ಸಿನಿಮಾ ಲೇಖನ

ಗಂಗ ನಾಯಕ

ಕನ್ನಡ ಚಿತ್ರೋದ್ಯಮದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೊಸ ದಂಡನಾಯಕನ ಆಗಮನವಾಗಿದೆ...

ಗಂಗ ನಾಯಕ
ಎಚ್.ಡಿ. ಗಂಗರಾಜು
Published On :

ಕನ್ನಡ ಚಿತ್ರೋದ್ಯಮದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೊಸ ದಂಡನಾಯಕನ ಆಗಮನವಾಗಿದೆ. ಅಧಿಕಾರದ ಕುದುರೆಯನ್ನೇರಿರುವ ಎಚ್.ಡಿ. ಗಂಗರಾಜು ಅವರಿಂದ ಉದ್ಯಮದಲ್ಲಿ ಹೊಸ ಕನಸುಗಳೇನಾದರೂ ಈಡೇರಬಹುದೇ? ಎನ್ನುವ ಪ್ರಶ್ನೆಗಳು ಎದುರಾಗುವುದು ಸಹಜ. ಪ್ರತಿ ಬಾರಿಯೂ ವಾಣಿಜ್ಯ ಮಂಡಳಿಗೆ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಮುಂದಿನ ನಡೆ, ಯೋಜನೆಗಳ ಬಗ್ಗೆ ಚರ್ಚೆ ನಡೆಯುವುದು ಸಾಮಾನ್ಯ. ಆದರೆ, ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳಾಗಲಿ, ಅದಕ್ಕೆ ಬೇಕಾದ ಸೌಲಭ್ಯಗಳಾಗಲಿ ಸಿಕ್ಕಿಲ್ಲ ಎನ್ನುವುದೂ ಅಷ್ಟೇ ಸತ್ಯ. ರಿಮೇಕ್ ಹಾವಳಿ, ಚಿತ್ರಮಂದಿರಗಳ ಸಮಸ್ಯೆ, ಪರಭಾಷಾ ಚಿತ್ರಗಳ ಅಬ್ಬರ, ವಿವಾದಗಳು ಹೀಗೆ ಹತ್ತಾರು ಸಂಗತಿಗಳು ಎದ್ದುನಿಲ್ಲುತ್ತವೆ. ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಮುಂದೆ ಏನಾದರೂ ಸಿಗಬಹುದೇ? ಗೊತ್ತಿಲ್ಲ. ಈಗಷ್ಟೇ ಅಧ್ಯಕ್ಷ ಸ್ಥಾನದಲ್ಲಿ ಕೂತಿರುವ ಎಚ್.ಡಿ. ಗಂಗರಾಜು ಏನನ್ನುತ್ತಾರೆ?

ಚಲನಚಿತ್ರ ವಾಣಿಜ್ಯ ಮಂಡಳಿ ನಾಮಕಾವಸ್ಥೆ ಕಟ್ಟಡ ಎನ್ನುವ ಅರೋಪಗಳಿವೆ. ಇದಕ್ಕೇನನ್ನುತ್ತೀರಿ?
ವಾಣಿಜ್ಯ ಮಂಡಳಿ ಮುಂದೆ ಉದ್ಯಮದವರಿಂದ ಸಮಸ್ಯೆಗಳು ಬಂದಾಗ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಸೋತಾಗ ಇಂಥ ಅರೋಪಗಳು ಬರುತ್ತವೆ. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ನ್ಯಾಯ ಒದಗಿಸಿದರೆ ಈ ಅರೋಪಗಳಿಂದ ವಾಣಿಜ್ಯ ಮಂಡಳಿ ಮುಕ್ತವಾಗುತ್ತದೆ. ನನ್ನ ಅಧಿಕಾರದಲ್ಲಿ ಇಂಥ  ಆರೋಪಗಳು ಬರದಂತೆ ನೋಡಿಕೊಳ್ಳುತ್ತೇನೆ.

ನಿಮ್ಮ ಪ್ರಕಾರ ಚಿತ್ರರಂಗದ ಸಮಗ್ರ ಅಭಿವೃದ್ಧಿ ಎಂದರೇನು?

ಸಿನಿಮಾ ಗ್ಲಾಮರ್ ಎನ್ನುವುದು ನಿಜ. ಆದರೆ, ಇಡೀ ಉದ್ಯಮವೇ ಗ್ಲಾಮರ್ ಅಲ್ಲ. ಅದರ ಹೊರತಾಗಿಯೂ ನಮ್ಮ ಜವಾಬ್ದಾರಿ ಇದೆ ಎಂದು ನಿರ್ಮಾಪಕರು, ನಿರ್ದೇಶಕರು ಅರ್ಥಮಾಡಿಕೊಂಡರೆ ಚಿತ್ರರಂಗ ತಾನಾಗಿಯೇ ಸಮಗ್ರ ಅಭಿವೃದ್ಧಿ ಆದಂತೆ. ಇಲ್ಲಿ 'ಗ್ಲಾಮರ್‌' ಎನ್ನುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಆ ಬಗ್ಗೆ ನಾನು ಹೆಚ್ಚು ಹೇಳಿ ಮುಜುಗರಕ್ಕೀಡು ಮಾಡಲಾರೆ. 30/40 ಸೈಟ್ ಮಾರಿ ಸಿನಿಮಾ ಮಾಡಬಹುದು ಎನ್ನುವ ರಿಯಲ್ ಎಸ್ಟೇಟ್‌ನವರಿಂದ ಉದ್ಯಮದಲ್ಲಿ ಸಮಗ್ರ ಅಭಿವೃದ್ಧಿ ಎನ್ನುವ ಮಾತು ಅರ್ಥ ಕಳೆದುಕೊಂಡಿದೆ. ಅವರನ್ನು ನಿಯಂತ್ರಿಸಬೇಕಿದೆ. ಆಗ ಚಿತ್ರರಂಗ ಅಭಿವೃದ್ಧಿಯತ್ತ ಸಾಗುತ್ತದೆ.

ವಾಣಿಜ್ಯ ಮಂಡಳಿ ಅಧ್ಯಕ್ಷರ ಆದ್ಯ ಕರ್ತವ್ಯಗಳೇನು?
ವಿತರಕರು, ನಿರ್ಮಾಪಕರು ಮತ್ತು ಪ್ರದರ್ಶಕರು ಈ ಮೂರು ವಲಯಗಳನ್ನು ಸಮಾನವಾಗಿ ನೋಡುವುದು. ಇಲ್ಲಿ ಯಾರ ವಿಚಾರದಲ್ಲೂ ಪಕ್ಷಪಾತ ಮಾಡದಂತೆ ನೋಡಿಕೊಳ್ಳುವುದು. ಈ ಮೂವರು ಒಟ್ಟಾಗಿದ್ದರೆ ಚಿತ್ರರಂಗ ಚೆನ್ನಾಗಿರುತ್ತದೆ. ಆ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರು ಕಾರ್ಯಪ್ರವೃತ್ತರಾಗಿರಬೇಕು.

ಚಿತ್ರಮಂದಿರಗಳು, ಪರಭಾಷೆಗಳ ಹಾವಳಿ, ಕಾರ್ಮಿಕರ ಬೇಡಿಕೆಗಳು ಸೇರಿದಂತೆ ಉದ್ಯಮವನ್ನು ಬಾಧಿಸುತ್ತಿರುವ ಸಾಕಷ್ಟು ಸಮಸ್ಯೆಗಳಿವೆ. ಇದಕ್ಕೆ ಪರಿಹಾರ ಏನು?
ಮುಖ್ಯವಾಗಿ ಇಲ್ಲಿ ಪರಭಾಷೆ ಚಿತ್ರಗಳ ಹಾವಳಿ ಬಗ್ಗೆ ಹೇಳುವುದಾದರೆ ಕಾನೂನಿನಲ್ಲಿ ಇದಕ್ಕೆ ಉತ್ತರ ಇಲ್ಲ. ಮಾತುಕತೆ, ವಿಶ್ವಾಸದಿಂದ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆ ಇದು. ರಾಜ್ಯದಲ್ಲಿ ಇಂತಿಷ್ಟೇ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳು ತೆರೆ ಕಾಣಬೇಕೆಂದು ನಿಯಮ ಮಾಡಲಾಗಿತ್ತು. ಅದನ್ನು ಎಲ್ಲರೂ ಪಾಲಿಸುತ್ತಿದ್ದರು. ಆದರೆ, ಒಂದು ಸಣ್ಣ ವಿಚಾರಕ್ಕೆ ರಿಲಯನ್ಸ್ ಕೋರ್ಟ್ ಮೆಟ್ಟಿಲೇರುವಂತಾಗಿದೆ. ಇದು ಆಗಬಾರದಿತ್ತು. ಇನ್ನು ಚಿತ್ರಮಂದಿಗಳ ಸಮಸ್ಯೆ ಬಗ್ಗೆ ಹೇಳುವುದಾದರೆ, ಇರೋ ಥಿಯೇಟರ್‌ಗಳು ನೆಲಸಮವಾಗುತ್ತಿವೆ. ಇದು ನಮ್ಮ ಕೈಯಲ್ಲಿ ಇಲ್ಲ. ಆದರೆ ಇರುವ ಚಿತ್ರಮಂದಿರಗಳನ್ನಾದರೂ ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಹೊಸದಾಗಿ 'ಸ್ಕ್ರೀನಿಂಗ್ ಕಮಿಟಿ' ಮಾಡಿದ್ದೇವೆ.
ಸಿನಿಮಾ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ಆದರೆ ಇಲ್ಲಿ ನಿರ್ಮಾಪಕನ ಸ್ಥಿತಿಯೂ ತೀರಾ ಶೋಚನೀಯವಾಗಿದೆ.

ನಿಯಮ ಮೀರಿ ಪರಭಾಷೆ ಚಿತ್ರಗಳನ್ನು ರಾಜ್ಯದಲ್ಲಿ ವಿತರಣೆ ಮಾಡಿ, ಪ್ರದರ್ಶಿಸುವವರು ವಾಣಿಜ್ಯ ಮಂಡಳಿಯಲ್ಲೇ ಇದ್ದಾರಲ್ಲ?
ನಾನೂ ಪರಭಾಷೆ ಚಿತ್ರಗಳನ್ನು ರಾಜ್ಯದಲ್ಲಿ ವಿತರಿಸಿದ್ದೇನೆ. ರಜನೀಕಾಂತ್‌ರ ಅಭಿನಯದ 'ಶಿವಾಜಿ' ಚಿತ್ರವನ್ನು ವಿತರಣೆ ಮಾಡುವಾಗ ಬೆಂಗಳೂರಿನಲ್ಲಿ 10, ಹೊರಗಿನ 5 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಬೇಕೆಂಬ ನಿಯಮ ಇತ್ತು. ಅದನ್ನೇ ನಾನು ಪಾಲಿಸಿದೆ. ಆದರೆ 'ಶಿವಾಜಿ'ಯಂಥ ದೊಡ್ಡ ಚಿತ್ರವನ್ನು ಕೇವಲ 10 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಪ್ರೇಕ್ಷಕರನ್ನು ನಿಯಂತ್ರಿಸುವುದು ಹೇಗೆ? ಆದರೂ ನಾನು ನಿಯಮ ಮುರಿದಿಲ್ಲ. ಆ ನಂತರ ಬೇರ ಭಾಷೆ ಚಿತ್ರಗಳ ವಿತರಣೆ ಮೇಲೆ ನಮ್ಮ ನಿಯಂತ್ರಣ ತಪ್ಪಿತು. ನೂರು, ಇನ್ನೂರು ಚಿತ್ರಮಂದಿಗಳಲ್ಲಿ ಅವರೇ ಅಬ್ಬರಿಸುತ್ತಿದ್ದಾರೆ. ಈ ವಿಚಾರದಲ್ಲಿ ನಮ್ಮಿಂದ ತಪ್ಪಾಗಿರುವುದು ನಿಜ.

ಚಿತ್ರನಗರಿ ನಿರ್ಮಾಣದ ಕಥೆ ಏನಾಯಿತು? ಚಿತ್ರಗಳಿಗೆ ಕನ್ನಡದಲ್ಲೇ ಹೆಸರಿಡಬೇಕೆಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವಿಗೆ ನಿಮ್ಮ ಅಭಿಪ್ರಾಯವೇನು?
ಚಿತ್ರ ನಗರಿ ನಿರ್ಮಾಣದ ಬೇಡಿಕೆ ಹಲವು ದಶಕಗಳದ್ದು. ನಿಜಲಿಂಗಪ್ಪ ಕಾಲದಲ್ಲಿ ಹೆಸರಘಟ್ಟದಲ್ಲಿ 360 ಎಕರೆ ಚಿತ್ರನಗರಿ ನಿರ್ಮಾಣಕ್ಕೆ ಜಾಗ ನೀಡಲಾಯಿತು. ಆ ನಂತರ ರಾಮಕೃಷ್ಣ ಹೆಗಡೆ ಕಾಲದಲ್ಲಿ ಅದರಲ್ಲಿ 25 ಎಕರೆ ಪ್ರೊತಿಮಾ ಬೇಡಿ ಅವರ ನೃತ್ಯ ಗ್ರಾಮಕ್ಕೆ, 10 ಎಕರೆ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಹಸ್ತಾಂತರಿಸಲಾಯಿತು. ಉಳಿದ ಜಾಗದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ವಹಿಸಲಿಲ್ಲ. ಅಲ್ಲದೆ ಇಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದು ಅಪ್ರಯೋಜನ ಎಂದು ತೀರ್ಮಾನಿಸಿ ಸರ್ಕಾರ ಒಂದು ಸಭೆ ಕರೆದಿತ್ತು. ಅದಕ್ಕೆ ನಾನು ಹೋಗಿದ್ದೆ. ತುಂಬಾ ಗಲಾಟೆ ಮಾಡಿದೆ. ಆದರೆ, ವಾಸ್ತವಾಗಿ ಈಗ ಆ ಜಮೀನು ಖಾಸಗಿಯವರಿಗೆ ಪರಭಾರೆಯಾಗಿದೆ. ಇದಕ್ಕೆ ಖುಷಿಪಟ್ಟವರು ಉದ್ಯಮದಲ್ಲೇ ಇದ್ದಾರೆ. ಈಗ ನಮಗೆ ಬೇರೆ ದಾರಿ ಇಲ್ಲ. ನೋಡೋಣ, ಬೇರೆಡೆ ಜಾಗ ಕೇಳುತ್ತೇವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದೇಶಕ್ಕೆ ನನ್ನ ಸಹಮತ ಇದೆ. ಕನ್ನಡದವರಾಗಿ ನಾವೇ ಕನ್ನಡಕ್ಕೆ ಬೆಲೆ ಕೊಡದಿದ್ದರೆ ಬೇರೆ ಯಾರು ಕೊಡಲು ಸಾಧ್ಯ? ಆದರೆ, ಇಂಗ್ಲಿಷ್ ಹೆಸರಿನ ಚಿತ್ರಗಳಿರುವುದು ನಿಜ. ಈ ಬಗ್ಗೆ ನಿರ್ದೇಶಕರು, ನಿರ್ಮಾಪಕರ ಬಳಿ ಮಾತನಾಡಿ ಕನ್ನಡ ಹೆಸರು ಇಡುವಂತೆ ಕೋರುತ್ತೇವೆ.

ಕ್ವಾಲಿಟಿ ಚಿತ್ರಗಳಿಗಿಂತ ಕ್ವಾಂಟಿಟಿಯಲ್ಲಿ ಗಾಂಧಿನಗರ ದಾಖಲೆ ಮಾಡುತ್ತಿದೆ. ಸಂಖ್ಯೆ ಕಡಿಮೆ ಮಾಡಿ, ಗುಣಮಟ್ಟದ ಚಿತ್ರಗಳ ತಯಾರಿಕೆಗೆ ವಾಣಿಜ್ಯ ಮಂಡಳಿ ಮುಂದೆ ಇರುವ ದಾರಿಗಳೇನು?
ಪ್ರತಿಯೊಬ್ಬರು ಕ್ವಾಲಿಟಿ ಚಿತ್ರಗಳನ್ನೇ ಮಾಡುವುದಕ್ಕೆ ಬರುತ್ತಾರೆ. ಆದರೆ, ಸೋಲು- ಗೆಲುವು ನಮ್ಮ ಕೈಯಲ್ಲಿ ಇರಲ್ಲ. ಹೀಗಾಗಿ ಹೋಗ್ತ ಹೋಗ್ತ ಅದು ಕ್ವಾಂಟಿಟಿಯಾಗುತ್ತದೆ. ಅದು ನಿರ್ದೇಶಕ ಮತ್ತು ನಿರ್ಮಾಪಕನ ಮೇಲೆ ನಿಂತಿರುತ್ತದೆಯೇ ಹೊರತು, ನಾವು ಎಷ್ಟೇ ಹೇಳಿದರೂ ಪ್ರಯೋಜನವಾಗಲ್ಲ.

ನಿಮ್ಮ ಅಧಿಕಾರದ ಅವಧಿಯಲ್ಲಿ ಉದ್ಯಮದ ಯಾವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು? ನಿಮ್ಮ ಹೊಸ ಯೋಜನೆಗಳೇನು?
ನಾನು ಮಾತಿನಲ್ಲಿ ಹೇಳಲ್ಲ. ಮಾಡಿ ತೋರಿಸುತ್ತೇನೆ. ಹೊಸ ಯೋಜನೆ ಬಗ್ಗೆ ಈಗಾಗಲೇ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಆ ಬಗ್ಗೆ ತಿಳಿಸುವೆ.

ಚಿತ್ರರಂಗ ಹಣಕಾಸಿನ ವ್ಯವಹಾರದ ಆಚೆಗೂ ಒಂದು ಸಾಂಸ್ಕೃತಿಕ ರಂಗವಾಗಿ ರೂಪಿಸುವಲ್ಲಿ ವಾಣಿಜ್ಯ ಮಂಡಳಿಯ ಪಾತ್ರವೇನು?
ನಷ್ಟ ಮಾಡಿಕೊಂಡು ಯಾರೂ ಸಿನಿಮಾ ಮಾಡಲು ಮುಂದೆ ಬರಲ್ಲ. ಆದರೆ, ಸಾಂಸ್ಕೃತಿಕ ವಾತಾವರಣ ಎಂದಾಗ ಇಲ್ಲಿ ನಮಗೆ ಕೆಲವರೇ ಸಿಗುತ್ತಾರೆ. ಅವರನ್ನು ಮೊದಲು ಗುರುತಿಸಬೇಕು. ಅವರ ಮೂಲಕವಾದರೂ ಚಿತ್ರರಂಗದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಲು ಯತ್ನಿಸುತ್ತೇವೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.