ದರ್ಶನ ಭಾಗ್ಯ
ಸಂದೇಶ್ ನಾಗರಾಜ್ ಒಂಥರಾ 'ಮಲ್ಟಿ'ಪ್ಲೆಕ್ಸ್ ಇದ್ದಂತೆ. ಚಿತ್ರ ನಿರ್ಮಾಣ, ಹೋಟೆಲ್ ಉದ್ಯಮ, ರಾಜಕೀಯ ಹಾಗೂ ಸಮಾಜ ಸೇವೆ...

ಸಂದೇಶ್ ನಾಗರಾಜ್ ಒಂಥರಾ 'ಮಲ್ಟಿ'ಪ್ಲೆಕ್ಸ್ ಇದ್ದಂತೆ. ಚಿತ್ರ ನಿರ್ಮಾಣ, ಹೋಟೆಲ್ ಉದ್ಯಮ, ರಾಜಕೀಯ ಹಾಗೂ ಸಮಾಜ ಸೇವೆ. ಹೀಗೆ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಾಗರಾಜ್, 'ಮಲ್ಟಿ'ಪ್ಲೆಕ್ಸ್ ಅಲ್ಲದೆ ಮತ್ತೇನು? ಇದು ಅವರ ಗೆಳೆಯರ ಹೆಮ್ಮೆಯ ಮಾತು. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಏನಾದರು ಕೊರತೆ ಇರಬಹುದೆನೋ? ಆದರೆ, ಸಂದೇಶ್ ನಾಗರಾಜ್‌ರ ಮಲ್ಟಿ ಫೀಲ್ಡ್‌ನಲ್ಲಿ ಅಂಥ ಯಾವ ಕೊರತೆಗಳು ಕಾಣಲ್ಲ ಎಂಬುದು ಅವರ ಆಪ್ತರ ವರ್ಣನೆ. ಏಕಕಾಲಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಓಡಾಡುತ್ತಿರುವ ಸಂದೇಶ್ ನಾಗರಾಜ್, ಅತ್ತಿತ್ತ ಶಿಫ್ಟ್ ಆಗುತ್ತಲೇ ಇರುತ್ತಾರೆ. ಹಾಗಾಗಿಯೆ ಮತ್ತೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮತ್ತೊಮ್ಮೆ ನಟ ದರ್ಶನ್ ಮತ್ತವರ ಕಾಂಬಿನೇಷನ್ ಗಾಂಧಿನಗರದಲ್ಲಿ ಕಾಣಿಸಿಕೊಳ್ಳಲಿದೆ. 'ಪ್ರಿನ್ಸ್' ನಂತರ 'ದರ್ಶನ ಭಾಗ್ಯ'ಕ್ಕೆ ಪಾತ್ರರಾಗಿದ್ದಾರೆ.
ವಿಶೇಷ ಅಂದರೆ ಈ ಬಾರಿಯೂ 'ಅದ್ದೂರಿ' ಬಜೆಟ್‌ಗೆ ಮುಂದಾಗಿರುವುದು. ಅಂಬರೀಷ್, ರವಿಚಂದ್ರನ್, ಶಶಿಕುಮಾರ್, ರಮೇಶ್ ಅರವಿಂದ್, ಶಿವರಾಜ್‌ಕುಮಾರ್, ದುನಿಯಾ ವಿಜಯ್, ದರ್ಶನ್ ಹೀಗೆ ಹಲವು ನಟರೊಂದಿಗೆ ಹತ್ತಾರು ಚಿತ್ರಗಳನ್ನು ನಿರ್ಮಿಸಿರುವ ಸಂದೇಶ್, 'ಸೋತು' ಗೆದ್ದಿದ್ದೇ ಹೆಚ್ಚಾದರೂ ಲಾಭ, ನಷ್ಟಗಳಿಗೆ ಹೆದರಿದವರಲ್ಲ.
ತಾವು ಬ್ಯುಸಿನೆಸ್‌ನಲ್ಲಿ ಲಾಭಕ್ಕೆ ಖುಷಿಯಾಗಿ, ನಷ್ಟಕ್ಕೆ ಹೆದರಿದ್ದರೆ ಈ ಎತ್ತರಕ್ಕೆ ಏರುತ್ತಿರಲಿಲ್ಲ ಎನ್ನುವ ಸಂದೇಶ್ ನಾಗರಾಜ್, ಚಿತ್ರರಂಗಕ್ಕೂ ಅದನ್ನೇ ಅಪ್ಲೈ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ 'ಪ್ರಿನ್ಸ್' ಜೊತೆ ಇದೀಗ 'ಐರಾವತ' ಚಿತ್ರದ ಮೂಲಕ ಪಯಣಿಸುತ್ತಿರುವ ಸಂದೇಶ್‌ರ ಬೆನ್ನಿಗೆ ಸಕ್ಸಸ್ ನಿರ್ದೇಶಕ ಎ.ಪಿ. ಅರ್ಜುನ್ ಇದ್ದಾರೆ. ಹೌದು, 'ಅಂಬಾರಿ', 'ಅದ್ದೂರಿ'ಯಂಥ ಚಿತ್ರಗಳನ್ನು ನೀಡಿ ಈಗ 'ರಾಟೆ' ಆಡುತ್ತಿರುವ ಅರ್ಜುನ್, 'ಐರಾವತ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಟಾರ್‌ನಟರು ಇಲ್ಲದೇ ತಮ್ಮ ಚಿತ್ರಗಳನ್ನು ಗೆಲ್ಲಿಸಿಕೊಂಡು ಬಂದಿರುವ ಅರ್ಜುನ್‌ರಿಗೆ ದರ್ಶನ್‌ರಂತ ಬಿಗ್ ಸ್ಟಾರ್ ಸಿಕ್ಕಿದ್ದು, 'ಐರಾವತ' ಜೋರಾಗಿ ಸದ್ದು ಮಾಡುವ ನಿರೀಕ್ಷೆ ಹುಟ್ಟಿಸಿದೆ.
ಇನ್ನು ಈ ಚಿತ್ರಕ್ಕೆ ಬ್ಯೂಟಿ ಗರ್ಲ್ ಎರಿಕಾ ಫರ್ನಾಂಡಿಸ್ ನಾಯಕಿ. ಮೂಲ ಮಂಗಳೂರಿನ ಕಡಲ ತೀರವಾದರೂ ಬಾಂಬೆ ಗಲ್ಲಿಯಲ್ಲಿ ಅಡ್ಡಾಡಿಕೊಂಡಿದ್ದ ಬೆಡಗಿ. ಸುಲಭವಾಗಿ ರ್ಯಾಂಪ್ ಮೇಲೆ ಕ್ಯಾಟ್ ಮಾಡಿದ್ದಲ್ಲದೆ, ಮಿಸ್ ಮಹಾರಾಷ್ಟ್ರ ಕೀರೀಟ ಬೇರೆ ತೊಟ್ಟವಳು. ಮಾಡೆಲ್ ಲೋಕದಲ್ಲಿ ಮಿಂಚುತ್ತಿದ್ದ ಈಕೆಗೆ ತೆಲುಗು, ತಮಿಳಿನಲ್ಲಿ ಒಂದಿಷ್ಟು ಅವಕಾಶ ಸಿಕ್ಕಿದ್ದರೂ ತೀರಾ ಇತ್ತೀಚೆಗೆ ಪುನೀತ್‌ರಾಜ್‌ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ನಾಯಕಿಯಾಗಿ ಗಾಂಧಿನಗರಕ್ಕೆ ಪರಿಚಯಗೊಂಡಿದ್ದಾಳೆ. ಎರಡನೇ ಚಿತ್ರ ತೆರೆ ಕಾಣುತ್ತಿದ್ದಂತೆಯೇ ಮತ್ತೊಬ್ಬ ಸ್ಟಾರ್ ಜೊತೆ ಹೆಜ್ಜೆ ಹಾಕುವ ಅವಕಾಶ ಗಿಟ್ಟಿಸಿಕೊಂಡಿರುವ ಎರಿಕಾ, ಸದ್ಯ ಚಂದನವನದ ಗ್ಲಾಮರ್ ಡಾಲ್.
ಛಾಯಾಗ್ರಹಣಕ್ಕೆ ಸತ್ಯ ಹೆಗ್ಡೆ, ಸಂಗೀತಕ್ಕೆ ವಿ. ಹರಿಕೃಷ್ಣ, ಸಂಕಲನಕ್ಕೆ ದೀಪು ಎಸ್.ಕುಮಾರ್ ಹೀಗೆ ದೊಡ್ಡ ಪ್ರತಿಭೆಗಳನ್ನೇ ಒಂದು ಕಡೆ ಸೇರಿಸಿಕೊಂಡು 'ಐರಾವತ' ನಿರ್ಮಾಣಕ್ಕೆ ಮುಂದಾಗಿರುವ ಸಂದೇಶ್ ನಾಗರಾಜ್, 'ಚಿತ್ರಪ್ರಭ' ಜೊತೆ ಮಾತನಾಡಿದ್ದಾರೆ. ಓವರ್ ಟು ಸಂದೇಶ್...
ನೀವು ಒಂಥರಾ 'ಬಂದ ಪುಟ್ಟ ಹೋದ ಪುಟ್ಟ' ಎನ್ನುವಂತೆ ಆಗಾಗ ಬರ್ತೀರಿ. ಮತ್ತೆ ಮಾಯಾವಾಗುತ್ತೀರಿ?
ಸಿನಿಮಾ ಒಂದೇ ನನ್ನ ಕಾರ್ಯಕ್ಷೇತ್ರವಲ್ಲ. ಸಿನಿಮಾ ಜೊತೆಗೆ ರಾಜಕೀಯ, ಹೋಟೆಲ್ ಉದ್ಯಮ, ಸಮಾಜ ಸೇವೆ ಮಾಡುತ್ತಿದ್ದೇನೆ. ಚಿತ್ರ ನಿರ್ಮಾಣಕ್ಕೆ ಬಂದಾಗ ಗಾಂಧಿನಗರದಲ್ಲಿ ಕಾಣಿಸಿಕೊಳ್ಳುತ್ತೇನೆ. ಇಲ್ಲ ಅಂದರೆ ಅಜ್ಞಾತ! ಯಾಕೆಂದರೆ ಸಿನಿಮಾ ಬಿಡುಗಡೆಯಾದ ಮೇಲೆ ನನಗೆ ಕೋಟಿ ಕೋಟಿ ಬಂತು ಅಂತ ಸುಮ್ಮನೆ ಪುಂಗಿ ಬಿಟ್ಟುಕೊಂಡು ಗಾಂಧಿನಗರದಲ್ಲಿ ಓಡಾಡಕ್ಕೆ ಇಷ್ಟವಿಲ್ಲ ನನಗೆ.
ಫೆಬ್ರವರಿ 16ರಂದೇ 'ಐರಾವತ'ಕ್ಕೆ ಮುಹೂರ್ತ ಮಾಡಬೇಕು ಎಂಬುದು ನಿಮ್ಮ ಪ್ರೀ ಪ್ಲಾನಾ?
ಹಾಗೇನು ಇಲ್ಲ. ಜನವರಿ ಕೊನೇ ವಾರದಲ್ಲಿ 'ಐರಾವತ' ಶುರು ಮಾಡಬೇಕು ಅಂದುಕೊಂಡಿದ್ದೆ. ದರ್ಶನ್ ಅವರೇ ಫೆ.16ಕ್ಕೆ ನನ್ನ ಬರ್ತ್ ಡೇ ಇದೆ ಅಂದ್ರು. ಅದೇ ದಿನ ಚಿತ್ರ ಆರಂಭಿಸಿದರೆ ಅದ್ದೂರಿಯಾಗಿರುತ್ತದೆ. ಕಲರ್‌ಫುಲ್ ಕಾರ್ಯಕ್ರಮ ಆಗುತ್ತದೆ ಅಂದುಕೊಂಡು ಅವತ್ತೇ ಚಾಲನೆ ಕೊಡುತ್ತಿದ್ದೇವೆ.
ಸರಿ, 'ಪ್ರಿನ್ಸ್' ನಂತರ ಮತ್ತೆ ದರ್ಶನ್‌ರಿಗೆ ಜೊತೆಯಾಗಿದ್ದೀರಲ್ಲ... ಇದೇನು ಹಳೇ ನಷ್ಟಕ್ಕೆ ಹೊಸ ಕಾಲ್‌ಶೀಟಾ?
'ಪ್ರಿನ್ಸ್' ಚಿತ್ರ ಲಾಭ ಮಾಡಲಿಲ್ಲ ನಿಜ. ಹಾಗಂತ ನಷ್ಟನೂ ಆಗಲಿಲ್ಲ. ನನಗೆ ಅದರಿಂದ ಬೇಸರವೇನು ಆಗಲಿಲ್ಲ. ಆದರೆ, ದರ್ಶನ್ ಅವರೇ 'ಸರ್, ನೀವು ಮತ್ತೆ ಇನ್ನೊಂದು ಸಿನಿಮಾ ಮಾಡಿ' ಅಂತ ಒತ್ತಾಯಿಸಿದ್ರು. ಆಯ್ತು ಅಂದುಕೊಂಡು ಕಾದೆ. ಈಗ ಅವರ ಡೇಟ್ ಸಿಕ್ಕಿದೆ. ಹಾಗೆಂದ ಮಾತ್ರಕ್ಕೆ 'ಐರಾವತ' ಸಾಲ ಸಹಕಾರ, ಲಾಸಿನ ಬಾಬ್ತು ತುಂಬುವ ಚಿತ್ರವಲ್ಲ. ನನ್ನ ಮತ್ತು ದರ್ಶನ್ ನಡುವೆ ಸ್ನೇಹ ಬೇರೆ, ಬ್ಯುಸಿನೆಸ್ ಬೇರೆ. ಅವರ ಬೇರೆ ಎಲ್ಲ ಚಿತ್ರಗಳಿಗಿಂತಲೂ ಇದನ್ನು ಇನ್ನಷ್ಟು ಅದ್ದೂರಿಯಾಗಿ ಮಾಡುತ್ತಿದ್ದೇನೆ. ಸಂಭಾವನೆ ವಿಚಾರದಲ್ಲಿ ರಾಜಿಯಾಗಿಲ್ಲ. ಹಾಗಿದ್ದ ಮೇಲೆ ಇದು ಸ್ನೇಹಪೂರ್ವಕವಾಗಿ ಸಿಕ್ಕ 'ಐರಾವತ'ವಲ್ಲ.
ಪದೇ ಪದೇ ಅದ್ದೂರಿ ಚಿತ್ರಗಳಿಗೆ ಕೈ ಹಾಕುತ್ತೀರಿ. ಕೊನೆಗೆ ಲಾಸು ಇಲ್ಲದೆ, ಲಾಭಾನೂ ಇಲ್ಲದೆ ಸುಮ್ಮನಾಗುತ್ತೀರಿ. ಆದರೂ ಮತ್ತೆ ಬಿಗ್ ಬಜೆಟ್ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದೀರಲ್ಲ?
ಸಾಮಾನ್ಯವಾಗಿ ಸಿನಿಮಾ ಮೊದಲು ಗಮನ ಸೆಳೆಯುವುದು ಎರಡು ಕಾರಣಕ್ಕೆ. ಒಂದು, ಚಿತ್ರದಲ್ಲಿರುವ ಕಲಾವಿದರು. ಎರಡು, ಚಿತ್ರ ಚೆನ್ನಾಗಿದ್ದರೆ. ಆದರೆ, ಈ ಎರಡೂ ಸರಿಯಾಗಿದ್ದು, ಮೇಕಿಂಗ್‌ನಲ್ಲಿ ಶ್ರೀಮಂತಿಕೆ ಇಲ್ಲದಿದ್ದರೆ ಚಿತ್ರ ಸಪ್ಪೆಯಾಗುತ್ತದೆ. ಹಾಗಂತ ಬಿಗ್ ಬಜೆಟ್ ಚಿತ್ರಗಳೇ ಗೆದ್ದಿವೆ ಅಂತ ಹೇಳಲಾರೆ. ಇತ್ತೀಚೆಗೆ ಪ್ರೇಕ್ಷಕರ ಗಮನ ಸೆಳೆದ ಚಿತ್ರಗಳನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ. ಆದರೆ, ದರ್ಶನ್ ಸಿನಿಮಾ ಅಂದ ಮೇಲೆ ಅದ್ದೂರಿತನ ಬೇಕಲ್ಲ, ಅಲ್ಲದೆ ಸಕ್ಸಸ್ ನಿರ್ದೇಶಕ ಅರ್ಜುನ್ ಸಿನಿಮಾ ಇದು.
ಹಾಗಾದರೆ ಈ ಬಾರಿ ಗೆದ್ದೇ ಗೆಲ್ಲುತ್ತೀರಿ ಎನ್ನುವ ವಿಶ್ವಾಸ ಇದೆ?
ನಂಬಿಕೆ, ವಿಶ್ವಾಸ ಇದ್ದರೆ ಅರ್ಧ ಗೆದ್ದಂತೆ. ಅದು ನನಗೆ ಇದೆ. ಖಂಡಿತ ಈ ಚಿತ್ರ ನನ್ನ ಜೇಬಿಗೆ ಕನ್ನ ಹಾಕಲ್ಲ ಎನ್ನುವ ನಂಬಿಕೆ ಇದೆ. ಒಳ್ಳೆಯ ಚಿತ್ರವಾಗಲಿದೆ. ಪ್ರೇಕ್ಷಕ ಕೈ ಕೊಡಲ್ಲ ಎನ್ನುವ ವಿಶ್ವಾಸ ಇದೆ. ನೋಡ್ತಾ ಇರಿ ಈ ಚಿತ್ರದ ನಂತರ ಕೂಡಲೇ ಮತ್ತೊಂದು ಸಿನಿಮಾ ಶುರು ಮಾಡುತ್ತೇನೆ.
ಇಷ್ಟಕ್ಕೂ 'ಐರಾವತ' ಚಿತ್ರದ ಕಥೆ ಏನು?
ಕಥೆ ಪೂರ್ತಿ ನನಗೆ ಇನ್ನು ಗೊತ್ತಿಲ್ಲ. ಆದರೆ, ಒಂದು ಸಾಲಿನ ಕಥೆ ಹೇಳಿದ್ದಾರೆ. ಇಷ್ಟವಾಯಿತು. ಪಕ್ಕಾ ಕಮರ್ಷಿಲ್ ಸಿನಿಮಾ. ದೇವಲೋಕದಲ್ಲಿ ಇಂದ್ರನ ಸಾರಥಿ ಐರಾವತ. ಅದೇ ಭೂಲೋಕದಲ್ಲಿ ಈ ನಮ್ಮ ಇಂದ್ರ (ದರ್ಶನ್)ರಿಗೆ ಬೈಕ್ ಸಾರಥಿ. ಇಲ್ಲಿ ಬೈಕ್ ದರ್ಶನ್‌ರಿಗೆ ಐರಾವತ ಇದ್ದಂಗೆ. ಜೊತೆಗೆ ರಫ್ ಆಂಡ್ ಟಫ್ ಪೊಲೀಸ್ ಬೇರೆ. ಒಬ್ಬ ಖಡಕ್ ಪೊಲೀಸ್ ಅಧಿಕಾರಿ ಸುತ್ತ ಆ ಚಿತ್ರ ಮೂಡಿಬರಲಿದೆ. ಜೊತೆಗೆ ಅರ್ಜುನ್ ಮೇಲೆ ನಂಬಿಕೆ ಇಟ್ಟು ಈ ಚಿತ್ರ ಮಾಡುತ್ತಿದ್ದೇನೆ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


