ಪ್ರೇಮ್ ಕಹಾನಿ
'ಎರಡು ಮನಸುಗಳ ನಡುವೆ ಪ್ರೀತಿ ಇಲ್ಲದಿದ್ದರೂ ಬಾಳಬಹುದು. ಆಂದ್ರೆ ನಂಬಿಕೆ ಇಲ್ಲದಿದ್ದರೆ ಬಾಳುವುದು ಅಸಾಧ್ಯ. ಹಾಗಾದರೆ ...

ನೆನಪಿರಲಿ ಪ್ರೇಮ್ ಅಂದಾಕ್ಷಣ ನೆನಪಾಗುವುದು ಅವರ ಲವರ್ ಬಾಯ್ ಇಮೇಜ್. ಪ್ರೇಮ್ ಎಂದರೆ ಪ್ರೇಮ ಕಥೆಗಳ ಅಧಿಕೃತ ಬ್ರಾಂಡ್ ನೇಮ್ ಕೂಡ. ಇಲ್ಲಿವರೆಗೂ ಪ್ರೇಮ್ ನಟಿಸಿರುವ ಬಹುತೇಕ ಚಿತ್ರಗಳು ಪ್ರೇಮ ಕಥೆಗಳೇ. ಪ್ರೇಮ್ ಅವರ ರಿಯಲ್ ಮತ್ತು ರೀಲ್ ಲವ್ ಸ್ಟೋರಿ ಇಲ್ಲಿದೆ. ಇದು ಪ್ರೇಮಿಗಳ ದಿನದ ವಿಶೇಷ.
'ಎರಡು ಮನಸುಗಳ ನಡುವೆ ಪ್ರೀತಿ ಇಲ್ಲದಿದ್ದರೂ ಬಾಳಬಹುದು. ಆಂದ್ರೆ ನಂಬಿಕೆ ಇಲ್ಲದಿದ್ದರೆ ಬಾಳುವುದು ಅಸಾಧ್ಯ. ಹಾಗಾದರೆ ನಂಬಿಕೆಯೇ ನಿಜವಾದ ಪ್ರೀತಿಯೇ?'
- ಹೀಗೆಂದು ಪ್ರಶ್ನೆ ಹಾಕಿದ್ದು ನಟ ಪ್ರೇಮ್. ನಿಜಕ್ಕೂ ಪ್ರೀತಿ ಎಂದರೇನು? ಪ್ರೀತಿ, ಪ್ರೇಮದ ನಿಜವಾದ ಅರ್ಥವೇನು? ಪ್ರೇಮ್ ಇನ್ನೂ ಉತ್ತರ ಹುಡುಕುತ್ತಿದ್ದರು. ಅವರೂ ರಿಯಲ್ ಜೀವನದಲ್ಲಿ ಪ್ರೀತಿ ಮಾಡಿ ಮದುವೆಯಾದವರೇ. ನಿಜ ಜೀವನದ ಈ ಪ್ರೇಮಿ, ತೆರೆ ಮೇಲೂ ಪ್ರೇಮಿಗಳ ನಾಯಕನಾಗಿಯೇ ಹೆಚ್ಚು ಕಾಣಿಸಿಕೊಂಡಿರುವುದು ಕಾಕತಾಳಿಯ.
ನಾವು ನೋಡುವ ಈ ರೀಲ್ ಪ್ರೇಮಿಯ ರಿಯಲ್ ಪ್ರೇಮ ಕಥೆ ಈಗಿನದ್ದಲ್ಲ. ಅದು 1998ರ ಲವ್ ಸ್ಟೋರಿ. 'ಈ ಪ್ರೀತಿ ನನ್ನ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆ. ನನಗೆ ಪ್ರೀತಿ ಬೇಡ ಬೇಡ ಅಂದಾಗ ಪ್ರಪೋಸ್ ಮಾಡಕ್ಕೆ ಹುಡುಗೀರು ಕ್ಯೂ ನಿಂತಿದ್ದರು. ಆಗ ಗುಲಾಬಿ ಹಿಡಿದು ಐ ಲವ್ ಯೂ ಅಂತ ಹೇಳಲಾಗದ ಸ್ಥಿತಿಯಲ್ಲಿದ್ದೆ. ಆದರೆ, ಪ್ರೀತಿ ಮಾಡೋಕ್ಕೆ ಯಾರಾದ್ರು ಸಿಗಬಹುದೇ ಎಂದು ಪ್ರೀತಿಗಾಗಿ ಹಾತೊರೆಯುವಾಗ ಯಾವ ಹುಡುಗಿಯೂ ಕಾಣಲಿಲ್ಲ ನೋಡಿ! ಇದನ್ನೇ ಲವ್ ಈಸ್ ಬ್ಲೈಂಡ್ ಅನ್ನೋದು' ಎನ್ನುತ್ತ ತಮ್ಮ ಪ್ರೇಮ ಕಥೆಯನ್ನು ಹೇಳುತ್ತ ಹೋದರು ಪ್ರೇಮ್.
ಕೊನೆಗೆ ಪ್ರೇಮ್ ಅವರಿಗೆ ತನ್ನ ಹುಡುಗಿಯನ್ನು ಮನಸಾರೆ ಪ್ರೀತಿಸಿದಾಗ ಯಾವ ತೊಂದರೆ, ಸವಾಲು ಎದುರಾಗಲಿಲ್ಲವಂತೆ. ಸಿನಿಮಾಗಳಲ್ಲಿ ಬರುವಂತೆ ಅವರ ಲವ್ ಸ್ಟೋರಿಗಳಲ್ಲಿ ವಿಲನ್‌ಗಳು ಎದುರಾಗಲಿಲ್ಲ. ಶುರುವಿನಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುವುದು ಸಾಮಾನ್ಯ ಬಿಡಿ. ಆದರೆ, ನಿಜವಾಗಲೂ ಸಮಸ್ಯೆ ಎದುರಾಗಿದ್ದು ಮದುವೆಯಾದ ಮೇಲೆಯೇ.
'ಪ್ರೀತಿ ಮಾಡೋದು ದೊಡ್ಡದಲ್ಲ. ಆದರೆ, ನಾವು ಪ್ರೀತಿಸುವ ಹುಡುಗಿಯನ್ನು ಮದುವೆ ನಂತರವೂ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ, ಇಬ್ಬರು ಎಷ್ಟರ ಮಟ್ಟಿಗೆ ಅನೋನ್ಯವಾಗಿರುತ್ತೇವೆ ಎನ್ನುವುದು ಮುಖ್ಯ. ನನ್ನ ಪ್ರೇಮ ವಿವಾಹದಲ್ಲಿ ಸಣ್ಣಪುಟ್ಟ ತೊಡಕುಗಳು ಎದುರಾದವು. ಆದರೆ, ಪ್ರತಿ ಹಂತದಲ್ಲೂ ಒಬ್ಬರಿಗೊಬ್ಬರು ನೆರವಾಗಿದ್ವಿ. ಯಾರು ಯಾರ ಮೇಲೂ ಕೋಪ, ಬೇಸರ ಮಾಡಿಕೊಳ್ಳಲಿಲ್ಲ. ಹೀಗಾಗಿಯೇ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ನನ್ನ ಕುಟುಂಬ ನನ್ನ ಸಿನಿಮಾದಷ್ಟೆ ಮುಖ್ಯ ಅಂತ ಪರಿಗಣಿಸಿದ್ದೇನೆ' ಎನ್ನುವುದು ಪ್ರೇಮ್ ಅವರ ಮಾತು.
ಹೌದು, ನಿಮ್ಮ ರಿಯಲ್ ಲವ್‌ಗೂ ರೀಲ್ ಲವ್‌ಗೂ ಅಂತ ವ್ಯಾತ್ಯಾಸಗಳೇದಾರೂ ಇವೆಯೇ ಎಂದರೆ, 'ದೊಡ್ಡ ವ್ಯತ್ಯಾಸವೇನೂ ಇಲ್ಲ. ಆದರೆ, ತೆರೆ ಮೇಲೆ ನಾನು ಪ್ರತಿನಿಧಿಸುವ ಪ್ರೇಮ ಕಥೆಗಳು ಸಾಫ್ಟ್ ಆಗಿರುತ್ತವೆ. ಆದರೆ ನನ್ನ ರಿಯಲ್ ಪ್ರೇಮ ಕಥೆ ಮಾತ್ರ ಪಕ್ಕಾ ಮಾಸ್' ಎಂದು ನಗುತ್ತಾರೆ ಪ್ರೇಮ್.
ಪ್ರೇಮ್ ಮಾಧ್ಯಮಗಳಲ್ಲಿ ಮಾತನಾಡುವಾಗ ವೈಯಕ್ತಿಕ ಜೀವನವನ್ನು ಗೌಪ್ಯವಾಗಿಟ್ಟವರಲ್ಲ. 'ನಾನು ಮ್ಯಾರೀಡ್ ಹೀರೋ. ಸಿನಿಮಾದಷ್ಟೆ ನಾನು ನನ್ನ ಪತ್ನಿಯನ್ನು ಪ್ರೀತಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ. ಪ್ರೇಮ್ ಪ್ರಕಾರ ಅನ್ ಮ್ಯಾರೀಡ್ ನಾಯಕರಿಗಿಂತ ಹೆಂಡತಿ, ಮಕ್ಕಳನ್ನು ಪ್ರೀತಿಸುವ ಮ್ಯಾರೀಡ್ ನಾಯಕ ಎಂದರೆ ಅಭಿಮಾನಿಗಳಿಗೂ ಇಷ್ಟವಂತೆ. ಹೀಗಾಗಿ ಅವರು ಯಾವುದೇ ಮುಜುಗರವಿಲ್ಲದೆ 'ಮ್ಯಾರೇಜ ಲವ್ ಸ್ಟೋರಿ' ಹೇಳಿಕೊಳ್ಳುತ್ತಾರೆ.
ಆರ್. ಚಂದ್ರು ನಿರ್ದೇಶನದ 'ಚಾರ್‌ಮಿನಾರ್' ನಂತರ ಪ್ರೇಮ್ ಮತ್ತಷ್ಟು ಲವ್ ಇಮೇಜ್ ಮೈಗೂಡಿಸಿಕೊಂಡಿದ್ದಾರೆ ಎಂಬುದು ವಿಶೇಷ. ಸದ್ಯಕ್ಕೆ 'ಮಸ್ತ್‌ಮೊಹಬ್ಬತ್' ಚಿತ್ರದಲ್ಲಿ ಬ್ಯುಸಿಯಾಗಿರುವ ಪ್ರೇಮ್, ಇಲ್ಲೂ ಪ್ರೇಮದಾಸನಾಗಿಯೇ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಈ ಚಿತ್ರ ಕೂಡ ತೆರೆ ಮೇಲೆ ಬರಲಿದೆ. ಆದರೆ, ಇದಕ್ಕಿಂತ ಮೊದಲು ಬಿಡುಗಡೆಯಾಗುವ ಸಿನಿಮಾ 'ಫೇರ್ ಆ್ಯಂಡ್ ಲವ್ಲಿ'. ಈ ಚಿತ್ರದ ನಂತರ 'ಮಳೆ' ಎನ್ನುವ ಚಿತ್ರದಲ್ಲಿ ಪ್ರೇಮ್ ಅಭಿನಯಿಸಲಿದ್ದಾರೆ. ಅಲ್ಲಿಗೆ ಮತ್ತೊಮ್ಮೆ ಪ್ರೇಮ ಕಥೆಯಲ್ಲಿ ಲವ್ಲಿ ಸ್ಟಾರ್ ನಾಯಕ. ಒಂದು ರೀತಿ ಪ್ರೇಮ್ ಅವರ ರಿಯಲ್ ಮತ್ತು ರೀಲ್ ಲವ್ ಸ್ಟೋರಿ, ಪ್ರೇಮಿಗಳ ಪಾಲಿಗೆ ಪ್ರೇಮ ಪಾಠದಂತೆ.
ಇಲ್ಲಿವರೆಗೂ ಪ್ರೇಮ್ ಅಭಿನಯಿಸಿರುವ ಚಿತ್ರಗಳಲ್ಲಿ ಪೂರ್ತಿ ಅವರದ್ದೇ ನೈಜ ಪ್ರೇಮ ಪಯಣವನ್ನು ಹೋಲುವ ಸನ್ನಿವೇಶಗಳು ಬಾರದಿದ್ದರೂ ಸಮಾಜದಲ್ಲಿ ನಡೆಯುವ ಹತ್ತಾರು ನೈಜ ಪ್ರೇಮ ಕಥೆಗಳು ತಮ್ಮ ಸಿನಿಮಾಗಳಲ್ಲಿ ದೃಶ್ಯ ರೂಪ ಪಡೆದುಕೊಂಡಿವೆ ಎನ್ನುತ್ತಾರೆ ಪ್ರೇಮ್. 'ತೆರೆ ಮೇಲೆ ಬರುವ ಪ್ರೇಮ ಕಥೆಗಳು ಸಂಪೂರ್ಣವಾಗಿ ಕಲ್ಪನೆ ಅಲ್ಲ. ಎಲ್ಲವನ್ನು ಸ್ವಂತವಾಗಿ ಕ್ರಿಯೇಟ್ ಮಾಡಲಾಗದು. ಸುತ್ತಲೂ ನಡೆಯುವ ಲವ್ ಸ್ಟೋರಿಗಳೇ ಚಿತ್ರಗಳಿಗೆ ಸ್ಫೂರ್ತಿ ಮತ್ತು ಪ್ರೇರಣೆ. ಮಸ್ತ್ ಮೊಹಬ್ಬತ್ ಕೂಡ ಅಂತ ನೈಜ ಘಟನೆಗಳಿಂದ ಕೂಡಿದ ಪಕ್ಕಾ ಪ್ರೇಮ ಚಿತ್ರ. ಈ ಸಿನಿಮಾದಲ್ಲಿ ಒಂದು ಪ್ರೌಢ ಪ್ರೇಮ ಕಥೆ ಇದೆ. ನಿರ್ದೇಶಕ ಮೋಹನ್ ಮಾಳಗಿ ಇಡೀ ಚಿತ್ರವನ್ನು ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ತುಂಬಾ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ ಅದು' ಎನ್ನುವ ಪ್ರೇಮ್, ಆಸೆ, ಅಥವಾ ಅನಿವಾರ್ಯಕ್ಕಾಗಿ ಹುಡುಗ ಮತ್ತು ಹುಡುಗಿ ನಡುವೆ ಉಂಟಾಗುವ ಪ್ರೀತಿ ನಿಜವಾದ ಪ್ರೀತಿ ಅಲ್ಲ. ಅಲ್ಲಿ ಬೇರೆ ಬೇರೆ ಹಿತಾಸಕ್ತಿಗಳು ಇರುತ್ತದೆ. ಆ ಕ್ಷಣ ನನಗೆ ಹುಡುಗಿ ಬೇಕು ಎನ್ನುವ ಹುಡುಗ, ನನಗೊಬ್ಬ ಬಾಯ್ ಫ್ರೆಂಡ್ ಬೇಕು ಎನ್ನುವ ಹುಡುಗಿಯನ್ನು ಪ್ರೇಮಿಗಳು ಅಂತ ಹೇಳುವುದು ಶುದ್ಧ ತಪ್ಪು' ಎನ್ನುವುದು ಅವರ ಅಭಿಪ್ರಾಯ.
ಅಂದಹಾಗೆ ಇಬ್ಬರು ಮಕ್ಕಳಾದ ಅಮೃತಾ ಮತ್ತು ಏಕಾಂತ್‌ರೊಂದಿಗೆ ನಾಗರಭಾವಿಯ ಹೊಸ ಮನೆಯಲ್ಲಿ ನೆಮ್ಮದಿಯ ಸಂಸಾರ ಸಾಗಿಸುತ್ತಿದೆ ಪ್ರೇಮ್ ಮತ್ತು ಜ್ಯೋತಿ ದಂಪತಿ. ಮದುವೆಯಾದ ನಂತರ ಅವರು ನೋಡಿದ ಪ್ರೇಮ ಚಿತ್ರವೆಂದರೆ, ಗೋವಿಂದ ಹಾಗೂ ಸಂಜಯ್ ದತ್ತ್ ಅಭಿನಯದ 'ಹಸಿನಾ ಮಾನ್ ಜಾಯೆಂಗೆ'.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


