ಸಿನಿಮಾ ಲೇಖನ

ಚಾನೆಲ್ ಮತ್ತು ಚಾಲೆಂಜ್

ವಿದ್ಯೆಗೆ ವಿನಯವೇ ಭೂಷಣ, ಎಷ್ಟೇ ಎತ್ತರಕ್ಕೆ ಹೋದರೂ ಕಾಲುಗಳು ಮಾತ್ರ ನೆಲದ ಮೇಲಿರಬೇಕು ಎಂಬ ಮಾತುಗಳೆಲ್ಲಾ ಇಂದು ...

ಚಾನೆಲ್  ಮತ್ತು  ಚಾಲೆಂಜ್
Published On :

ವಿದ್ಯೆಗೆ ವಿನಯವೇ ಭೂಷಣ, ಎಷ್ಟೇ ಎತ್ತರಕ್ಕೆ ಹೋದರೂ ಕಾಲುಗಳು ಮಾತ್ರ ನೆಲದ ಮೇಲಿರಬೇಕು ಎಂಬ ಮಾತುಗಳೆಲ್ಲಾ ಇಂದು ಅರ್ಥಹೀನ. ಐಶ್ವರ್ಯ, ನೇಮು, ಫೇಮು ಬಂದಮೇಲೆ ಜನ ಮಾತನಾಡುವ ವರಸೆಯೇ ಬದಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಈತ ಕನ್ನಡದಲ್ಲಿ ಸದ್ಯ ಚಾಲ್ತಿಯಲ್ಲಿರುವ ಚಾಲೆಂಜ್‌ಗೆ ಹೆಸರಾದ ಸ್ಟಾರ್. ಇವರಿಗೆ ಅಪಾರ ಫ್ಯಾನ್ ಫಾಲೋಯಿಂಗ್ ಇದೆ. ಬರೀ ಅವರಷ್ಟೇ ನೋಡಿದ್ರೂ ನನ್ನ ಸಿನಿಮಾ ಓಡುತ್ತೆ, ತೊಂದ್ರೆ ಇಲ್ಲ ಎನ್ನುವ ಆತ್ಮವಿಶ್ವಾಸ ಅವರದ್ದು. ಇವರೇನೂ ಹುಟ್ಟುತ್ತಾ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವರಲ್ಲ. ಎಲ್ಲಾ ಕಷ್ಟಗಳನ್ನು ಅನುಭವಿಸಿ ಈಗ ಸ್ಟಾರ್ ಆಗಿರುವವರು. ಕಷ್ಟಪಟ್ಟು ಬೆಳೆದ ಅವರು ಯಾರಿಗೂ ಗೊತ್ತಾಗದಂತೆ ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೂ ಅದ್ಯಾಕೋ ತಮ್ಮ ವಿನಯವಂತಿಕೆ ಉಳಿಸಿಕೊಳ್ಳುವತ್ತ ಗಮನಕೊಡುತ್ತಿಲ್ಲ ಎಂಬುದಕ್ಕೆ ಇಲ್ಲಿರುವ ಅವರ ಕೆಲವು ಮಾತುಗಳು ಉದಾಹರಣೆ. ಈ ವಾರ ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬಕ್ಕೆ ಶುಭಕೋರುತ್ತಾ...



ಸೀನ್ 1
ಹುಟ್ಟುಹಬ್ಬದ ಪ್ರಯುಕ್ತ ಅವರದ್ದೊಂದು ಸ್ಪೆಷಲ್ ಪ್ರೋಗ್ರಾಮ್ ಮಾಡುವ ಅಂತ ಅವರನ್ನು ಮಾತನಾಡಿಸಿದ ಚಾನೆಲ್ ವರದಿಗಾರರ ಜೊತೆ ಅವರ ಮಾತುಕತೆ.

ನಿಮ್ಮ ಬರ್ತ್‌ಡೇಗೆ ನಿಮ್ ಬಗ್ಗೆ ಏನಾದ್ರೂ ಪ್ರೋಗ್ರಾಮ್ ಮಾಡೋಣ ಅಂತಿದೀವಿ?
ಬರ್ತ್‌ಡೇ ದಿನ ಮನೆ ಒಳಗಡೆ ಅಂತೂ ಎಂಟ್ರಿ ಇಲ್ಲ. ಕಾಂಪೌಂಡ್ ಹೊರಗಡೆ ಏನೇನ್ ನಡೆಯುತ್ತೋ ಅದೆಲ್ಲ ತಗೋ. ಫ್ರೆಂಡ್ ಆಗಿ ಮನೆಗೆ ಬನ್ನಿ, ಮೀಡಿಯಾ ಹೊರಗೆ ಇರಲಿ, ವಿಶಸ್ ಗಿಶಸ್ ಎಲ್ಲಾ ಹೊರಗೆ. ಸ್ಟ್ರಿಕ್ಟ್‌ಲೀ ಆರ್ಡರ್ ಮಾಡಿದೀನಿ, ನಾಟ್ ಈವನ್ ಎ ಸಿಂಗಲ್ ಕ್ಯಾಮರಾ ಶುಡ್ ಗೆಟ್ ಇನ್‌ಸೈಡ್ ದಿ ಹೌಸ್. ನೋ 'ಫ್ಯಾಮಿಲಿ ಟಾಕ್ಸ್‌' ನಥಿಂಗ್. ಹೊರಗಡೆ ನನ್ ತಮ್ಮ ಬರ್ತಾನೆ ಅವನ್ನ ಮಾತಾಡ್ಸ್‌ಕಳ್ರಿ...ಅಲ್ವಾಪ್ಪ.

ಸೀನ್ 2
ಇಷ್ಟೊಂದ್ ಹಾರ್ಷ್ ಆಗಿ ಮಾತಾಡೋ ಅವಶ್ಯಕತೆ ಇದೆಯಾ ಸರ್?
ಹಾರ್ಷ್ ಆಗಿ ಅಂದ್ರೆ? ಅಯ್ಯೋ, ಇದೊಳ್ಳೆ ಸರಿಹೋಯ್ತಲ್ಲ, ನೀವ್ ಏನಾರ್ ನಂದ್ ಒಂದ್ ಕಿತ್ಕೊಳ್ಳಕಾಯ್ತದಾ?
ಸರ್, ಅವ್ರು ಇವ್ರು ಮಾಡಿದ್ದಕ್ಕೆ ನಮ್ಮನ್ನ ಯಾಕೆ ದೂಷಿಸ್ತೀರಿ?
ಅವ್ರು ಇವ್ರು ಅಂತಲ್ಲ, ನಾನ್ ಹೇಳೋದ್ ಇಷ್ಟೆ, ಮೀಡಿಯಾದವನಿಗೆ 'ಏ ನಿಂತ್ಕೋ ನೀನಲ್ಲಿ' ಅಂದ್ರೆ ಅಲ್ಲೇ ನಿಂತಿರ್ತಾನೆ ಅವ್ನು. ಯಾಕಂದ್ರೆ ಅವ್ನಿಗ್ ನಾನು ಬೇಕು, ನಂಗೆ ಮೀಡಿಯಾ ಬೇಡ. ಇದಾರೆ, ದೇವರು ಕೊಟ್ಟಿರೋ ಅಭಿಮಾನಿಗಳಿದಾರೆ. ಬರೀ ಅವ್ರೇ ನನ್ ಸಿನಿಮಾ ನೋಡಿದ್ರೂ ಸಾಕು ನಂಗೆ.

ಸೀನ್ 3
(ಅದು ಪುನೀತ್ ಅಭಿನಯದ ನಿನ್ನಿಂದಲೇ ಚಿತ್ರದ ರೆಫರೆನ್ಸ್ ಇದ್ದರೆ ಒಳ್ಳೆಯದು)
ಒಂದ್ ಸ್ಪೆಷಲ್ ಪ್ರೋಗ್ರಾಮ್ ಮಾಡ್ತೀವಿ, ನಿಮ್ ಹೊಸ ಸಿನಿಮಾಗಳ ಬಗ್ಗೆ ಮಾತಾಡಿ.
ಅಯ್ಯೋ, ಏನ್ ಮಾತಾಡ್ಲಿ? ನಾನು ಯಾವತ್ತೂ ಜೀವನದಲ್ಲಿ ಯಾವುದೇ 'ರೆವಲ್ಯೂಶನ್?' ('ಕ್ರಾಂತಿ'ವೀರ!!) ಅಂತೆಲ್ಲಾ ಮಾಡಿದವನಲ್ಲ. ಮಾತಾಡೋಕೆ ಹೊಸದೇನಿಲ್ಲ. ಜೊತೆಗೆ ಸಿಸಿಎಲ್‌ಗೆ ಪ್ರಾಕ್ಟೀಸು, ಜಿಮ್ಮು ಅಂತ ಸುಸ್ತಾಗಿದೀನಿ. ನಾನ್ ಮೀಡಿಯಾಗ್ ಬರಲ್ಲ. 'ಹೆಂಗಿದ್ರೂ 'ಅವನಿದಾನೆ' ಪಾಪ, ಅವ್ನ್ ಸಿನಿಮಾ ರಿಲೀಸ್ ಆಗೈತಲ್ಲ, ಅವಂದೇ ಹಾಕ್ಕೊಂಡ್ ಮಾಡ್ರೀ  ಪಾಪ.'

ಆದರೆ
ಸೀನ್ 5 ಇದೆಲ್ಲಕ್ಕಿಂತ ವಿಭಿನ್ನ.
ಏನೋ ಒಳ್ಳೆ ಕೆಲಸ ಮಾಡಿದ್ರಂತಲ್ಲ. ಕ್ಯಾನ್ಸರ್ ಇರೋರಿಗೆ ಸಾಂತ್ವನ ಹೇಳಿದ್ರಿ, ಸಹಾಯ ಮಾಡಿದ್ರಿ, ಅದರ ಬಗ್ಗೆನಾದ್ರೂ ಮಾತಾಡಿ.
ನೋಡಿ, ನಾನ್ ಮಾಡೋದ್ ನನ್ ಖುಷಿಗೆ. ನನ್ನನ್ನ ಇಷ್ಟಪಡೋರು ನನ್ ನೋಡಿ ಖುಷಿ ಪಟ್ರಾ ಸಾಕು, ನಾಲ್ಕು ಜನಕ್ಕೆ ಗೊತ್ತಾಗೋದು ಬೇಡ. ನಂಗೆ ಇಷ್ಟ ಆಗಲ್ಲ. ಸಿನಿಮಾ ಸಂಬಂಧಪಟ್ಟಿದ್ದು ಏನೇ ಇದ್ರೂ ಬರ್ತೀನಿ. ಅದು ನಿರ್ಮಾಪಕರಿಗಾಗಿ. ವೈಯಕ್ತಿಕವಾಗಿ ನಾನು ಎಲ್ಲಿಗೂ ಬರಲ್ಲ. ಒಂದ್ ಮಾತ್ ಹೇಳ್ಲಾ, ನೀವ್ ಯಾರ್ ಬಗ್ಗೆನೋ ಸುದ್ದಿ ಮಾಡ್ತೀರಾ. ಅವರಿಗೆ ಕ್ಯಾನ್ಸರ್ ಇದೆ ಅಂತ ಯಾರಿಗೂ ಗೊತ್ತಿರಲ್ಲ. ನನ್ ಮಗ ಇನ್‌ಸ್ವಲ್ಪ ದಿನಕ್ಕೆ ಇರಲ್ಲ ಅಂತ ಅವರಪ್ಪ ಅಮ್ಮ ಯಾರತ್ರನೂ ಹೇಳ್‌ಕೊಂಡಿರಲ್ಲ. ನೀವ್ ಹಾಕ್ತಿರಾ, ಎಲ್ಲರ ಮನೆಲೂ ಟೀವಿ ಇರುತ್ತೆ. ಪಾಪ ಎಲ್ಲರಿಗೂ ಗೊತ್ತಾಗುತ್ತೆ. ನಿಮಗ್ ಗೊತ್ತಾ, ಒಂದ್ ಹುಡುಗಿ ಪಾಪ ಕ್ಯಾನ್ಸರ್ ಪೇಷೆಂಟ್. ರಾಮಯ್ಯ ಆಸ್ಪತ್ರೆಯಿಂದ ಫೋನ್ ಮಾಡಿದ್ರು. ನಿಮ್ಮನ್ನ ನೋಡಬೇಕಂತೆ ಅಂತ. ಶೂಟಿಂಗ್‌ನಲ್ಲಿದ್ದವನು ತಕ್ಷಣ ಪ್ಯಾಕಪ್ ಮಾಡಿ ಅಂತ ಹೇಳಿ ಹೊರಟೆ. ಹೋಗಿ ನೋಡಿದೆ. ಕಣ್ಣೆಲ್ಲಾ ಊದಿಕೊಂಡಿತ್ತು. ಪಾಪ ನನ್ನ ನೋಡಕ್ಕೂ ಆಗ್ಲಿಲ್ಲ ಅವಳಿಗೆ. ಬರೀ ವಾಯ್ಸ್ ಕೇಳಿ 'ಅಣಾ'್ಣ ಅಂದ್ಳು. ಸರಿ, ನೋಡ್ಕೊಂಡ್ ಮನೇಗ್ ಬಂದೆ. ಆದ್ರೆ ನಾನು ಮನೆಗ್ ಬರೋವಷ್ಟರಲ್ಲಿ ಆ ಹುಡುಗಿ 'ಹೋಗ್‌ಬಿಟ್ಟಿತ್ತು' ತುಂಬಾ ಬೇಜಾರಾಯ್ತು. ಅಟ್‌ಲೀಸ್ಟ್ ಮಾತಾಡ್ಸಾದ್ರೂ ಬಂದ್ನಲ್ಲ ಅಂತ ಖುಷಿ.

ಇಷ್ಟೆಲ್ಲಾ ಒಳ್ಳೆ ಕೆಲಸ ಮಾಡೋ ಮೂಡಿರೋ ಈ ನಟರಿಗೆ ಮೂಡಿಯಾಗಿ ಮೀಡಿಯಾದ ಬಗ್ಗೆ, ಅವರಿವರ ಬಗ್ಗೆ ಹಗುರವಾದ ಮಾತನಾಡುವ ಅವಶ್ಯಕತೆ ಅನಿವಾರ್ಯತೆ ಏನಿತ್ತೋ ಗೊತ್ತಿಲ್ಲ. ಹಾಗಂತ ಅದು ತಮ್ಮ ವೈಯಕ್ತಿಕ ವಿಷಯವೊಂದರಲ್ಲಿ ಮೀಡಿಯಾಗಳು ತಿರುಗಿ ಬಿದ್ದಿದ್ದಕ್ಕೆ ತೀರಿಸಿಕೊಳ್ಳುತ್ತಿರುವ ಸೇಡಾ? ಎಂದರೆ ಅಲ್ಲ. ಅವರಿಗೆ ಇದೇನೂ ಹೊಸದಲ್ಲ. ಬಹಳ ಹಿಂದೆಯೇ, ತಮ್ಮ ಮನೆಗೆ ಸಂದರ್ಶನಕ್ಕೆ ಬರುತ್ತೇನೆ ಎಂದ ಪತ್ರಕರ್ತರೊಬ್ಬರಿಗೆ 'ಜರ್ನಲಿಸ್ಟ್‌ಗಳನ್ನ ನಮ್ಮನೆ ಕಾಂಪೌಂಡ್ ಒಳಗೂ ಬಿಟ್ಕೊಳಲ್ಲ ಸರ್‌' ಅಂತ ತಮ್ಮದೇ ಶೈಲಿಯಲ್ಲಿ ಹೇಳಿದ್ದ 'ಭೂಪತಿ' ಅವರು. ಆದ್ರೆ ಒಂದು ಪ್ರಶ್ನೆ. ಐಶ್ವರ್ಯ, ಅಂತಸ್ತು, ನೇಮು, ಫೇಮು ಬಂದಮೇಲೆ ಅದರ ಜೊತೆಗೆ ಒಂದಿಷ್ಟು ವಿನಯ ಬರೋದು ಕಷ್ಟದ ವಿಷಯನಾ? ಬೈ ಬರ್ತ್ ಬಂದಿರುವ ಕೆಲವು ಗುಣಗಳು ಬರ್ತ್ ಡೇ ಸಮಯದಲ್ಲಿ ಬದಲಾಗುತ್ತವೆಯೇ? ಹೋಗ್ಲಿ ಬಿಡಿ, ಸದ್ಯಕ್ಕೆ ಇದು ಅದನ್ನೆಲ್ಲಾ ಮಾತಾಡೋ ಸಮಯ ಅಲ್ಲ. ಅವರ ಬರ್ತ್‌ಡೇ ಟೈಮು. ಅವರ ಹುಟ್ಟುಹಬ್ಬಕ್ಕೆ ಅವರಿಗೆ ಯಾರನ್ನು ಕಂಡರೆ ಆಗುವುದಿಲ್ಲವೋ, ಅವರ ಕಡೆಯಿಂದಲೂ ಹಾರ್ದಿಕ ಶುಭಾಷಯಗಳು.

-ಹರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.