ಸಿನಿಮಾ ಲೇಖನ

ಮರುಜನ್ಮ

ಚಿತ್ರರಂಗದಲ್ಲೇ ಹೊಸ ಟಾಕ್ ಹುಟ್ಟುಹಾಕಿರುವ 'ಉಗ್ರಂ', ಶ್ರೀಮುರಳಿ ಪಾಲಿಗೆ ಮರುಜನ್ಮ....

ಮರುಜನ್ಮ
Published On :

ಚಿತ್ರರಂಗದಲ್ಲೇ ಹೊಸ ಟಾಕ್ ಹುಟ್ಟುಹಾಕಿರುವ 'ಉಗ್ರಂ', ಶ್ರೀಮುರಳಿ ಪಾಲಿಗೆ ಮರುಜನ್ಮ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಸೌಂಡು ಮಾಡಿರುವ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಇಂದು ತೂಗುದೀಪ ಬ್ಯಾನರ್ ಮೂಲಕ ರಾಜ್ಯಾದ್ಯಾಂತ ತೆರೆ ಕಾಣುತ್ತಿದೆ...

'ನಟ ಶ್ರೀಮುರಳಿ ಈಗಷ್ಟೆ ಹುಟ್ಟಿಕೊಂಡಿರುವ ಹೊಸ ಹೀರೋ' ಅಂದರೆ ಅಚ್ಚರಿಪಡುವವರ ಹೆಚ್ಚು. ಯಾಕೆಂದರೆ ಮುರಳಿ ಈಗಾಗಲೇ ನಾಯಕನಾಗಿ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಅವರನ್ನು ಹೊಸ ತಾರೆ ಅಂದರೆ ಹೇಗೆ? ಆದರೆ, ಇಂದು (ಫೆ.21) ತೆರೆ ಕಾಣುತ್ತಿರುವ 'ಉಗ್ರಂ' ಸಿನಿಮಾ ನೋಡಿದರೆ ಖಂಡಿತ ಶ್ರೀಮುರಳಿ ಅವರನ್ನು 'ನ್ಯೂ ಸ್ಟಾರ್‌' ಅಂದರೂ ಅನ್ನಬಹುದು.
ಚಿತ್ರರಂಗದಲ್ಲೇ ಹೊಸ ಟಾಕ್ ಹುಟ್ಟುಹಾಕಿರುವ 'ಉಗ್ರಂ', ಶ್ರೀಮುರಳಿ ಪಾಲಿಗೆ ಮರುಜನ್ಮ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಸೌಂಡು ಮಾಡಿರುವ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ತೂಗುದೀಪ ಬ್ಯಾನರ್ ಮೂಲಕ ರಾಜ್ಯಾದ್ಯಾಂತ ತೆರೆ ಕಾಣುತ್ತಿದೆ. 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಉಗ್ರಂ' ಪ್ರತಾಪ ತೋರಿಸಲಿದೆ. ನಟರಾದ ದರ್ಶನ್, ಸುದೀಪ್, ಯಶ್, ಯೋಗೀಶ್ ಹಾಗೂ ಹಿರಿಯ ನಿರ್ದೇಶಕ ಭಗವಾನ್ ಮತ್ತು ದಿನಕರ್ ತೂಗುದೀಪ್, ರಾಘವ ಲೋಕಿ ಮುಂತಾದವರು 'ಉಗ್ರಂ' ಚಿತ್ರದ ಟ್ರೈಲರ್ ನೋಡಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಈ ಎಲ್ಲ ಕಾರಣಗಳಿಗಾಗಿ 'ಉಗ್ರಂ' ಚಿತ್ರ ಹಳೇ ನಾಯಕನನ್ನು ಹೊಸದಾಗಿ ಪ್ರೇಕ್ಷಕರ ಮುಂದೆ ನಿಲ್ಲಿಸುತ್ತಿದೆ. ಯುವ ಗೀತಾರಚನೆಕಾರ ಎಸ್. ಸರ್ವೇಶ್ ಬರೆದಿರುವ 'ಚಿತ್ತಾರ ಮೂಡೋ ವೇಳೆಯಲಿ ಕೆಂದಾವರೆ ರಂಗೆಲ್ಲ ಮಾಯವಾಗಿದೆ...' ಇಂಥ ಹಾಡುಗಳ ಮೂಲಕ ಆಡಿಯೋ ಕಂಪನಿಗಳನ್ನೂ ಖುಷಿ ಪಡಿಸಿರುವ 'ಉಗ್ರಂ', ಇನ್ನು ಪ್ರೇಕ್ಷಕರನ್ನು ಮೆಚ್ಚಿಸಬೇಕಿದೆ. ರವಿ ಬಸ್ರೂರು ಸಂಗೀತ ಸಂಯೋಜಿಸಿರುವ, ಹರಿಪ್ರಿಯಾ ನಾಯಕಿಯಾಗಿ ನಟಿಸಿರುವ, ತಿಲಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಉಗ್ರಂ' ಬಗ್ಗೆ ಶ್ರೀಮುರಳಿ ಮಾತನಾಡಿದ್ದಾರೆ...

ಬಹು ನಿರೀಕ್ಷೆಯ 'ಉಗ್ರಂ', ನಿಮ್ಮ ಪಾಲಿನ ಪುನರ್ಜನ್ಮದ ಸಿನಿಮಾ ಆಗಬಹುದೇ?
ಖಂಡಿತ ಅಂಥ ಸಾಧ್ಯತೆಗಳಿವೆ. ಯಾಕೆಂದರೆ ಒಳ್ಳೆಯ ಚಿತ್ರವನ್ನು ಪ್ರೇಕ್ಷಕ ಕೈಬಿಟ್ಟಿಲ್ಲ. ಪ್ರೇಕ್ಷಕರು ಈ ಚಿತ್ರವನ್ನು  ಸ್ವೀಕರಿಸುತ್ತಾರೆಂಬ ಗಟ್ಟಿ ನಂಬಿಕೆ ಇದೆ. ಹಾಗೆ ಜನ ನೋಡಿ ಗೆಲ್ಲಿಸಿದರೆ 'ಉಗ್ರಂ' ಮರುಜನ್ಮ ಕೊಡುತ್ತದೆ ಎಂದುಕೊಂಡಿದ್ದೇನೆ.

'ಉಗ್ರಂ' ನೋಡಿದ ಮೇಲೆ ಹಳೇ ಮುರಳಿ ಮರೆಯಾಗಬಹುದೇ?
ಹ್ಹ ಹ್ಹ ಹ್ಹ... ಹಳೇ ಶ್ರೀಮುರಳಿ ಕಳೆದುಹೋಗಿ ಯಾವುದೋ ಕಾಲ ಆಯ್ತು. ಇನ್ನು 'ಉಗ್ರಂ' ಚಿತ್ರ ನೋಡಿದ ಮೇಲಂತೂ ಇರುವ ಹಳೇ ಇಮೇಜ್ ಕಳೆದುಹೋಗಿ ಹೊಸ ಶ್ರೀಮುರಳಿ ನಿಮ್ಮ ಮುಂದೆ ನಿಲ್ಲುತ್ತಾನೆ. ಇದು ನನ್ನ ಭರವಸೆ ಅಲ್ಲ, ಈ ಚಿತ್ರದ ಮೇಲಿನ ನನ್ನ ವಿಶ್ವಾಸ.

ಈ ಚಿತ್ರ ನಿಮಗೆ ಹೊಸ ಹೀರೋ ಎನ್ನುವ ಪಟ್ಟ ತಂದುಕೊಟ್ಟರೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
'ಉಗ್ರಂ' ನನಗೆ ಹೊಸ ಹೀರೋ ಅಂತ ಬ್ರಾಂಡ್ ಮಾಡಿದರೆ ಖಂಡಿತ ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ನಾನು ಚಿತ್ರರಂಗಕ್ಕೆ ಬಂದು 10 ವರ್ಷ ಆಯಿತು. ಇಷ್ಟು ವರ್ಷಗಳ ನಂತರವೂ ಒಂದು ಚಿತ್ರವನ್ನು ನೋಡಿ ಪ್ರೇಕ್ಷಕ ನನಗೆ ಹೊಸ ಹೀರೋ ಅಂದರೆ ಅದಕ್ಕಿಂತ ಸಂಭ್ರಮದ ಮತ್ತೊಂದಿದೆಯಾ?

ಸರಿ, 'ಉಗ್ರಂ' ಅನ್ನು ಯಾಕೆ ನೋಡಬೇಕು ಎನ್ನುವುದಕ್ಕೆ 5 ಕಾರಣಗಳನ್ನು ಕೊಡಬಹುದೆ?
- ರಂಗಭೂಮಿಯಿಂದ ಬಂದಿರುವ ತುಂಬಾ ಒಳ್ಳೆಯ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಅಂಥ ಬ್ರಿಲಿಯಂಟ್ ಕಲಾವಿದರ ಜೊತೆಗೆ ನಾನು ಕಾಣಿಸಿಕೊಂಡಿದ್ದೇನೆ.
- ವಿಷುವಲ್ ಬ್ಯೂಟಿ. ಪ್ರತಿ ದೃಶ್ಯವನ್ನು ಅತ್ಯಂತ ಮುದ್ದಾಗಿ, ನೋಡುವುದಕ್ಕೆ ಖುಷಿ ಮತ್ತು ರೋಚಕತೆ ಎರಡೂ ಉಂಟಾಗಬೇಕು. ಅಂಥ ವಿಷುವಲ್ ಬ್ಯೂಟಿ ಇಲ್ಲಿದೆ.
ಮೇಕಿಂಗ್. ಯಾವುದಕ್ಕೂ ಕಡಿಮೆ ಮಾಡಿಲ್ಲ. ಒಂದೇ ಒಂದು ವಿಭಾಗದಲ್ಲೂ ರಾಜಿಯಾಗದೆ ತಾಂತ್ರಿಕವಾಗಿಯೂ ಅದ್ಧೂರಿತನದಿಂದ ಕೂಡಿರುವ ಮೇಕಿಂಗ್ ಸಿನಿಮಾ ಇದು.
    ಕ್ಯಾಮೆರಾ. ಹಿಂದಿಯ 'ರಾಮ್‌ಲೀಲಾ' ಸೇರಿದಂತೆ ದೊಡ್ಡ ಬಜೆಟ್ ಸಿನಿಮಾಗಳನ್ನು ಸೆರೆಹಿಡಿದು ಭಾರತದ ನಂ.1 ಛಾಯಾಗ್ರಾಹಕ ರವಿವರ್ಮನ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿರುವುದು. ತಮ್ಮ ಪ್ರತಿಭೆಯನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ.

ಶ್ರೀಮುರಳಿ ಸಿನಿಮಾ ಅಂದಾಕ್ಷಣ ಒಂದಿಷ್ಟು ನಿರೀಕ್ಷೆಗಳು ಸಹಜ. ನನ್ನ ಸಿನಿಮಾ ನೋಡಲು ಬಂದವರಿಗೆ ಇಲ್ಲಿವರೆಗೂ ಬೇಸರ ಮಾಡಿಸಿದ್ದೇನೆ. ಆದರೆ, ಶ್ರೀಮುರಳಿ 'ಉಗ್ರಂ' ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಅದು ಹೇಗೆ ಎನ್ನುವುದು ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ. ಇಷ್ಟು ಅಂಶಗಳ ಹೊರತಾಗಿಯೂ ಸಂಗೀತ, ಹಾಡು, ಹಿನ್ನೆಲೆ ಸಂಗೀತ, ಸಂಕಲನ ಎಲ್ಲವೂ ಸೂಪರ್.

ಚಿತ್ರದಲ್ಲಿನ ಅಗಸ್ತ್ಯನ ಪಾತ್ರಕ್ಕೆ ನೀವು ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದೀರಿ?
ನಿಜ ಹೇಳಬೇಕು ಅಂದ್ರೆ ನಾನು ಅತೃಪ್ತ ನಟ. ನನ್ನ ನಟನೆ ನೋಡಿ ಸಾವಿರ ಜನ ಚಪ್ಪಾಳೆ ತಟ್ಟಿದರೂ ಇನ್ನು ಏನಾದರೂ ಮಾಡಬೇಕು ಎಂದುಕೊಳ್ಳುವವನು. ಕಲಿಕೆಗೆ ಕೊನೆ ಎನ್ನುವುದಿಲ್ಲ. ಹೀಗಾಗಿ ಅಗಸ್ತ್ಯ ಎನ್ನುವ ಪಾತ್ರಕ್ಕೆ ಎಷ್ಟರ ಮಟ್ಟಿಗೆ ನ್ಯಾಯ ಸಲ್ಲಿಸಿದ್ದೇನೆ ಎನ್ನುವುದು ಸಿನಿಮಾ ನೋಡುವ ಪ್ರೇಕ್ಷಕ ಹೇಳಬೇಕು. ವಿಶೇಷ ಅಂದ್ರೆ, ಅಗಸ್ತ್ಯ ಎನ್ನುವುದು ನನ್ನ ಮಗನ ನಿಜವಾದ ಹೆಸರು.

ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ನಿಮ್ಮ ನಂಬಿಕೆಯ ಹಿಂದಿರುವ ಕಾರಣಗಳೇನು?
ತುಂಬಾ ಪ್ರಾಮಾಣಿಕವಾಗಿ ಮತ್ತು ಅತ್ಯಂತ ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಕಷ್ಟಪಟ್ಟಿದ್ದೇವೆ ಎನ್ನುವುದಕ್ಕೆ ಪ್ರೀತಿ ಮತ್ತು ಸಿನಿಮಾ ಮೇಲಿನ ಭಕ್ತಿಯಿಂದ ಮೂಡಿಬಂದಿರುವ ಚಿತ್ರ 'ಉಗ್ರಂ'. ಪ್ರೇಕ್ಷಕರು ನೋಡುತ್ತಾರೆಂಬ ವಿಶ್ವಾಸ.

ಮೊದಲ ಬಾರಿಗೆ ಭೂಗತ ಜಗತ್ತಿಗೆ ಪ್ರವೇಶಿಸಿದ್ದೀರಿ. ಹೊಸ ಗೆಟಪ್, ಹೇಗನಿಸುತ್ತಿದೆ?
ಸ್ಕ್ರೀನ್ ಮೇಲಿಗಿಂತ ತೆರೆ ಆಚೆಗೆ ಚೆನ್ನಾಗಿ ಕಾಣುತ್ತೇನೆ ಎನ್ನುವುದು ಹಲವರ ಅಭಿಪ್ರಾಯ. ಈ ಚಿತ್ರ ನೋಡಿದ ಮೇಲೆ ಮುರಳಿ ಯಾವುದೇ ಗೆಟಪ್ ಹಾಕಿದರೂ ಸೂಪರ್ ಎನುತ್ತೀರಿ. ಅದ್ಭುತ ಲುಕ್ಕು. ಸ್ಕ್ರೀನ್ ಮೇಲೆ ನನ್ನನ್ನು ನಾನೇ ನೋಡಿಕೊಂಡಾಗ ನನಗೆ ಅಚ್ಚರಿಯಾಯಿತು. ಅಷ್ಟು ಚೆನ್ನಾಗಿದೆ. ಭೂಗತ ಜಗತ್ತಿನ ಕಥೆ ಎಂದ ಮೇಲೆ ಹೆಚ್ಚು ಹೇಳಬೇಕಿಲ್ಲ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.