ಓಂ ಫ್ಯಾಕ್ಟರಿ
ಕನ್ನಡ ಚಿತ್ರರಂಗದಲ್ಲಿ ಪ್ರಕಾಶ್ ಜಾ ಎನ್ನುವ ಹೆಸರಿಲ್ಲ. ಆದರೆ, ಓಂ ಪ್ರಕಾಶ್ ರಾವ್ ಇದ್ದಾರೆ. ಹಾಗೆ ಬಾಲಿವುಡ್ನ ರಾಮ್ಗೋಪಾಲ್ ವರ್ಮಾನ ಹಾಗೆ ಸಿನಿಮಾ ಫ್ಯಾಕ್ಟರಿ ಇಲ್ಲಿಲ್ಲ...

ಕನ್ನಡ ಚಿತ್ರರಂಗದಲ್ಲಿ ಪ್ರಕಾಶ್ ಜಾ ಎನ್ನುವ ಹೆಸರಿಲ್ಲ. ಆದರೆ, ಓಂ ಪ್ರಕಾಶ್ ರಾವ್ ಇದ್ದಾರೆ. ಹಾಗೆ ಬಾಲಿವುಡ್ನ ರಾಮ್ಗೋಪಾಲ್ ವರ್ಮಾನ ಹಾಗೆ ಸಿನಿಮಾ ಫ್ಯಾಕ್ಟರಿ ಇಲ್ಲಿಲ್ಲ. ಆದರೆ, ಬಹಳಷ್ಟು ಸಿನಿಮಾ ಕಾರ್ಖಾನೆಗಳು ಇಲ್ಲಿವೆ. ಸಿನಿಮಾ ತಯಾರಿಕೆಯಲ್ಲಿ ಮಾತ್ರ, ಬಿಡುಗಡೆ ವಿಚಾರದಲ್ಲಿ ಅಲ್ಲ. ಅಣಜಿ ನಾಗರಾಜ್ ಇಂಥ ಸಿನಿಮಾ ಕಾರ್ಖಾನೆಗಳ ಮಾಲೀಕರಲ್ಲಿ ಒಬ್ಬರು. ಈಗ ನಿರ್ದೇಶಕ ಓಂ ಪ್ರಕಾಶ್ ರಾವ್ ಇದಕ್ಕೆ ಸೇರ್ಪಡೆಯಾಗುತ್ತಿದ್ದಾರೆಯೇ? ಹೀಗೆನಿಸುವುದಕ್ಕೆ ಕಾರಣ ಅವರ ನಿರ್ದೇಶನದ ಪಟ್ಟಿಯಲ್ಲಿರುವ ಚಿತ್ರಗಳು. ಕೆಲ ತಿಂಗಳುಗಳ ಹಿಂದೆ 'ಹುಚ್ಚ 2' ಚಿತ್ರ ಸೆಟ್ಟೇರಿತು. ಅದು ಯಾವ ಹಂತದಲ್ಲಿದೆಯೋ ಗೊತ್ತಿಲ್ಲ. ಮೊನ್ನೆಯಷ್ಟೆ 'ಚಂದ್ರಲೇಖ' ಎನ್ನುವ ಚಿತ್ರಕ್ಕೆ ಮುಹೂರ್ತ ನಡೆಯಿತು. ಇದಾಗಿ ನಾಲ್ಕೇ ದಿನಕ್ಕೆ 'ಅಯ್ಯ 2' ಚಿತ್ರ ಶುರುವಾಗಿದೆ. ಇದರ ನಡುವೆ 'ರೌಡಿ ರಾಣಿ', 'ಪುಟ್ಟ' ಹಾಗೂ 'ಕಾಟನ್ ಪೇಟೆ' ಚಿತ್ರಗಳು ಆರಂಭವಾಗಿ ಸದ್ಯಕ್ಕೆ ಮಲಗಿವೆ.
ಆದರೆ, ಏಕಕಾಲಕ್ಕೆ ಮೂರು ಚಿತ್ರಗಳನ್ನು ಕೈಯಲ್ಲಿ ಹಿಡಿದಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ರನ್ನು ನೋಡಿದಾಗ ಓಂ ಸಿನಿಮಾ ಫ್ಯಾಕ್ಟ್ರಿ ಅನಿಸುವುದಿಲ್ಲವೇ? ಅಣಜಿ ನಾಗರಾಜ್ರಂತೆ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ನಿರ್ಮಿಸುತ್ತಿರುವ ಹಾಗೆ ಓಂ ಪ್ರಕಾಶ್ ರಾವ್ ಸಹ, ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಅದಿರಲಿ, 'ಅಯ್ಯ2' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಓಂ ತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಈ ಹಿಂದೆ 'ಅಯ್ಯ' ಚಿತ್ರದಲ್ಲಿ ದರ್ಶನ್ ಮತ್ತು ರಕ್ಷಿತಾ ಜೋಡಿಯಾಗಿದ್ದರು. ಇಬ್ಬರಿಗೂ ಈ ಚಿತ್ರ ಒಳ್ಳೆಯ ಹೆಸರು ಕೊಟ್ಟಿತು ಎಂಬುದು ಆಗಿನ ಮಾತು. ಈಗ 'ಅಯ್ಯ 2' ಚಿತ್ರಕ್ಕೆ ಚಿರಂಜೀವಿ ಸರ್ಜಾ ಹಾಗೂ ವೈಶಾಲಿ ಜೋಡಿ. 'ಯಾಕೋ ಇತ್ತೀಚೆಗೆ ತುಂಬಾ ಡಬ್ಬಾ ಸಿನಿಮಾಗಳನ್ನು ಮಾಡಿದ್ದೇನೆ ಎಂದು ಬೇಸರವಾಯಿತು. ನನ್ನಂಥವನು ಇಂಥ ಚಿತ್ರಗಳು ಮಾಡುವುದು ಸರಿಯಲ್ಲ. ಆದರೆ ಏನ್ ಮಾಡ್ಲಿ? ಸ್ವಮೇಕ್ ಕಥೆಗಳನ್ನು ಕೇಳುವುದಕ್ಕೆ ನಿರ್ಮಾಪಕರು, ನಾಯಕ ನಟರಿಗೆ ಪಾಪ ಟೈಮೇ ಇಲ್ಲ. ಆದರೂ ಸ್ವಮೇಕ್ ಚಿತ್ರ ಮಾಡುವ ಆಸೆ ನನ್ನಲ್ಲಿತ್ತು. ಹೀಗಾಗಿ ಅಯ್ಯ 2ಕ್ಕೆ ಕೈ ಹಾಕಿದ್ದೇನೆ' ಎಂದು ತಡವಾಗಿ ಜ್ಞಾನೋದಯವಾದವರಂತೆ ಮಾತನಾಡಿದರು ನಿರ್ದೇಶಕ ಓಂ ಪ್ರಕಾಶ್ ರಾವ್.
ತಮ್ಮ ಮಾತಿನ ನಡುವೆ ಓಂ ಪ್ರಕಾಶ್ ರಾವ್ ಮತ್ತೊಂದು ಶಪಥ ಮಾಡಿದರು. 'ನೋಡ್ತಾ ಇರಿ, ಈ ಚಿತ್ರವನ್ನು ತುಂಬಾ ಚೆನ್ನಾಗಿ ಮಾಡುತ್ತೇನೆ. ಎಷ್ಟು ಚೆನ್ನಾಗಿ ಅಂದ್ರೆ, ಬೇರೆ ಭಾಷೆಗೆ ಈ ಚಿತ್ರ ಹೋಗಬೇಕು ಅಷ್ಟು ಅದ್ಭುತವಾಗಿ ಅಯ್ಯ 2 ಚಿತ್ರವನ್ನು ತೆರೆ ಮೇಲೆ ತರುತ್ತೇನೆ' ಎಂದು ಘೋಷಿಸಿದರು. ಕಷ್ಟದಲ್ಲಿದ್ದಾಗ ಸ್ನೇಹಿತರು, ಆಪ್ತರು ಎನಿಸಿಕೊಂಡವರನ್ನು ಸಂಪರ್ಕಿಸಿದರೆ ಮೊಬೈಲ್ ಸ್ವಿಚ್ಡ್ ಆಫ್ ಆಗಿರುತ್ತಂತೆ. ಇಂಥ ಅನುಭವಕ್ಕೆ ಪಾತ್ರರಾಗಿರುವ ಓಂ, ತಮ್ಮ ಇಪ್ಪತ್ತು ವರ್ಷಗಳ ಗೆಳೆಯ ಉಮೇಶ್ ರೆಡ್ಡಿ ಸಹಾಯಕ್ಕೆ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಸ್ವತಃ ರೆಡ್ಡಿಗಾರೇ ನಿರ್ದೇಶಕರಿಗೆ ಫೋನ್ ಮಾಡಿ, 'ನೀವು ಒಂದು ಸಿನಿಮಾ ಮಾಡಿ. ನಾನು ನಿರ್ಮಾಪಕನಾಗುತ್ತೇನೆ' ಎಂದು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ 'ಅಯ್ಯ 2'ಕ್ಕೆ ಜೀವ ಬಂದಿದೆಯಂತೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಜೊತೆಗೆ ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳು ಈ ಚಿತ್ರದಲ್ಲಿವೆ. ಮತ್ತೊಂದು ವಿಶೇಷ ಸುದ್ದಿ ಎಂದರೆ, ಚಿತ್ರದಲ್ಲಿ ರೋಲ್ ಮಾಡೆಲ್ ಎನಿಸುವ ರಾಜಕೀಯ ನಾಯಕನ ಪಾತ್ರಕ್ಕೆ ಹಿಂದಿಯ ಅನುಪಮ್ ಕೇರ್ರನ್ನು ಕರೆತರುವ ಪ್ರಯತ್ನ ನಡೆಯುತ್ತಿರುವುದು. 'ಮಹಾತ್ಮ ಗಾಂಧಿ, ಅಂಬೇಡ್ಕರ್, ವಿವೇಕಾನಂದ ಮತ್ತೆ ಹುಟ್ಟಿಲ್ಲ. ನೀವೇ ಅವರಾಗಬೇಕು. ನಿಮ್ಮ ದೇಶವನ್ನು ನೀವೇ ಉಳಿಸಿಕೊಳ್ಳಬೇಕು. ಇಲ್ಲಿ ಯಾರೂ ಯಾರಿಗೂ ಲೀಡರ್ ಅಲ್ಲ. ನಿಮಗೆ ನೀವೇ ಲೀಡರ್ ಎಂದು ಹೇಳುವ ಕಥೆ ಇಲ್ಲಿದೆ' ಎನ್ನುತ್ತಾರೆ ನಿರ್ದೇಶಕರು.
ಈಗಾಗಲೇ ಓಂ ಪ್ರಕಾಶ್ರಾವ್ರ 'ಚಂದ್ರಲೇಖ' ಚಿತ್ರದಲ್ಲಿ ಅಭಿನಯಿಸುತ್ತಿರುವ ಚಿರಂಜೀವಿ ಸರ್ಜಾ ಮತ್ತೆ 'ಓಂ' ಚಿತ್ರಕ್ಕೆ ನಾಯಕನಾಗಿದ್ದಾರೆ. 'ದರ್ಶನ್ ಮಾಡಿದ ಚಿತ್ರದ ಮುಂದುವರಿದ ಭಾಗಕ್ಕೆ ನಾನು ಸೂಕ್ತ ಅಂತ ನಿರ್ದೇಶಕರಿಗೆ ಹೇಗೆ ಅನಿಸಿತೋ ಗೊತ್ತಿಲ್ಲ. ಆದರೆ, ನನಗೆ ಚಿತ್ರದ ಕಥೆ ಚೆನ್ನಾಗಿದೆ. ಒಬ್ಬ ನಾರ್ಮಲ್ ಪೊಲೀಸ್ ಅಧಿಕಾರಿ ಪಾತ್ರ ನನ್ನದು' ಎಂದರು ಚಿರು. ವೈಶಾಲಿ ರಂಗಭೂಮಿಯಿಂದ ಬಂದಿರುವ ಕಲಾವಿದೆ. ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ವೈಶಾಲಿಗೆ ಓಂ ಪ್ರಕಾಶ್ರಾವ್ರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿ ಇದೆಯಂತೆ. ಪಕ್ಕಾ ಬಾಯಿಬಡುಕಿ ಎನಿಸುವ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ವೈಶಾಲಿ ಅಭಿನಯಿಸುತ್ತಿದ್ದಾಳೆ. ಸರಿಗಮ ವಿಜಿ ಸೇರಿದಂತೆ ಹಲವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.
- ಕೇಶವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


