ಮೈ ಫೇರ್ ಬ್ಲಾಕ್ ಲೇಡಿ
ಚಿತ್ರರಂಗದಲ್ಲಿ ಜೀವನ ಪೂರ್ತಿ ಕೆಲಸ ಮಾಡಿ ಒಂದಾದರೂ ಫಿಲ್ಮ್‌ಫೇರ್ ಪ್ರಶಸ್ತಿ ಬರಲಿ ಅಂತ ಆಸೆ ಪಡುವವರು...

ಚಿತ್ರರಂಗದಲ್ಲಿ ಜೀವನ ಪೂರ್ತಿ ಕೆಲಸ ಮಾಡಿ ಒಂದಾದರೂ ಫಿಲ್ಮ್‌ಫೇರ್ ಪ್ರಶಸ್ತಿ ಬರಲಿ ಅಂತ ಆಸೆ ಪಡುವವರು ಬೇಕಾದಷ್ಟು ಜನ. ಆದರೆ ಕೆಲಸ ಮಾಡಿದ ಮೊದಲ ಚಿತ್ರಕ್ಕೇ ಫಿಲ್ಮ್‌ಫೇರ್ ಪ್ರಶಸ್ತಿ ಪಡೆಯುವ ಅದೃಷ್ಠ ಬಹಳ ಕಡಿಮೆ ಜನಕ್ಕೆ ಇರುತ್ತದೆ. ಅಂಥವರಲ್ಲಿ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ಚಿತ್ರದ 'ಬಾನಲಿ ಬದಲಾಗುವ ಬಣ್ಣವೇ ಭಾವನೆ' ಹಾಡು ಬರೆದ ಸಿದ್ದು ಕೋಡಿಪುರ ಕೂಡ ಒಬ್ಬರು.
ತನ್ನ ಸ್ಲೋ ಮೋಷನ್ ಚಿತ್ರೀಕರಣದಿಂದ ಗಮನ ಸೆಳೆದಿದ್ದ ಈ ಹಾಡು ಈಗ ಅದರ ಸಾಹಿತಿಗೆ ಫಾಸ್ಟ್ ಟ್ರ್ಯಾಕ್‌ನಲ್ಲಿ ಯಶಸ್ಸು ತಂದುಕೊಟ್ಟಿದೆ. ಫಿಲ್ಮ್‌ಫೇರ್ ಪ್ರಶಸ್ತಿಗಾಗಿ ಈ ವರ್ಷ ಹಲವು ಉತ್ತಮ ಅರ್ಹ ಹಾಡುಗಳು ಸ್ಪರ್ಧೆಯಲ್ಲಿ ಇದ್ದರೂ ಬ್ಲಾಕ್ ಲೇಡಿ ಎಂಬ ಅದೃಷ್ಠ ದೇವತೆ ಸಿದ್ದು ಅವರಿಗೆ ಒಲಿದಿದ್ದಾಳೆ. ಬಾನಲಿ ಬದಲಾಗೋ ಹಾಡಿನಷ್ಟೆ ಚೆನ್ನಾಗಿದ್ದ ಇತರ ಹಾಡುಗಳೂ ಇದ್ದವು ಎಂಬ ಮಾತುಗಳ ನಡುವೆಯೂ ಸಿದ್ದುಗೆ ಫಿಲ್ಮ್ ಫೇರ್ ಕೊಟ್ಟಿದ್ದು ಫೇರ್ ಎನಫ್ ಎನ್ನುವಂಥ ನಿರ್ಧಾರವೇ.
ಸಿಂಪಲ್ಲಾಗೊಂದ್ ಲವ್ ಸ್ಟೋರಿಗೆ ಮುನ್ನ 'ಹಣೆಬರಹ' ಎಂಬ ಚಿತ್ರಕ್ಕೆ ಸಿದ್ದು ಒಂದು ಹಾಡು ಬರೆದಿದ್ದರೂ ಅವರ ಹಣೆಬರಹ ಚೆನ್ನಾಗಿಲ್ಲದಿದ್ದಕ್ಕೋ ಅಥವಾ ಚೆನ್ನಾಗಿದ್ದಿದ್ದಕ್ಕೋ ಆ ಸಿನಿಮಾ ಟೇಕಾಫ್ ಆಗದೆ ಇವರ ಹಣೆಬರಹ ಬದಲಾಗಿ 'ಬಾನಲಿ ಬದಲಾಗೋ' ಹಾಡೇ ಸಿದ್ದು ಅವರ ಮೊದಲ ಹಾಡಾಗಿದೆ. ಈ ಹಾಡಿನ ಮೂಲಕ ನಾನು ಚಿತ್ರರಂಗ ಪ್ರವೇಶಿಸಿದ್ದು ನನಗೆ ಖುಷಿ ಕೊಟ್ಟಿದೆ ಎನ್ನುವ ಸಿದ್ದು ನಿರ್ದೇಶನ ವಿಭಾಗದಲ್ಲಿ ಸುನಿ ಅವರ ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿ ಬಂದಿದ್ದು ಖುಷಿಯಾದರೂ ಅದರ ಜೊತೆಗೆ ಜವಾಬ್ದಾರಿ ಹೆಚ್ಚಿದೆ ಎನ್ನುವ ಮಾಮೂಲಿ ಅಭಿಪ್ರಾಯದ ಜೊತೆ, ಇಷ್ಟು ಬೇಗ ಇದು ಬೇಕಿತ್ತಾ ಎನ್ನುವ ಆತಂಕವನ್ನೂ ವ್ಯಕ್ತಪಡಿಸುತ್ತಾರೆ ಸಿದ್ದು. ಆದರೆ ಈ ನಂಬಿಕೆಯನ್ನು ಖಂಡಿತಾ ಉಳಿಸಿಕೊಳ್ಳುತ್ತೇನೆ ಎಂಬ ಖಡಕ್ ಮಾತು ಅವರದ್ದು.
ಮಳವಳ್ಳಿಯ ಹತ್ತಿರದ ಕೋಡಿಪುರ ಸಿದ್ದು ಅವರ ಊರು. ಎಲ್ಲರ ಹಾಗೆ ಸಿನಿಮಾ ಹುಚ್ಚು ಹತ್ತಿಸಿಕೊಂಡು, 'ಸಿದ್ದ ಎಂಬುವವನೊಬ್ಬನಿದ್ದ, ಜಗವೆಲ್ಲ ಮಲಗಿರಲು ತಾನೊಬ್ಬನೆದ್ದ' ಎನ್ನುತ್ತಾ ಊರು ಬಿಟ್ಟು ಓಡಿ ಬಂದವರಲ್ಲ ಸಿದ್ದು. ಅವರು ಸಿನಿಮಾರಂಗಕ್ಕೆ ಪ್ರವೇಶ ಪಡೆದಿದ್ದನ್ನು ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ. 'ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಗ್ಯಾರಂಟಿ ಫೇಲ್ ಆಗ್ತೀನಿ ಅಂತ ನನಗೆ ಭರವಸೆ ಇತ್ತು. ಅದಕ್ಕೇ ನನ್ನ ಮಾವನ ಜೊತೆ ಬೆಂಗಳೂರಿಗೆ ಬಂದು ಕೆಲಸ ಮಾಡಲು ಶುರುಮಾಡಿದೆ. ಆಗ ನನಗೆ ಸಿನಿಮಾ, ಕಥೆ, ಕವನ ಹೀಗೆ ಯಾವ ಆಸಕ್ತಿಯೂ ಇರಲಿಲ್ಲ.
ಆದರೆ ಕೆಲಸ ಮಧ್ಯೆ ಬೇಜಾರಾದಾಗ ಎಫ್‌ಎಂ ರೇಡಿಯೋದಲ್ಲಿ ಹಾಡು ಕೇಳುತ್ತಿದ್ದೆ. ಹೀಗೇ ಒಂದು ದಿನ ಅದರಲ್ಲಿ ಹಂಸಲೇಖ ಅವರ 'ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ' ಹಾಡು ಕೇಳುತ್ತಿದ್ದೆ. ಆಗ ನನಗೆ ನಾನೂ ಯಾಕೆ ಹಾಡು ಬರೀಬಾರದು ಅನ್ನಿಸಿ ಪ್ರಯತ್ನಿಸಿದೆ. ಅಲ್ಲಿಂದ ಮುಂದೆ ನನ್ನ ಸ್ನೇಹಿತ ದಿನೇಶ್ ಸಿನಿಮಾ ಟ್ಯೂನ್‌ಗಳಿಗೆ ಮೀಟರ್ ಹೊಂದಿಸುವುದು ಹೇಗೆ ಎಂಬುದನ್ನು ಹೇಳಿಕೊಟ್ಟ. ಅವನು ಅದನ್ನು ಕಲಿತಿದ್ದು ವಿ. ಮನೋಹರ್ ಅವರ ಬಳಿ. ಆ ನಂತರ ಅವನ ಮೂಲಕವೇ ನನಗೆ ಸಿನಿಮಾದವರ ಪರಿಚಯ ಆಯ್ತು. ಆಗಲೇ ಹಣೆಬರಹ ಚಿತ್ರಕ್ಕೆ ಹಾಡು ಬರೆದಿದ್ದು. ಆ ಚಿತ್ರ ಶುರುವಾಗಲಿಲ್ಲ. ಮುಂದೆ ಸುನಿ ಪರಿಚಯ ಆಯ್ತು. ಅವರು ನನ್ನ ಕವನಗಳನ್ನು ಓದಿದರು. ಅವರು ಸಿನಿಮಾ ಮಾಡ್ತಿದಾರೆ ಅಂತ ಆದಾಗ ಅವರ ಬಳಿ ಅವಕಾಶ ಕೇಳಿದೆ. ಅವರು ಸರಿ ಬರಿ, ಆದರೆ ಚೆನ್ನಾಗಿದೆ ಅನ್ನಿಸಿದರೆ ಮಾತ್ರ ಇಟ್ಕೊತೀನಿ, ಇಲ್ಲಾಂದ್ರೆ ಬೇರೆಯವರತ್ರ ಬರೆಸ್ತೀನಿ ಅಥವಾ ನಾನೇ ಬರೀತೀನಿ ಅಂದ್ರು. ಆದರೆ ಅವರು ಒಬ್ಬ ಸಾಹಿತಿಯಾಗಿ, ಈ ಹಾಡನ್ನು ಸೋನು ನಿಗಮ್ ಹಾಡ್ತಾರೆ ಅಂತ ಆದಾಗಲೂ ನನಗೆ ಬರೆಯುವ ಅವಕಾಶ ಕೊಟ್ಟ ಸುನಿ ಅವರದ್ದು ದೊಡ್ಡ ಮನಸ್ಸು. ಒಂದು ವಾರ ಆದ್ರೂ ನಾನು ಏನೂ ಬರೆದಿರಲಿಲ್ಲ. ಆಗ ಸುನಿ 'ಏನ್ರೀ ಇನ್ನೂ ಏನೂ ಬರೆದೇ ಇಲ್ಲ' ಅಂತ ಪ್ರೆಶರ್ ಹಾಕಿದರು. ಆಗ ಮನಸ್ಸಿನಲ್ಲಿ ಒಂಥರಾ ಡಿಸ್ಟರ್ಬ್ ಆಗಿದ್ದೆ. ಆಗ ಹುಟ್ಟಿದ ಸಾಲೇ 'ಮನದಿ ಏನೋ ಹೊಸ ಗಲಭೆ ಶುರುವಾಗಿದೆ' ಎಂಬುದು. ಈಗ ಆ ಹಾಡಿಗೆ ಫಿಲ್ಮ್ ಫೇರ್ ಅವಾರ್ಡ್ ಬಂದಿರೋದು ಖುಷಿಯಾಗಿದೆ' ಎನ್ನುತ್ತಾರೆ ಸಿದ್ದು.
ಚಿತ್ರರಂಗದಲ್ಲಿ ಸಾಹಿತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎನ್ನುವ ಸಿದ್ದು ಅವರಿಗೆ ನಟ ಶ್ರೀನಿವಾಸಮೂರ್ತಿ ಪೋನ್ ಮಾಡಿ ಶುಭಾಷಯ ಹೇಳಿದ್ದು ಖುಷಿ ಕೊಟ್ಟಿದೆ. ಸದ್ಯಕ್ಕೆ ಸಿದ್ದು ಫ್ಲಾಪ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಇವರ ದಾರಿಯಲ್ಲೇ ಮೊದಲ ಚಿತ್ರಕ್ಕೇ ಫಿಲ್ಮ್‌ಫೇರ್ ಪಡೆದಿರುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದಾರಂತೆ. ಸುನಿ ತಮಗೆ ಬಂದ ಹಾಡು ಬರೆಯುವ ಆಫರ್ ಒಂದನ್ನು ಸಿದ್ದು ಅವರಿಗೆ ಕೊಟ್ಟಿದ್ದಾರಂತೆ. ಅದನ್ನು ಬಿಟ್ಟರೆ, ಸದ್ಯಕ್ಕೆ ಬೇರೆ ಯಾವ ಆಫರ್‌ಗಳೂ ಸಿದ್ದು ಅವರ ಬಳಿ ಇಲ್ಲ. ಆದರೆ ಮೊದಲ ಹಾಡಿಗೆ ಫಿಲ್ಮ್‌ಫೇರ್ ಅವಾರ್ಡ್ ಬಂದ ಕಾರಣಕ್ಕಾದರೂ ಇನ್ನೂ ಹೆಚ್ಚು ಒಳ್ಳೆಯ ಹಾಡುಗಳನ್ನು ಬರೆಯಬೇಕು, ದೊಡ್ಡ ಸ್ಟಾರ್‌ಗಳ ಚಿತ್ರಕ್ಕೆ ಹಾಡು ಬರೆಯಬೇಕು ಎಂಬ ಆಸೆ ಸಿದ್ದು ಅವರದ್ದು.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


