ಸ್ವಮೇಕ್ ಪ್ರಕಾಶ್
ಪ್ರಕಾಶ್ ರಾಜ್ ನಟರಾಗಿ ಮಾತ್ರವಲ್ಲ, ಒಬ್ಬ ಸಿನಿಮಾ ಓದುಗನಾಗಿ, ಪ್ರೇಕ್ಷಕನಾಗಿ ನಮ್ಮೆಲ್ಲರಿಗೂ ಗೊತ್ತು...

ಪ್ರಕಾಶ್ ರಾಜ್ ನಟರಾಗಿ ಮಾತ್ರವಲ್ಲ, ಒಬ್ಬ ಸಿನಿಮಾ ಓದುಗನಾಗಿ, ಪ್ರೇಕ್ಷಕನಾಗಿ ನಮ್ಮೆಲ್ಲರಿಗೂ ಗೊತ್ತು. ಹೀಗಾಗಿ ಪ್ರಕಾಶ್ ರಾಜ್ ಮಾತನಾಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗಲ್ಲ! ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಪ್ರಕಾಶ್ ರಾಜ್ 'ಕನ್ನಡಪ್ರಭ' ಕಚೇರಿಗೆ ಬಂದರು. ಹೊರಗೆ ಚಿಟಿ ಚಿಟಿ ಮಳೆ. ಒಳಗೆ ಪ್ರಕಾಶ್ ಅವರ ಮಾತಿನ ವರಸೆ. ಸಿನಿಮಾ ಕುರಿತ ಗಂಬೀರ ಮಾತು, ಸಿನಿಮಾ ವಿತರಣೆಯ ಹಾಡು- ಪಾಡು, ನಡುವೆ ಆಗಾಗ ನಗೆ ಚಟಾಕಿ. ಪ್ರಕಾಶ್ ರಾಜ್ ತಮ್ಮ ಮಾತಿನಲ್ಲಿ ನಟ, ನಿರ್ಮಾಪಕ, ಪ್ರೇಕ್ಷಕ, ನಿರ್ದೇಶಕ ಎಲ್ಲವೂ ಆಗಿದ್ದರು. 'ಇಷ್ಟು ವರ್ಷಗಳಿಂದ ನನಗೆ ಒಬ್ಬೇ ಒಬ್ಬ ಶೆಟ್ಟಿ, ಅಡುಗೆ ಭಟ್ಟ ಪರಿಚಯವಾಗಲಿಲ್ಲ. 'ಒಗ್ಗರಣೆ' ಚಿತ್ರ ಬಂದ ಮೇಲೆ ಶೆಟ್ರು ಪರಿಚಯವಾದರು, ಅಡುಗೆ ಭಟ್ಟನೂ ಪರಿಚಯವಾದ' ಅಂತ ಜೋರಾಗಿ ನಕ್ಕರು.
ಈ ಹರಟೆಯ ನಡುವೆ 'ಒಗ್ಗರಣೆ' ಚಿತ್ರದಲ್ಲಿನ ಅಚ್ಯುತ್ ಕುಮಾರ್ ಪಾತ್ರದ ಕಡೆ ಪ್ರಕಾಶ್ ರಾಜ್ ಮಾತು ಹೊರಟಿತು. ನನ್ನ ಮನೆಯಲ್ಲಿ ಒಬ್ಬ ಅಡುಗೆಯವ ಇದ್ದ. ಆತನಿಗೆ ಸಿಕ್ಕಾಪಟ್ಟೆ ಕೋಪ. ಮಣಿ ಅಂಥ ಅವನ ಹೆಸರು. ಒಂದು ದಿನ ಸಿಟ್ಟು ಮಾಡಿಕೊಂಡು ಹೋದ. ಅದಾದ ತುಂಬಾ ವರ್ಷಗಳ ನಂತರ ನನಗೆ ಶೂಟಿಂಗ್ ಸೆಟ್ನಲ್ಲಿ ತಿಂಡಿಗೆ ಪಲಾವ್ ತಂದುಕೊಟ್ಟರು. ಅದನ್ನು ನೋಡಿದ ಕೂಡಲೇ ನಾನು, 'ಯಾರು ಇದು ಮಾಡಿದ್ದು' ಅಂತ ಕೇಳಿದೆ. ಒಂಚೂರು ಬಾಯಿಗೆ ಇಟ್ಟುಕೊಂಡ ಮೇಲೆ 'ಈ ಪಲಾವ್ ಮಾಡಿದ್ದು ಮಣಿ ತಾನೆ?' ಅಂತ ಕೇಳಿದೆ. ಹೌದು ಸರ್ ಅಂದ. 8 ವರ್ಷಗಳಾದರೂ ಆತನ ಕೈ ರುಚಿ ನಾನು ಮರೆತಿಲ್ಲ. ಆ ಮಣಿ ಎನ್ನುವ ನಿಜ ಪಾತ್ರಧಾರಿಯೇ 'ಒಗ್ಗರಣೆ'ಯ ಅಚ್ಯುತ್ ಕುಮಾರ್ ಎಂದರು ಪ್ರಕಾಶ್ ರಾಜ್.
ಸಿನಿಮಾ ನೋಡುತ್ತಿರುವ ಈಗಿನ ತಲೆಮಾರಿನ ಕುರಿತ ಮಾತು... 'ಒಗ್ಗರಣೆ'ಯಂಥ ಚಿತ್ರಗಳನ್ನು ಪ್ರೇಕ್ಷಕ ಮನೆಯಲ್ಲೇ ಕೂತು ನೋಡುವಂತಾಗಬೇಕು. ಯಾಕೆಂದರೆ ಈ ಚಿತ್ರಮಂದಿರಗಳ ವ್ಯವಸ್ಥೆ ಎಷ್ಟು ವರ್ಷ ಇರುತ್ತೋ ಗೊತ್ತಿಲ್ಲ. ಮಧ್ಯವರ್ತಿಗಳು ಇಲ್ಲದೆ ಪ್ರೇಕ್ಷಕನಿಗೇ ನೇರವಾಗಿ ಸಿನಿಮಾ ತಲುಪುವ ವ್ಯವಸ್ಥೆಯಾಗಬೇಕು. ಆದರೆ, ವಿತರಣೆ ವ್ಯವಸ್ಥೆ ಅದಕ್ಕೆ ಯಾವ ಮಟ್ಟಿಗೆ ಪೂರಕವಾಗಿರುತ್ತದೆ ಎನ್ನುವುದು ಕೂಡ ಪ್ರಶ್ನೆ. ಮೊಬೈಲ್, ಯೂಟ್ಯೂಬ್, ಟ್ವಿಟ್ಟರ್, ಫೇಸ್ಬುಕ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರೇಕ್ಷಕನಿಗೆ ಈ ನೆಟ್ವರ್ಕ್ಗಳ ಮೂಲಕವೇ ಸಿನಿಮಾ ಕೊಡಬಹುದೇ? ಎನ್ನುವ ಯೋಚನೆ ಕೂಡ ಈಗ ಮಾಡಬೇಕಿದೆ.
ನಾನು ಏನೇ ಪ್ರಯೋಗ ಮಾಡಿದರೂ ಅದು ಪ್ರೇಕ್ಷಕನಿಗೆ ಹೊರೆ ಎನಿಸಬಾರದು. ನೋಡುಗನಿಗೆ ಒಳ್ಳೆಯ ಸಿನಿಮಾದ ಅಗತ್ಯವಿದೆ. ಅವನಿಗೆ ನೋಡುವ ಹಸಿವು ಇದೆ. ಅದಕ್ಕೆ ನಾವು ಮೋಸ ಮಾಡಬಾರದು. 'ಒಗ್ಗರಣೆ' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ನನಗೆ ಈಗಷ್ಟೇ ಹೊಳೆದ ಯೋಚನೆ, 'ನಾನು ಯಾಕೆ ಮುಂದೆ ಮದುವೆ ಸಂಭ್ರಮಗಳ ಮೇಲೆ ಒಂದು ಸಿನಿಮಾ ಮಾಡಬಾರದು?' ಅಂತ. ಅದು ಎಷ್ಟು ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದರೆ ಜಾನಪದ, ಮದುವೆಯಂಥ ಮನೆ ಸಂಭ್ರಮಗಳನ್ನು ಒಳಗೊಂಡ ಕಥೆ ಮಾಡಬೇಕಿದೆ. ಅದಕ್ಕಾಗಿ ಒಳ್ಳೆಯ ಕಥೆಗಾರರನ್ನು ಹುಡುಕಿಟ್ಟಿದ್ದೇನೆ. ಕನ್ನಡದಲ್ಲೇ ಅದ್ಭುತವಾಗಿ ಕಥೆ ಮಾಡಿಸುವ ಯೋಚನೆ ಇದೆ... ಪ್ರಕಾಶ್ ರಾಜ್ ಮಾತು ಮುಂದುವರೆಯುತ್ತಲೇ ಇತ್ತು. ಹೊರಗೆ ಮಳೆ ನಿಂತಿತ್ತು. ದಿಢೀರ್ ಅಂತ 'ಒಗ್ಗರಣೆ' ಚಿತ್ರದ ಗೆಲುವಿನ ಪ್ರತಿಕಾಗೋಷ್ಟಿ ನೆನಪಾಯಿತು.
---
ಅಂದಹಾಗೆ ಪ್ರಕಾಶ್ ರಾಜ್ ತಮ್ಮ ಮುಂದಿನ ಚಿತ್ರದ ಕಥೆಗೆ ಮದುವೆ ಸಮಾರಂಭಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆಯೇ? ಗೊತ್ತಿಲ್ಲ. ಆದರೆ, ಸ್ವಮೇಕ್ ಚಿತ್ರವಂತೂ ಮಾಡಲಿದ್ದಾರೆ. ಕನ್ನಡದಲ್ಲಿ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 'ನಾನು ನನ್ನ ಕನಸು' ಚಿತ್ರದ ನಂತರ 'ಒಗ್ಗರಣೆ' ಬಂದಿದೆ. ಅದು 'ಕನಸಿ'ಗಿಂತಲೂ ಹೆಚ್ಚಾಗಿ ರುಚಿಸುತ್ತಿದೆ. ತನ್ನೂರಿನಲ್ಲಿ ಸಿಕ್ಕ ಈ ಪ್ರೀತಿಗೆ ದಿಲ್ಖುಷ್ ಆಗಿರುವ ಪ್ರಕಾಶ್ ರಾಜ್ ತಮ್ಮ ಮುಂದಿನ ಚಿತ್ರವನ್ನು ಯಾವುದರ ರಿಮೇಕು ಇಲ್ಲದೆ ಕನ್ನಡದ ಕಥೆಯನ್ನೇ ಆಯ್ಕೆ ಮಾಡಿಕೊಂಡು ಕನ್ನಡದಲ್ಲೇ ನಿರ್ದೇಶನ ಮಾಡಲಿದ್ದಾರೆ. ಆ ಮೂಲಕ ಎರಡು ಚಿತ್ರಗಳ ನಂತರ ಪ್ರಕಾಶ್ ರಾಜ್ ಸ್ವಮೇಕ್ ಚಿತ್ರಕ್ಕೆ ಮರಳಿದ್ದಾರೆ. 'ಕಲೆಗೆ ಭಾಷೆ ಎಂದೂ ಅಡ್ಡಿಯಾಗಕೂಡದು' ಎಂಬುದು ಪ್ರಕಾಶ್ ರಾಜ್ ಅವರ ಮಾತು ಮತ್ತು ನಂಬಿಕೆ.
ಆದರೆ, ನಾದಬ್ರಹ್ಮ ಹಂಸಲೇಖ ಸ್ವಮೇಕ್ ಚಿತ್ರ ಮಾಡುವಂತೆ ಪ್ರಕಾಶ್ ರಾಜ್ ಅವರನ್ನು ಒತ್ತಾಯಿಸಿದರು. ಇನ್ನು ಅವರ ಕೊರಳ ಗೆಳೆಯ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಬಿ. ಸುರೇಶ್ ಕೂಡ ರಿಮೇಕ್ ಚಿತ್ರಗಳ ಪಕ್ಕಾ ವಿರೋಧಿ. ಹೀಗಾಗಿ ಸ್ವಮೇಕ್ ಚಿತ್ರ ಮಾಡುವಂತೆ ಪ್ರಕಾಶ್ ರಾಜ್ ಅವರಿಗೆ ಆಗಾಗ ಹೇಳುತ್ತಿದ್ದರು. ಇವರೆಲ್ಲರ ಒತ್ತಾಸೆಗೆ ಜೈ ಎಂದಿರುವ ಪ್ರಕಾಶ್ ರಾಜ್, 'ನನ್ನ ಮುಂದಿನ ಚಿತ್ರ ಸ್ವಮೇಕ್ ಸಿನಿಮಾ ಆಗಿರುತ್ತದೆ. ಅದು ಕನ್ನಡದ್ದೇ ಕಥೆಯಾಗಿರುತ್ತದೆ' ಎಂದು ಘೋಷಿಸಿದ್ದಾರೆ. ಅಂದಹಾಗೆ ಸ್ವಮೇಕ್ ಚಿತ್ರ ಮಾಡುವ ನಿರ್ಧಾರ ಕೈಗೊಂಡಿದ್ದು, 'ಒಗ್ಗರಣೆ' ಚಿತ್ರದ ಗೆಲುವಿನ ಸಂಭ್ರಮದಲ್ಲೂ ಈ ಸ್ವಮೇಕ್ ಮಂತ್ರ ಪ್ರಕಟಿಸಿದರು ಪ್ರಕಾಶ್ ರಾಜ್. ಈಗ ಪ್ರಕಾಶ್ ರಾಜ್ ಸ್ವಂತ ಅಡುಗೆ ಮಾಡುವ ತಯಾರಿಯಲ್ಲಿದ್ದಾರೆ.
- ಆರ್.ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


