ಭರತ್ ಝೇಂಕಾರ
ಭರತ ಖಂಡ ಇದೀಗ ಇನ್ನೊಂದು 'ಮಂಗಳ'ಯಾನಕ್ಕೆ ಸಿದ್ಧವಾಗಿದೆ. ಉಡಾವಣೆಗೆ 6-5=2 ಅಂತ ಕೌಂಟ್ಡೌನ್ ಕೂಡ ಶುರುವಾಗಿದೆ. ಸಿಹಿಸುದ್ದಿ...

ಭರತ ಖಂಡ ಇದೀಗ ಇನ್ನೊಂದು 'ಮಂಗಳ'ಯಾನಕ್ಕೆ ಸಿದ್ಧವಾಗಿದೆ. ಉಡಾವಣೆಗೆ 6-5=2 ಅಂತ ಕೌಂಟ್ಡೌನ್ ಕೂಡ ಶುರುವಾಗಿದೆ. ಸಿಹಿಸುದ್ದಿಯ ಝೇಂಕಾರಕ್ಕೆ ಜೈ ಅನ್ನೋದಷ್ಟೇ ಬಾಕಿ.
ಹೌದು 'ಮಾರ್ಸ್' ಕಂಪನಿಯ ಮಾಲೀಕ ಭರತ್ ಜೈನ್ ಹೀಗೊಂದು ಫ್ಲೈಯಿಂಗ್ನ್ಯೂಸ್ ನೀಡಿದ್ದಾರೆ. ಕನ್ನಡದ ಸರ್ಪ್ರೈಸ್ ಹಿಟ್ 6-5=2 ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಭರತ್ಜೈನ್ ಮುಂದಾಗಿದ್ದಾರೆ. ಇಷ್ಟು ವರ್ಷ ಆಡಿಯೋ, ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಯಶಸ್ಸು ಕಂಡಿದ್ದ ಭರತ್ ಇದೇ ಮೊದಲ ಬಾರಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿರುವುದು 6-5=2 ಚಿತ್ರದಂತೆಯೇ ಎಲ್ಲರಲ್ಲೂ ಅಚ್ಚರಿ ಮತ್ತು ನಿರೀಕ್ಷೆ ಮೂಡಿಸಿದೆ.
6-5=2 ಚಿತ್ರದ ಬಗ್ಗೆ ಯಾರಿಗೂ ನಂಬಿಕೆ ಇರದ ಹೊತ್ತಲ್ಲಿ ಯಾರೂ ಕೊಳ್ಳಲು ಮುಂದಾಗದ ಪರಿಸ್ಥಿತಿಯಲ್ಲಿ ಈ ಚಿತ್ರದಲ್ಲೇನೋ ಒಂದು ಕಿಡಿ ಇದೆ ಎಂದು ವಿಶ್ವಾಸ ಇಟ್ಟು ಭರತ್ ಆ ಚಿತ್ರದ ಹಕ್ಕನ್ನು ಪಡೆದಿದ್ದರು. ಭರತ್ ಅವರ ಲೆಕ್ಕಾಚಾರಗಳು ಕೈ ಕೊಡುವುದು ತುಂಬಾ ಅಪರೂಪ. ತಪ್ಪು ಲೆಕ್ಕದ ಟೈಟಲಿದ್ದ ಚಿತ್ರ ಕೂಡ ಅವರನ್ನು ಲೆಕ್ಕ ತಪ್ಪಿಸಲಿಲ್ಲ. ಚಿತ್ರ, ಭಾಷೆ ಬಾರದವರಿಗೂ, ಲೆಕ್ಕ ಬಾರದವರಿಗೂ ಹೋಲ್ಸೇಲ್ ಲೆಕ್ಕದಲ್ಲಿ ಇಷ್ಟವಾಗಿದೆ. ಹಾಫ್ ಸೆಂಚುರಿಯತ್ತ ಮುನ್ನುಗ್ಗುತ್ತಿದೆ.
ಹಾಗಂತ ಭರತ್ ಇದನ್ನು ಹಿಂದಿಗೆ ಡಬ್ ಮಾಡಿ ದುಡ್ಡು ಮಾಡಲು ಹೊರಟಿಲ್ಲ. ಬದಲಿಗೆ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಇದೇ ಸರಿಯಾದ ಚಿತ್ರ ಎಂದು ರೀಮೇಕ್ಗೆ ನಿರ್ಧರಿಸಿದ್ದಾರೆ. ಈ ಚಿತ್ರದ ಯಶಸ್ಸಿಗೆ ಕಾರಣಗಳನ್ನು ಡೀಟೇಲ್ಲಾಗಿ ಸ್ಟಡಿ ಮಾಡಿದ್ದಾರೆ. ಫೆಬ್ರವರಿಯಲ್ಲಿ ಮುಹೂರ್ತವಿಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಗ್ರಾಮರ್ ಮತ್ತು ವ್ಯವಹಾರವನ್ನು ಅರೆದು ಕುಡಿದಿದ್ದರೂ ಮೊದಲ ಚಿತ್ರವನ್ನು ಬಾಲಿವುಡ್ಡಲ್ಲಿ ನಿರ್ದೇಶಿಸೋಕೆ ಹೊರಟಿದ್ದು ರಿಸ್ಕೀ ನಿರ್ಧಾರ ಅಲ್ವೇ ಅಂತ ಕೇಳಿದರೆ ಸುಲಲಿತ ಕನ್ನಡದಲ್ಲಿ ಭರತ್ ಹೇಳಿದ್ದು ಹೀಗೆ
'ನಾನು ಇಷ್ಟು ಚೆನ್ನಾಗಿ ಕನ್ನಡ ಮಾತಾಡೋದು ಹೌದಾದರೂ, ನಿಮಗೂ ಗೊತ್ತು, ನನ್ನ ಮೂಲಭಾಷೆ ಹಿಂದಿ. ಹಿಂದಿ ಮಾರ್ಕೆಟ್ ಕೂಡ ನಂಗೆ ಪರಿಚಯ ಇರೋದೇ. ಹಾಗಾಗಿ ಅದೆಲ್ಲ ದೊಡ್ಡ ಕಷ್ಟ ಅನಿಸ್ತಿಲ್ಲ. ನಿರ್ದೇಶನ ಇದೇ ಮೊದಲು. ನಿಜ. ಆದರೆ ಮುಸ್ಸಂಜೆ ಮಾತು, ಚಿರು ಮುಂತಾದ ನಮ್ಮದೇ ಚಿತ್ರಗಳಲ್ಲಿ ತೊಡಗಿಕೊಂಡು ನಿರ್ದೇಶನದ ಬೇಸಿಕ್ಸ್ ತಿಳಿದುಕೊಂಡಿದ್ದೇನೆ. ಛಾಯಾಗ್ರಾಹಕ ಸುವರ್ಣ ಅವರು ನೀಡಿ ಹೋದ ಪ್ರಾಕ್ಟಿಕಲ್ ಅನುಭವಗಳೂ ಜೊತೆಗಿವೆ. ಹಾಗಾಗಿ ಇದು ರಿಸ್ಕಿ ಅಂತೇನೂ ಅನಿಸ್ತಿಲ್ಲ'
ಈ ಚಿತ್ರದಲ್ಲಿ ಅಪರಿಚಿತ ಮುಖಗಳು ಅನನುಭವಿ ನಟರೇ ಇದ್ದದ್ದು ಪ್ಲಸ್ ಪಾಯಿಂಟ್ ಎಂಬುದು ಭರತ್ಗೆ ಗೊತ್ತಿದೆ. ಹಾಗಾಗಿ ಹಿಂದಿಯಲ್ಲೂ ಹೊಸ ಮುಖಗಳನ್ನೇ ತೆರೆಮೇಲೆ ತರಲಿದ್ದಾರೆ. ತೆರೆ ಹಿಂದೆ ಮಾತ್ರ ಅನುಭವಿಗಳಿರಲಿ ಎಂಬ ಕಾರಣಕ್ಕೆ ಕೆಮೆರಾಮನ್ ಸತ್ಯ ಹೆಗಡೆ ಮತ್ತು ಸಂಕಲನಕಾರ ದೀಪು ಎಸ್. ಕುಮಾರ್
ಅವರನ್ನು ತಮ್ಮೊಂದಿಗೆ ಬಾಲಿವುಡ್ಗೆ ಪದಾರ್ಪಣೆ ಮಾಡಿಸುತ್ತಿದ್ದಾರೆ.
ಕೇವಲ ಮೂವತ್ತ್ತಾರು ಲಕ್ಷ ವೆಚ್ಚದಲ್ಲಿ ತಯಾರಾದ ಕನ್ನಡ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಮಾತ್ರ ಕನಿಷ್ಟ ಅದರ ಐದು ಪಟ್ಟು ಹೆಚ್ಚಿನ ಬಜೆಟ್ ಬೇಕಿರುವುದು ಮನಗಂಡಿರುವ ಭರತ್, ಹೇಗೂ ಇಲ್ಲಿ ಒಳ್ಳೆಯ ಲಾಭ ಕಂಡಿರುವುದರಿಂದ ಹಣ ಸುರಿಯಲು ಹಿಂದುಮುಂದು ನೋಡುತ್ತಿಲ್ಲ. ಅಂದ ಹಾಗೆ ಹಿಂದಿಯಲ್ಲೂ ಚಿತ್ರ ಇದೇ ಹೆಸರಲ್ಲಿ ಬರುತ್ತಿದ್ದು, ಬಿಡುಗಡೆಗೆ ಮುನ್ನ ಇಲ್ಲಿ ಮಾಡಿದ್ದ ಗಿಮಿಕ್ಕಿನ ಜೊತೆ ಇನ್ನಷ್ಟು ಹೊಸಥರದ ಪ್ರಚಾರ ಯೋಜನೆ ಮಾಡಿಕೊಳ್ಳಲು ಈಗಾಗಲೇ ಭರತ್ ತಮ್ಮ ತಲೆಗೆ ಕೆಲಸ ಕೊಟ್ಟಿದ್ದಾರೆ.
- ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


