ಸಿನಿಮಾ ಲೇಖನ

ಅರ್ಜುನ್ ಹವಾ

'ಈ ಮಟ್ಟದ ಗೆಲುವು, ಅವಕಾಶಗಳು ಸುಲಭಕ್ಕೆ ಬಂದಿದ್ದಲ್ಲ. ಹಲವು ವರ್ಷಗಳ ಕಾಲ ಇಲ್ಲಿ ಬೆವರು ಹರಿಸಿದ್ದೇನೆ' ...

ಅರ್ಜುನ್ ಹವಾ
Published On :

'ಈ ಮಟ್ಟದ ಗೆಲುವು, ಅವಕಾಶಗಳು ಸುಲಭಕ್ಕೆ ಬಂದಿದ್ದಲ್ಲ. ಹಲವು ವರ್ಷಗಳ ಕಾಲ ಇಲ್ಲಿ ಬೆವರು ಹರಿಸಿದ್ದೇನೆ' ಕೀ ಬೋರ್ಡ್ ಪಕ್ಕದಲ್ಲಿ ಕೂತು ಹೀಗೆಂದಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ದುನಿಯಾ ವಿಜಯ್ ಅಭಿನಯದ 'ಸಿಂಹಾದ್ರಿ' ಚಿತ್ರದ ರೀರೆಕಾರ್ಡಿಂಗ್‌ನಲ್ಲಿದ್ದರು ಅರ್ಜುನ್.
ಕೆಲಸದ ನಡುವೆಯೇ ತಮ್ಮ ವೃತ್ತಿ ಪಯಣದ ದಿನಗಳನ್ನು ಮೆಲುಕು ಹಾಕಿದರು. ಒಬ್ಬ ಸಾಮಾನ್ಯ ಕೀ ಬೋರ್ಡ್ ಪ್ಲೇಯರ್ ಆಗಿದ್ದ ಅರ್ಜುನ್ ಜನ್ಯ, ಚಿತ್ರರಂಗಕ್ಕೆ ಬಂದಾಕ್ಷಣ ಗಾಂಧಿನಗರ ಅವರನ್ನು ಅಪ್ಪಿಕೊಳ್ಳಲಿಲ್ಲ. ಆರಂಭದಲ್ಲಿ ಅವರ ಹಾಡುಗಳು ಕೇಳುಗರ ಮೆಚ್ಚುಗೆ ಗಳಿಸಿದರೂ ಚಿತ್ರಗಳು ಸೋಲುತ್ತಿದ್ದವು. ಹೀಗಾಗಿ ಅರ್ಜುನ್‌ರಿಗೆ ಇಲ್ಲಿ ನೆಲೆಯೂರುವುದು ತುಂಬಾ ಕಷ್ಟವೇ ಎನಿಸುತ್ತಿರುವಾಗಲೇ, 'ಕೆಂಪೇಗೌಡ' ಅಬ್ಬರಿಸಿದ. ಸುದೀಪ್ ನಿರ್ದೇಶಿಸಿ, ಅಭಿನಯಿಸಿದ 'ಕೆಂಪೇಗೌಡ' ಚಿತ್ರದ ಹಾಡುಗಳು ಮಾರುಕಟ್ಟೆ ಬಂದಿದ್ದೇ ತಡ, ಅರ್ಜುನ್ ಜನ್ಯರ ಅದೃಷ್ಟ ಖುಲಾಯಿಸಿತು. 'ಕೆಂಪೇಗೌಡ' ಚಿತ್ರ ತೆರೆ ಕಾಣುವವರೆಗೂ ಅರ್ಜುನ್ ಜನ್ಯ ಅಂದರೆ ಯಾರು? ಎನ್ನುವವರೇ ಹೆಚ್ಚು. ಆದರೆ, ಈ ಚಿತ್ರದ ನಂತರ ಅರ್ಜುನ್ ಜನ್ಯರ ಸಂಗೀತದ ಅಂಬಾರಿ ತುಂಬಾ ಜೋರಾಯಿತು. ಅರ್ಜುನ್ ಹಾಡುಗಳೆಂದರೆ 'ರಿಪೀಟ್ ರಿಪೀಟ್ ರಿಪೀಟ್ ದ ಸಾಂಗು' ಎನ್ನುವಂತಿದ್ದವು. ಇತ್ತೀಚೆಗಷ್ಟೆ 'ಭಜರಂಗಿ' ಚಿತ್ರದ ನಂತರ ಮತ್ತಷ್ಟು ಅರ್ಜುನ್ ರಾಗಗಳು ಸೌಂಡು ಮಾಡುತ್ತಿದ್ದಂತೆ ಅವರ ಹೆಸರಿಗೆ 'ವಿಕ್ಟರ್‌' ಕಾಯಂ ಆಗಿ ಸೇರಿಕೊಂಡಿದೆ.
ಐವತ್ತು ಚಿತ್ರಗಳ ಗಡಿ ದಾಟಿರುವ ಅರ್ಜುನ್ ಜನ್ಯ ಅವರನ್ನು ಈ ಮಟ್ಟಕ್ಕೆ ಕೂರಿಸಿದ್ದು 'ಕೆಂಪೇಗೌಡ', 'ರೋಮಿಯೋ', 'ರ್ಯಾಂಬೋ', 'ಆಟೋ ರಾಜ', 'ವಿಕ್ಟರಿ', 'ಜಯಮ್ಮನ ಮಗ', 'ಭಜರಂಗಿ', 'ಮಾಣಿಕ್ಯ' ಚಿತ್ರಗಳ ಗೆಲುವು. ಅದರಲ್ಲೂ 'ಭಜರಂಗಿ' ಚಿತ್ರದಲ್ಲಿ ನಾಯಕನ ಪವರ್‌ಫುಲ್ ಸಾಂಗಿಗೆ ಫಿದಾ ಆಗದವರು ಕಡಿಮೆ. ಈ ಚಿತ್ರದ ಐದು ಹಾಡುಗಳು ವಿಕ್ಟರಿ ಬಾರಿಸಿದವು. ಇನ್ನು 'ಮಾಣಿಕ್ಯ' ಚಿತ್ರದ ನಂತರ ಮತ್ತಷ್ಟು ಬ್ಯುಸಿಯಾಗಿರುವ ಅರ್ಜುನ್ ಜನ್ಯ ಸಂಗೀತ ಎಂದರೆ, ಹೊಸ ನಟರಿಂದ ಹಿಡಿದು ಸ್ಟಾರ್ ನಟರ ತನಕ ಅಚ್ಚು ಮೆಚ್ಚು. 'ನನಗೆ ಜೀವ ಕೊಟ್ಟಿದ್ದು ಸುದೀಪ್ ಅವರ 'ಕೆಂಪೇಗೌಡ' ಚಿತ್ರ. ಕಳೆದ ವರ್ಷ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದು ಕೂಡ ಈ ಚಿತ್ರದ ನಂತರ ಬಂದ ಅವಕಾಶಗಳಿಂದಲೇ. ಈಗಷ್ಟೆ 'ಮಾಣಿಕ್ಯ' ಚಿತ್ರದಿಂದ ಮತ್ತಷ್ಟು ಅವಕಾಶಗಳು ಬಂದಿವೆ. ಈ ಚಿತ್ರದ ಐದು ಹಾಡುಗಳು ಪ್ರತಿ ದಿನ ಎಫ್‌ಎಂಗಳಲ್ಲಿ ಪ್ರಸಾರವಾಗುತ್ತಲೇ ಇವೆ. ನಟರಾದ ದರ್ಶನ್ ಹಾಗೂ ಪುನೀತ್ ಅವರ ಹೊರತಾಗಿ ಉಳಿದಂತೆ ಎಲ್ಲ ಸ್ಟಾರ್ ನಟರ ಚಿತ್ರಗಳಿಗೂ ಸಂಗೀತ ನೀಡಿದ್ದೇನೆ' ಎನ್ನುವ ಅರ್ಜುನ್ ಜನ್ಯ, ಸದ್ಯಕ್ಕೆ 7 ಚಿತ್ರಗಳನ್ನು ಮುಂದೆ ಇಟ್ಟುಕೊಂಡು ಸ್ಟುಡಿಯೋದಲ್ಲಿ ಕೂತಿದ್ದಾರೆ. ಈಗಿನ ಬಹುತೇಕ ಸ್ಟಾರ್ ನಟರಿಗೆ ಅರ್ಜುನ್ ಜನ್ಯ ಸಂಗೀತ ಬೇಕೇ ಬೇಕು ಎನ್ನುವಂಥ ವಾತಾವರಣ ಗಾಂಧಿನಗರದಲ್ಲಿದೆ. 'ಸೂಪರೋ ರಂಗ', 'ಸಿಂಹಾದ್ರಿ', 'ತಿರುಪತಿ ಎಕ್ಸ್‌ಪ್ರೆಸ್‌', 'ಜಾಕ್ಸನ್‌', 'ವಜ್ರಕಾಯ', 'ನೀನಾದೆನಾ', 'ಅಧ್ಯಕ್ಷ', 'ಡಿಕೆ' ಮುಂತಾದ ಚಿತ್ರಗಳು ಅರ್ಜುನ್‌ರ ಸಂಗೀತದ ಸ್ಟುಡಿಯೋದಲ್ಲಿ ನಿಂತಿವೆ. 'ದಿ ಮ್ಯೂಸಿಕಲ್ ಮ್ಯಾನ್‌' ಎನಿಸಿಕೊಂಡಿರುವ ಅರ್ಜುನ್ ಜನ್ಯರ ರಾಗಗಳು ಗಾಂಧಿನಗರದಲ್ಲಿ 'ಬಿರುಗಾಳಿ'ಯಂತೆ ಬೀಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.