ಸಿನಿಮಾ ಲೇಖನ

ಶಾರ್ಟ್ ಕಟ್

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎಂಬ ಹಾಡಿನ ವಿಷಾದ ಇಲ್ಲಿಲ್ಲ. ಬೆರಳು ತೋರಿಸಿದರೆ ಹಸ್ತ ನುಂಗುವ ಚಾಲಾಕಿತನ...

ಶಾರ್ಟ್ ಕಟ್
Published On :

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎಂಬ ಹಾಡಿನ ವಿಷಾದ ಇಲ್ಲಿಲ್ಲ. ಬೆರಳು ತೋರಿಸಿದರೆ ಹಸ್ತ ನುಂಗುವ ಚಾಲಾಕಿತನ ಇದಲ್ಲ. ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಕಿ ಕೊಟ್ಟರು ಎಂಬಂಥ ಉದಾಹರಣೆಯೂ ಇದಲ್ಲ. ಆದರೆ ಕಾಲಿಗೆ ತಕ್ಕಂತೆ ಹಾಸಿಗೆ ತಯಾರು ಮಾಡಿಸಿಕೊಳ್ಳುವ ಅವಕಾಶ ಈ ಕಿರಿಯರ ತಂಡಕ್ಕೆ ಸಿಕ್ಕಿದೆ ಎನ್ನುವುದು ಇಲ್ಲಿನ ವಿಶೇಷ.
ರೋಹಿತ್ ಪಡಕಿ, ನವೀನ್‌ಕುಮಾರ್, ಸುಹಾಸ್, ಆದಿತ್ಯ ಎಂಬ ಹುಡುಗರು ವರ್ಷದ ಹಿಂದೆ ಒಂದು ಶಾರ್ಟ್ ಫಿಲ್ಮ್ ಮಾಡಬೇಕು ಎಂದುಕೊಂಡವರು ಮತ್ತು ಅಂದುಕೊಂಡದ್ದನ್ನು ಮಾಡಿದವರು ಕೂಡ. ಆದರೆ ಸುಮ್ಮನೇ ತಮ್ಮ ಖುಷಿಗಾಗಿ ಎಂದು ಮಾಡಿಕೊಂಡ ಈ ಕಿರುಚಿತ್ರ ಈಗ ಬೆಳೆದು ದೊಡ್ಡದಾಗಿ ರೆಗ್ಯುಲರ್ ಸಿನಿಮಾ ಆಗಿ ಬಿಡುಗಡೆಯಾಗುವ ಹಂತಕ್ಕೆ ಬಂದಿರುವ ಕಥೆ ಮಾತ್ರ ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಎಂಬ ಈ ಚಿತ್ರದ ಕಥೆಯಷ್ಟೇ ಕುತೂಹಲಭರಿತವಾದದ್ದು. ಆದರೆ ಚಿತ್ರದ ಶೀರ್ಷಿಕೆಗೆ ವಿರುದ್ಧವಾಗಿ ಎಷ್ಟರಲ್ಲೂ ಮಿಸ್ ಆಗದೆ  ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದ ಪ್ರತಿಕ್ರಿಯೆ, ವೇದಿಕೆ ಈ ತಂಡಕ್ಕೆ ಸಿಕ್ಕಿದೆ.
ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಎಂಬ ಈ ಚಿತ್ರ ಝೀರೋ ಬಜೆಟ್ ಚಿತ್ರ ಎಂಬ ಹೊಸ ಕಾನ್ಸೆಪ್ಟ್‌ಗೆ ನಾಂದಿ ಹಾಡಿರುವುದು ವಿಶೇಷ. ಅದು ಸಹಜ ಕೂಡ. ನಾಲ್ಕಾರು ಸಿನಿಮಾಸಕ್ತರು ಸೇರಿಕೊಂಡು ಒಂದು ಶಾರ್ಟ್ ಪಿಲ್ಮ್ ಮಾಡೋಣ ಎಂದುಕೊಂಡಾಗ ಅವರವರ ಖರ್ಚುಗಳಿಗೆ ಅವರೇ ಜವಾಬ್ದಾರರು ಎಂಬಂತೆ ಈ ಚಿತ್ರ ಶುರುವಾಗಿದ್ದಂತೆ. ಚಿತ್ರದ ನಾಯಕ ನವೀನ್ ಕುಮಾರ್. ಅವರು ಈ ಚಿತ್ರಕ್ಕೆ ಸಂಕಲನಕಾರ ಕೂಡ. ನಾಯಕಿ ಅಪೇಕ್ಷಾ. ಚಿತ್ರಕಥೆ ನಿರ್ದೇಶನದ ಹೊಣೆ ರೋಹಿತ್ ಪಡಕಿ ಅವರದ್ದು. ಇಮ್ಯಾನುಯಲ್ ರಿಚರ್ಡ್- ತೇಜಸ್ ಸಂಗೀತ ನಿರ್ದೇಶನ, ನಾಗಾರ್ಜುನ ಛಾಯಾಗ್ರಹಣ, ರೋಹಿತ್ ಪಡಕಿ, ಆದಿತ್ಯ ರವೀಶ್ ಅವರ ಕಥೆ, ಇದ್ಯಾವುದೂ ಸಂಭಾವನೆ ಇಲ್ಲದೆ ಎಲ್ಲರೂ ಶುರುಮಾಡಿದ ಕೆಲಸ. ಛಾಯಾಗ್ರಹಕರದ್ದೇ ಕ್ಯಾಮೆರಾ. ಚಿತ್ರೀಕರಣದ ಸಮಯದಲ್ಲಿ ಸಿಕ್ಕಿದ್ದೇ ಲೈಟಿಂಗ್, ಶೂಟಿಂಗ್ ಜಾಗಕ್ಕೆ ಅವರದ್ದೇ ಖರ್ಚಿನಲ್ಲಿ ಹೋಗುವ ನಟ ನಟಿಯರು,ತಂತ್ರಜ್ಞರು, ಮನೆಯ ಡ್ರಾಯಿಂಗ್ ರೂಮ್‌ನಲ್ಲೇ ಸಂಕಲನ ಹೀಗೆ ಯಾವುದಕ್ಕೂ ತಾಂತ್ರಿಕವಾಗಿ ದುಡ್ಡು ಹಾಕದೆ ಎಷ್ಟಿದೆಯೋ ಅಷ್ಟರಲ್ಲೇ ಮುಗಿಸಿಬಿಡೋಣ ಎಂಬ ಕಾನ್ಸೆಪ್ಟ್ ಈ ತಂಡದ್ದು. ಆದರೆ ಅಂತಿಮವಾಗಿ ಹೊರಬಂದಿರುವ ಪ್ರಾಡಕ್ಡ್ ಮಾತ್ರ ಎಲ್ಲರೂ ಹುಬ್ಬೇರಿಸುವಂಥದ್ದು.
ಮೊದಲು ಶಾರ್ಟ್ ಫಿಲ್ಮ್‌ನ ಹಂತದಲ್ಲಿ ಚಿತ್ರದ ಅವಧಿ ಕಡಿಮೆಯೇ ಇತ್ತು. ಚಿತ್ರದಲ್ಲಿ ಯಾವ ದೊಡ್ಡ ನಟನಟಿಯರಿಲ್ಲದಿದ್ದರೂ ಚಿತ್ರದ ತಾಯಿ ಪಾತ್ರಕ್ಕೆ ಗಿರಿಜಾ ಲೋಕೇಶ್ ಅವರಿದ್ದರೆ ಚೆನ್ನ ಎಂದುಕೊಂಡ ಚಿತ್ರತಂಡ ಅವರನ್ನು ಸಂಪರ್ಕಿಸಿ ನಮ್ಮ ಬಳಿ ನಿಮಗೆ ಕೊಡುವಷ್ಟು ದುಡ್ಡಿಲ್ಲ ಎಂದು ಹಿಂಜರಿಕೆಯಿಂದ ಹೇಳಿದರೂ, ಚಿತ್ರದ ಕಥೆ ಕೇಳಿದ ಗಿರಿಜಾ ಲೋಕೇಶ್ ಒಂದು ಪೈಸೆ ಸಂಭಾವನೆ ಪಡೆಯದೆ ಅಭಿನಯಿಸಲು ಒಪ್ಪಿಕೊಂಡಿದ್ದಲ್ಲದೆ,
ತಾವೇ ಬಂದು ಡಬ್ಬಿಂಗ್ ಅನ್ನೂ ಮುಗಿಸಿಕೊಟ್ಟಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಚಿತ್ರದ ಟ್ರೈಲರ್ ನೋಡಿದ ಯೋಗರಾಜಭಟ್ಟರ ಶಿಷ್ಯರು ಅದನ್ನು ಭಟ್ಟರಿಗೆ ತೋರಿಸಿದ್ದಾರೆ. ತಕ್ಷಣ ಭಟ್ಟರು ನಿಮ್ಮನ್ನು ನೋಡಬೇಕಂತೆ ಎಂಬ ಬುಲಾವ್ ಬಂತು ಚಿತ್ರತಂಡಕ್ಕೆ. ಮೊದಲ ಮೊದಲು ಇದು ಯಾರದ್ದೋ ಕೀಟಲೆ ಎಂದುಕೊಂಡ ಸುಮ್ಮನಾದವರಿಗೆ ಮರುದಿನ ಅದು ನಿಜ ಎಂಬುದು ಅರಿವಿಗೆ ಬಂತು. ಮುಂದೆ ಆಗಿದ್ದೆಲ್ಲಾ ಈಗ ಇತಿಹಾಸ. ಭಟ್ಟರು ಇವರ ಚಿತ್ರ ನೋಡಿ ಚೆನ್ನಾಗಿದೆ, ಮಾಡೋದ್ ಮಾಡಿದೀರ, ಅಷ್ಟರಲ್ಲೇ ಯಾಕೆ ತೃಪ್ತಿ ಪಟ್ಕೊತೀರಾ, ದೊಡ್ಡ ಸಿನಿಮಾನೇ ಮಾಡಿ, ಬಿಡುಗಡೆ ಮಾಡಿ ಎಂದು ಹೇಳಿದ ಮೇಲೆ ಈಗ ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಎರಡು ಗಂಟೆಯ  ಅವಧಿಗೆ ವಿಸ್ತರಣೆಯಾಗಿದೆ. ಆದರೆ ನಮ್ಮ ಬಳಿ ಒಂದು ಬ್ಯಾನರ್‌ನ ಹೆಸರಿಲ್ಲ ಎಂದಾಗ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ, ಅಯ್ಯೋ,  ಮಗು ಹಡೆದಿದೀರ ಇನ್ಮೇಲೆ ನೀವು ಬಸುರಾಗಬೇಕು ಎಂಬ ಡೈಲಾಗ್ ಹೊಡೆದು ತಮ್ಮದೇ ಬ್ಯಾನರ್ ಹೆಸರನ್ನು ಬಳಸಿಕೊಳ್ಳಿ ಎನ್ನುವಷ್ಟು ಧಾರಾಳಿಯಾಗಿದ್ದಾರೆ. ಹಾಗಾಗಿ ಈಗ ಆನೆಪಟಾಕಿ ಸುರೇಶ್ ಈ ಚಿತ್ರವನ್ನು ತಮ್ಮ ಅನನ್ಯ ಐಶ್ವರ್ಯ ಕ್ರಿಯೇಶನ್ ಮೂಲಕ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ, ಅದಲ್ಲದೆ ತಮಗಾಗಿ ಇನ್ನೊಂದು ಚಿತ್ರವನ್ನು ಮಾಡಿಕೊಡಿ ಎಂದು ಅಷ್ಟ್ರಲ್ಲೇ ಜಸ್ಟ್ ಮಿಸ್ಸು ತಂಡಕ್ಕೆ ಆಫರ್ ಕೊಟ್ಟಿದ್ದಾರೆ ಎಂಬಲ್ಲಿಗೆ ಈ ಶಾರ್ಟ್ ಫಿಲ್ಮ್‌ನ ಲಾಂಗ್ ಸ್ಟೋರಿ ಮುಗಿಯುತ್ತದೆ.
 ಬಸವರಾಜ ಕಟ್ಟಿ, ಆದಿತ್ಯ ರವೀಶ್, ಸುಹಾಸ್ ಸುಯಮೀಂದ್ರ ಮುಂತಾದವರ ತಾರಾಗಣವಿರುವ ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಚಿತ್ರಕ್ಕೆ ರೋಹಿತ್ ಪಡಕಿ, ಸುಹಾಸ್ ಸುಯಮೀಂದ್ರ ಅವರ ಸಾಹಿತ್ಯ ಮತ್ತು ಸಂಭಾಷಣೆ ಇದೆ. ಇದಲ್ಲದೆ ಈಗಾಗಲೇ ಇಂಟರ್‌ನೆಟ್‌ನಲ್ಲಿ ಸುದ್ದಿ ಮಾಡುತ್ತಿರುವ ಈ ಚಿತ್ರದ ಟ್ರೈಲರ್‌ನ ಆರಂಭದಲ್ಲಿ ಯೋಗರಾಜ್ ಭಟ್ ತಮ್ಮದೇ ಶೈಲಿಯಲ್ಲಿ ಬರೆದಿರುವ ಶಾರ್ಟ್ ಕಾಮೆಂಟರಿ ಕೂಡ ಇದೆ. ಮತ್ತದು ಅವರದೇ ಕಂಠದಲ್ಲಿದೆ ಎಂಬುದು ಡಬಲ್ ವಿಶೇಷ.
ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಎಂಬ ಚಿತ್ರದ ಮೂಲಕ ತಮ್ಮ ಶಾರ್ಟ್ ಕನಸುಗಳನ್ನು ದೊಡ್ಡದಾಗಿಸಿಕೊಂಡ ಹುಡುಗರ ಕಥೆ ಇದು. ಹಾಗಂತ ಇದು ಶಾರ್ಟ್ ಕಟ್ ಅಲ್ಲ. ಈ ತಂಡದ ಒಂದು ವರ್ಷದ ಪರಿಶ್ರಮ ಇಲ್ಲಿದೆ. ಅವರಲ್ಲಿ ಕೆಲವರು ಕೆಲವರು ಓದು ಮುಗಿಸಿ ಕೆಲಸ  ಹುಡುಕದೆ ಇಲ್ಲೇನಾದ್ರೂ ಮಾಡೋಣ ಎಂಬ ಉತ್ಸಾಹ ಇರುವವರು. ಇನ್ನು ಕೆಲವರು ಇರುವ ಕೆಲಸಕ್ಕೆ ಟೆಂಪರರಿ ಬ್ರೇಕ್ ಹಾಕಿ ಬಂದವರು. ಅವರ ಈ ಪ್ರಾಮಾಣಿಕ ಪ್ರಯತ್ನ ಫಲ ಸಿಕ್ಕು, ಚಿತ್ರರಂಗದಲ್ಲಿ ಅವರಿಗೆ ಪರ್ಮನೆಂಟ್ ಕೆಲಸ ಸಿಗುವಂತಾದರೆ ಮಾಡಿದ್ದೂ ಸಾರ್ಥಕ.

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.