ಉಪ್ಪಿ ಸೂಪರ್

ತೆಲುಗಿನ 'ಕಿಕ್' ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತದೆಂಬುದು ಹೊಸ ಸುದ್ದಿಯೇನಲ್ಲ. ಓಬಿರಾಯನ ಕಾಲದಿಂದಲೂ ಅದು ಚಾಲ್ತಿಯಲ್ಲಿದೆ. ಆದರೆ, ಹೊಸ ವಿಚಾರ 'ಕಿಕ್' ಚಿತ್ರ, ರಿಯಲ್ ಸ್ಟಾರ್ ಉಪೇಂದ್ರ ಪಾಲಿಗೆ ಒಲಿದಿದೆ. ನಟ ಸುದೀಪ್ 'ಕನ್ವರ್‌ಲಾಲ್' ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ತುಂಬಾ ಹಿಂದೆ ಕೇಳಿದ್ದೀರಿ. ಆಗಲೇ 'ಕಿಕ್' ಕನ್ನಡಕ್ಕೆ ಆಮದಾಗುವ, ಅದನ್ನು ಎನ್.ಕುಮಾರ್ ನಿರ್ಮಾಣ ಮಾಡತ್ತಾರೆ, ಸುದ್ದೀಪ್ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಹಬ್ಬಿತು. ಆದರೆ ಈ ಚಿತ್ರದ ರಿಮೇಕ್ ಹಕ್ಕು ಯಾವಾಗ ಕೆ. ಮಂಜುರ ಕಾಂದಾನಕ್ಕೆ ಹೋಯಿತೋ ಗೊತ್ತಿಲ್ಲ. ಮಂಜು ತನ್ನದೇ ಗ್ಯಾಂಗ್ ಕಟ್ಟಿಕೊಂಡು 'ಸಾಧು ಮಹರಾಜ್, ಆದಷ್ಟು ಬೇಗ ಈ ಚಿತ್ರ ಮಾಡಿಕೊಡಿ. ಪ್ರಪಂಚ ಪ್ರಳಯವಾಗಲಿ ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕು. ನಿನಗೆ ಏನು ಬೇಕೋ ಕೇಳು. ತಗೋ ಉಪೇಂದ್ರರನ್ನು' ಎಂದಿದ್ದೇ ತಡ ಸಾಧು ನಿರ್ದೇಶನದ ಕ್ಯಾಪ್ ತೊಟ್ಟು ಚಿತ್ರಕ್ಕೆ ಮುಹೂರ್ತ ಮತ್ತು ಚಿತ್ರೀಕರಣ ಆರಂಭಿಸಿದ್ದಾರೆ. ಇದಪ್ಪ, 'ಸೂಪರೋ ರಂಗ' ಚಿತ್ರದ ಆರಂಭದ ಹಿಂದಿನ ಸ್ಮಾಲ್ ಪೀಠಿಕೆ.
ಭಾನುವಾರ ಎನ್ನದೆ ಬೆಳಗ್ಗಿನಿಂದಲೇ ಖಾಸಗಿ ಹೋಟೆಲ್‌ನಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ದೇಶಕ ಸಾಧುಕೋಕಿಲಾರ ಬೆನ್ನಿಗೆ ಛಾಯಾಗ್ರಾಹಕ ಅಶೋಕ್ ಕಶ್ಯಪ್, ಸಾಹಸಕ್ಕೆ ಥ್ರಿಲ್ಲರ್ ಮಂಜು, ನಾಯಕಿಯಾಗಿ ಕೃತಿ ಕರಬಂಧ, ಎರಡನೇ ನಾಯಕನಾಗಿ ರಘು ಮುಖರ್ಜಿ, ಪ್ರಿಯಾಂಕ ಹಾಗೂ ಪೋಷಕ ಪಾತ್ರಗಳ ವಿಭಾಗದಲ್ಲಿ ದೊಡ್ಡಣ್ಣ, ಬುಲೆಟ್ ಪ್ರಕಾಶ್, 'ಸಿದ್ಲಿಂಗು' ಶ್ರೀಧರ್, ಮಿಮಿಕ್ರಿ ದಯಾನಂದ್ ಮುಂತಾದ ಕಲಾವಿದರ ದಂಡೇ ಅಲ್ಲಿತ್ತು. ಅವಸರದ ಚಿತ್ರಾನ್ನವಾದರೂ ಹದವಾಗಿ ಮಾಡಲು ತಾನು ಸಿದ್ಧವಿರುವುದಾಗಿ ಹೇಳಿಕೊಂಡ ಸಾಧು, ಇದು ನಿರ್ಮಾಪಕರ ತುಂಬಾ ವರ್ಷಗಳ ಕನಸು. ಅವರ ನಿರೀಕ್ಷೆಯಂತೆ ಚಿತ್ರ ಮಾಡಿಕೊಡುತ್ತೇನೆ. ಮತ್ತೆ ಉಪೇಂದ್ರ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಕೆ.ಮಂಜು ಸರಿಯಾದ ಕಲಾವಿದರನ್ನೇ ಕೊಟ್ಟಿದ್ದಾರೆ ಎಂದ ಸಾಧು, ಪಕ್ಕದಲ್ಲೇ ಕೂತಿದ್ದ ದೊಡ್ಡಣ್ಣ ಅವರತ್ತ ನೋಡಿದರು. 'ಆಯ್ತು ನೀನ್ ಹೇಳಿದಂತೆ ನಾವ್ ದೊಡ್ಡ ಕಲಾವಿದರ ಬಿಡಪ್ಪ' ಎಂದು ದೊಡ್ಡಣ್ಣ ಮತ್ತು ಮಿಮಿಕ್ರಿ ದಯಾನಂದ್ ಒಟ್ಟಿಗೆ ತಮ್ಮ ಹೊಟ್ಟೆ ನೋಡಿಕೊಂಡರು. ಅಶೋಕ್ ಕಶ್ಯಪ್ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ತುಂಬಾ ಎಕ್ಸೈಟ್‌ಮೆಂಟ್ ಆಗಿದೆಯಂತೆ. 'ಸೂಪರ್' ಚಿತ್ರದ ಹಾಡಿನ ಸಾಲು ಇಲ್ಲಿ ಶೀರ್ಷಿಕೆಯಾಗಿದ್ದು, ಸೂಪರ್-2 ಮಾಡುತ್ತಿದ್ದೇವೆಂಬ ಅನುಮಾನ ಮೂಡಿದೆ. ಸಾಧು ನಗು ನಗುತ್ತಲೇ ಎಲ್ಲರಿಂದ ಕೆಲಸ ತೆಗೆಸುತ್ತಾರೆ. ಮೂಲ ಚಿತ್ರಕ್ಕಿಂತ ಸಿಕ್ಕಾಪಟ್ಟೆ ರಿಚ್ ಆಗಿ ಮಾಡುತ್ತಿದ್ದೇವೆಂದು ಕಶ್ಯಪ್ ಹೇಳಿಕೊಂಡರು.
ಕೈಯಲ್ಲಿ ಲಾಟಿ ಹಿಡಿದು ಪೊಲೀಸ್ ಗೆಟಪ್‌ನಲ್ಲೇ ಉಪೇಂದ್ರ ಎಂಟ್ರಿ ಕೊಟ್ಟರು. ಸಾಕಷ್ಟು ಸ್ಲಿಮ್ ಆಗಿದ್ದ ಉಪ್ಪಿ ಅವರಿಗೆ ಈ ಚಿತ್ರದಲ್ಲಿ ತಾನೊಬ್ಬನೇ ಸೂಪರ್ ಅಲ್ಲ ಸಾಕಷ್ಟು ಸೂಪರ್ ರಂಗಳಿದ್ದಾರೆ ಎನಿಸಿದೆ. ಎಲ್ಲರು ಆಸೆ ಪಟ್ಟು ನೋಡುವಂಥ ಚಿತ್ರ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿ ಉಪೇಂದ್ರ, ಸಾಧು ಎದ್ದು ಹೊರ ನಡೆದರು. ಅವರ ಹಿಂದೆಯೇ ಕಶ್ಯಪ್ ಹೊರಟರು. ಅಲ್ಲಿ ಶಾಟ್ ರೆಡಿಯಾಗಿತ್ತು. ಮಾತಿನ ನಡುವೆಯೇ ಸಾಧು ಆ್ಯಕ್ಷನ್ ಹೇಳುತ್ತಿರುವುದನ್ನು ನೋಡಿದಾಗ ಇದು ಪಕ್ಕಾ ಅವರಸದ ಅಡಿಗೆ ಅನ್ನಿಸಿದ್ದು ಸುಳ್ಳುಲ್ಲ. ಕೆ. ಮಂಜು ಮತ್ತು ಸಾಧು ಇಬ್ಬರು ಬಾಲ್ಯದ ಗೆಳೆಯರಂತೆ. ಹೀಗಾಗಿ ಅವರಿಂದ ಈ ಚಿತ್ರ ಮಾಡಿಸುತ್ತಿದ್ದೇನೆ. 'ಕಿಕ್' ಚಿತ್ರವನ್ನು ಏನಿಲ್ಲವೆಂದರೂ 20 ಬಾರಿ ನೋಡಿದ್ದೇನೆ. ಸೂಪರ್ ಆಗಿದೆ. ಕನ್ನಡಕ್ಕೆ ಹೇಳಿ ಮಾಡಿಸಿದ ಸಿನಿಮಾ. ಒಳ್ಳೆಯ ಸ್ಟಾರ್ ಕಾಸ್ಟ್ ಇದೆ. ಕೊನೆಗಳಿಗೆಯಲ್ಲಿ ನಿರ್ದೇಶಕರು ಸಿಕ್ಕರು. ಡಿಸೆಂಬರ್ ತಿಂಗಳಲ್ಲಿ 'ಸೂಪರೋ ರಂಗ' ಚಿತ್ರ ಕೈಗಿಡುವಂತೆ ಹೇಳಿದ್ದೇನೆ ಎಂಬುದು ಮಂಜು ಮಾತು. ನಾಯಕಿ ಕೃತಿ ತೆಲುಗು ಚಿತ್ರವನ್ನು ಬಿಟ್ಟು ಬಂದು ಕನ್ನಡ ನಿರ್ಮಾಪಕನಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನುವುದು ಇಲ್ಲಿನ ಹೈಲೆಟ್. ಮೊದಲ ಬಾರಿಗೆ ಕೊಂಚ ಎಕ್ಸ್‌ಪೋಸ್ ಇರುವ ಗ್ಲಾಮರ್ ಪಾತ್ರ ಮಾಡುತ್ತಿದ್ದಾರಂತೆ. ಸೂಪರ್ ಫನ್ ಸಿನಿಮಾ ಎನ್ನುವುದು ಕೃತಿ ಕಹಾನಿಯ. ಹಿರಿಯ ನಟ ದೊಡ್ಡಣ್ಣರಿಗೆ ಸಾಧು ಜೊತೆ ಕೆಲಸ ಮಾಡುವುದೇ ಖುಷಿಯಂತೆ. 'ಕೆ.ಮಂಜು ಬ್ಯಾನರ್ ಜೊತೆ ನನ್ನದು ಹಳೆ ನಂಟು. ಈ ಹಿಂದೆ ಅವರ ನಿರ್ಮಾಣದ 'ರಾಷ್ಟ್ರಗೀತೆ' ಚಿತ್ರದಲ್ಲಿ ಪಾತ್ರ ಮಾಡಿದ್ದೆ. ಈಗ ಮತ್ತೆ ಅವರ ನಿರ್ಮಾಣದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಳ್ಳೆಯ ಪಾತ್ರವಿದೆ' ಎಂದರು ಶ್ರೀಧರ್.
ನಟ ರಘುಮುರ್ಜಿ ಇಲ್ಲಿ ಪೊಲೀಸ್ ಅಧಿಕಾರಿ. ಒಂದು ರೀತಿಯಲ್ಲಿ ಅವರು ಎರಡನೇ ನಾಯಕ. ದೊಡ್ಡ ತಂಡದ ಜೊತೆ ಕೆಲಸ ಮಾಡುತ್ತಿರುವುದು ಮುಖರ್ಜಿಗೆ ಸಂತೋಷವಿದೆ. ಚಿತ್ರದಲ್ಲಿ ಸಾಹಸ ದೃಶ್ಯಗಳನ್ನು ತುಂಬಾ ಅದ್ದೂರಿಯಾಗಿ ಮಾಡಲು ಥ್ರಿಲ್ಲರ್ ಮಂಜುಗೆ ನಿರ್ಮಾಪಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. 'ಉಪ್ಪಿ, ಮಂಜು, ನಾನು ಕಶ್ಯಪ್ ಇದು ಗಾಂಧಿನಗರದ ಸಕ್ಸಸ್ ತಂಡ' ಎಂದರು ಥ್ರಿಲ್ಲರ್ ಮಂಜು. ಇನ್ನು ಬುಲೆಟ್ ಪ್ರಕಾಶ್ ಸಂಭಾವನೆಗಿಂತ ಅವರು ಕೇಳಿರುವ ಪಾತ್ರ ಕೊಡುತ್ತಾರೆಂಬ ನಂಬಿಕೆಯಿಂದ 'ಸೂಪರೋ ರಂಗ'ದಲ್ಲಿ ಬಣ್ಣ ಹಾಕುತ್ತಿದ್ದಾರೆ ಎಂಬಲ್ಲಿಗೆ ಚಿತ್ರತಂಡದ ಮಾತು ಮುಗಿಯಿತು.
- ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


