ತಿರುಪತಿಗೆ ಲಡ್ಡು
'ನಿನ್ನಂಥ ಅಪ್ಪ ಇಲ್ಲ....ನಿನ್ನಂಥ ಮಗನು ಇಲ್ಲಾ...' ಅಣ್ಣಾವ್ರ ಈ ಹಾಡು...

'ನಿನ್ನಂಥ ಅಪ್ಪ ಇಲ್ಲ....ನಿನ್ನಂಥ ಮಗನು ಇಲ್ಲಾ...' ಅಣ್ಣಾವ್ರ ಈ ಹಾಡು ಸದ್ಯಕ್ಕೆ ಶೈಲೇಂದ್ರ ಬಾಬು ಮತ್ತು ಸುಮಂತ್ ಎಂಬ ಪಿತಸುತರಿಗೆ ಪರ್ಫೆಕ್ಟ್ ಎಂಬಂತೆ ಹೊಂದುತ್ತಿದೆ. ಹಿಂದೆಲ್ಲ ಒಂದಾದ ಮೇಲೊಂದು ಸುಪರ್ಸ್ಟಾರ್ಗಳ ಚಿತ್ರ ನಿರ್ಮಿಸಿ ಮಿಶ್ರಫಲ ಅನುಭವಿಸಿದ್ದ ಶೈಲೆಂದ್ರಬಾಬು ತಮ್ಮ ಪುತ್ರ ಸುಮಂತ್ನನ್ನೇ ಗ್ರೂಮ್ ಮಾಡುವ ಬಗ್ಗೆ ಆಲೋಚಿಸಿದ್ದೇ ತಡ, ಒಂದು 'ಆಟ' ಆಡೇ ಬಿಡೋಣ ಎಂಬಂತೆ ಸಾಧು ಕೋಕಿಲಾ ಜೊತೆ 'ಆಟ' ಚಿತ್ರ ಮಾಡಿದರು. ಆಗ ಸುಮಂತ್ ನಟನೆಯಲ್ಲೂ ಲುಕ್ಕಿನಲ್ಲೂ ತುಂಬಾ ಪೀಚಾಗಿದ್ದರು. ಎರಡನೇ ಚಿತ್ರ ದಿಲ್ವಾಲಾದಲ್ಲಿ ದೇಹ ಹುರಿಗೊಳಿಸಿಕೊಂಡು, ನಟನೆ ನೃತ್ಯದಲ್ಲೂ ಸುಧಾರಣೆ ಕಂಡರು. ಚಿತ್ರ ಸಾಮಾನ್ಯ ಯಶಸ್ಸು ಕಂಡರೂ ಸುಮಂತ್ ಒಂದು ಮಟ್ಟಕ್ಕೆ ಗೆದ್ದಿದ್ದರು. ಈಗ ಮೂರನೇ ಚಿತ್ರ ತಿರುಪತಿ ಎಕ್ಸ್ಪ್ರೆಸ್ ತೆರೆಗೆ ಬರಲು ಅಣಿಯಾಗಿದೆ. ಶೈಲೇಂದ್ರ ಬಾಬು ಪ್ರಕಾರ, ಈ ಚಿತ್ರದಲ್ಲಿ ಸುಮಂತ್ ಇನ್ನೂ ಪಳಗಿದ್ದಾರೆ.
ತಿರುಪತಿ ಎಕ್ಸ್ಪ್ರೆಸ್ ಮೊನ್ನೆ ಒಂದು ಹೀರೋ ಇಂಟ್ರೋಡಕ್ಷನ್ ಹಾಡಿನ ಶೂಟ್ ಮಾಡುವ ಮೂಲಕ ಲಡ್ಡು ಒಡೆಯಿತು. ಅರ್ಥಾತ್ ಕುಂಬಳಕಾಯಿ ಒಡೆಯಿತು. ತೆಲುಗಿನ ಸುಪರ್ಹಿಟ್ ಚಿತ್ರ ವೆಂಕಟಾದ್ರಿ ಎಕ್ಸ್ಪ್ರೆಸ್ನ ರೀಮೇಕ್ ಆದ ತಿರುಪತಿಎಕ್ಸ್ಪ್ರೆಸ್ ರೊಮ್ಯಾಂಟಿಕ್ ಕಾಮಿಡಿ ಆ್ಯಕ್ಷನ್ ಚಿತ್ರವಾಗಿದ್ದು, ಸುಮಂತ್ಗೆ ಜೊತೆಯಾಗಿ ಕೃತಿ ಖರಬಂಧ ಇದ್ದಾರೆ. ಇನ್ನೊಂದು ತಿಂಗಳಲ್ಲಿ ಆಡಿಯೋ ಹಾಗೂ ಚಿತ್ರದ ರಿಲೀಸ್ ಮಾಡುವ ಪ್ಲಾನ್ ನಿರ್ಮಾಪಕ ಶೈಲೇಂದ್ರಬಾಬು ಅವರದ್ದು. ಅರ್ಜುನ್ ಜನ್ಯ ಸಂಗೀತದ ಹಾಡುಗಳು ದಿಲ್ವಾಲಾ ಚಿತ್ರದ ಹಾಡುಗಳನ್ನು ಮೀರಿಸುವಂತಿವೆ ಎಂಬುದು ನಿರ್ಮಾಪಕರ ವಿಶ್ವಾಸದ ಮಾತು. ಈ ಮೊದಲು ಕಿಚ್ಚ ಸುದೀಪರ ವಿಷ್ಣುವರ್ಧನ ಹಾಗೂ ಪ್ರಿಯಾಮಣಿ ಅಭಿನಯದ ಚಾರುಲತಾ ನಿರ್ದೇಶಿಸಿದ್ದ ಕುಮಾರ್ ಈ ಚಿತ್ರಕ್ಕೂ ಕ್ಯಾಪ್ಟನ್ ಆಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಮೂವತ್ತೈದು ದಿನಗಳಲ್ಲಿ ಶೂಟ್ ಮುಗಿಸಿರುವ ಕುಮಾರ್ ಸುಮಂತ್
ಒಂದು ದಿನ ಸೂಪರ್ಸ್ಟಾರ್ ಆಗಲಿದ್ದಾರೆಂಬ ಭವಿಷ್ಯವಾಣಿ ನುಡಿದರು. ಕ್ಯಾಮರಾಮನ್ ಜಗದೀಶ್ ವಾಲಿ ಕೂಡ ಇದಕ್ಕೆ ದನಿಗೂಡಿಸಿದರು.
ಇದೇ ಸಂದರ್ಭದಲ್ಲಿ ಅಚ್ಚರಿಯ ಸುದ್ದಿ ಪ್ರಕಟಿಸಿದ ಶೈಲೇಂದ್ರಬಾಬು ಶ್ರೀಕಾಂತ್ ಎಂಬ ಹೊಸ ನಿರ್ಮಾಪಕರನ್ನು ಪರಿಚಯಿಸಿ, ತಮ್ಮದೇ ಬ್ಯಾನರ್ನಲ್ಲಿ ತೆಲುಗಿನ 'ಆ ಮೊದಲಿಂದಿ' ಚಿತ್ರವನ್ನು ರೀಮೇಕ್ ಮಾಡುತ್ತಿರುವುದಾಗಿ ತಿಳಿಸಿದರು. ಇನ್ನು ಕೆಲವೇ ದಿನಗಳಲ್ಲಿ ಇದರ ಮುಹೂರ್ತ ಮಾಡಲಿದ್ದು ಸುಮಂತ್ಗೆ ಎರಡನೇ ಬಾರಿಗೆ ಸಾಧು ಕೋಕಿಲಾ ನಿರ್ದೇಶನ ಮಾಡಲಿದ್ದಾರೆ. ಸುಮಲತಾ ಅಂಬರೀಶ್ ನಟಿಸುತ್ತಿರುವುದು ಮುಖ್ಯಾಂಶ. ಶಾನ್ವಿ ಸುಮಂತ್ಗೆ ನಾಯಕಿಯಾಗಲಿದ್ದರೆ, ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರವಿಶಂಕರ್ ಈ ಚಿತ್ರದ ಮೂಲಕ ಮತ್ತೆ ಶೈಲೇಂದ್ರಬಾಬು ಅವರ ಟೀಮಿಗೆ ವಾಪಸಾಗಲಿದ್ದಾರೆ. ಮಿಕ್ಕ ವಿವರಗಳು ಮುಹೂರ್ತದ ದಿನ ಬಹಿರಂಗಗೊಳ್ಳಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


