ಉಗ್ರಂ ಕ್ಯಾಮೆರಾ ಯಾರದು?

ನಟ ಶ್ರೀಮುರಳಿ ಅಭಿನಯದ 'ಉಗ್ರಂ' ಸದ್ದು ಮಾಡುತ್ತಿದೆ. ಸೆಟ್ ಬಾಯ್ನಿಂದ ಹಿಡಿದು ಸಂಕಲನಕಾರನ ಆದಿಯಾಗಿ ಎಲ್ಲರಿಗೂ ಚಿತ್ರದ ಯಶಸ್ಸಿನಲ್ಲಿ ಪಾಲು ಸಿಗುತ್ತಿದೆ. ಆದರೆ, ಇಡೀ ಚಿತ್ರವನ್ನು ಅದ್ಭುತವಾಗಿ ಸೆರೆ ಹಿಡಿದ ಛಾಯಾಗ್ರಾಹಕ ಮಾತ್ರ ಯಾರ ಕಣ್ಣಿಗೂ ಕಾಣುತ್ತಿಲ್ಲ. ಹಾಗೆಯೇ ಚಿತ್ರದ ಗೆಲುವಿನಲ್ಲಿ ತಾನೂ ಪಾಲು ಹಂಚಿಕೊಳ್ಳಬೇಕೆಂಬ ಆಸೆ ಸ್ವತಃ ಆ ಛಾಯಾಗ್ರಾಹಕನಿಗೂ ಇಲ್ಲ. ಹೀಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹೊರತಾಗಿ ಎಲ್ಲರೂ ಬಾಲಿವುಡ್ನಿಂದ ಬಂದ ರವಿವರ್ಮನ್ ಅವರ ಹೆಸರನ್ನೇ ಜಪಿಸುತ್ತಿದ್ದಾರೆ. ಶೇ. 80 ಭಾಗ ಚಿತ್ರೀಕರಣ ಮಾಡಿ 'ಉಗ್ರಂ'ಗೆ ನಿಜವಾದ ತಾಕತ್ತು ಕೊಟ್ಟ ಛಾಯಾಗ್ರಾಹಕ ರವಿಕುಮಾರ್ ಸಾನಾ ಹೆಸರು ಮಾತ್ರ ಯಾರು ಹೇಳುತ್ತಿಲ್ಲ.
ತನ್ನ ಹೆಸರು ಈ ಚಿತ್ರದಲ್ಲಿ ಮೂಲೆಗುಂಪಾಗುತ್ತಿರುವುದು ಯಾಕೆ? ಈ ಪ್ರಶ್ನೆಗೆ ಸ್ವತಃ ರವಿಕುಮಾರ್ ಸಾನಾ ಅವರ ಬಳಿಯೂ ಉತ್ತರವಿಲ್ಲ. 'ಉಗ್ರಂಗೆ ಕ್ಯಾಮೆರಾ ಹಿಡಿದಿದ್ದು ನಾನೇ. ವಿರಾಮದ ನಂತರ ಬರುವ ಫ್ಲಾಷ್ಬ್ಯಾಕ್ ಹಾಗೂ ಎರಡು ದೃಶ್ಯಗಳನ್ನು ನಾನೇ ಚಿತ್ರೀಕರಣ ಮಾಡಿಕೊಟ್ಟೆ. ಗುಲ್ಬರ್ಗದಲ್ಲಿ ಬರುವ ಒಂದಿಷ್ಟು ದೃಶ್ಯಗಳನ್ನು ಭುವನ್ ಎಂಬುವರು ಚಿತ್ರೀಕರಣ ಮಾಡಿದ್ದಾರೆ. ಇನ್ನು ಬಾಲಿವುಡ್ನ ರವಿವರ್ಮನ್ ಕ್ಯಾಮೆರಾದಲ್ಲಿ ಶೂಟ್ ಆಗಿರುವ ದೃಶ್ಯಗಳು ಯಾವವು ಅಂತ ನನಗೆ ಗೊತ್ತಿಲ್ಲ. ಆದರೆ, ಈ ಸಿನಿಮಾ ಒಪ್ಪಿಕೊಂಡಿದ್ದು ನಿರ್ದೇಶಕನ ಮುಖ ನೋಡಿ. ಪ್ರಶಾಂತ್ ನನ್ನ ಗೆಳೆಯ. ಸಿನಿಮಾ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡು ಬಂದಿರುವ ಹುಡುಗ. ಆತ ಬಂದು ಕಥೆ ಹೇಳಿದಾಗ ಸಂಭಾವನೆ ಸೇರಿದಂತೆ ಯಾವುದೇ ಷರತ್ತುಗಳನ್ನು ಹಾಕದೆ ಒಪ್ಪಿ ಚಿತ್ರೀಕರಣ ಮಾಡಿಕೊಟ್ಟೆ. 70 ದಿನ 'ಉಗ್ರಂ' ಸಿನಿಮಾಗೆ ಕೆಲಸ ಮಾಡಿದ್ದೇನೆ. ಆದರೂ ನಿರ್ದೇಶಕರು ನನ್ನ ಹೆಸರು ಹೇಳಲಾಗದ ಸ್ಥಿತಿಯಲ್ಲಿದ್ದಾರೆ. ನನ್ನ ಹೆಸರು ಹೇಳದಿರುವುದಕ್ಕೆ ಕಾರಣವೇನು ಅಂತ ನನಗೆ ಗೊತ್ತಿಲ್ಲ. ಆದರೆ, ನನ್ನ ಗೆಳೆಯ ಪ್ರಶಾಂತ್ ನೀಲ್ ಸಿನಿಮಾ ಗೆದ್ದಿದೆ ಎನ್ನುವ ಖುಷಿ ನನಗಿದೆ.
ಅವನಿಗೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ನಾನು ಸುಮ್ಮನಿದ್ದೆ. ನಾನು ಏನೋ ಮಾತನಾಡಿ, ಅದು ವಿವಾದ ಆಗಿ, ಅದರಿಂದ ಒಂದು ಒಳ್ಳೆಯ ಕನ್ನಡ ಸಿನಿಮಾಗೆ ಪೆಟ್ಟು ಕೊಡುವುದು ಬೇಡ' ಎನ್ನುತ್ತಾರೆ ರವಿಕುಮಾರ್ ಸಾನಾ.
ಅಂದಹಾಗೆ 'ಉಗ್ರಂ'ಗಿಂತ ಅದ್ಭುತ ಎನಿಸುವ ಕ್ಯಾಮೆರಾ ಕೆಲಸವನ್ನು 'ಪ್ರಕೃತಿ' ಎನ್ನುವ ಚಿತ್ರದಲ್ಲಿ ಮಾಡಿದ್ದಾರೆ ಸಾನಾ. ನಿರ್ದೇಶಕ ಗಿರೀಶ್ ಕಾಸವರಳ್ಳಿ ಅವರ ಸಹಾಯಕರಾಗಿದ್ದ ಪಂಚಾಕ್ಷರಿ ನಿರ್ದೇಶನದ, ಯು. ಆರ್. ಅನಂತ್ಮೂರ್ತಿ ಅವರ ಕಥೆಯನ್ನು ಒಳಗೊಂಡ 'ಪ್ರಕೃತಿ' ಚಿತ್ರ ಈಗಾಗಲೇ ರಾಷ್ಟ್ರ ಪ್ರಶಸ್ತಿಗೆ ಹೋಗಿದೆ. ಇನ್ನು ನ್ಯೂಯಾರ್ಕ್ ಸಿನಿಮಾ ಕಂಪನಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಪಂಜಾಬಿ ಚಿತ್ರ 'ಹಿಮತ್ ಸಿಂಗ್' ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಬ್ರಿಟನ್ ನಿರ್ದೇಶಕ ಬಲ್ಜಿತ್ ಸಿಂಗ್ ಮಾಡಿರುವ ಈ ಚಿತ್ರ ಪಂಜಾಬ್ನಲ್ಲಿ ಸೌಂಡು ಮಾಡುತ್ತಿದೆ. ಇನ್ನು 'ಕೋಕಾ ಬಾಬು' ಎನ್ನುವ ಬೆಂಗಾಲಿ ಚಿತ್ರಕ್ಕೂ ರವಿಕುಮಾರ್ ಸಾನಾ ಅವರದ್ದೇ ಕ್ಯಾಮೆರಾ. ಈ ಚಿತ್ರ ಶತಮಾನೋತ್ಸವ ಸಂಭ್ರಮ ಆಚರಿಸಿದೆ. ಒಂದು ತೆಲುಗು ಹಾಗೂ ಹಿಂದಿ ಸಿನಿಮಾಗಳು ಸಾನಾ ಅವರ ಕೈಯಲ್ಲಿವೆ.
'ಉಗ್ರಂ ಸಿನಿಮಾದ ಕ್ರೆಡಿಟ್ಟು ನನಗೆ ಸಿಗಲಿಲ್ಲ ನಿಜ. ಆದರೆ, ನಾನೇನು, ನನ್ನ ಕ್ಯಾಮೆರಾ ಏನು ಅಂತ 'ಒಲವೇ ಮಂದಾರ' ಚಿತ್ರದಲ್ಲೇ ತೋರಿಸಿದ್ದೇನೆ. ಇನ್ನು ಮುಂದೆಯೂ ಇದಕ್ಕಿಂತ ಸೂಪರ್ ಕೆಲಸ ಮಾಡುವ ಆಸೆ ಇದೆ. ಹೀಗಾಗಿ 'ಉಗ್ರಂ' ಸಿನಿಮಾ ನಂದೇ ಅಂತ ನಾನೇ ಹೇಳಿಕೊಳ್ಳುವುದು ನನ್ನ ಮಟ್ಟಿಗೆ ತೀರಾ ಚಿಕ್ಕ ವಿಷಯ. ಆ ಔದಾರ್ಯತೆಯನ್ನು ಚಿತ್ರತಂಡದವರು ತೋರಿಸಬೇಕಿತ್ತು' ಎನ್ನುವ ಸಾನಾ, 'ಕನಿಷ್ಠ ಹೊಸ ಛಾಯಾಗ್ರಾಹಕ ಭುವನ್ ಅವರ ಹೆಸರು ಹಾಕಬೇಕಿತ್ತು. ಯಾಕೋ ನಟ ಶ್ರೀಮುರಳಿಗೆ ನಮ್ಮಂತ ಪ್ರತಿಭಾವಂತ ಹೆಸರು ಹೇಳಿಕೊಳ್ಳುವುದಕ್ಕೆ ಕಷ್ಟ ಎನಿಸುತ್ತಿದೆ' ಅಂತ ಬೇಸರ ಮಾಡಿಕೊಳ್ಳುತ್ತಾರೆ.
'ಕನ್ನಡಪ್ರಭ' ಸೇರಿದಂತೆ ಒಂದೆರಡು ಪತ್ರಿಕೆಗಳಲ್ಲಿ ಮಾತ್ರ 'ಉಗ್ರಂ' ಛಾಯಾಗ್ರಾಹಕ ರವಿಕುಮಾರ್ ಸಾನಾ ಅಂತ ಬರೆದಿದ್ದಾರೆ. ಎಲ್ಲರೂ ನನಗೆ ಫೋನ್ ಮಾಡಿ 'ಏನ್ರಿ ನಿಮಗೆ ಅನ್ಯಾಯವಾಗಿದೆ. ಯಾಕೆ ಯಾರೂ ನಿಮ್ಮ ಹೆಸರು ಹೇಳುತ್ತಿಲ್ಲ' ಅಂತ ಕೇಳುತ್ತಿದ್ದಾರೆ. ನನ್ನದೂ ಅದೇ ಪ್ರಶ್ನೆ. ಆದರೆ, ವಿವಾದ ಮಾಡುವುದು ಬೇಡ ಎನ್ನುವ ಕಾರಣಕ್ಕೆ, ಮಿಖ್ಯವಾಗಿ ಇದು ನನ್ನ ಗೆಳೆಯನ ಸಿನಿಮಾ ಅಂತ ಸುಮ್ಮನಾದೆ.
- ರವಿಕುಮಾರ್ ಸಾನಾ ಛಾಯಾಗ್ರಾಹಕ
-ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


