ಸಿನಿಮಾ ಲೇಖನ

ಹಾಡಾದೆ ನಾ

ಹಾಡಾದೆ ನಾ
Published On :

ನಟ ದೇವರಾಜ್ ನೀನಾದೆ ನಾ ಚಿತ್ರದಿಂದ ನಿರ್ಮಾಪಕರಾದರೆ, ಕೆ.ಮಂಜು ಈ ಚಿತ್ರದಿಂದ ನಟರಾಗಿ ಅಖಾಡಕ್ಕೆ ಇಳಿದಿದ್ದಾರೆ. ಈ ಥರದ ಚಿಕ್ಕ ಪುಟ್ಟ ವಿಶೇಷಗಳನ್ನು ಹೊತ್ತು ಪ್ರಜ್ವಲ್ ದೇವರಾಜ್‌ರ ಹೋಂ ಪ್ರೊಡಕ್ಷನ್ ಚಿತ್ರ ಅಣಿಯಾಗುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಈ ಅದ್ದೂರಿ ಆಡಿಯೋ ಬಿಡುಗಡೆ ಸಮಾರಂಭ.ಕ್ಯಾಪಿಟಲ್ ಹೊಟೇಲ್‌ನಲ್ಲಿ ನಡೆದ ನೀನಾದೆ ನಾ ಆಡಿಯೋ ಬಿಡುಗಡೆಯಲ್ಲಿ ಒಂದಷ್ಟು ನೃತ್ಯ, ಹಾಡು, ಹಿಪ್ನೋಟಿಸಂ, ಮಾತು, ತಮಾಷೆ ಸನ್ನಿವೇಶಗಳು ಎಲ್ಲವೂ ಇದ್ದವು. ಒಂದೇ ಸಲಕ್ಕೆ ಧ್ವನಿಸುರುಳಿ ಬಿಡುಗಡೆ ಮಾಡುವ ಬದಲು ಒಂದೊಂದೇ ಹಾಡುಗಳನ್ನು ವಿಶಿಷ್ಟ ರೀತಿಯಲ್ಲಿ ಬಿಡುಗಡೆ ಮಾಡಲಾಯ್ತು.
ಕೆಲವು ದೃಶ್ಯಸಮೇತ ಬಿಡುಗಡೆಯಾದರೆ, ಇನ್ನು ಕೆಲವು ಕೇವಲ ಕೇಳಲು ಮಾತ್ರ ಲಭ್ಯ. ಪ್ರತಿ ಹಾಡನ್ನೂ ಒಬ್ಬೊಬ್ಬ ವಿಶೇಷ ಆಹ್ವಾನಿತರು ಬಿಡುಗಡೆ ಮಾಡಿದ್ದು ಇನ್ನೊಂದು ವಿಶೇಷ. ಚಿತ್ರದಲ್ಲಿ ನಿರ್ಮಾಪಕನ ಪಾತ್ರದಲ್ಲೇ ನಟಿಸಿರುವ ಕೆ. ಮಂಜು ಧ್ವನಿಸುರುಳಿಯ ಮೊದಲ ಗೀತೆ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿ, ಚಿತ್ರದ ಬಗ್ಗೆ ಭರವಸೆಯ ಮಾತನ್ನಾಡಿದರು. ನಟನೆ ಬಾರದ ತಮ್ಮನ್ನು ನಟ ಮಾಡಿದ ದೇವರಾಜ್ ನಿರ್ಮಾಪಕರಾಗಿ ಯಶ ಕಾಣಲಿ ಎಂದರು. ಮಿಕ್ಕ ಹಾಡುಗಳನ್ನು ನಿರ್ಮಾಪಕ ಹಾಗೂ ವಿತರಕ ಕೆ.ವಿ. ನಾಗೇಶ್ ಕುಮಾರ್,  ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಶ್ರೀನಗರ ಕಿಟ್ಟಿ ಮತ್ತು ಸೂರಪ್ಪ ಬಾಬು ಬಿಡುಗಡೆ ಮಾಡಿ ಶುಭ ಕೋರಿದರು. ಹಿರಿಯ ನಟ ದೊಡ್ಡಣ್ಣ ಈ ಸಂದರ್ಭದಲ್ಲಿ ಮಾತನಾಡಿ, ದೇವರಾಜ್ ಮೇಲಿನ  ಅಕ್ಕರೆಯಿಂದ ಹಾಗೂ ಹಲವು ವರ್ಷಗಳ ಸ್ನೇಹಕಾರಣದಿಂದ ಕೇವಲ ಹತ್ತು ರೂಪಾಯಿ ಸಂಭಾವನೆ ಪಡೆದು ಚಿತ್ರದಲ್ಲಿ ನಟಿಸಿರುವುದಾಗಿ ತಿಳಿಸಿದ್ದು ಭಾವನಾತ್ಮಕವಾಗಿತ್ತು. ಚಿತ್ರದ ಟ್ರೈಲರನ್ನು ಎಂಎನ್ ಕುಮಾರ್ ಬಿಡುಗಡೆ ಮಾಡಿದರು. ಅರ್ಜುನ್ ಜನ್ಯ ಸಂಗೀತದಲ್ಲಿ ಒಟ್ಟು ಐದು ಹಾಡುಗಳಿದ್ದು ಕಾರ್ತಿಕ್ ಹಾಡಿರುವ ಒಂದು ಹಾಡು ಆಲ್ಬಮ್‌ನ ಬೆಸ್ಟ್  ಸಾಂಗ್ ಎಂಬುದು ಎಲ್ಲರ ಅಭಿಪ್ರಾಯ. ದೇವರಾಜ್ ಅಪೇಕ್ಷೆಯ ಮೇರೆಗೆ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದು ಹಾಗೂ  ಕಾರ್ತಿಕ್ ದನಿಗಾಗಿಯೇ ತಿಂಗಳುಗಟ್ಟಲೆ ಕಾದು ಹಾಡಿಸಿದ್ದು ನಿರ್ಮಾಪಕ ಡೈನಮಿಕ್ ಸ್ಟಾರ್ ದೇವರಾಜ್‌ರ ಅಭಿರುಚಿಗೆ ನಿದರ್ಶನ ಎಂಬ ಹೊಗಳಿಕೆಯೂ ಕೇಳಿಬಂತು. ಆನಂದ್ ಆಡಿಯೋ ಬಿಡುಗಡೆ ಮಾಡಿರುವ ಚಿತ್ರದ ಧ್ವನಿಸುರುಳಿ  ಪ್ರಜ್ವಲ್ ದೇವರಾಜ್‌ರ ಹುಟ್ಟುಹಬ್ಬದ ಆಚರಣೆಯೂ ಜರುಗಿದ್ದು ಅವರ ಅಭಿಮಾನಿಗಳು ಮತ್ತು ಗೆಳೆಯರು ಹಾಗೂ ಹಿತೈಷಿಗಳಲ್ಲಿ ಸಂತಸ ತಂದಿತು. ಹರ್ಷ ನೃತ್ಯನಿರ್ದೇಶನದ  ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣಗೊಂಡ ಹಾಡು ಚಿತ್ರದ ಮೇಕಿಂಗ್ ಬಗ್ಗೆ ನಿರೀಕ್ಷೆ ಹುಟ್ಟಿಸುತ್ತಿರುವುದು ಸುಳ್ಳಲ್ಲ. ದೇವರಾಜ್ ಕೂಡಾ ಮಗನೊಂದಿಗೆ ಒಂದು ಹಾಡಿಗೆ ಸ್ಟೆಪ್ ಹಾಕಿರುವುದು ಖಂಡಿತಾ ಅಭಿಮಾನಿಗಳಿಗೆ ಶಿಳ್ಳೆ ಮೊಮೆಂಟು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.