ಕಮಾನ್ ಕೌರವ

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಬಿ.ಸಿ. ಪಾಟೀಲ್ ಅವರಿಗೆ ಈಗ 20 ವರ್ಷ! ಹೀಗಂತ ಹೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿಗೊಳ್ಳುವವರೇ ಹೆಚ್ಚು. ಇಬ್ಬರ ಹೆಣ್ಣು ಮಕ್ಕಳ ತಂದೆ. ಒಬ್ಬರಿಗೆ ಮದುವೆಯಾಗಿದೆ. ಮತ್ತೊಬ್ಬಳು ಆಗಲೇ ಅಪ್ಪನ ಬುಜ ಮೀರಿ ಬೆಳೆದಿದ್ದಾಳೆ. ಆದರೂ ಪಾಟೀಲ್‌ರಿಗೆ 20! ಛೇ, ಛೇ ಅಂತ ಗೊಣಗಬೇಡಿ. ಅವರ ಈ ಇಪ್ಪತ್ತು ಚಿತ್ರರಂಗಕ್ಕೆ ಸಂಬಂಧಿಸಿದ್ದು, ವಯಸ್ಸಿಗೆ ಅಲ್ಲ. ಹೌದು, ಕನ್ನಡ ಸಿನಿ ಪ್ರೇಕ್ಷಕರ ಹೃದಯದಲ್ಲಿ ಈಗಲೂ 'ಕೌರವ'ನಾಗಿ ಪ್ರೀತಿ ಗಳಿಸಿರುವ ಬಿ.ಸಿ. ಪಾಟೀಲ್ ಚಿತ್ರರಂಗಕ್ಕೆ ಬಂದು 20 ವರ್ಷ ಆಗಿದೆ. ಈ ಇಪ್ಪತ್ತರ ಸಂಭ್ರಮದಲ್ಲಿರುವ ಪಾಟೀಲ್ ಮತ್ತೆ ಸಕ್ರೀಯವಾಗಿ ಚಿತ್ರರಂಗಕ್ಕೆ ಮರಳುವ ನಿರ್ಧಾರ ಮಾಡಿದ್ದಾರೆ. ಈ ವಿಷಯ ಹೇಳಿಕೊಳ್ಳಲು ಮಾಧ್ಯಮಗಳ ಮುಂದೆ ತಮ್ಮ ನಿವಾಸದಲ್ಲಿ ಕುಟುಂಬಸಮೇತರಾಗಿ ಹಾಜರಾದರು ಪಾಟೀಲರು. 'ಜನ ನನ್ನ ಯಾಕೆ ಮಂತ್ರಿ ಆಗಲಿಲ್ಲ ಅಂತ ಕೇಳುತ್ತಿಲ್ಲ. ಬದಲಾಗಿ ಮತ್ತೆ ಯಾಕೆ 'ಕೌರವ'ದಂತಹ ಮತ್ತೊಂದು ಚಿತ್ರ ಮಾಡಲಿಲ್ಲ ಅಂತ ಕೇಳುವವರೇ ಹೆಚ್ಚು. 'ಕೌರವ'ಕ್ಕೆ ಸಾವಿಲ್ಲ' ಎಂದ ಪಾಟೀಲ್, ಕೌರವ-2 ಮಾಡುತ್ತಿರುವುದಾಗಿ ಘೋಷಿಸಿದರು. ಈ ಚಿತ್ರವನ್ನು ಮಹೇಂದರ್ ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ಹೊಸ ಸುದ್ದಿಯಾದರೆ, ಪಾಟೀಲ್‌ರ ಎರಡನೇ ಪುತ್ರಿ ಸೃಷ್ಠಿ ಕೂಡ ಸದ್ಯದಲ್ಲೇ ಚಿತ್ರರಂಗಕ್ಕೆ ಬರುತ್ತಾರೆಂಬ ಸೂಚನೆ ಬಿಟ್ಟುಕೊಟ್ಟರು.
'ಇಲ್ಲಿ ಕಳೆದುಕೊಂಡಿದ್ದು ಇದೆ, ಪಡೆದುಕೊಂಡಿದ್ದು ಇದೆ' ಎಂದು ಮೀಸೆ ತಿರುವಿಕೊಂಡ ಪಾಟೀಲ್, ಹಣ ಕಳೆದುಕೊಂಡರೆ, ಹೆಸರು ಪಡೆದುಕೊಂಡಿರುವುದಾಗಿ ಹೇಳಿದರು. 1993ರಲ್ಲಿ 'ನಿಷ್ಕರ್ಷ' ಮೂಲಕ ಚಿತ್ರರಂಕ್ಕೆ ಬಂದೆ, 2003ರಲ್ಲಿ ರಾಜಕೀಯಕ್ಕೆ ಹೋದೆ, ಈಗ 2013ರಲ್ಲಿ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದೇನೆ. 'ಪುಂಗಿದಾಸ', 'ಒಂದ್ ಚಾನ್ಸ್ ಕೊಡಿ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಇನ್ನು ಮುಂದೆ ಚಿತ್ರರಂಗದಲ್ಲಿ ಸಕ್ರೀಯವಾಗಿರುತ್ತೇನೆ. ನನಗೆ ಲೈಫ್ ಕೊಟ್ಟ 'ಕೌರವ' ಚಿತ್ರದ ಭಾಗ-2 ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸಿನಿಮಾ, ರಾಜಕೀಯ, ಪತ್ರಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ನನ್ನದೇ ಛಾಪು ಮೂಡಿಸಿದ್ದೇನೆ. ನನ್ನ ಊರಿನಲ್ಲಿ ಕೌರವ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದೇನೆ. ಅಧಿಕಾರದಲ್ಲಿದ್ದಾಗ ಊರಿಗೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ. ಈಗ ಖಾಲಿ ಕೂರಕ್ಕಾಗುತ್ತಿಲ್ಲ. ಹೀಗಾಗಿ ಚಿತ್ರರಂಗಕ್ಕೆ ಮರಳುತ್ತಿದ್ದೇನೆ. ಮುಂದೆ ನನ್ನದೇ ಬ್ಯಾನರ್ ಸೇರಿದಂತೆ ಬೇರವರ ಚಿತ್ರಗಳಲ್ಲಿ ಅಭಿನಯ, ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಸುಧೀರ್ಘವಾಗಿ ತಮ್ಮ ಸಿನಿಮಾ ಕನಸುಗಳನ್ನು ಬಿಚ್ಚಿಟ್ಟರು ಪಾಟೀಲ್.
ಪಕ್ಕದಲ್ಲೇ ನಿಂತಿದ್ದ ಮಕ್ಕಳಿಬ್ಬರನ್ನು ಪತ್ರಕರ್ತರಿಗೆ ಪರಿಚಯಿಸುತ್ತಿದ್ದಂತೆಯೇ 'ಮಗಳು ಚಿತ್ರರಂಗಕ್ಕೆ ಬರುತ್ತಾರೆಯೇ?' ಎನ್ನುವ ಪ್ರಶ್ನೆ ತೂರಿ ಬಂತು. 'ಸದ್ಯ ಆಕೆ ಬಿಬಿಎಂ ಮುಗಿಸಿದ್ದಾಳೆ. ಎಂಬಿಎ ಮಾಡುವ ಆಸೆ ಇದೆ. ಆದರೆ ಚಿತ್ರರಂಗಕ್ಕೆ ಬರುತ್ತೇನೆ ಎಂದರೆ ನನ್ನದೇನು ಅಭ್ಯಂತರವಿಲ್ಲ. ಒಳ್ಳೆಯ ಕಥೆ, ಬ್ಯಾನರ್ ಸಿಕ್ಕರೆ ಖಂಡಿತ ನನ್ನ ಮಗಳು ಅಭಿನಯಿಸುತ್ತಾಳೆ' ಎಂದರು ಪಾಟೀಲ್. ಸಿನಿಮಾ ಜೊತೆಗೆ ಮುಂದೆಯೂ ರಾಜಕೀಯದಲ್ಲಿರುವುದಾಗಿ, ಪಕ್ಷ ಟಿಕೆಟ್ ಕೊಟ್ಟರೆ ಎಂಪಿ ಚುನಾವಣೆಗೆ ಸ್ಪರ್ಧಿಸುವುದಾಗಿ ಪಾಟೀಲ್ ಹೇಳಿಕೊಂಡರು. ಸದ್ಯದಲ್ಲೇ 'ಕೌರವ-2' ಸೆಟ್ಟೇರಲಿದ್ದು, ತಮ್ಮ ಹಳೆ ದಿನಗಳ ಪರ್ವ ಮರಳಿ ಬರಲಿದೆ ಎನ್ನುವ ಆಸೆಯೊಂದಿಗೆ ಮಾತು ಮುಗಿಸಿದರು ಪಾಟೀಲ್.
- ಕೇಶವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


