ರೆಬೆಲ್ ಶೋ
ವೇದಿಕೆಯ ಮೇಲೆ ರೆಬೆಲ್ ಚಿತ್ರದ ಹಾಡುಗಳ ಬಿಡುಗಡೆಗೆ ಎಲ್ಲ ಸಿದ್ಧತೆಗಳೂ ನಡೆಯುತ್ತಿದ್ದರೆ ಕೆಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸಿನಿಮಾ ಕಾರ್ಯಕ್ರಮ ...

ವೇದಿಕೆಯ ಮೇಲೆ ರೆಬೆಲ್ ಚಿತ್ರದ ಹಾಡುಗಳ ಬಿಡುಗಡೆಗೆ ಎಲ್ಲ ಸಿದ್ಧತೆಗಳೂ ನಡೆಯುತ್ತಿದ್ದರೆ ಕೆಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸಿನಿಮಾ ಕಾರ್ಯಕ್ರಮ ಮುಗಿಸಿ ತಮ್ಮ ಕರ್ತವ್ಯ ನಿರ್ವಹಿಸುವ ತರಾತುರಿಯಲ್ಲಿ ತುದಿಗಾಲಿನಲ್ಲಿ ನಿಂತಿದ್ದರು.
ಅಂದಹಾಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಿದ್ದರಾಮಯ್ಯ ಅವರು ಭಾಗವಹಿಸಿದ ಮೊದಲ ಸಿನಿಮಾ ಸಮಾರಂಭ ಅದು ಎನ್ನುವ ಖ್ಯಾತಿ ರೆಬೆಲ್ ಚಿತ್ರದ್ದಾಯಿತು. ಹಾಗೆ ನೋಡಿದರೆ ಅದು ರೆಬೆಲ್‌ಗಳ ದಿನವಾಗಿತ್ತು. ರೆಬೆಲ್ ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ರಾಜಕೀಯದಲ್ಲಿ ತಮ್ಮ ಆರ್ಭಟಕ್ಕೆ ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಜವಾದ ರೆಬೆಲ್ ಎಂದರೆ ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಚಿತ್ರರಂಗದ ರೆಬೆಲ್‌ಸ್ಟಾರ್ ಅಂಬರೀಶ್ ತಮ್ಮ ಮೀಸೆಯ ಮೇಲೆ ಕೈಯಾಡಿಸುತ್ತಿದ್ದರು. ರೆಬೆಲ್ ಚಿತ್ರದ ಹಾಡೊಂದಕ್ಕೆ ಸಿದ್ದರಾಮಯ್ಯ ಅವರ ರಾಜಕೀಯ ದಿನಗಳ ವಿಡಿಯೋ ಸೇರಿಸಿ ಮುಖ್ಯಮಂತ್ರಿಗಳಿಗೊಂದು ಅನಧಿಕೃತ ಸನ್ಮಾನವನ್ನೂ ಮಾಡಿದರು ರಾಜೇಂದ್ರಸಿಂಗ್ ಬಾಬು.
ವೇದಿಕೆಯ ಮೇಲೆ ಚಿತ್ರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಜನರೇ ನನ್ನ ಚಿತ್ರದ ಬಗೆಗೆ ಮಾತನಾಡಲಿ ಎಂದ ಸಿಂಗ್ ಬಾಬು ಚಿತ್ರರಂಗದ ಪರವಾಗಿ ಮುಖ್ಯಮಂತ್ರಿಗಳಿಗೆ ಒಂದಷ್ಟು ಮನವಿ ಪಟ್ಟಿಯನ್ನು ಸಲ್ಲಿಸಿದ್ದು ಮತ್ತು ಅದಕ್ಕೆ ಮುಖ್ಯಮಂತ್ರಿಗಳ ಕಡೆಯಿಂದ ಪರಿಶೀಲಿಸುತ್ತೇನೆ ಎಂಬ ಪ್ರತಿಕ್ರಿಯೆ ದೊರೆತಿದ್ದಕ್ಕೆ ಅಂದಿನ ವೇದಿಕೆ ಸಾಕ್ಷಿಯಾಯಿತು. ರೆಬೆಲ್ ಚಿತ್ರದ ನಾಯಕ ಆದಿತ್ಯ ವಿಭಿನ್ನವಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡು ರೆಬೆಲ್ ಚಿತ್ರದ ಝಲಕ್ ತೋರಿಸಿದರು. ಅದಕ್ಕೂ ಮುಂಚೆ ಕೆಎಸ್‌ಐಸಿ ವತಿಯಿಂದ ಸಾಂಪ್ರದಾಯಿಕ ಫ್ಯಾಷನ್ ಶೋ ಕಾರ್ಯಕ್ರಮವೂ ಇತ್ತು. ಕಾರ್ಯಕ್ರಮ ಶುರುವಾದ ಮೇಲೆ ಸೇರಿಕೊಂಡ ರೆಬೆಲ್ ಚಿತ್ರದ ನಟಿ ಸಂಜನಾ ಮತ್ತು ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ಗ್ಲಾಮರ್ ತಂದುಕೊಟ್ಟರು.
ಇದೇ ಸಮಯದಲ್ಲಿ ನಟ, ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅವರ ಕಾಮೆಂಟರಿ ಇದ್ದ ಡಾ. ವಿಷ್ಣುವರ್ಧನ್ ಅವರ ಬಗೆಗಿನ ವಿಡಿಯೋ ಮೂಲಕ ಸಾಹಸ ಸಿಂಹನಿಗೆ ಹುಟ್ಟುಹಬ್ಬದ ಗೌರವ ಸಲ್ಲಿಸಲಾಯಿತು. ಬಳಿಕ ರೆಬೆಲ್‌ಸ್ಟಾರ್ ಅಂಬರೀಶ್ ಮಾತನಾಡಿ ವಿಷ್ಣು ಸ್ಮಾರಕ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂಬ ಭರವಸೆ ಕೊಟ್ಟರು.
ಸಚಿವರಾದ ಸಂತೋಷ್ ಲಾಡ್, ಮಹದೇವ್ ಪ್ರಸಾದ್, ಅವರೊಂದಿಗೆ ಅಶೋಕ್ ಖೇಣಿ, ಆನಂದ್ ಆಡಿಯೋದ ಮೋಹನ್, ಸಿಂಗ್‌ಬಾಬು ಅವರ ತಾಯಿ ಪ್ರತಿಮಾ ದೇವಿ, ಕುಟುಂಬದವರಾದ ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್ ಮುಂತಾದವರು ರೆಬೆಲ್ ಬಿಡುಗಡೆಗೆ ಸಾಕ್ಷಿಯಾಗಿದ್ದರು.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


