ಆ ಕಾಲದ ದುರಂತ

ನಟಿ ಪೂಜಾಗಾಂಧಿ ಅವರ ವೃತ್ತಿ ಜೀವನಕ್ಕೆ 'ಅಭಿನೇಯತ್ರಿ' ಮಹತ್ವದ ಚಿತ್ರವಾಗಲಿದೆಯೇ? ಇಂಥದೊಂದು ಸುದ್ದಿ ಈಗಾಗಲೇ ಗಾಂಧಿನಗರದಲ್ಲಿ ಸದ್ದು ಮಾಡಲಾರಂಭಿಸಿದೆ. ಚಿತ್ರದ ಹಾಡುಗಳನ್ನು ಕೇಳಿದಾಗ ಈ ಸದ್ದು ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಮೂಡಿ ಬಂದಿರುವ ಚಿತ್ರದ ಪ್ರತಿ ಹಾಡಿನ ಸಾಲು ಕೇಳುಗನ ಮನಸ್ಸಿಗೆ ನಾಟುತ್ತದೆ. ಶ್ರೇಯಾ ಘೋಷಲ್‌ರ ಮೆಲೋಡಿ ದ್ವನಿ, ಮನೋಮೂರ್ತಿ ಅವರ 'ಮೆಲ್ಲುಸಿರೆ ಸವಿಗಾನ' ಎನ್ನುವಂತ ರಾಗಗಳಿಂದ 'ಅಭಿನೇಯತ್ರಿ' ಹಾಡುಗಳಿಗೆ ಹೊಸತನ ಬಂದಿದೆ. ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಆಡಿಯೋ ಸಿಡಿ ಬಿಡುಗಡೆ ಮಾಡಿದರು. 'ಹೊರಟು ಹೋದೆಯಾ ಅಭಿನೇಯತ್ರಿ. ಮತ್ತೊಂದು ಪಾತ್ರ ಮಾಡಲು' ಎನ್ನುವ ಹಾಡು ಕೇಳಿದಾಕ್ಷಣ ನಟಿ ಪೂಜಾಗಾಂಧಿ ಕಣ್ಣಲ್ಲಿ ನೀರು ತುಂಬಿಕೊಂಡು ವೇದಿಕೆಯಿಂದ ಮರೆಯಾಗಿದ್ದು ಕ್ಯಾಮೆರಾಗಳಿಗೆ ಕಾಣಲಿಲ್ಲ!
ಸತೀಶ್ ಪ್ರಧಾನ್ ನಿರ್ದೇಶನದ, ಪೂಜಾಗಾಂಧಿ ಅವರೇ ನಿರ್ಮಾಣ ಮಾಡಿರುವ ಈ 'ಅಭಿನೇಯತ್ರಿ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಕೇಂದ್ರಬಿಂದು ಗಾಯಕಿ ಶ್ರೇಯಾ. ಆದರೆ, ಅಂದಿನ ವೇದಿಕೆಯಲ್ಲಿ ಹೆಚ್ಚು ಆಕರ್ಷಿಸಿದ್ದು ಮಾತ್ರ 70 ಮತ್ತು 80ರ ದಶಕದ ಹಾಡುಗಳಿಗೆ ನಟಿಯರಾದ ನೀತೂ, ಯಜ್ಞಾ ಶೆಟ್ಟಿ, ತೇಜಸ್ವಿನಿ, ಹರ್ಷಿಕಾ ಪೂಣಚ್ಚ, ರೂಪಿಕಾ ಅವರ ನೃತ್ಯ ಹಾಗೂ ಮಾಲತಿ ಸುಧೀರ್ ಅವರ ಹಳ್ಳಿ ನಾಟಕ ಸಭಿಕರ ಗಮನ ಸೆಳೆಯಿತು. ಇವರ ಹಾಡು, ನೃತ್ಯಗಳಿಂದ ವೇದಿಕೆ ಮೇಲೆ ಹಳೆ ಕಾಲ ಮರುಕಳಿಸಿದಂತೆ ಕಂಡಿತು. 'ಇದು ನನ್ನ ಒಬ್ಬಳ ಸಿನಿಮಾ ಅಲ್ಲ. ನಮ್ಮ ಇಡೀ ಚಿತ್ರತಂಡಕ್ಕೆ ಸೇರಿದ್ದು. ನಾನು ಇಲ್ಲಿ ನಟಿ ಮತ್ತು ನಿರ್ಮಾಪಕಿ ಅಷ್ಟೆ. ಈಗಾಗಲೇ ಸುದ್ದಿ ಮಾಡುತ್ತಿರುವಂತೆ ಒಬ್ಬ ಕಲ್ಪನಾ ಅವರ ಬದುಕಿನ ಕಥೆಯಲ್ಲ ಇದು. ಅಂದಿನ ಬಹುತೇಕ ದುರಂತ ನಾಯಕಿಯರು ಈ ಚಿತ್ರ ನೋಡಿದಾಗ ನೆನಪಾಗುತ್ತಾರೆ' ಎಂದರು ಪೂಜಾ.
ನಿರ್ದೇಶಕ ಸತೀಶ್ ಪ್ರಧಾನ್ ಕಥೆ ಮಾಡಿಕೊಂಡು ಹೋದಾಗ ಮೊದಲು ಮಾರ್ಗದರ್ಶನ ಮಾಡಿ ಅಶೀರ್ವಾದ ಮಾಡಿದ್ದು ಕೆ.ಎಸ್.ಎಲ್. ಸ್ವಾಮಿ. ಹೀಗಾಗಿ ಸ್ವಾಮಿ ಅವರಿಗೆ ನಿರ್ದೇಶಕರು ಕೃತಜ್ಞತೆ ಸಲ್ಲಿಸಿದರು. ಹಾಡುಗಳ ಬಗ್ಗೆ ಜಯಂತ್, ಮನೋಮೂರ್ತಿ, ಶ್ರೇಯಾ ಘೋಷಾಲ್ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಹಿರಿಯ ನಿರ್ದೇಶಕ ಭಗವಾನ್, ಶ್ರೀನಾಥ್, ರಾಧಾರವಿ, ಲಕ್ಷ್ಮಿ ದೇವಮ್ಮ, ಆರ್.ಟಿ. ರಮಾ, ಬಿ. ಜಯ, ಶಾಂತಮ್ಮಜ್ಜಿ ಹಾಗೂ ಸೂರಪ್ಪ ಬಾಬು, ಉಮೇಶ್ ಬಣಕಾರ್, ವಿಜಯ್ ಕುಮಾರ್, ದಿನೇಶ್‌ಗಾಂಧಿ ಮುಂತಾದವರು ಆಗಮಿಸಿ 'ಅಭಿನೇಯತ್ರಿ' ಚಿತ್ರಕ್ಕೆ ಶುಭ ಕೋರಿದರು.
-ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


