ಸಿನಿಮಾ ಲೇಖನ

ಕಾಕಿ ಬಣ್ಣ ಕಾಂತ?

ಕಾಕಿ ಬಣ್ಣ ಕಾಂತ?
Published On :

ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಪ್ರೇಕ್ಷಕರು ಅದನ್ನು ಕಾಣಲು ಇನ್ನೂ 21 ದಿನ ಕಾಯಬೇಕಿದೆ. ಅಂದರೆ ಮಾರ್ಚ್ 28ಕ್ಕೆ ಸಿನಿಮಾ ಎಲ್ಲರ ಮುಂದೆ ಬರಲಿದೆ. ಇಲ್ಲಿಯವರೆಗೂ ಹಾಡು ಕೇಳಿ, ಟ್ರೈಲರ್ ನೋಡಿ ಕಾಲ ಕಳೆಯುತ್ತಿದ್ದ ಆಸಕ್ತರಿಗೆ ಚಿತ್ರಮಂದಿರದಲ್ಲಿ ಫುಲ್‌ಮೀಲ್ಸ್ ಸಿಗುವ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಚಿತ್ರಪ್ರಭದಲ್ಲೊಂದು ಚಾಟ್ ಮೀಲ್ಸ್..

ಉಳಿದವರು ಕಂಡಂತೆ ಚಿತ್ರ ಬಿಡುಗಡೆಯಾಗೋಕೆ ಇನ್ನು ಎಷ್ಟು ದಿನ ಉಳಿದುಕೊಂಡಿದೆ?
ಇನ್ನು 21 ದಿನ.

= ಉಳಿದವರು ಕಂಡಂತೆ ಚಿತ್ರದ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಹೇಳಿ..
'ಕಾಕಿ ಬಣ್ಣ ಕಾಂತ' ಹಾಡು ಶೀತಲ್ ಶೆಟ್ಟಿ ಮೇಲೆ ಚಿತ್ರೀಕರಣವಾಗಿದೆ ಅಂತ ಎಲ್ಲರೂ ಅಂದ್ಕೊಂಡಿದಾರೆ. ಆದರೆ ಅದು ಅಚ್ಯುತ್ ಅವರ ಮೇಲೆ ಚಿತ್ರೀಕರಣವಾಗಿದೆ. ಅವರನ್ನ ಕಾಗೆ ಫಾಲೋ ಮಾಡುತ್ತೆ. ಆದರೆ ಅದು ನಿಜವೋ ಸುಳ್ಳೋ ಅಂತ ಅವರಿಗೆ ಗೊತ್ತಿರಲ್ಲ. ಭಂಗಿ ಸೇದುವಾಗ ಸತ್ಯ ಯಾವುದು ಸುಳ್ಳು ಯಾವುದು ಅಂತ ಗೊತ್ತಾಗಲ್ಲ ಅನ್ನೋ ಥರಾ ಇದೆ ಆ ಹಾಡು.

= ನಿರ್ಮಾಪಕರಲ್ಲೊಬ್ಬರಾದ ಸುನಿ ತಮ್ಮ ಬಹುಪರಾಕ್ ಚಿತ್ರಕ್ಕಿಂತ ನಿಮ್ಮ ಚಿತ್ರದ ಮೇಲೇ ಹೆಚ್ಚು ಆಸಕ್ತಿ ತೋರಿಸ್ತಾ ಇದಾರೆ ಅಂದ್ರೆ ಚಿತ್ರದಲ್ಲಿ ಏನೋ ಇರಬೇಕು ಅಲ್ವಾ?
ಹಾ, ಹೌದು. ಆದರೆ, ಅವರ ಸಿನಿಮಾ ಕೆಲಸ ಮುಗಿದಿದ್ರೂ ಅದನ್ನ ನನ್ನ ಸಿನಿಮಾ ನಂತರ ಬಿಡುಗಡೆ ಮಾಡುತ್ತಿದ್ದಾರೆ ಅಂದ್ರೆ ಅದು ಅವರ ಪ್ರೀತಿಯೂ ಹೌದು. ನಮ್ಮ ತಂಡದ ಬದ್ಧತೆ ಅವರಿಗೆ ಇಷ್ಟ ಆಗಿದೆ. ನಮ್ಮ ಸಿನಿಮಾಗೆ ಮೋಸ ಆಗಬಾರದು ಅನ್ನೋ ಕಳಕಳಿ ಅವರದ್ದು.

= ಉಳಿದವರು ಕಂಡಂತೆ ಚಿತ್ರದಲ್ಲಿ ನಿರ್ದೇಶಕರಾಗಿ ನಿಮಗಿಷ್ಟವಾದದ್ದು ಏನು?
ಅಜನೀಶ್‌ರ ಸಂಗೀತ, ಹಿನ್ನೆಲೆ ಸಂಗೀತ, ಕರಮ್ ಚಾವ್ಲಾ ಛಾಯಾಗ್ರಹಣ ಮತ್ತು ಕಿಶೋರ್ ಅವರ ಅಭಿನಯ.

= ನಟನಾಗಿ ನಿಮಗೆ ಇಷ್ಟವಾಗಿದ್ದು?
ಬರೆಯುವಾಗ ನಾನು ಆ್ಯಕ್ಟರ್ ಆಗಿಯೇ ಯೋಚನೆ ಮಾಡಿದ್ದು. ಅದು ಸ್ವಾರ್ಥ ಇರಬಹುದು. ಆದರೆ, ನಾನು  ಮೊದಲಿನಿಂದಲೂ ಹಾಗೆಯೇ. ನನ್ನ ಕಿರುಚಿತ್ರಗಳಲ್ಲೂ ನಾನೇ ಬರೆದುಕೊಂಡು ಆ್ಯಕ್ಟ್ ಮಾಡ್ತಿದ್ದೆ. ಈ ಥರ ಕ್ಯಾರೆಕ್ಟರ್ ಪ್ಲೇ ಮಾಡೋ ಆಸೆ ಇತ್ತು. ಸೋ ನಾನೇ ಮಾಡಿಕೊಂಡೆ. ಯಾರೋ ಬರೆದಿದ್ದನ್ನು ನಮಗಿಷ್ಟ ಬಂದಂಗೆ ಕೇಳಿ ಬದಲಾಯಿಸಿಕೊಳ್ಳೋದಕ್ಕಿಂತ, ಇಷ್ಟವಿಲ್ಲದೆ ಅಭಿನಯಿಸೋಕಿಂತ ಇದೇ ಸರಿ ಅಂತ ನನ್ನ ಭಾವನೆ. ಸೋ ನನ್ನ ಕ್ಯಾರೆಕ್ಟರ್ ನಂಗಿಷ್ಟ.

= ಸಿನಿಮಾದ ಎರಡು ಹಾಡು ಎಲ್ಲಿಂದಲೋ ಕದ್ದಿದ್ದು ಅಂತಿದಾರೆ ಕೆಲವರು. ನೀವು ಏನು ಹೇಳ್ತೀರಿ?
ಯಾವುದರಿಂದ ಕದ್ದಿದಾರೆ ಅಂತಾರಲ್ಲ ಆ ಹಾಡುಗಳನ್ನು ಜೊತೆ ಜೊತೆಗೆ ಪ್ಲೇ ಮಾಡಿ ಎಲ್ಲಿ ಹೋಲಿಕೆ ಇದೆ ಅಂತ ತೋರಿಸಲಿ. ಆಗ ಗೊತ್ತಾಗುತ್ತೆ. 'ನಾಕ್ ನಾಕ್‌' ಹಾಡಿಗೆ 'ಕಿಲ್‌ಬಿಲ್‌' ಚಿತ್ರದ ರೆಫರೆನ್ಸ್ ಹೇಳಿ ಅದಕ್ಕೆ ಟ್ರಿಬ್ಯೂಟ್ ಅನ್ನೋ ಥರ ಹಾಡು ಮಾಡಿದ್ದೇವೇ ಹೊರತು ಎಲ್ಲೂ ಕಾಪಿ ಮಾಡಿಲ್ಲ. ಆ ಫೀಲ್ ಇದೆ ಅಷ್ಟೆ. ಅದು ಬೇಕಂತಲೇ ಮಾಡಿದ್ದು. ನನಗೆ ಮ್ಯೂಸಿಕ್ ಬಗ್ಗೆ ಅಷ್ಟೊಂದು ಗೊತ್ತಿರದ ಕಾರಣ ಕೆಲವು ರೆಫರೆನ್ಸ್ ಹೇಳಿದ್ದೆ ಅಷ್ಟೆ. ಸುನಿ ಹಾಡಿಗೂ ಅಷ್ಟೆ. 'ಕಣ್ಣಾಮುಚ್ಚೆ' ಎನ್ನುವ ಒಂದು ಪದ ಬಿಟ್ಟು ಇನ್ಯಾವ ಹೋಲಿಕೆಯೂ 'ರಂಗ್ ದೇ ಬಸಂತಿ' ಚಿತ್ರದ ಹಾಡಿನೊಂದಿಗೆ ಇಲ್ಲ. ಅಷ್ಟಕ್ಕೂ ಯಾರಿಗಾದರೂ ಹಾಗನ್ನಿಸಿದರೆ ಅದರ ಜವಾಬ್ದಾರಿ ನನ್ನದು. ಅದರಲ್ಲಿ ಸುನಿ ಅವರದಾಗಲೀ, ಅಜನೀಶ್ ಅವರದಾಗಲಿ ಯಾವ ತಪ್ಪೂ ಇಲ್ಲ. ಆದರೆ ಸಿನಿಮಾ ಬಿಡುಗಡೆ ಆದಮೇಲೆ ಯಾರೂ ಕೂಡ, ಇದು ಕದ್ದಿದ್ದು ಅಂತ ಹೇಳೊಲ್ಲ ಎನ್ನುವ ಆತ್ಮವಿಶ್ವಾಸ ನನಗಿದೆ.

ಸಿನಿಮಾ ಈಗಾಗಲೇ ಪಾಪ್ಯುಲರ್ ಅಂತೂ ಆಗಿದೆ. ಆದರೆ ಅದರ ಕಮರ್ಷಿಯಲ್ ಸಕ್ಸಸ್ ಬಗ್ಗೆ ನಿಮಗೆ ಎಷ್ಟು ನಂಬಿಕೆ ಇದೆ?
ನಂಬಿಕೆ ಖಂಡಿತಾ ಇದೆ. ಆದರೆ ಬರೆಯುವಾಗ ನಾನು ಕಮರ್ಷಿಯಲ್ ಸಕ್ಸಸ್ ಬಗ್ಗೆ ಯೋಚಿಸಲಿಲ್ಲ. ಬರೆದು ಮುಗಿಸಿ ಸುನಿ ಅವರ ಬಳಿ ನಿಮಗೆ ಇದು ಕಮರ್ಷಿಯಲ್ ಆಗಿ ವರ್ಕ್ ಔಟ್ ಆಗುತ್ತೆ ಅನ್ನಿಸಿದ್ರೆ ಮಾಡಿ ಅಂದೆ. ಅವರಿಗೆ ಅನಿಸಿರಬೇಕು. ಅದರ ಜೊತೆಗೆ ನಮ್ಮ ಸ್ನೇಹಕ್ಕೆ ಬೆಲೆ ಕೊಟ್ಟು ಅವರು ಸಿನಿಮಾ ಮಾಡಲು ಒಪ್ಪಿಕೊಂಡರು. ಆದರೆ ನಮ್ಮ ಚಿತ್ರದಲ್ಲಿ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳಂತೂ ಖಂಡಿತಾ ಇವೆ.

= ನಿಮ್ಮದು ಮಲ್ಟಿಪ್ಲೆಕ್ಸ್ ಸಿನಿಮಾ ಅಂತೆ. ನಿಮ್ಮ ಪ್ರಕಾರ ಮಲ್ಟಿಪ್ಲೆಕ್ಸ್ ಸಿನಿಮಾ ಅಂದ್ರೇನು? ಕೆಜಿ ರೋಡ್ ಸಿನಿಮಾಗೂ ಮಲ್ಟಿಪ್ಲೆಕ್ಸ್ ಸಿನಿಮಾಗೂ ಏನು ವ್ಯತ್ಯಾಸ?

ಕೆಜಿ ರೋಡಲ್ಲಿ ಕಟೌಟ್‌ಗಳಿರ್ತವೆ. ಮಲ್ಟಿಪ್ಲೆಕ್ಸ್‌ನಲ್ಲಿ ಫ್ಲೆಕ್ಸ್‌ಗಳಿರ್ತವೆ ಅನ್ನೋದು ತಮಾಷೆಯ ಉತ್ತರ. ಗಂಭೀರವಾಗಿ ಹೇಳಬೇಕೆಂದರೆ, ಯಾವ ಥರದ ಪ್ರೇಕ್ಷಕರು ಚಿತ್ರದ ಜೊತೆಗೆ ಕನೆಕ್ಟ್ ಆಗ್ತಾರೆ ಅನ್ನೋದರ ಮೇಲೆ ಅದು ನಿಂತಿದೆ. ಅನ್‌ರಿಯಲಿಸ್ಟಿಕ್ ಆಗಿ ಹತ್ತಾರು ಟಾಟಾ ಸುಮೋಗಳು ಹಾರಾಡಿದರೆ ಮಲ್ಟಿಪ್ಲೆಕ್ಸ್ ಪ್ರೇಕ್ಷಕ ಒಪ್ಪಲ್ಲ. ಆದರೆ ಕೆಜಿ ರೋಡ್ ಪ್ರೇಕ್ಷಕ ಲಾಜಿಕ್ ನೋಡಲ್ಲ. ಆದರೆ ಅದೇ ಅಂತಿಮ ಅಂತಲ್ಲ. 'ಉಗ್ರಂ'ನಂಥ ಸಿನಿಮಾನ ಮಲ್ಟಿಪ್ಲೆಕ್ಸ್ ಪ್ರೇಕ್ಷಕರೂ ನೋಡ್ತಾ ಇದಾರೆ. ಹಾಗೇ ಲಾಜಿಕ್ ಇರುವ ಒಂದು ಕ್ಲಾಸ್ ಸಿನಿಮಾ ಸಿಂಗಲ್ ಥಿಯೇಟರ್‌ನಲ್ಲೂ ಓಡುತ್ತೆ.

ಹರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.