ಕನ್ನಡದ ಕಣ್ಣು
ವ್ಹಾ...! ಇವರು ಕನ್ನಡದ ಕಣ್ಣು...ವಯಸ್ಸು 68. ನಿವೃತ್ತಿಯ ಕಾಲ. ನೆನಪುಗಳನ್ನು ಮೆಲುಕು ಹಾಕುವ ಸಮಯ. ಆದರೆ...

ವ್ಹಾ...! ಇವರು ಕನ್ನಡದ ಕಣ್ಣು...
ವಯಸ್ಸು 68. ನಿವೃತ್ತಿಯ ಕಾಲ. ನೆನಪುಗಳನ್ನು ಮೆಲುಕು ಹಾಕುವ ಸಮಯ. ಆದರೆ, ಈ ಮನುಷ್ಯ ಅಶ್ವತ್ಥ್ಥನಾರಾಯಣ ಹಾಗಲ್ಲ. ಬೆನ್ನಿಗೆ ಲ್ಯಾಪ್‌ಟಾಪ್ ತಗುಲಿಸಿಕೊಂಡು ಈಗಲೂ ಯುವಕನಂತೆ ಸಾವಿರಾರು ಫೋಟೋಗಳನ್ನು ಹೊತ್ತು ತಿರುಗುತ್ತಾರೆ. ಇವರನ್ನು ನೋಡಿದವರು 'ಕನ್ನಡದ ಕಣ್' ಎಂದು ಮೆಚ್ಚಿಗೆ ವ್ಯಕ್ತಪಡಿಸಿದರೆ ತೀರಾ ಕಡಿಮೆ. ಇವರು ನಡೆದಾಡುವ ಸಿನಿಮಾ ಚರಿತ್ರೆಯೇ? ಕ್ಯಾಮೆರಾ ಬೆಳಕಿನ ಪ್ರಗತಿಯೇ? ಕ್ಯಾಮೆರಾ ಹಿಂದಿನ ನಿಜವಾದ ಕಿರಣವೇ? ಇವರ ಕ್ಯಾಮೆರಾ ಫ್ಲ್ಯಾಷ್‌ನಿಂದ ತಪ್ಪಿಸಿಕೊಂಡವರು ಉಂಟೆ? ಅವರು ತೆರೆದಿಡುವ ಸಾವಿರಾರು ಫೋಟೋಗಳನ್ನು ನೋಡಿದರೆ ಇಂಥ ಪ್ರಶ್ನೆಗಳು ಮೂಡುತ್ತವೆ. ಫೋಟೋಗಳೇ 25 ಸಾವಿರ ದಾಟಿವೆ. ಇನ್ನು ನೆಗೆಟಿವ್‌ಗಳು 4.5 ಲಕ್ಷದಷ್ಟಿವೆ ಎಂದರೆ ನಿಜಕ್ಕೂ ಇವರನ್ನು ಚರಿತ್ರೆಯಲ್ಲ ಅಂತ ಒಪ್ಪಿಕೊಳ್ಳುವುದಾದರೂ ಹೇಗೆ?
ಯಾರು ಈ ಅಶ್ವತ್ಥನಾರಾಯಣ? ಈ ತಲೆಮಾರಿಗೆ ಇಂಥ ಪ್ರಶ್ನೆ ಕಾಡಿದರೆ ಅದರಲ್ಲೇನು ಅಚ್ಚರಿ ಇಲ್ಲ. ಆದರೆ, ಪ್ರಗತಿ ಸ್ಟುಡಿಯೋ ನಾಗೇಶ್‌ಬಾಬಾರ ಸೋದರ ಅಶ್ವತ್ಥನಾರಾಯಣ ಎಂದರೆ ಆ ಕಾಲದ ಸಿನಿಮಾ ದಿಗ್ಗಜ ಸುಬ್ಬಯ್ಯನಾಯ್ಡು ಅವರಿಂದ ಆರಂಭಗೊಂಡು ಡಾ.ರಾಜ್‌ಕುಮಾರ್ ಆದಿಯಾಗಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಶ್ರೀನಾಥ್, ಅಶೋಕ್ ಹಾಗೂ ಪುಟ್ಟಣ್ಣ ಕಣಗಾಲ್‌ರಿಂದ ಶುರುವಾಗಿ 'ಬಂಗಾರದ ಮನುಷ್ಯ' ಸಿದ್ದಲಿಂಗಯ್ಯರಂಥ ಚಂದನವನದ ಲೆಜೆಂಡ್‌ಗಳ ಸುಂದರ ಫೋಟೋಗಳು ನೆನಪಾಗುತ್ತವೆ. ಸಿನಿಮಾದವರ ಅಪರೂಪದ ಫೋಟೋಗಳ ಹಿಂದೆ ಕೇಳಿ ಬರುವ ಒಂದೇ ಒಂದು ಹೆಸರು ಅಶ್ವತ್ಥನಾರಾಯಣ. ಕನ್ನಡ ಚಿತ್ರರಂಗದ ಆರಂಭ ದಿನಗಳ ಮೊಟ್ಟ ಮೊದಲ ಕನ್ನಡದ ಸ್ಥಿರ ಛಾಯಾಗ್ರಹಕ ವೃಷಭೇಂದ್ರ. ಇವರ ನಂತರ ಕ್ಯಾಮರಾ ಹಿಡಿದ ಎರಡನೇ ವ್ಯಕ್ತಿ ಅಶ್ವತ್ಥನಾರಾಯಣ. ಸದ್ಯ ಕ್ಯಾಮರಾ ಕಣ್ಣಿಗೆ ರಜೆ ಕೊಟ್ಟು ತಾನೇ ತೆಗೆದ ಸಾವಿರಾರು ಫೋಟೋಗಳನ್ನು ಒಂದಡೆ ಸಂಗ್ರಹಿಸುತ್ತಿರುವ ಅಶ್ವತ್ಥನಾರಾಯಣ, ಅಕಾಡೆಮಿಕ್ ಆಗಿ ಫೋಟೋಗ್ರಫಿ ತರಬೇತಿ ತೆಗೆದುಕೊಂಡವರಲ್ಲ. ಆದರೂ, ಅವರು ಒಂದು ಫೋಟೋ ಕ್ಲಿಕ್ಕಿಸಿದರೆ ಅದು ಆ ಕಾಲಕ್ಕೆ ಸಿಕ್ಕಾಪಟ್ಟೆ ಪ್ರಸಿದ್ಧಿಯಾಗುತ್ತದೆ ಎಂಬುದು ಮಾತ್ರಲ್ಲ, ಎವರ್ ಗ್ರೀನ್ ಕ್ಲಾಸಿಕ್ ದೃಶ್ಯ ಎನ್ನುವುದಕ್ಕೆ ಪುಟ್ಟಣ್ಣ ಕಣಗಾಲ್ ಅವರು ಈಜಿ ಚೇರ್‌ನಲ್ಲಿ ಕೂತಿರುವ ಭಾವಚಿತ್ರವೇ ಸಾಕ್ಷಿ. ಆಕಾಶ ಮತ್ತು ಭೂಮಿ ಒಂದಾಗಿ ಮುತ್ತಿಡಲು ತವಕಿಸುತ್ತಿದೆ, ಸೂರ್ಯ ಆಗ ತಾನೆ ಉದಯಿಸುತ್ತಿದ್ದಾನೆ... ಪ್ರಕೃತಿಯ ಈ ಮೂರು ವಿಸ್ಮಯಗಳ ನಡುವೆ ಸೂರ್ಯನನ್ನೇ ತಂಡೆದಂತೆ ಚಿತ್ರಬ್ರಹ್ಮ ಆಸೀನರಾಗಿರುವ ದೃಶ್ಯ, ನೀವು ಎಂದಿಗೂ ನೋಡಿರಲಿಕ್ಕೆ ಸಾಧ್ಯವಾಗದ ಅಂಜನೇಯ ವೇಶದಲ್ಲಿ ಡಾ.ರಾಜ್‌ಕುಮಾರ್, ಪಂಚೆ ಎತ್ತಿ ಕಟ್ಟಿ ನಾಯಕಿಯೊಬ್ಬಳಿಗೆ ನೃತ್ಯ ಹೇಳಿಕೊಡುತ್ತಿರುವ ಸಿದ್ದಲಿಂಗಯ್ಯ, ಇವರ ಸ್ಟೆಪ್‌ಗಳನ್ನು ಕುತೂಹಲದಿಂದ ನೋಡುತ್ತಿರುವ ಎಸ್.ಪಿ. ವರದರಾಜ್, ಮೊಟ್ಟ ಮೊದಲ ಬಾರಿಗೆ ಸಿ. ಅಶ್ವತ್ಥ್ ಸಿನಿಮಾಗೆ ಹಾಡು ಹಾಡಿದ ಕ್ಷಣ, ಎಲ್ಲ ಚಿಂತೆಗಳನ್ನು ಬಿಟ್ಟು 'ಕನ್ನಯ್ಯರಾಮ' ಪುಸ್ತಕ ಓದುತ್ತಿರುವ ಅನಂತ್‌ನಾಗ್, ತೂಗದೀಪ ಮತ್ತು ವಜ್ರಮುನಿ ಅವರಿಗೆ ದೃಶ್ಯವನ್ನು ವಿವರಿಸುತ್ತಿರುವ ಭಾರ್ಗವ, ಶಂಕರ್‌ನಾಗ್ ಹಾಗೂ ದ್ವಾರಕೀಶ್ ಒಂದುಗೂಡಿದ ಅಪರೂಪ ಕ್ಷಣ, ಮೈಸೂರು ಅನಂತಸ್ವಾಮಿ ಮತ್ತು ಸುಂದರಕೃಷ್ಣ ಅರಸ್ ಸಂಗೀತ ಸಂಯೋಜನೆಯಲ್ಲಿ ಬ್ಯುಸಿಯಾಗಿದ್ದಾಗ, ಈಗಿನ ಹಿರಿಯ ನಟ ಶ್ರೀನಿವಾಸಮೂರ್ತಿ ಆಗ ಹೇಗಿದ್ದರು... ಹೀಗೆ ನೀವು ತೆರೆ ಮೇಲೆ ನೋಡದಿರುವ ಹತ್ತಾರು 'ಭಾವ'ಚಿತ್ರಗಳು ಅಶ್ವತ್ಥನಾರಾಯಣರ ಕ್ಯಾಮರಾದಲ್ಲಿ ಸೆರೆಯಾಗಿವೆ. ಇವರ ಪ್ರತಿ ಫೋಟೋದ ಹಿಂದೆ ಒಂದು ಕಥೆ ಇದೆ.
ಆರ್. ನಾಗೇಂದ್ರರಾವ್‌ರಿಗೆ ಸಹಾಯಕರಾಗಿದ್ದ ನಾಗೇಶ್‌ಬಾಬಾ ಅವರು ಮದ್ರಾಸಿಗೆ ಹೊರಟವರು, 'ಪ್ರೇಮದ ಪುತ್ರಿ' ಸಿನಿಮಾ ಮಾಡಿದರು. ಅಣ್ಣನ ಹಾದಿಯಲ್ಲೇ ನಡೆದ ಅಶ್ವತ್ಥನಾರಾಯಣ ಎಸ್‌ಎಸ್‌ಎಲ್‌ಸಿ ಮುಗಿಸಿ 1965ರ ಹೊತ್ತಿಗೆ ಮದ್ರಾಸ್ ಸೇರಿಕೊಂಡು ಅಲ್ಲಿ ತ್ರೀಸ್ಟಾರ್ ಸ್ಟುಡಿಯೋ ಸೇರಿಕೊಂಡರು. ಸ್ಟುಡಿಯೋದಲ್ಲಿ ಸಹಾಕರಾಗಿದ್ದ ಅಶ್ವತ್ಥನಾರಾಯಣ ಅವರಿಗೆ ಸ್ವತಂತ್ರವಾಗಿ ಕ್ಯಾಮರಾ ಹಿಡಿಯುವ ಅವಕಾಶ ಬಂತು. 19ನೇ ವಯಸ್ಸಿಗೆ ಮೊದಲ ಬಾರಿಗೆ ಪುಟ್ಟಣ್ಣ ಕಣಗಾಲ್‌ರ 'ಬೆಳ್ಳಿ ಮೋಡ' ಚಿತ್ರಕ್ಕೆ 2 ದಿನ ಸ್ಥಿರ ಛಾಯಾಗ್ರಹಣ ಮಾಡಿದರು. ಅಲ್ಲಿಂದ ಇವರ ಮತ್ತು ಕ್ಯಾಮರಾ ಒಡನಾಟ ನಿರಂತರ. ಒಂದರೆಡು ಸಿನಿಮಾಗಳ ಹೊರತಾಗಿ 'ಬೆಳ್ಳಿ ಮೋಡ' ಚಿತ್ರದಿಂದ ಪುಟ್ಟಣ್ಣರ ಎಲ್ಲ ಚಿತ್ರಗಳಿಗೂ ಅಶ್ವತ್ಥನಾರಾಯಣ ಅವರದ್ದೇ ಸ್ಥಿರ ಛಾಯಾಗ್ರಹಣ. ಮದ್ರಾಸಿನಿಂದ ವಾಪಸ್ಸು ಬಂದ ನಾಗೇಶ್ ಬಾಬಾ ಹಾಗೂ ಅಶ್ವತ್ಥನಾರಾಯಣ ಸೋದರರು ಗಾಂಧಿನಗರದಲ್ಲಿ 1972ರಲ್ಲಿ ಪ್ರಗತಿ ಸ್ಟುಡಿಯೋ ಆರಂಭಿಸಿದರು. 'ಹೃದಯ ಸಂಗಮ' ಚಿತ್ರದಿಂದ ಮತ್ತೆ ಫೋಟೋಗ್ರಫಿ. ಇಲ್ಲಿವರೆಗೂ 300ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಥಿರ ಛಾಯಾಗ್ರಹಕರಾಗಿ ದುಡಿದಿದ್ದಾರೆ. ತಮ್ಮ 45 ವರ್ಷಗಳ ಸಿನಿ ಪಯಣದಲ್ಲಿ ಸಾವಿರಾರು ಫೋಟೋಗಳನ್ನು ತೆಗೆದಿದ್ದಾರೆ.
(ಮುಂದುವರಿಯುವುದು)
-ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


