ಆನಂದ ಚಿತ್ರ

'ಕರೋನಾ' ಅಂದರೇನು? ಹಿಂದಿಯಲ್ಲಿ 'ಮಾಡು', ಸ್ಪಾನಿಶ್‌ನಲ್ಲಿ 'ಬದಲಾವಣೆ'. ಅದರ ಸೌಂಡಿಂಗ್ ಚೆನ್ನಾಗಿತ್ತು. ಚಿತ್ರದ ಪ್ರತಿ ತಿರುವಿಗೂ ಈ ಹೆಸರು ಸೂಕ್ತ ಎನಿಸಿತು ಅನ್ನುತ್ತಾರೆ ನಿರ್ದೇಶಕ.
ಆನಂದಪ್ರಿಯ ಸಾಹಿತಿ ಕಂ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಸೋದರ ಎನ್ನುವುದಕ್ಕಿಂತ ಸಂಭಾಷಣೆಗಾರ, ಸಾಹಿತಿ, ಕಥೆಗಾರನಾಗಿಯೇ ಹೆಚ್ಚು ಪರಿಚಿತರಾದವರು. ಅಣ್ಣನ ನೆರಳಿನ ಆಚೆಗೆ ತನಗೊಂದು ಐಡೆಂಟಿ ದಕ್ಕಿಸಿಕೊಂಡಿರುವ ಆನಂದಪ್ರಿಯ, ಮತ್ತೊಂದು ಐಡೆಂಟಿಟಿಗಾಗಿ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ. ಅವರ ಈ ಉತ್ಸಾಹದ ಅಲೆಯಲ್ಲಿ ರೂಪುಗೊಳ್ಳುತ್ತಿರುವುದೇ 'ಕರೋನಾ'. ಅಂದಹಾಗೆ ಇದು ಆನಂದಪ್ರಿಯನ ಮೊದಲ ನಿರ್ದೇಶನದ ಸಿನಿಮಾ. ಬಂದು ಹೋಗುತ್ತಿರುವ ನೂರಾರು ಚಿತ್ರಗಳಲ್ಲಿ ಇದೂ ಒಂದು ಎನಿಸಿಕೊಳ್ಳಬಾರದು. ಸೋಲು, ಗೆಲುವು ಏನೇ ಇರಲಿ, 'ಅಬ್ಬಾ ಇದು ನಿಜಕ್ಕೂ ಅಪರೂಪ ಸಿನಿಮಾ' ಎನ್ನುವಂಥ ಐಡೆಂಟಿಟಿ ದೊರೆಯಬೇಕು. ಅದನ್ನು 'ಕರೋನಾ' ಚಿತ್ರ ನೀಡಲಿದೆ ಎಂಬುದು ಆನಂದಪ್ರಿಯ ಬಲವಾದ ನಂಬಿಕೆ.
ಇದೇ ನಂಬಿಕೆಯಲ್ಲಿ ಇತ್ತೀಚೆಗಷ್ಟೆ ಚಿತ್ರಕ್ಕೆ ಮುಹೂರ್ತ ಮಾಡಿ, ಚಿತ್ರೀಕರಣವನ್ನೂ ಆರಂಭಿಸಿರುವ 'ಕರೋನಾ' ಚಿತ್ರದ ನಾಯಕ ನಿರಂಜನ್ ಶೆಟ್ಟಿ. 'ಕೇಸ್ ನಂ.18/9' ಚಿತ್ರದ ಮೂಲಕ ತನ್ನ ಪ್ರತಿಭೆ ಸಾಬೀತು ಮಾಡಿದ ಶೆಟ್ಟಿಗೆ 'ಕರೋನಾ' ಮತ್ತೊಂದು ಮೈಲುಗಲ್ಲು ಆಗಲಿದೆ ಎನ್ನುವ ವಿಶ್ವಾಸ. 'ಒಳ್ಳೆಯ ತಂಡ ಸೇರಿಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಇದರ ಸೋಲು, ಗೆಲುವು ಬದಿಗಿಡಿ. ನಮ್ಮ ಈ ಚಿತ್ರ ಬಂದು ಹೋದ ಮೇಲೆ ಜನ ಮಾತನಾಡಿಕೊಳ್ಳಬೇಕು. ಅಂಥ ಚಿತ್ರವಂತೂ ಇದಾಗಲಿದೆ. ನನಗೇ ಅಂತ ಈ ಚಿತ್ರ ಹೊಸ ಐಡೆಂಟಿಟಿ ದೊರಕಿಸಿಕೊಡಲಿದೆ' ಎಂದರು ಆನಂದಪ್ರಿಯ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಏಕಕಾಲಕ್ಕೆ ಇದು ಕನ್ನಡ ಮತ್ತು ಮಲೆಯಾಳಂನಲ್ಲಿ ಶುರುವಾಗುತ್ತಿರುವುದು. ಕೇರಳ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಫಿರೋಜ್ ಖಾನ್ ಮಲೆಯಾಳಂ ಆವೃತ್ತಿಗೆ ನಾಯಕ. 'ಕರೋನಾ' ಅಂದರೇನು? ನಿರ್ದೇಶಕರಿಗೆ ಎದುರಾದ ಮೊದಲ ಪ್ರಶ್ನೆ. ಹಿಂದಿಯಲ್ಲಿ 'ಮಾಡು', ಸ್ಪಾನಿಶ್‌ನಲ್ಲಿ 'ಬದಲಾವಣೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ, ಲಿಫ್ಟ್' ಎನ್ನುವ ಅರ್ಥವಿದೆ. 'ಕರೋನಾ' ಎನ್ನುವುದು ಹಿಂದಿಯಲ್ಲಿ ಬಳಸುವ ಪದ. ಅದರ ಸೌಂಡಿಂಗ್ ಚೆನ್ನಾಗಿತ್ತು. ಚಿತ್ರದ ಪ್ರತಿ ತಿರುವಿಗೂ ಈ ಹೆಸರು ಸೂಕ್ತ ಎನಿಸಿತು... ಆನಂದಪ್ರಿಯ 'ಕರೋನಾ'ಗೆ ವಿರವರಣೆ ಕೊಡುತ್ತ ಹೋದರು.
ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿರುವ ಆನಂದಪ್ರಿಯ ನಟನೆ, ಸಂಭಾಷಣೆ, ಸಹ ನಿರ್ದೇಶನ, ಕಥೆ, ಗೀತ ರಚನೆಯಲ್ಲಿ ತೊಡಗಿಕೊಂಡಿದ್ದವರು. 'ಇದು ನನ್ನ ಕನಸಿನ ಕೂಸು. ಈಗಾಗಲೇ ಚಿತ್ರರಂಗದಲ್ಲಿರುವ ಸಿದ್ಧ ಸೂತ್ರಗಳ ಆಚೆಗೆ 'ಕರೋನಾ' ಚಿತ್ರವನ್ನು ಮಾಡುತ್ತಿದ್ದೇನೆ. ನಿರೂಪಣೆ ವಿಭಿನ್ನವಾಗಿರುತ್ತದೆ. ಸಂಬಂಧಗಳಲ್ಲಿ ಆಗುವಂಥ ಬದಲಾವಣೆಗಳೇ ಚಿತ್ರದ ಮುಖ್ಯವಸ್ತು' ಎಂದರು ಆನಂದ. 'ಶೀರ್ಷಿಕೆ ಕೇಳಿದಾಗ ನಿಮ್ಮಂತೆಯೇ ನನಗೂ ಪ್ರಶ್ನೆ ಮೂಡಿತು. ಆದರೆ, ಕಥೆ ಕೇಳಿದಾಗ ಇಷ್ಟವಾಯಿತು. ಪ್ರತಿ ಸನ್ನಿವೇಶವನ್ನೂ ತುಂಬಾ ಚೆನ್ನಾಗಿ ಮಾಡಿದ್ದಾರೆ' ಎಂದರು ನಿರಂಜನ್ ಶೆಟ್ಟಿ. ಇವರದ್ದು ರಾಕ್‌ಸ್ಟಾರ್ ಪಾತ್ರ.
ಕಿರುತೆರೆ ನಟ ರಾಜೇಶ್ ಚಿತ್ರದಲ್ಲಿ ಇದುವರೆಗೂ ಮಾಡದ ಪಾತ್ರವನ್ನು ಮಾಡುತ್ತಿದ್ದಾರೆ. ಮಲೆಯಾಳಂಗೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿರುವುದು ಅವರಿಗೆ ವಿಶೇಷವಾಗಿದೆ. ರವಿಕುಮಾರ್ ಚಿತ್ರದ ನಿರ್ಮಾಪಕ. ಇವರು ಬಿಬಿಎಂ ಗುತ್ತಿಗೆದಾರರು. ನಿರ್ದೇಶಕ ಡಿ.ವಿ.ಎಸ್. ಗುರುಪ್ರಸಾದ್ ಇವರ ಬಾವ. 'ಕರೋನಾ' ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಕನ್ನಡ ಮತ್ತು ಮಲೆಯಾಳಂಗಳೆರಡರಲ್ಲೂ ಪ್ರಜ್ಜು ಪೂವಯ್ಯ ನಾಯಕಿ. ಎಮಿಲ್ ಸಂಗೀತ, ರಾಮ್ ಲಕ್ಷ್ಮಣ್ ಸಾಹಸ ಇದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತಿ, ನಾಗಾರ್ಜುನ್ ಕ್ಯಾಮೆರಾ ಇದೆ. ಬೆಂಗಳೂರು, ಮನಾಲಿ, ಗುಜರಾತ್, ಕೇರಳ, ಲಡಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ.
= ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


