ದೃಶ್ಯ ವೈಭವದ ನಂತರ...

ರವಿಚಂದ್ರನ್‌ಗೆ ಪ್ರತಿ ಸಲ ಸೋಲು ಸವಾಲಾಗಿ ನಿಲ್ತಿತ್ತು. ಆದರೆ ಈ ಬಾರಿ ಗೆಲವು ಸವಾಲಾಗಿ ನಿಂತಿದೆ. ಇತ್ತೀಚೆಗಂತೂ ರವಿ ಕೋಟಿಗಟ್ಟಲೆ ಖರ್ಚು ಮಾಡಿ, ತಾಂತ್ರಿಕವಾಗಿ ಅದ್ಭುತವೇನನ್ನೋ ತುಂಬಿಸಿ, ವರ್ಷಗಟ್ಟಲೆ ಶೂಟ್ ಮಾಡಿ, ಗ್ಲಾಮರಸ್ ಹೀರೋಯಿನ್ ಮೇಲೆ ಹೂಮಳೆ ಹಣ್ಮಳೆ ಕರೆದು ಏನೆಲ್ಲಾ ಮಾಡಿದರೂ ಚಿತ್ರ ದಯನೀಯವಾಗಿ ಸೋತುಬಿಡುತ್ತಿತ್ತು. ನೋಡುಗರು ರವಿಚಂದ್ರನ್ ಮೇಲೆ ತಮಗಿದ್ದ ಭರವಸೆ-ಅಭಿಮಾನ ಕಳೆದುಕೊಳ್ಳಲೂ ಮನಸಾಗದೆ ಮೌನವಾಗಿ ನಿರಾಶೆ ಅನುಭವಿಸುತ್ತಿದ್ದರೆ, ಅತ್ತ ರವಿಚಂದ್ರನ್ ಏಕಾಂಗಿಯಾಗಿ ಕೂತು ಎಲ್ಲಿ ತಪ್ಪಾಗುತ್ತಿದೆ ಅಂತ ಯೋಚಿಸುತ್ತಿದ್ದರು.
ಆದರೆ ದೃಶ್ಯ ಚಿತ್ರದ ಅಪೂರ್ವ ಗೆಲವು ಹಾಗೂ ಒಮ್ಮತದ ಪಾಸಿಟಿವ್ ವಿಮರ್ಶೆಗಳು ರವಿಚಂದ್ರನ್‌ರನ್ನು ಇನ್ನೊಂದು ರೀತಿಯ ಸಂದಿಗ್ಧಕ್ಕೆ ಸಿಲುಕಿಸಿದೆ. 'ರವಿಚಂದ್ರನ್ ಇನ್ಮೇಲೆ ಈ ಥರದ ಪಾತ್ರಗಳನ್ನೇ ಮಾಡಬೇಕು' ಎಂಬ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ, ಚಿತ್ರಮಂದಿರದಿಂದ ಆಚೆ ಬಂದವರಲ್ಲಿ ಕೇಳಿ ರವಿಚಂದ್ರನ್ ಇನ್ನಷ್ಟು ಗೊಂದಲಕ್ಕೆ ಒಳಗಾಗಿದ್ದರೆ ಅದಕ್ಕೆ ಅಚ್ಚರಿ ಪಡಬೇಕಿಲ್ಲ. ರವಿಚಂದ್ರನ್ ಇನ್ಮುಂದೆ ಎಂಥ ಚಿತ್ರಗಳಲ್ಲಿ ನಟಿಸಬೇಕು?
ಇಂಥಾ ಚಿತ್ರಗಳಲ್ಲೇ ನಟಿಸಿ, ಇಂಥಾ ಪಾತ್ರಗಳಲ್ಲೇ ನಟಿಸಿ ಅಂತ ಒಬ್ಬ ಕಲಾವಿದನಿಗೆ ಕಟ್ಟಿಹಾಕುವುದು ಸರಿಯೇ? ಈ ಬಗ್ಗೆ ನಿರ್ಧಾರ ತಗೊಳೋಕೆ ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಇಪ್ಪತ್ತೈದು ವರ್ಷಗಳ ವೃತ್ತಿಜೀವನಾನುಭವ ಇರುವ ರವಿಗಿಂತ ಇನ್ಯಾರಿಗೆ ಸಾಧ್ಯವಿದೆ? ಅಥವಾ ರವಿಚಂದ್ರನ್ ಯಾರದ್ದಾದರೂ ಮಾತು ಕೇಳಿದ ಉದಾಹರಣೆ ಇದೆಯೇ? ಕನಸುಗಾರನ ಕನಸಿಗೆ ಯಾರು ಬೇಲಿ ಹಾಕಲು ಸಾಧ್ಯ?
ಮಲ್ಲ ಚಿತ್ರದ ನಂತರ ರವಿಚಂದ್ರನ್ ಕಾಣುತ್ತಿರುವ ಮೊದಲ ದೊಡ್ಡ ಗೆಲವು ದೃಶ್ಯ. ಪ್ರತಿ ಸಲ ಸೋತಾಗಲೂ ರವಿಚಂದ್ರನ್ ಹೇಳ್ತಾ ಇದ್ದದ್ದು ಒಂದೇ ಮಾತು. 'ಮಲ್ಲ ಥರ ನೂರು ಸಿನಿಮಾ ಮಾಡಿ ಗೆಲ್ತೀನಿ. ಅದು ನನಗೆ ಸುಲಭ. ಆದರೆ ಅದನ್ನು ಹೊರತಾಗಿ ಬೇರೇನೋ ಮಾಡೋ ಕನಸಿದೆ. ಆ ಪ್ರಯತ್ನ ಮಾಡ್ತಿದೀನಿ.'
ಈಗ ದೃಶ್ಯ ಗೆದ್ದಿದೆ. ಇದು ಮಲ್ಲ ಥರದ ಚಿತ್ರ ಅಲ್ಲ. ಆದರೂ ಗೆದ್ದಿದೆ! ಇದೇ ರವಿಚಂದ್ರನ್‌ರನ್ನು ಸಂದಿಗ್ಧಕ್ಕೆ ತಳ್ಳಿರೋ ವಿಷಯ.
ಹಾಗಾದರೆ ರವಿಚಂದ್ರನ್ ಮಲ್ಲ ಥರದ ಚಿತ್ರ ಮಾಡಬೇಕೋ ದೃಶ್ಯ ಥರದ ಚಿತ್ರ ಮಾಡಬೇಕೋ?
ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡೂ ಚಿತ್ರಗಳಲ್ಲಿ ಒಂದು ಸಾಮ್ಯ ಕಾಣುತ್ತದೆ. ಚಿತ್ರದಲ್ಲಿ ನೋಡಿಸಿಕೊಂಡು ಹೋಗುವ ಕಥೆ ಇದೆ. ಚಿತ್ರಕಥೆ ಇದೆ. ರವಿಚಂದ್ರನ್‌ರ ಇತರೆ ಚಿತ್ರಗಳಲ್ಲಿ ಮಿಸ್ ಆಗ್ತಾ ಇದ್ದದ್ದು ಇದೊಂದೇ. ಬಹುತೇಕ ಸೋಲಿಗೆ ಕಾರಣ ಕೂಡ ಇದೇ.
ಹಾಗಾದ್ರೆ ಕಥೆ ಅಷ್ಟೊಂದು ಅವಶ್ಯಕವಾ? ಕಥೆ ಇಲ್ಲದೆ ಚಿತ್ರ ಮಾಡಿ ಯೋಗರಾಜ್ ಭಟ್ ಗೆದ್ದಿದ್ದಾರೆ. 'ಪ್ರಪಂಚದಲ್ಲಿ ಇರೋದೇ ಐದು ಥರದ ಕಥೆ. ಅದನ್ನ ಬಿಟ್ಟು ಬೇರೇನೂ ಮಾಡೋಕೆ ಸಾಧ್ಯ ಇಲ್ಲ. ಚಿತ್ರಕಥೆ, ನಿರೂಪಣೆಯಲ್ಲಿ ವಿಭಿನ್ನತೆ ಮೆರೆಯಬೇಕಷ್ಟೇ' ಅಂತ ಹೇಳಿದ ಸೂರಿ ಆ ಮಾತನ್ನು ಕಾರ್ಯಗತ ಮಾಡಿ ತೋರಿಸಿದ್ದಾರೆ.
ಹಾಗಾದ್ರೆ ರವಿಚಂದ್ರನ್ ಮಾತ್ರ ಯಾಕೆ ಗೆಲ್ಲಲಿಲ್ಲ? ಅವರ ಮೇಲಿನ ವಿಪರೀತ ನಿರೀಕ್ಷೆಯೇ ಅಥವಾ ರವಿ ಎಲ್ಲವೂ ತಾವೇ ಮಾಡಲು ಹೊರಟಿದ್ದರ ಪರಿಣಾಮವೆ? ರವಿ ತಾಂತ್ರಿಕತೆಯಲ್ಲಿ ಪಳಗಿದಷ್ಟು ಸಲೀಸಾಗಿ ಬರವಣಿಗೆಯಲ್ಲಿ ಪಳಗದಿದ್ದುದೆ? ಉತ್ತಮ ಕಥಾಲೇಖಕರ ಬಳಗ ಸೃಷ್ಟಿಸಿಕೊಳ್ಳದ ಫಲವೇ ಅಥವಾ ಪ್ರೇಕ್ಷಕರ ಬಗ್ಗೆ ಅವರಿಗಿರುವ ಕೆಲವು ತಪ್ಪು ಗ್ರಹಿಕೆಗಳೇ?
ಒಂದಷ್ಟು ಅಂಶಗಳನ್ನು ಗಮನಿಸೋಣ. ರವಿಚಂದ್ರನ್ ಚಿತ್ರದಲ್ಲಿ ಹೀರೋಯಿನ್ ತುಂಬಾ ಸುಂದರವಾಗಿ ಕಾಣಿಸ್ತಾರೆ. ನಾಯಕಿಯರೊಂದಿಗಿನ ಪ್ರಣಯ ಸನ್ನಿವೇಶಗಳನ್ನು ಅದ್ಭುತವಾಗಿ ಚಿತ್ರೀಕರಿಸುತ್ತಾರೆ ಎಂಬೆಲ್ಲ ಮಾತುಗಳು ನಿಜ. ಆದರೆ ಈ ಇಂಟರ್‌ನೆಟ್ ಯುಗದಲ್ಲಿ, ಗ್ಲಾಮರ್ ಎಂಬುದು ಉದ್ರೇಕಗೊಳಿಸದ ವಿಷಯವಾಗಿ, ರವಿ ಚಿತ್ರದ ಹೀರೋಯಿನ್ ನೋಡಲೆಂದು ಜನ ಥೇಟರ್‌ಗೆ ಬರೋದಿಲ್ಲ. ಹಾಗೂ ಇಂದಿನ ರೂಪದ ರವಿಚಂದ್ರನ್‌ರನ್ನು ಸುಂದರ ನಾಯಕಿಯರೊಂದಿಗೆ ಪ್ರಣಯ ದೃಶ್ಯಗಳಲ್ಲಿ ಕಲ್ಪಿಸಿಕೊಳ್ಳಲೂ ಜನ ಇಷ್ಟ ಪಡುವುದಿಲ್ಲ ಅನ್ನೋದೂ ಅಷ್ಟೇ ನಿಜ.
ತಾಂತ್ರಿಕತೆ ವಿಷಯದಲ್ಲಿ ರವಿ ಇಡೀ ಭಾರತೀಯ ಚಿತ್ರರಂಗವನ್ನೇ ತಮ್ಮತ್ತ ತಿರುಗಿಸಿ ನೋಡಿಸಿಕೊಂಡವರು. ಆದರೆ ಇತ್ತೀಚಿನ ಅವರ ಯಾವುದೇ ಅದ್ದೂರಿ ಚಿತ್ರಗಳಲ್ಲೂ ಹೊಸತಾದ ಯಾವ ತಾಂತ್ರಿಕ ಚಮತ್ಕಾರಗಳೂ ಇಲ್ಲ. ಸಂಗೀತದ ವಿಷಯಕ್ಕೆ ಬಂದರೆ ಹಂಸಲೇಖರ ಸಾಂಗತ್ಯ ಬೇರ್ಪಟ್ಟ ನಂತರ ರವಿಚಂದ್ರನ್ ಚಿತ್ರದ ಹಾಡುಗಳು ಯಾವತ್ತೂ ಜನರನ್ನು ಹುಚ್ಚೆಬ್ಬಿಸಲೇ ಇಲ್ಲ. ರವಿ ತಾವೇ ಸಂಗೀತ ನೀಡಲು ಶುರು ಮಾಡಿದಾಗ, ಹೇಗಿರಬಹುದು ಎಂಬ ಕುತೂಹಲಕ್ಕೆ ಮೊದಲ ಕೆಲವು ಚಿತ್ರಗಳ ಹಾಡುಗಳತ್ತ ಆಸಕ್ತಿ ತೋರಿದರೇ ವಿನಃ ಅದು ರವಿಚಂದ್ರನ್ ವೃತ್ತಿಜೀವನದಲ್ಲಿ ಪಾಸಿಟಿವ್ ಆಗಲೇ ಇಲ್ಲ.
ಅದ್ಭುತ ಕಾನ್ಸೆಪ್ಟ್‌ಗಳಾಗಿದ್ದೂ ಸಹ, ಅದಕ್ಕೊಂದು ಸ್ಪಷ್ಟ ರೂಪ ಸಿಗದೇ ಏಕಾಂಗಿ, ಅಹಂ ಪ್ರೇಮಾಸ್ಮಿ ಥರದ ಚಿತ್ರಗಳು ಸೋತು ಹೋದವು. ಮಂಜಿನ ಹನಿಯ ಫಸ್ಟ್‌ಕಟ್‌ಗಳನ್ನು ನೋಡಿದಾಗ ಅನಿಸೋದು ಕೂಡ ಇವು ಏಕಾಂಗಿ, ಅಹಂಪ್ರೇಮಾಸ್ಮಿಯ ನೆರಳಿರುವ ಚಿತ್ರ ಎಂದೇ.
ಹಾಗಾಗಿ ರವಿಚಂದ್ರನ್ ಮತ್ತೊಂದು ಮಲ್ಲ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಏಕಾಂಗಿ ಥರದ ಚಿತ್ರ ಮಾಡಿಯೂ ಗೆಲ್ಲಲು ಸಾಧ್ಯವಿಲ್ಲ. ಅವರನ್ನು ಗೆಲ್ಲಿಸೋಕೆ ಬೇಕಿರೋದು ಗಟ್ಟಿ ಕಥೆ. ಗಟ್ಟಿ ಕಥೆ ಇದ್ದರೆ ರವಿಚಂದ್ರನ್ ಏನು ಯಾರು ಬೇಕಾದರೂ ಗೆಲ್ತಾರೆ, ಆ ಚಿತ್ರಕ್ಕೆ ರವಿಚಂದ್ರನ್ನೇ ಯಾಕೆ ಬೇಕು... ಈಗ ದೃಶ್ಯ ಕೂಡ ಅಷ್ಟೇ ಅಲ್ಲವೇ.. ರವಿ ಬದಲು ಯಾರೇ ಮಾಡಿದ್ದರೂ ಕಥೆಯಿಂದಲೇ ಗೆಲ್ಲುವ ತಾಕತ್ತಿರೋ ಸಿನಿಮಾ ಅದು ಅಂತೀರಾ? ಚಿತ್ರಕ್ಕೆ ರವಿಚಂದ್ರನ್ ಫ್ಯಾಕ್ಟರ್ ವರ್ಕ್ ಆಗಿಲ್ಲ ಅಂತ ಹೇಳೋ ಹಾಗೇ ಇಲ್ಲ. ರವಿಚಂದ್ರನ್ ಇಂಥ ಹೀರೋಯಿಸಂ ಇಲ್ಲದ ಪಾತ್ರ ಹೇಗೆ ಮಾಡಿದ್ದಾರೆ ಎಂದು ನೋಡುವ ಕ್ಯೂರಿಯಾಸಿಟಿ ಕೂಡ ದೃಶ್ಯದ ಗೆಲುವಿಗೆ ದೊಡ್ಡ ಕಾರಣ. ಅಷ್ಟೇ ಸಮರ್ಥವಾಗಿ ಅವರು ಪಾತ್ರ ನಿಭಾಯಿಸಿರೋದೂ ಹೌದು.
ರವಿಚಂದ್ರನ್ ಸೂಕ್ತ ಕಥೆಗಳತ್ತ, ಹೀರೋಯಿಸಂ, ಗ್ಲಾಮರ್‌ಗಳನ್ನು ಮೀರಿದ ಸ್ಕ್ರಿಪ್ಟ್‌ಗಳತ್ತ ಗಮನ ಹರಿಸಬೇಕಿದೆ. ಗಟ್ಟಿ ಕಥೆಗಾಗಿ ರೀಮೇಕ್ ಮೊರೆ ಹೋಗುವ ಬದಲು ಇಲ್ಲೇ ಹುಡುಕುವ ಪ್ರಯತ್ನ ಮಾಡಬೇಕಿದೆ. ರವಿಚಂದ್ರನ್ ಅಂದ್ರೆ ರೀಮೇಕ್‌ಗೂ ಸೈ ಸ್ವಮೇಕ್‌ಗೂ ಸೈ ಅನ್ನುವಂತೆ ಇಲ್ಲಿ ಅದ್ಭುತ ಕಥೆಗಳನ್ನು ಹುಡುಕಿ ಚಿತ್ರ ಮಾಡಬೇಕಿದೆ. ತಾಂತ್ರಿಕ ದೃಶ್ಯವೈಭವಗಳಲ್ಲಿ ಕಥೆ ಕಳೆದು ಹೋಗದಂತೆ ಹದಪಾಕ ಮಾಡುವ ಅಗತ್ಯವನ್ನು ಮನಗಾಣಬೇಕಿದೆ. ಹಾಗೂ ಇವೆಲ್ಲಾ ಏನೇ ಮಾಡಿದರೂ ಇದು 'ರವಿಚಂದ್ರನ್ ಚಿತ್ರ' ಎಂಬ ಸಿಗ್ನೇಚರ್ ಅಚ್ಚಳಿಯದಂತೆ ಉಳಿಸಬೇಕಿದೆ. ಹಾಗೇ ಇನ್ಮುಂದೆ ಬರೀ ತಂದೆ ಪಾತ್ರ, ವಯೋಸಹಜ ಪಾತ್ರ ಮಾಡಬೇಕು ಅನ್ನೋ ಮಾತಿಗೂ ಉತ್ತರ ನೀಡಬೇಕಿದೆ. ಅವರಲ್ಲಿನ ನಟ ಇತ್ತೀಚೆಗಷ್ಟೇ ಅನಾವರಣಗೊಳ್ಳುತ್ತಿದ್ದಾರೆ. ಅವರ ನಟನಾ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರದರ್ಶನಗೊಳ್ಳಬೇಕಿದೆ. ಅದು ರವಿಚಂದ್ರನ್‌ರಿಂದ ಖಂಡಿತಾ ಸಾಧ್ಯವಿದೆ. ಕನಸುಗಾರನ ಬಗ್ಗೆ ಕನಸು ಕಾಣುವ ಹಕ್ಕು ನಮಗಲ್ಲದೆ ಇನ್ಯಾರಿಗಿದೆ? ಇದನ್ನೆಲ್ಲಾ ಸಾಧಿಸಬಲ್ಲ ತಾಕತ್ತು ಕನಸುಗಾರನಿಗಲ್ಲದೆ ಇನ್ಯಾರಿಗಿದೆ?
ಒಂದು ದೃಶ್ಯ ಅವರನ್ನು ಗೊಂದಲದಲ್ಲಿ ಮುಳುಗಿಸೋ ಬದಲು ಅವರಲ್ಲಿ ಹೊಸ ಚೈತನ್ಯ ತುಂಬಿ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಲಿ ಎಂಬುದೇ ಎಲ್ಲರ ಆಶಯ.
= ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


