ಭರಣ 60, ಚಿತ್ರ ಅನ್ವೇಷಣೆಯ ಆಭರಣ
ಸಿನಿಮಾ 'ಗ್ರಹಣ' ಹತ್ತಿಸಿಕೊಂಡು ಗಾಂಧಿನಗರಕ್ಕೆ ಬಂದ ನಿರ್ದೇಶಕ..

ಸಿನಿಮಾ 'ಗ್ರಹಣ' ಹತ್ತಿಸಿಕೊಂಡು ಗಾಂಧಿನಗರಕ್ಕೆ ಬಂದ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಬದುಕಿನ ಪಯಣಕ್ಕೆ ಈಗ 60ರ ಸಂಭ್ರಮ. 5 ಸಿನಿಮಾ ಮಾಡಿ, ಅದರಲ್ಲಿ ಒಂದು ತೆರೆಕಂಡು, ಉಳಿದ ನಾಲ್ಕು ಚಿತ್ರಗಳು ಬಿಡುಗಡೆಯಾಗಲಿವೆ ಎನ್ನುವುದೇ ಸಾಧನೆ ಅಂತ ಸಂಭ್ರಮಿಸಿಕೊಳ್ಳುವವರ ನಡುವೆ ರಂಗಭೂಮಿ, ಸಿನಿಮಾ, ಧಾರಾವಾಹಿ ಈ ಮೂರೂ ಕ್ಷೇತ್ರಗಳಲ್ಲಿ 40 ವರ್ಷ ಕಳೆದು, 34 ಚಿತ್ರಗಳನ್ನು ಕೊಟ್ಟ ಭರಣ, ಸಿನಿಮಾವೊಂದರ ನಿಜವಾದ ಆಭರಣ. ಯಾವುದಕ್ಕೂ ಬ್ರಾಂಡ್ ಆಗದೆ, ಅದೇ ಸಂದರ್ಭದಲ್ಲಿ ಎಲ್ಲ ಬ್ರಾಂಡ್ ಸಿನಿಮಾಗಳನ್ನೂ ಸೃಷ್ಟಿಸಿ ಪ್ರೇಕ್ಷಕನ ಮುಂದೆ ನಿಂತವರು. ಕಲಾತ್ಮಕ, ಕಮರ್ಷಿಲ್, ಬ್ರಿಡ್ಜ್ ಎನ್ನುವ ವರ್ಗಭೇದವಿಲ್ಲದೆ ಸಿನಿಮಾ ಕಟ್ಟಿದ ಕೆಲವೇ ನಿರ್ದೇಶಕರಲ್ಲಿ ನಾಗಾಭರಣ ಅವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇವರ ಪಯಣ ಬಲು ಅಪರೂಪ ಮತ್ತು ಸಾಧನೆಯ ಶಿಖರದ ಹಿಂದಿನ ಅರವತ್ತರ ಯುವಕನ 'ನೆನಪಿನ ದೋಣಿ' ಇಲ್ಲಿದೆ.
ನಿಮ್ಮ ಸಿನಿಮಾಗಳನ್ನು ಹೆಚ್ಚು ಪ್ರಭಾವಿಸುವ ಅಂಶಗಳೇನು?
ನನ್ನ ಬಾಲ್ಯದ ಜೀವನ. ತಲಕಾಡು ನನ್ನ ಜನ್ಮಸ್ಥಳ. ಅಲ್ಲೇ ಬೆಳೆದಿದ್ದು. ಬಾಲ್ಯದ ಅನುಭಗಳು, ಅಧ್ಯಾತ್ಮ, ತಾತ ಹೇಳಿದ ಕಥೆಗಳು, ಅಜ್ಜಿ ಅಟ್ಟದ ಮೇಲೆ ಬಿಟ್ಟು ಹೋದ ಪುಸ್ತಕಗಳು, ಊರಿನ ಜಾತ್ರೆಗಳು, ನನ್ನ ಹಳ್ಳಿಯ ಹಬ್ಬಗಳು. ನನ್ನ ಪ್ರತಿ ಸಿನಿಮಾದಲ್ಲಿ ಏನಿರಲಿ, ಬಿಡಲಿ... ಜಾನಪ ಮತ್ತು ಗ್ರಾಮೀಣ ಬದುಕಿನ ಸೊಗಡು ಇರುತ್ತದೆ ಅಂದರೆ ಅದಕ್ಕೆ ಕಾರಣ ಬಾಲ್ಯದಲ್ಲಿ ಸಿಕ್ಕ ಈ ಅನುಭವಗಳೇ. ಅವು ಸಹಜವಾಗಿ ನನ್ನ ಸಿನಿಮಾಗಳ ಈ ಕ್ಷಣಕ್ಕೂ ಜಾಗ ಮಾಡಿಕೊಂಡು ಬರುತ್ತಿವೆ.
ತಲಕಾಡು ನಾಗಾಭರಣ ಸಿನಿಮಾ 'ಗ್ರಹಣ' ಹತ್ತಿಸಿಕೊಂಡಿದ್ದು ಹೇಗೆ?
ನಾನು ಓದಿದ್ದು ಬಿಎಸ್ಸಿ ಹಾಗೂ ಎಲ್ಎಲ್ಬಿ. ಒಂದಕ್ಕೊಂದು ಸಂಬಂಧವೇ ಇಲ್ಲ. ನಾನು ಅಪ್ಪಟ ಜನಪದೀಯ ವಾತಾವರಣದಲ್ಲಿ ಬೆಳೆದವನು. ಓದಿನ ಜೊತೆಗೆ ಕಲೆ ನನ್ನ ಆಕರ್ಷಣೆಯ ಕೇಂದ್ರವಾಗಿತ್ತು. ಅದೇ ಸಂದರ್ಭದಲ್ಲಿ ಸಾಹಿತ್ಯ ಜಗತ್ತಿನಲ್ಲಿ ನವ್ಯ, ನವೋದಯ ಚಳವಳಿಯಂತೆ ಹೊಸ ಅಲೆಯ ಚಿತ್ರಗಳ ಶಕೆ ಆರಂಭವಾಗಿತ್ತು. 1970ರ ಹೊತ್ತಿಗೆ ಬಹುದೊಡ್ಡ ಸಾಂಸ್ಕೃತಿಕ ಪಲ್ಲಟಗಳು ಕಂಡಬಂದವು. ಆಗಲೇ ನಾನು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಯಾವುದೇ ಹೊಸ ರೀತಿಯ ನಾಟಕ ಪ್ರದರ್ಶನವಾಗುತ್ತದೆ ಎಂದಾಗ ಅಲ್ಲಿ ನಾನು ಇರುತ್ತಿದ್ದೆ. ರಂಗಪರಿಕರಗಳನ್ನು ಹಿಡಿದುಕೊಂಡು ಕೂಲಿಗಾರನಂತೆ ಊರೂರು ಸುತ್ತಿದ್ದೇನೆ. ಸಿನಿಮಾ ಕೂಡ ಅಷ್ಟೇ, ಹೊಸ ಅಲೆಯ ಚಿತ್ರದ ಹಿಂದೆ ನಾನು ದುಡಿಯುತ್ತಿದ್ದೆ. ರೀಲು ಡಬ್ಬಾ ಹಿಡಿದು ಹಳ್ಳಿ ಹಳ್ಳಿ ಸುತ್ತಿದ್ದೇನೆ. ರಂಗಭೂಮಿಯಲ್ಲಂತೂ ಕತ್ತೆ ಥರಾ ದುಡಿದ್ದೇನೆ. ಈ ಹೊಸ ಅಲೆಯಲ್ಲೇ ಬ್ಯಾಕ್ ಸ್ಟೇಜ್ನಲ್ಲಿದ್ದ ನಾನು ನಿರ್ದೇಶನದ ಕ್ಯಾಪು ಧರಿಸಿದೆ. ಆದರೆ, ರಂಗಭೂಮಿಗಿಂತ ಸಿನಿಮಾ ಮತ್ತೊಂದು ಮಾಧ್ಯಮ ಅಂತ ಹೋಗಲಿಲ್ಲ. ಅದೂ ಒಂದು ಮಾಧ್ಯಮ ಅಥವಾ ರಂಗಭೂಮಿಯ ಮುಂದುವರೆದ ಕ್ಷೇತ್ರ ಅಂದುಕೊಂಡೇ ಅಲ್ಲಿಗೆ ಕಾಲಿಟ್ಟೆ.
ರಂಗಭೂಮಿಯಿಂದ ಬಂದ ನಿಮಗೆ ಸಿನಿಮಾ ಗ್ರಾಮರ್ (ಗಾಂಧಿನಗರ) ಅರ್ಥವಾಗಿದ್ದು ಯಾವಾಗ?
ಬಿ.ವಿ. ಕಾರಂತರಂಥ ಮಹಾನ್ ದಿಗ್ಗಜರ ಜೊತೆ 30 ವರ್ಷ ಕಳೆದಿದ್ದೇನೆ. ರಂಗಭೂಮಿಯ ಪ್ರತಿ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಸಿನಿಮಾಗೆ ರಂಗಭೂಮಿಯೇ ಬೇಸ್ ಎನ್ನುವುದನ್ನು ಒಪ್ಪಿಕೊಂಡು ಅಲ್ಲಿ ಸಾಕಷ್ಟು ಪಾಠಗಳನ್ನು ಕಲಿತು ಬಂದ ನನಗೆ ನೀವು ಕೇಳುವ ಗಾಂಧಿನಗರದ ಸಿನಿಮಾ ಗ್ರಾಮರ್ ನಿಜಕ್ಕೂ ಬೇರೆ ರೀತಿ ಕಂಡಿತು. ರಂಗಭೂಮಿಯ ಸಾಧನೆ, ಪ್ರತಿಭೆ ಅಥವ ಶ್ರಮವನ್ನು ಗಾಂಧಿನಗರ ಬೇಗ ಒಪ್ಪಿಕೊಳ್ಳಲಿಲ್ಲ. ಇದರ ಅರಿವು ನನಗೆ ಆಗಿದ್ದು 1980ರಲ್ಲಿ ನಾನು ಸಿನಿಮಾ ಮಾಡಲು ಬಂದಾಗ. 'ನಾನು ಯಾರಿಗಾಗಿ ಸಿನಿಮಾ ಮಾಡಬೇಕು?' ಎನ್ನುವ ಪ್ರಶ್ನೆ ಹುಟ್ಟಿಕೊಂಡಿದ್ದೇ ಆಗ. ಅಂದಿನಿಂದಲೂ ಇಂದಿನ ತನಕ ಆ ಪ್ರಶ್ನೆ ಕಾಡುತ್ತಲೇ ಇದೆ. ನಿಜ ಹೇಳಬೇಕು ಅಂದ್ರೆ ಗಾಂಧಿನಗರ ಹೇಳುತ್ತಿರುವ ಸಿನಿಮಾ ಗ್ರಾಮರ್ ಅಥವಾ ಭಾಷೆ ಈಗಲೂ ನನ್ನ ಹಿಡಿತಕ್ಕೆ ಸಿಗುತ್ತಿಲ್ಲ.
ಅಂದಿನ ಚಿತ್ರ ತಯಾರಿಕೆ ಹಾಗೂ ಇಂದಿನ ಸಿನಿಮಾ ರೂಪಗಳ ನಡುವೆ ವ್ಯತ್ಯಾಸಗಳೇನು?
ಆಗ ಸಿನಿಮಾ 'ಕೃಷಿ'ಯಾಗಿತ್ತು. ಈಗ 'ನಿರ್ಮಾಣ' ಆಗಿದೆ. ಅದರ ಮೇಕಿಂಗ್ ರೂಪದಲ್ಲಿ ಬದಲಾಗಿದೆ.
1982-83ರಲ್ಲಿ ಕನ್ನಡ ಚಿತ್ರರಂಗ ಯಾವ ಸಮಸ್ಯೆಗಳನ್ನು ಎದುರಿಸುತ್ತಿತ್ತೋ ಅದೇ ಸಮಸ್ಯೆಗಳು ಈಗಲೂ ಕಾಡುತ್ತಿವೆ. ಆಗಲೂ ಪ್ರಯೋಗಶೀಲ ಚಿತ್ರಗಳಿಗೆ ವೇದಿಕೆ ಇರಲಿಲ್ಲ, ಈಗಲೂ ಚಿತ್ರಮಂದಿರ ಸಿಗುತ್ತಿಲ್ಲ. ಆಗ ನಾಲ್ಕೈದು ಭಾಷೆ ಸಿನಿಮಾಗಳ ಜೊತೆ ಗುದ್ದಾಡಬೇಕಿತ್ತು. ಈಗ ನೂರಾರು ಚಿತ್ರಮಂದಿರಗಳಲ್ಲಿ ಹಲವು ಭಾಷೆಯ ಸಿನಿಮಾಗಳ ಜೊತೆಗೆ ಫೈಟ್ ಮಾಡಬೇಕಿದೆ. ಡಿಜಿಟಲ್ ಕ್ರಾಂತಿಯಿಂದ ಬೇಕಿದ್ದವು, ಬೇಡದಿದ್ದವು ಎಲ್ಲವೂ ಸಿನಿಮಾಗಳಾಗುತ್ತಿವೆ. ಈಗ ಪ್ರೇಕ್ಷಕ ಮಾರುಕಟ್ಟೆಗೆ ಜೋತು ಬಿದ್ದಿದ್ದಾನಾ? ಸಿನಿಮಾಗಳೇ ಮಾರುಕಟ್ಟೆಯ ಸೂತ್ರಗಳಲ್ಲಿ ಬಂಧಿಸಲ್ಪಟ್ಟಿವೆಯಾ? ಗೊತ್ತಾಗುತ್ತಿಲ್ಲ. ಜಗತ್ತಿನ ಎಲ್ಲ ಭಾಷೆಗಳ ಜೊತೆಗೆ ಹಾಗೂ ಪ್ರೇಕ್ಷಕನ ಅಭಿರುಚಿಯೊಂದಿಗೂ ನಮ್ಮ ಸಿನಿಮಾ ಹೋರಾಟ ಮಾಡಬೇಕಿದೆ. ನಮ್ಮದು ಕಡಿಮೆ ಬಜೆಟ್ ಸಿನಿಮಾ. ಸ್ಪರ್ಧೆ ಮಾತ್ರ ಮಲ್ಟಿಕ್ರೋರ್.
ಹಾಗಾದರೆ ನಿಜಕ್ಕೂ ಪ್ರೇಕ್ಷಕನಿಗೆ ಬೇಕಾದ ಸಿನಿಮಾ ಯಾವುದು?
ಅದನ್ನೇ ಈಗಲೂ ಹುಡುಕುತ್ತಿದ್ದೇನೆ. ಆದರೆ, ಗಟ್ಟಿಯಾದ ಕಥೆ ಇದ್ದರೆ ಪ್ರೇಕ್ಷಕ ಒಪ್ಪಿಕೊಳ್ಳುತ್ತಾನೆ. ಅಂಥ ಕಥೆಗಳನ್ನು ಅವನ ಲೆವಲ್ಲಿಗೆ ಇಳಿದು ನಿರೂಪಿಸಿದರೆ ಇಷ್ಟಪಡುತ್ತಾನೆಂಬ ನಂಬಿಕೆ ಈಗಲೂ ಇದೆ. ಅದನ್ನ ಮುಂದೆ ಸಾಧಿಸಿ ತೋರಿಸುತ್ತೇನೆ.
ಈಗ ಸಿನಿಮಾ ವ್ಯವಸ್ಥೆ ಬದಲಾಗಬೇಕೋ, ನಿರ್ದೇಶಕ ಬದಲಾಗಬೇಕಿದಿಯೋ?
ಗ್ರಾಮರ್ ಮತ್ತು ಗ್ಲಾಮರ್ ಜಗತ್ತಿನಲ್ಲಿ 40 ವರ್ಷ ಅನುಭವ ಪಡೆದುಕೊಂಡು 60ರ ಗಡಿಯಲ್ಲಿ ನಿಂತಿದ್ದೇನೆ. ಸಿನಿಮಾವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಅಗತ್ಯ ಇದೆ. ವ್ಯಾಪಾರಿ ದೃಷ್ಟಿಕೋನದ ಜೊತೆ ಜೊತೆಗೆ ಪ್ರಯೋಗವನ್ನೂ ಮಾಡಬೇಕಿದೆ. ಮಾರುಕಟ್ಟೆ ಸೂತ್ರಗಳಿಲ್ಲದೆ ಏನೇ ಮಾಡಿದರೂ ಈಗಿನ ಸಿಸ್ಟಮ್ನಲ್ಲಿ ನನ್ನ ಸಿನಿಮಾ ತಲುಪುದು ಕಷ್ಟ ಎನಿಸುತ್ತದೆ.
'ಆಸ್ಫೋಟ'ದಂತೆ ಈಗಿನ ರಾಜಕೀಯವನ್ನು ಎದುರು ಹಾಕಿಕೊಳ್ಳುವ ಶಕ್ತಿ ಮತ್ತು ಧೈರ್ಯ ನಿಮಲ್ಲಿ ಇದೆಯೇ?
ಖಂಡಿತ ಮಾಡುತ್ತೇನೆ. 'ರಾಜ್ನೀತಿ'ಯಂಥ ಚಿತ್ರಗಳನ್ನು ನೋಡಿದಾಗ 'ಆಸ್ಫೋಟ' ನೆನಪಾಗುತ್ತದೆ. ಬಹುಶಃ ನನ್ನ ನೆಲದಲ್ಲಿ ಅಂಥ ಚಿತ್ರಗಳಿಗೆ ಈಗ ಸರಿಯಾದ ವಾತಾವರಣ ಇದೆ ಎನಿಸುತ್ತದೆ. ಭ್ರಷ್ಟರ ಬಗ್ಗೆ ಜನ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಒಬ್ಬ ನಿರ್ದೇಶಕನಾಗಿ ನಾನು ನನ್ನ ಕಲಾಕೃತಿಯನ್ನು ಮುಖಾಮುಖಿಯಾಗಿಸುವುದಕ್ಕೆ ಯಾವ ಹಿಂಜರಿಕೆಯೂ ಇಲ್ಲ.
ಬಹುತೇಕ ನಟರಿಗೆ ಸಿನಿಮಾ ಮಾಡಿದ್ದೀರಿ. ಆದರೆ, ರವಿಚಂದ್ರನ್ ಮಾತ್ರ ನಿಮ್ಮ ನಿರ್ದೇಶನದಿಂದ ತಪ್ಪಿಸಿಕೊಂಡಿದ್ದು ಯಾಕೆ?
ಹ್ಹ ಹ್ಹ ಹ್ಹ... ಹೌದಲ್ಲ! ಒಮ್ಮೆ ರವಿಗೆ ನಾನು ಕಥೆ ಹೇಳಿದ್ದೆ. ಆತ 'ಅಯ್ಯೋ ಇಂಥ ಕಥೆ ಈಗ ಬೇಡ. 'ನಾಗಮಂಡಲ' ಥರಾ ಮತ್ತೊಂದು ಕಥೆ ಮಾಡಿಕೊಂಡು ಬಾ' ಅಂದ. ಹಾಗಾಗಿ ನನ್ನಿಂದ ತಪ್ಪಿಸಿಕೊಂಡ. ಅಥವಾ ಅವನ ಚಿತ್ರ ಮಾಡಲಿಕ್ಕೆ ನನ್ನ ಕೈಯಲ್ಲಿ ಆಗಲಿಲ್ಲ. ರವಿ ಮಾತ್ರವಲ್ಲ, ಜಗ್ಗೇಶ್ ಕೂಡ. ಬಹುಶಃ ಅವರಿಬ್ಬರೂ ಡಬಲ್ ಮೀನಿಂಗ್ ಓರಿಯೇಟೆಂಟ್ ನಾಯಕ ನಟರಾಗಿದ್ದರಿಂದ ಅವರ ಸಿನಿಮಾ ಸ್ಟೈಲ್ಗೂ ನನ್ನ ಸಿನಿಮಾ ಅಭಿರುಚಿಗೂ ಹೊಂದಾಣಿಕೆಯಾಗಲಿಲ್ಲ.
ರಾಜ್, ವಿಷ್ಣುವರ್ಧನ್, ಅಂಬರೀಷ್, ಅನಂತ್ನಾಗ್ ಈ ನಾಲ್ಕು ಜನ ನೀವು ಕಂಡಂತೆ ಹೇಗೆ?
ಸಂಪೂರ್ಣವಾಗಿ ತದ್ವಿರುದ್ಧ ವ್ಯಕ್ತಿ ಮತ್ತು ವ್ಯಕ್ತಿತ್ವಗಳು. ಒಬ್ಬೊಬ್ಬರದ್ದು ಒಂದೊಂದು ಮುಖ. ಡಾ. ರಾಜ್ಕುಮಾರ್ ಜೊತೆ ಎಷ್ಟು ಡಿಸಿಪ್ಲಿನ್ ಆಗಿ ಕೆಲಸ ಮಾಡಿದ್ದೀನೋ ಅಷ್ಟೇ ಇನ್ಡಿಸಿಪ್ಲಿನ್ ಆಗಿ ಅಂಬರೀಷ್ ಜೊತೆ ಕೆಲಸ ಮಾಡಿದ್ದೇನೆ. ವಿಷ್ಣುವರ್ಧನ್ ಜೊತೆಗೆ ಪಕ್ಕಾ ವೃತಿಪರವಾಗಿದ್ದರೆ, ಅನಂತ್ನಾಗ್ ಜೊತೆ ಹೋಮ್ಲಿ ವಾತಾವರಣವಿತ್ತು.
ಸ್ಟಾರ್ಗಳ ಜೊತೆ ಸಿನಿಮಾ ಮಾಡುವ ಅವಕಾಶ ಸಿಗುತ್ತಿಲ್ಲ ಅಂತ ಎಂದಾದರೂ ಬೇಸರ ಮಾಡಿಕೊಂಡಿದ್ದೀರಾ?
ಎಲ್ಲಿಯವರೆಗೂ ರಿಮೇಕ್ ಸಿನಿಮಾಗಳಿಗೆ ನಾವು ಅಂಟಿಕೊಂಡಿರುತ್ತೇವೋ ಅಲ್ಲಿತನಕ ಸೃಜನಶೀಲತೆಗೆ ಮಹತ್ವ ದೊರೆಯದು. ಸೃಷ್ಟಿ ಮಾಡುವವರು ಈಗಿನ ಸ್ಟಾರ್ ನಟರಿಗೆ ಬೇಕಿಲ್ಲ. ಅವರಿಗೆ ಆ್ಯಕ್ಷನ್, ಕಟ್ ಹೇಳುವವರು ಮಾತ್ರ ಬೇಕಿದೆ. ಹೀಗಾಗಿ ನನ್ನಂಥವನು ಹೀಗೆ ಇರಬೇಕಾಗುತ್ತದೆ. ನಾನು ಮೂಲೆ ಸೇರಲ್ಲ. ಸೇರುವುದೂ ಇಲ್ಲ. ನನ್ನ ಸಿನಿಮಾ ದಾರಿ ನನಗೆ ಇದ್ದೇ ಇದೆ.
ಸಿನಿಮಾ ಅನ್ವೇಷಣೆಯ ಹಿಂದಿನ ನಿಮ್ಮ ಶಕ್ತಿ ಯಾವುದು?
ಓದು, ಬರವಣಿಗೆ, ಸಾಹಿತ್ಯ, ಅಧ್ಯಯನ ಮತ್ತು ತಿರುಗಾಟ. ಇವು ಇದಿಲ್ಲದಿದ್ದರೆ ಯಾವು ಕಲಾ ಕೃತಿಯನ್ನೂ ಕಟ್ಟಲಾಗದು. ಸಾಹಿತ್ಯದ ಗೀಳು ಇದ್ದಿದ್ದಕ್ಕೆ 'ಮೈಸೂರು ಮಲ್ಲಿಗೆ' ಹಾಗೂ 'ಸಂತ ಶಿಶುನಾಳ ಶರೀಫ' ಮಾಡಲು ಸಾಧ್ಯವಾಯಿತು. ಫಿಕ್ಷನ್ ಸಾಹಿತ್ಯವನ್ನು ಹೆಚ್ಚು ಓದುತ್ತೇನೆ.
ಈ 60ರ ಹೊಸ್ತಿನಲ್ಲೂ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತಿರುವ ನಿಮ್ಮ ಕನಸು ಯಾವುದು?
ಪಕ್ಕಾ ಐತಿಹಾಸಿಕ ಚಿತ್ರ ಮಾಡಬೇಕೆಂಬುದು. ದಳವಾಯಿ ಮುದ್ದಣ್ಣ, ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ, ಬಸವಣ್ಣ ಮತ್ತು ಬಿಜ್ಜಳನ ಕುರಿತ ಯುಗೇ ಯುಗೇ ಸೇರಿದಂತೆ ಆರು ಐತಿಹಾಸಿಕ ಸಿನಿಮಾ ಕಥೆಗಳು ರೆಡಿಯಾಗಿವೆ. ಇದರಲ್ಲಿ ಯಾವುದಾದರೂ ಒಂದನ್ನು ತುಂಬಾ ಅದ್ಧೂರಿಯಾಗಿ ಕನ್ನಡತನ ಮೆರೆಸುವಂತ ಕಲಾಕೃತಿಯನ್ನಾಗಿ ಮಾಡುವ ಕನಸು ಇದೆ.
ನನ್ನಾಕೆಯ 5 ಸ್ಟಾರ್ಗಳು
1. ನಾನು ಎಲ್ಲೇ ಹೋದರೂ ನನ್ನ ಮೇಲೆ ಒಂದು ಕಣ್ಣು, ಕಿವಿ ಇದ್ದೇ ಇರುತ್ತದೆ. ಗಂಡ ಎನ್ನುವ ಪ್ರೀತಿ.
2. ಪ್ರತಿ ಬಾರಿ ಆಕೆ ದೇವರ ಮುಂದೆ ನಿಂತು ಪ್ರಾರ್ಥಿಸುವಾಗ ನನಗಾಗಿ ಆ ಪ್ರಾರ್ಥನೆ ಎಂದುಕೊಳ್ಳುತ್ತೇನೆ. ಅದು ನಿಜ ಕೂಡ.
3. ಒಳ್ಳೆಯ ಅಡುಗೆ ಮಾಡಿ ಹಾಕುತ್ತಾಳೆ. ಯಾವ ಟೈಮ್ನಲ್ಲಿ ಬಂದರೂ ಬೇಸರ ಮಾಡಿಕೊಳ್ಳದೆ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಾಳೆ.
4. ನನ್ನ ಹಲವು ನಿರ್ಲಕ್ಷ್ಯತೆಗಳನ್ನು ಸಹಿಸಿಕೊಂಡು ತಿದ್ದಿದ ಗುರು.
5. ಎಲ್ಲಕ್ಕಿಂತ ಮುಖ್ಯವಾಗಿ ಆಕೆ ನನಗೆ ತಾಯಿ, ಹಿತೈಷಿ, ಸ್ನೇಹಿತೆ.
ವಿದೇಶಿ ವಿಮರ್ಶಕ ಕೊಟ್ಟ ಶಾಕ್
ನನ್ನ ಮೊದಲ ನಿರ್ದೇಶನದ 'ಗ್ರಹಣ' ಚಿತ್ರವನ್ನು ನೋಡಿದ ವಿದೇಶಿ ಸಿನಿಮಾ ವಿಮರ್ಶಕ ಮುಂದೊಂದು ದಿನ ನನಗೆ ಶಾಕ್ ಕೊಡುವಂಥ ಪ್ರಶ್ನೆ ಕೇಳುತ್ತಾನೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಆ ವಿದೇಶಿ ಅಭಿಮಾನಿ ಹೆಸರು ಅಮ್ರೋಸ್ ಹರ್ಷದ್ ಬರ್ಗರ್ ಅಂತ. ಸ್ಪೀಡನ್ ದೇಶದವನು. 'ಗ್ರಹಣ' ಚಿತ್ರದ ನಂತರ ನಿರಂತರವಾಗಿ ಆತ ನನ್ನ ಸಂಪರ್ಕದಲ್ಲಿದ್ದ. ನಾನು ಆಗ ಯಾವ ಚಿತ್ರೋತ್ಸವವನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅವನೂ ಬರುತ್ತಿದ್ದ. ಒಮ್ಮೆ ಜರ್ಮನ್ ಚಿತ್ರೋತ್ಸವದಲ್ಲಿ ನನ್ನ ನೋಡಿದ ಅಮ್ರೋಸ್ ಇದ್ದಕ್ಕಿದ್ದ ಹಾಗೆ 'ನೀನು ಯಾರಿಗಾಗಿ ಸಿನಿಮಾ ಮಾಡುತ್ತಿದ್ದೀಯಾ?' ಅಂದ! ಅವನ ಪ್ರಶ್ನೆಯಿಂದ ಹೊರ ಬರುವಷ್ಟರಲ್ಲಿ, 'ಚಿತ್ರೋತ್ಸವಕ್ಕಾಗಿ ಸಿನಿಮಾನಾ?' ಎಂದು ಪುನಃ ಪ್ರಶ್ನಿಸಿದ. ನಾನು ಏಕಯ್ಯ ಇಂಥ ಪ್ರಶ್ನೆ ಕೇಳಿದ ಅಂತ ತುಂಬಾ ಚಿಂತೆ ಮಾಡಿದೆ. ಆ ದಿನ ಇಡೀ ರಾತ್ರಿ ನಿದ್ದೆ ಬರಲಿಲ್ಲ. 'ಚಿತ್ರೋತ್ಸವಕ್ಕೆ ಬಂದು ಏನ್ ಮಾಡ್ತಿರಾ?' ಎನ್ನುವ ಪ್ರಶ್ನೆಯೇ ನನಗೆ ಅರಗಿಸಿಕೊಳ್ಳಲು ಆಗಲಿಲ್ಲ. ಆದರೂ ಯಾರಿಗಾಗಿ ನಾನು ಸಿನಿಮಾ ಮಾಡುತ್ತಿದ್ದೇನೆ ಅಂತ ಮೊಟ್ಟ ಮೊದಲ ಬಾರಿಗೆ ಅನಿಸಿದ್ದೇ ಆಗ. ಅಂಥ ಯೋಚನೆಯಲ್ಲಿ ಮೂಡಿ ಬಂದದ್ದೇ 'ಬಂಗಾರದ ಜಿಂಕೆ'ಯಂಥ ಪಕ್ಕಾ ಕಮರ್ಷಿಲ್ ಸಿನಿಮಾ. ಅವರ ಪ್ರಶ್ನೆಯೇ ನಾನು ಬೇರೆ ರೀತಿಯ ಸಿನಿಮಾಗಳಿಗೆ ತೆರೆದುಕೊಳ್ಳುವಂತೆ ಮಾಡಿತು ಎಂದರೆ ತಪ್ಪಾಗಲಾರದು.
-ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


