿತು. ಆದರೂ ಹೆದರದೆ ಮತ್ತೊಂದು ಕಥೆ ಮಾಡಿ ಮಂಜುನಾಥ ಬಾಬು, ಮೋಹನ್, ನಾರಾಯಣಸ್ವಾಮಿ ಹಾಗೂ ನಾನು ಸೇರಿಕೊಂಡು ಕೇವಲ 5 ಲಕ್ಷದಲ್ಲಿ ಈ ಸಿನಿಮಾ ಮುಗಿಸಬೇಕೆಂದು ಪ್ರಾರಂಭಿಸಿದೆವು. ಅದೇ ಸಮಯದಲ್ಲಿ ಟಿ.ವಿ.ಕಾರ್ಯಕ್ರಮವೊಂದರಲ್ಲಿ ನನ್ನನ್ನು ನೋಡಿದ ಬಾಲ ಸ್ನೇಹಿತರಾದ ಗೋಪಾಲಕೃಷ್ಣ ನನ್ನ ನಂಬರ್ ಪತ್ತೆ ಹಚ್ಚಿ ಕರೆಸಿಕೊಂಡರು. ಆಗ ಅವರಿಗೆ ಈ ಸಿನಿಮಾ ಬಗ್ಗೆ ಹೇಳಿದಾಗ ಅದ್ದೂರಿಯಾಗಿಯೇ ಮಾಡೋಣ ಎಂದು ಒಪ್ಪಿದರು. ಅವರ ಅಕ್ಕ ಸೌಭಾಗ್ಯ ಅವರೇ ಪೂರ್ತಿ ಹಣ ನೀಡಿದರು' ಎಂದು ಹೇಳಿದ ರಾಜೀವ್ಕೃಷ್ಣ ಚಿತ್ರದ ಬಗ್ಗೆಯೂ ಹೇಳಿಕೊಂಡರು. 'ಕಾಮಿಡಿ, ಲವ್, ಸೆಂಟಿಮೆಂಟ್ ಸಮಾನವಾಗಿರುವ ತ್ರಿಕೋನ ಪ್ರೇಮ ಕಥೆಯಿದು. ನಿಜವಾದ ಪ್ರೇಮ ಯಾವುದು, ಕೃತಕ ಪ್ರೇಮ ಯಾವುದು ಅಂತ ತಿಳಿಸುವ ಒಂದು ಚಿಕ್ಕ ಪ್ರಯತ್ನ. ಮಿಲನ ಎಂಬ ಹೊಸ ಹುಡುಗನ ಜೊತೆ ಪೂರ್ಣಿಮಾ ಹಾಗೂ ಶ್ರೀಪ್ರಿಯಾ ನಾಯಕಿಯರಾಗಿ ನಟಿಸಿದ್ದಾರೆ. ಸುಮಾರು 60 ಲಕ್ಷರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ 26 ದಿನಗಳ ಕಾಲ ರಾಜ್ಯದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂಬುದು ನಿರ್ದೇಶಕರ ವಿವರಣೆ.
ನಿರ್ಮಾಪಕಿ ಶ್ರೀಮತಿ ಸೌಭಾಗ್ಯ ಮಾತನಾಡಿ ನನ್ನ ಸಹೋದರ ಗೋಪಾಲಕೃಷ್ಣ ಹಾಗೂ ರಾಜೀವ್ಕೃಷ್ಣ ಬಾಲ್ಯ ಸ್ನೇಹಿತರು. ಆತ ಶಾಲಾದಿನಗಳಲ್ಲಿ ನಾನು ಡೈರೆಕ್ಟರ್ ಆಗುತ್ತೇನೆ ಅಂತ ಹೇಳಿದ್ದನ್ನು ಕೇಳಿ ನಗುತ್ತಿದ್ದೆವು. ಈಗ ಅವನು ನಿಜವಾಗ್ಲೂ ಡೈರೆಕ್ಟರ್ ಆಗಿದ್ದಾನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಾಯಕ-ನಾಯಕಿಯರು ಹೊಸ ಹುಡುಗರಾದರೂ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದರು.
'ಸಿನಿಮಾ ಸೇರುತ್ತೇನೆ ಅಂದಾಗ ನಾನೂ ಆತನನ್ನು ಬಹಳ ಸಾರಿ ಬೈದಿದ್ದೆ. ಆದರೆ, ಸಿನಿಮಾ ಬೇಡವೆಂದು ದೂರವಿದ್ದ ನಮ್ಮನ್ನೇ ಸಿನಿಮಾದತ್ತ ಆತ ಕರೆತಂದಿದ್ದಾನೆ ಎಂದರು ಗೋಪಾಲಕೃಷ್ಣ.
ನಾಯಕ ಮಿಲನ್ ಕೋಲಾರದ ಹುಡುಗ, ನಾಯಕಿಯರಲ್ಲೊಬ್ಬಳಾದ ಪೂರ್ಣಿಮಾಗೆ ಇದು 2ನೇ ಚಿತ್ರ.
'ತುಂಟ ಹುಡುಗಿ, ಪ್ರೀತಿ ಅಂದ್ರೆ ಟೈಂಪಾಸ್ ಅಂತಿದ್ದವಳು ನಿಧಾನವಾಗಿ ಲವ್ಗೆ ಜಾರುತ್ತಾಳೆ. ಆಕೆಯ ಲವ್ ಆಕೆಗೆ ಸಿಗುತ್ತೋ ಇಲ್ಲವೋ ಅನ್ನೋದೇ ನನ್ನ ಪಾತ್ರದ ವಿಶೇಷ' ಎಂದು ಹೇಳಿಕೊಂಡರು ಪೂರ್ಣಿಮಾ. ಇನ್ನೊಬ್ಬ ನಾಯಕಿ ಶ್ರೀಪ್ರಿಯಾಗೆ ಇದು 4ನೇ ಚಿತ್ರ. ಆದರೆ ಇನ್ನೂ ಯಾವುದೂ ಬಿಡುಗಡೆಯಾಗಿಲ್ಲವಂತೆ.
ಸದ್ಯ ಚಿತ್ರದ ಎಡಿಟಿಂಗ್ ನಡೆಯುತ್ತಿದ್ದು ಮುಂದಿನ ತಿಂಗಳು ಧ್ವನಿಸುರುಳಿ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


