ಸಿನಿಮಾ ಲೇಖನ

ನಾನು ಮಹೇಶ್ ರಾವ್

ನಾನು ಮಹೇಶ್ ರಾವ್
Published On :

ಕನ್ನಡ ಚಿತ್ರರಂಗದ ನಿರ್ದೇಶಕರಲ್ಲಿ ಎರಡು ವಿಧ. ರಿಮೇಕ್ ಮಾಡುವವರು ಮತ್ತು ರಿಮೇಕ್ ಮಾಡದವರು. ಆದರೆ ರಿಮೇಕ್ ಮಾಡುವವರಲ್ಲೂ ಎರಡು ವಿಧ ಎಂಬುದು ಮಹೇಶ್‌ರಾವ್‌ರಂಥ ನಿರ್ದೇಶಕರನ್ನು ನೋಡಿದಾಗ ಅರಿವಾಗುತ್ತದೆ. ಕೆ. ಮಾದೇಶ್, ಎಂ.ಡಿ.ಶ್ರೀಧರ್‌ರಂಥ ನಿರ್ದೇಶಕರು ಸ್ಟಾರ್ ನಟರಿಗೆ ಒಪ್ಪುವಂಥ ಕಮರ್ಷಿಯಲ್ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ರಿಮೇಕ್ ಸ್ಪೆಷಲಿಸ್ಟ್‌ಗಳು ಎನಿಸಿಕೊಂಡಿದ್ದರೆ ಮಹೇಶ್‌ರಾವ್ ಪರಭಾಷೆಯ ಸ್ಪೆಷಲ್ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಕನ್ನಡೀಕರಿಸುತ್ತಿರುವ ನಿರ್ದೇಶಕ. ಭದ್ರ ಚಿತ್ರವನ್ನು ಹೊರತು ಪಡಿಸಿದರೆ, ರಿಮೇಕ್ ಅಲ್ಲದ ಮುರಳಿ ಮೀಟ್ಸ್ ಮೀರಾ, ಕೇಸ್ ನಂ.18/9, ಎಂದೆಂದೂ ನಿನಗಾಗಿ, ಕ್ವಾಟ್ಲೆ ಸತೀಶ, ಹೀಗೆ, ತಾವು ಆಯ್ಕೆ ಮಾಡಿಕೊಳ್ಳುವ ಕಥೆಗಳಿಂದಲೇ ಸೆನ್ಸಿಟಿವ್ ನಿರ್ದೇಶಕ ಎನಿಸಿಕೊಂಡಿರುವ ಮಹೇಶ್ ನಿರ್ದೇಶನದ ಎರಡು ಚಿತ್ರಗಳು ಕಳೆದ ಎರಡು ವಾರದಲ್ಲಿ ಬಿಡುಗಡೆಯಾಗಿವೆ. ಈ ಪೈಕಿ ಎಂದೆಂದೂ ನಿನಗಾಗಿ ಟಿಪಿಕಲ್ ಮಹೇಶ್‌ರಾವ್ ಶೈಲಿಯಲ್ಲಿ ಉತ್ತಮ ಚಿತ್ರ ಎನಿಸಿಕೊಂಡರೂ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡುತ್ತಿಲ್ಲ. ಆದರೆ ಕಳೆದ ವಾರದ ಸತೀಶ್ ನೀನಾಸಂ ಅಭಿನಯದ ಕ್ವಾಟ್ಲೆ ಸತೀಸ ಮೆಚ್ಚುಗೆಯ ಮಾತುಗಳನ್ನಷ್ಟೇ ಗಳಿಸದೆ, ನಿರ್ಮಾಪಕರ ಥೈಲಿಯನ್ನೂ ತುಂಬುತ್ತಿದ್ದಾನೆ.  ರಿಮೇಕು, ಸ್ವಮೇಕುಗಳ ಹಂಗಿಲ್ಲದೆ ಧಿಮಾಕು ಚಿತ್ರದಿಂದ ಶುರು ಮಾಡಿ ಇಲ್ಲಿಯವರೆಗೂ ಸಾಗಿಬಂದಿರುವ ಮಹೇಶ್ ಜೊತೆಗೊಂದು ಸಣ್ಣ ಮಾತುಕಥೆ.

ನೀವು ಬರೀ ರಿಮೇಕ್ ಮಾಡಿದರೂ, ಭದ್ರ ಚಿತ್ರವನ್ನು ಹೊರತುಪಡಿಸಿದರೆ ನಿಮ್ಮ ಆಯ್ಕೆಯ ಕಥೆಗಳು ವಿಭಿನ್ನವಾಗಿರುತ್ತವೆ. ಈ ರೀತಿಯ ಆಯ್ಕೆಗೆ ಪ್ರೇರಣೆ ಏನು?
ನಾನು ಬಾಲಚಂದರ್, ಮಣಿರತ್ನಂ, ಪುಟ್ಟಣ್ಣ ಕಣಗಾಲ್, ಮಹೇಶ್‌ಭಟ್‌ರಂಥ ನಿರ್ದೇಶಕರ ಸೆನ್ಸಿಬಲ್ ಸಿನಿಮಾಗಳನ್ನು ಇಷ್ಟಪಡುವವನು. ಆ ರೀತಿಯ ಮನಸ್ಸಿಗೆ ಮುಟ್ಟುವ, ನಮ್ಮ ಸಮಾಜದಿಂದಲೇ ಹೆಕ್ಕಿ ತೆಗೆದ ಸೂಕ್ಷ್ಮ ಕಥೆಗಳು ನನಗಿಷ್ಟ. ಹಾಗಾಗಿ ಅಂಥ ಕಥೆಗಳನ್ನು ಆಯ್ದುಕೊಳ್ಳುತ್ತೇನೆ.

ಕಮರ್ಷಿಯಲ್ ಚಿತ್ರಗಳನ್ನು ಬಿಟ್ಟು ಇಂಥ ಚಿತ್ರಗಳನ್ನು ಪ್ರಯತ್ನಿಸುವುದು ರಿಸ್ಕ್ ಅನಿಸೋದಿಲ್ಲವೇ?
ರಿಸ್ಕ್ ಎಲ್ಲ ಸಿನಿಮಾಗಳಲ್ಲೂ ಇರುತ್ತೆ. ಆದ್ರೆ ಇದು ನನ್ನ ಪಾಲಿಗೆ ಬಂದಿರೋ ಯೋಗ ಅನಿಸುತ್ತೆ. ಹಾಗಾಗಿ  ಅಂಥ ಚಿತ್ರಗಳನ್ನೇ ಮಾಡುತ್ತಿದ್ದೇನೆ. ಅಂಥ ಚಿತ್ರಗಳಿಗೋಸ್ಕರ ನನ್ನನ್ನು ಹುಡುಕ್ಕೊಂಡ್ ಬರ್ತಾರೆ. ನಂಗೆ ಆ ಬಗ್ಗೆ ಹೆಮ್ಮೆ ಅನಿಸುತ್ತೆ.

ನಿಮ್ಮ ಬಳಿ ಬರೋ ನಿರ್ಮಾಪಕರು ರಿಮೇಕ್ ರೈಟ್ಸ್ ತಗೊಂಡ್ ಬರ್ತಾರಾ ಅಥವಾ ನೀವೇ ರಿಮೇಕ್ ರೈಟ್ಸ್ ತಗೊಂಡು  ನಿರ್ಮಾಪಕರ ಬಳಿಗೆ ಹೋಗ್ತೀರಾ?

ಎರಡೂ ಉಂಟು. ಭದ್ರ ಚಿತ್ರ ನಾನು ಸಜೆಸ್ಟ್ ಮಾಡಿದ್ದು. ಕೇಸ್ ನಂಬರ್ 18/9 ಚಿತ್ರ ನನಗೆ ಸಿಕ್ಕಿದ್ದು ನನ್ನ ಅದೃಷ್ಠ. ಒಂದು ಹೆಣ್ಣು ಮಗುವಿನ ತಂದೆಯಾಗಿ ನನಗೆ ಆ ಸಿನಿಮಾ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ. ಎಂದೆಂದೂ ನಿನಗಾಗಿ ಚಿತ್ರದ ನಿರ್ಮಾಪಕರು ಕೇಸ್ ನಂಬರ್ ಸಿನಿಮಾ ನೋಡಿ ನನಗೆ ಅವಕಾಶ ಕೊಟ್ಟರು. ಕ್ವಾಟ್ಲೆ ಸತೀಸ ನಾನು ಮತ್ತು ಗೆಳೆಯ, ನಿರ್ಮಾಪಕ ಸೂರಿ ಇಬ್ಬರೂ ಸೇರಿ ಡಿಸೈಡ್ ಮಾಡಿದ್ದು.

ರಿಮೇಕ್ ಮಾಡೋದು ಸುಲಭನಾ?
ಖಂಡಿತಾ ಅಲ್ಲ. ನಾನು 3 ಸ್ವಮೇಕ್ ಸಿನಿಮಾ ಮಾಡಿದ್ದೀನಿ. ಹಾಗಾಗಿ ಹೇಳ್ತೀನಿ. ರಿಮೇಕ್ ಮಾಡೋದು ಕಷ್ಟ. ಸ್ವಮೇಕ್ ಸುಲಭ. ಯಾಕಂದ್ರೆ ರಿಮೇಕ್ ಅಂದ್ರೆ ಒಂದು ಗೆರೆ ಪಕ್ಕ ಇನ್ನೊಂದು ಗೆರೆ ಎಳೆದಂತೆ. ಯಾವಾಗ್ಲೂ ಜನ ಹೋಲಿಕೆ ಮಾಡ್ತಾರೆ, ಅದರ ಥರಾನೇ ಇರಬೇಕು ಅಂತ.

ಗಾಂಧಿನಗರದಲ್ಲಿ ನಿರ್ದೇಶಕರಾಗಿ ನಿಮಗೊಂದು ಸ್ಥಾನ ಸಿಕ್ಕಿದೆ ಅಂತ ಅನ್ನಿಸ್ತಿದೆಯಾ?
ಇನ್ನೂ ಇಲ್ಲ. ಅದಕ್ಕಾಗಿ ಇನ್ನೂ ಕಷ್ಟ ಪಡ್ತಾ ಇದ್ದೀನಿ.

ಒಂದಷ್ಟು ಚಿತ್ರಗಳ ಮೂಲಕ ಸೆನ್ಸಿಬಲ್ ನಿರ್ದೇಶಕ ಅಂತ ಹೆಸರು ಗಳಿಸಿದ್ದೀರ. ಇನ್ನಾದರೂ ರಿಮೇಕ್ ಬಿಡೋ ಯೋಚನೆ ಇಲ್ಲವೇ?
ನನಗೆ ರಿಮೇಕೇ ಮಾಡಬೇಕು ಅಂತನೂ ಇಲ್ಲ. ಸ್ವಮೇಕೇ ಮಾಡಬೇಕು ಅಂತಾನೂ ಇಲ್ಲ. ನಾನು ಹುಡುಕೋದು ಒಳ್ಳೆಯ ಕಥೆಯನ್ನು ಅಷ್ಟೆ. ಈಗ ನನ್ನ ಮುಂದಿನ 'ಪ್ರಚಂಡ' ಚಿತ್ರಕ್ಕೆ ನಮ್ಮವರೇ ಆದ ಗೌಸ್‌ಪೀರ್ ಬರೆದಿರುವ ಕಥೆ ಇದೆ. ಅದು ಒರಿಜಿನಲ್ ಸಿನಿಮಾ. ನನಗೆ ಒಳ್ಳೆಯ ಕಥೆ ಎಲ್ಲಿ ಸಿಕ್ಕಿದ್ರೂ ಓಕೆ.

ಎಂದೆಂದೂ ನಿನಗಾಗಿ ಮತ್ತು ಕ್ವಾಟ್ಲೆ ಸತೀಶ ಚಿತ್ರಗಳ ಬಾಕ್ಸ್ ಆಫೀಸ್ ರಿಪೋರ್ಟ್ ಏನು ಹೇಳುತ್ತಿದೆ?
ಮೆಚ್ಚುಗೆಯ ಅಭಿಪ್ರಾಯಗಳು ಎರಡೂ ಚಿತ್ರಗಳಿಗೂ ಸಮನಾಗಿ ಬಂದಿವೆ. ಆದರೆ ಎಂದೆಂದೂ ನಿನಗಾಗಿ  ಅಂದುಕೊಂಡಷ್ಟು ಸಕ್ಸಸ್ ನೋಡಲಿಲ್ಲ. ಆದರೆ ಕ್ವಾಟ್ಲೆ ಸತೀಶ್ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಸದ್ದು ಮಾಡುತ್ತಿದೆ.

ಸದ್ಯಕ್ಕೆ ಮುಂದಿರುವ ಚಿತ್ರಗಳು?
ಸದ್ಯಕ್ಕೆ ಲೂಸ್ ಮಾದ ಯೋಗೀಶ್‌ರ ಪ್ರಚಂಡ ಚಿತ್ರ ಮಾಡ್ತಾ ಇದ್ದೀನಿ. ಅದಾದ ನಂತರ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮಾಡುತ್ತೇನೆ. ಆದರೆ ಅದರ ಬಗ್ಗೆ ಇನ್ನೂ ಏನೂ ನಿರ್ಧಾರ ಆಗಿಲ್ಲ.

ಇಲ್ಲಿಯವರೆಗೆ ನೀವು ಮಾಡಿರುವ ಚಿತ್ರಗಳಲ್ಲಿ ನಿಮ್ಮ ಫೇವರೆಟ್ ಚಿತ್ರ ಯಾವುದು?
ನಾನು ಎಲ್ಲ ಚಿತ್ರಗಳಿಗೂ ನನ್ನ ಜೀವ ತೇದು ಕೆಲಸ ಮಾಡುತ್ತೇನೆ. ಹಾಗಾಗಿ ಯಾವುದಾದರೂ ಒಂದು ಚಿತ್ರದ ಹೆಸರು ಹೇಳೋದು ಕಷ್ಟ. ಅಲ್ಲದೆ ಬಿಡುಗಡೆಯ ಸಮಯದಲ್ಲಿ ಒಂದು ಸಿನಿಮಾದ ಸಕ್ಸಸ್ ಮೇಲೆ ಎಲ್ಲವನ್ನೂ ಅಳೆಯೋಕಾಗಲ್ಲ. ಸಿನಿಮಾ ಟಿವಿಯಲ್ಲಿ ಬಂದಾಗಲೂ ನನಗೆ ಅದ್ಭುತ ಪ್ರತಿಕ್ರಿಯೆಗಳು ಬರುತ್ತವೆ. ಹಾಗಾಗಿ ನನ್ನ ಎಲ್ಲ ಚಿತ್ರಗಳನ್ನೂ ನಾನು ಗೌರವಿಸುತ್ತೇನೆ.


- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.