ಈ ವಾಯ್ಸೇ ಒಂಥರಾ
ಒಂದು ಕಾಲ ಇತ್ತು. ಸಿನಿಮಾಗಳಲ್ಲಿ ಗಾಯಕ ಅಂದ್ರೆ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್, ಗಾಯಕಿ ಅಂದ್ರೆ...

ಒಂದು ಕಾಲ ಇತ್ತು. ಸಿನಿಮಾಗಳಲ್ಲಿ ಗಾಯಕ ಅಂದ್ರೆ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್, ಗಾಯಕಿ ಅಂದ್ರೆ ಎಸ್.ಜಾನಕಿ, ವಾಣಿ ಜಯರಾಂ ಅಂದ ಮೇಲೆ ಮುಂದೆ ಇನ್ಯಾರಿದ್ದಾರೆ ಎಂದು ಯೋಚಿಸುವಂತಾಗುತ್ತಿತ್ತು. ಆದರೆ ಕಾಲ ಬದಲಾಗಿದೆ. ಈಗ ದಿನಕ್ಕೊಂದು ಹೊಸ ಹಾಡು ಹಕ್ಕಿ ಗರಿಗೆದರುತ್ತಿದೆ. ಇತ್ತೀಚೆಗೆ ಬಂದ ಅಂಥ ಎರಡು ಗಮನಾರ್ಹ ಪ್ರತಿಭೆಗಳೆಂದರೆ ನವೀನ್ ಸಜ್ಜು ಮತ್ತು ಶಚಿನಾ ಹೆಗ್ಗರ್. ಲೂಸಿಯಾ ಚಿತ್ರದ 'ಹೇಳು ಶಿವ ಯಾಕಿಂಗಾದೆ', 'ಜಮ್ಮ ಜಮ್ಮ' ಮತ್ತು ಕಡ್ಡಿಪುಡಿ ಚಿತ್ರದ 'ಹೆದರಬ್ಯಾಡ್ರಿ' ಹಾಡುಗಳನ್ನು ಹೆಸರಿಸಿದರೆ ಕನ್ನಡ ಪ್ರೇಕ್ಷಕರಿಗೆ ಈ ಇಬ್ಬರ ಪರಿಚಯ ಸುಲಭವಾಗಿ ಆಗುತ್ತದೆ.
ನವೀನ್ ಸಜ್ಜು
ಲೂಸಿಯಾ ಚಿತ್ರದ 'ಜಮ್ಮ ಜಮ್ಮ' 'ಹೇಳು ಶಿವ ಯಾಕಿಂಗಾದೆ' ಹಾಡುಗಳ ಮೂಲಕ ನವೀನ್ ಈಗಾಗಲೇ ಎಲ್ಲರಿಗೂ ಪರಿಚಿತ. ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದ ಈ ಹುಡುಗ ನಿರ್ದೇಶಕ ಪವನ್ ಮತ್ತು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಭೇಟಿ ಆಗಿದ್ದು, ಇವರ ಜೊತೆಗೆ ಯೋಗರಾಜಭಟ್ಟರ ಮಾರ್ಗದರ್ಶನದಲ್ಲಿ ಲೂಸಿಯಾ ಚಿತ್ರಕ್ಕೆ ಹಾಡಿದ್ದು, ಇದೆಲ್ಲವೂ ಸದ್ಯಕ್ಕೆ ಇನ್ನೂ ಫ್ರೆಷ್ ಆಗಿರುವ ಇತಿಹಾಸ. ಆದರೆ ಈ ಹುಡುಗನ ಇತಿಹಾಸದತ್ತ ತಿರುಗಿ ನೋಡಿದರೆ, ನವೀನ್ ನಿರಂತರ ಎಂಬ ನಾಟಕ ತಂಡದ ಅಭಿನಯ ಪ್ರತಿಭೆ. ಅದೇ ತಂಡದಲ್ಲಿದ್ದ ಪೂರ್ಣಚಂದ್ರ ತೇಜಸ್ವಿ ನವೀನ್ರ ಪ್ರತಿಭೆ ಗುರುತಿಸಿ ಅವರಿಂದ ಹಾಡಿಸಬೇಕು ಎಂದು ನಿರ್ಧಾರ ಮಾಡಿದಾಗ ಮಂಡ್ಯದ ಈ ಹುಡುಗನಿಗೆ ಗಾಂಧಿನಗರದ ರುಚಿ ಹತ್ತಿತು. ಎಸ್ಎಸ್ಎಲ್ಸಿ ಮುಗಿಸದೆ ನಾಟಕದಲ್ಲಿ ತೊಡಗಿಕೊಂಡ ನವೀನ್ ಮೆಲ್ಲಮೆಲ್ಲನೆ ಆರ್ಕೆಸ್ಟ್ರಾ ತಂಡ ಸೇರಿಕೊಂಡವರು. ಕೇಬಲ್ ಆಪರೇಟರ್ ಆಗಿಯೂ ಕೆಲಸ ಮಾಡಿದ್ದ ನವೀನ್ ಈಗ ಎಸ್ಎಸ್ಎಲ್ಸಿ ಮುಗಿಸಿ ಹಿಂದೂಸ್ತಾನಿ ಸಂಗೀತದಲ್ಲಿ ಡಿಪ್ಲೊಮಾ ಮಾಡುತ್ತಿದ್ದಾರೆ. ಆರ್ಕೆಸ್ಟ್ರಾದಲ್ಲಿ ಎರಡು ವರ್ಷ ಆದರೂ ನಂಗೆ ಹಾಡೋಕೆ ಅವಕಾಶ ಕೊಟ್ಟಿರಲಿಲ್ಲ ಎನ್ನುವ ನವೀನ್ ಅವರಿಗೆ ಈಗ ಕನ್ನಡ ಚಿತ್ರರಂಗ ಕರೆದು ಅವಕಾಶ ಕೊಡುತ್ತಿದೆ. ಅದಕ್ಕೆ ಕಾರಣ ಲೂಸಿಯಾ ಚಿತ್ರದಲ್ಲಿ ಅವರು ಹಾಡಿರುವ ನಾಲ್ಕು ಹಾಡುಗಳು ಹಿಟ್ ಆಗಿದ್ದು. ಹಾಗಾಗಿ ಗಾಯಕರಾಗಿ ಜಮ್ಮ ಜಮ್ಮ ಅಂತ ಜಮಾಯಿಸುವ ಮೂಡಿಗೆ ಸಜ್ಜಾಗಿದ್ದಾರೆ ನವೀನ್.
ನೀವು ಹಾಡಬಲ್ಲಿರಿ ಅಂತ ನಿಮಗ್ಗೊತ್ತಾಗಿದ್ದು ಯಾವಾಗ? ಮತ್ತು ನೀವು ಹಾಡ್ತೀರಾ ಅಂತ ಬೇರೆಯವರಿಗೆ ಗೊತ್ತಾಗಿದ್ದು ಯಾವಾಗ?
ನನಗೆ ಗೊತ್ತಾಗಿದ್ದು ನಾಟಕದಲ್ಲಿ ಹಾಡುವಾಗ. ನಾನು ಆರ್ಕೆಸ್ಟ್ರಾದಲ್ಲಿ ಹಾಡುವಾಗ ನೆರೆದಿದ್ದ ಜನ 'ಅಯ್ಯೋ ಇವನು ಹಾಡ್ತಾ ಇಲ್ಲ. ಸುಮ್ನೆ ಸಿಡಿ ಹಾಕ್ಕಂಡು ತುಟಿ ಅಲ್ಲಾಡಿಸ್ತಾನೆ' ಅಂತ ಅನುಮಾನ ಪಡ್ತಿದ್ರು. ಅದರರ್ಥ ನಾನು ಅಷ್ಟು ಚೆನ್ನಾಗಿ ಹಾಡ್ತಿದ್ದೆ ಅಂತ. ಹಾಗಾಗಿ ಅವರಿಂದಲೇ ನನಗೆ ನಾನು ಚೆನ್ನಾಗಿ ಹಾಡ್ತೀನಿ ಅಂತ ಗೊತ್ತಾಗಿದ್ದು. ಆದರೆ, ನಮ್ಮ ನಿರಂತರ ತಂಡದ ಸುಗುಣ ಅವರ ಪ್ರೀತಿ, ಅವರು ಕೊಟ್ಟ ಸ್ಫೂರ್ತಿಯೇ ನನ್ನ ಇವತ್ತಿನ ಯಸಸ್ಸಿಗೆ ಕಾರಣ ಅನ್ನೋದು ನನ್ನ ನಂಬಿಕೆ.
ಮೊದಲನೇ ಸಿನಿಮಾ ಆದಮೇಲೆ ಹಾಡುವ ಅವಕಾಶಗಳು ಎಷ್ಟು ಸಿಕ್ಕಿವೆ?
ಏಳೆಂಟು ಸಿನಿಮಾಗಳಲ್ಲಿ ಹಾಡುತ್ತಿದ್ದೇನೆ. ಆದರೆ ಕೆಲವೊಮ್ಮೆ ನಾನು ಹಾಡಿ ಬಂದ ಮೇಲೆ ನನಗೆ ಗೊತ್ತಿಲ್ಲದೆ ಅದನ್ನ ಬೇರೆಯವರ ಬಳಿ ಹಾಡಿಸುತ್ತಾರೆ. ಸಿಡಿಯಲ್ಲಿ ನನ್ನ ಹಾಡು ಇರುವುದಿಲ್ಲ. ಹಾಗಾಗಿ ಆಡಿಯೋ ಬಿಡುಗಡೆ ಆದಮೇಲೆ ಹೆಸರು ಹೇಳುವುದು ಒಳ್ಳೆಯದೇನೋ.
ನೀವು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಿದ್ದು ಯಾವ ಹಾಡು?
ಉಪೇಂದ್ರ ಅವರ 'ಬರಿ ಓಳು' ಹಾಡು
ನಿಮ್ಮ ಮೊದಲ ಸಿನಿಮಾ ಹಾಡಿಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್ ಯಾವುದು?
ನಂಗೆ ಸಿಗ್ತಿರೋ ಎಲ್ಲ ಕಾಂಪ್ಲಿಮೆಂಟ್ಗಳೂ ಬೆಸ್ಟ್ ಅನ್ನಿಸ್ತಿದೆ. ಮಂಡ್ಯ ಕಡೆ 'ಜಮ್ಮ ಜಮ್ಮ' ಹಾಡು ಫೇಮಸ್. ಉತ್ತರ ಕರ್ನಾಟಕದ ಕಡೆ ಹೇಳು ಶಿವಾ ಹಾಡು ಫೇಮಸ್ ಆಗಿದೆ. ಎಷ್ಟೋ ಜನ ನನ್ನ ನಂಬರ್ ಹುಡುಕಿ ನಂಗೆ ಫೋನ್ ಮಾಡಿ ಹೇಳಿದಾಗ ಖುಷಿಯಾಗುತ್ತೆ. ನನಗೆ ವೈಯಕ್ತಿಕವಾಗಿ 'ಜಮ್ಮ ಜಮ್ಮ' ಪ್ಯಾಥೋ ವರ್ಷನ್ ಇಷ್ಟ.
ಶಚಿನಾ ಹೆಗ್ಗರತಿ
ಈಕೆ 'ಹೆದರಬ್ಯಾಡ್ರಿ' ಅಂತ ಗಂಡನಿಗೆ ಧೈರ್ಯ ಕೊಟ್ಟ 'ಹೆಗ್ಗರತಿ'. ಕಡ್ಡಿಪುಡಿಯಲ್ಲಿ 'ಬುಡು ಬುಡುಕೆ ಮಾಲಿಂಗ' ಮತ್ತು 'ಸೌಂದರ್ಯ ಸಮರ'ಗಳ ನಡುವೆಯೂ ಗಮನ ಸೆಳೆದಿದ್ದು ಶಚಿನಾ ಅವರ ಹೆದರಬ್ಯಾಡ್ರಿ ಹಾಡಿನ ಸ್ವರ. ಗಾಯನದ ಭಾಷೆಯಲ್ಲಿ ಹಸ್ಕೀ ಎಂದು ಕರೆಯಬಹುದಾದ ಈ ಹಾಡುಹಕ್ಕಿಯ ಕಂಠದಿಂದಾಗಿಯೇ ಆ ಹಾಡಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿತು ಎಂದರೆ ತಪ್ಪಲ್ಲ. ನಿಮ್ಮ ಮೊಬೈಲ್ನಲ್ಲಿ ಕಡ್ಡಿಪುಡಿ ಚಿತ್ರದ ಹೆದರಬ್ಯಾಡ್ರಿ ಹಾಡು, ಬಾಂಬೆ ಜಯಶ್ರೀ ಹಾಡಿರುವ ವಸೀಗರಾ ಹಾಡು ಮತ್ತು ಇಂಟಲಿಜೆಂಟ್ ಶಫಲ್ ಎಂಬ ಮ್ಯೂಸಿಕ್ ಆಪ್ಷನ್ ಇದ್ದರೆ ಹೆದರಬ್ಯಾಡ್ರಿ ಹಾಡಿನ ನಂತರ ವಸೀಗರಾ ಹಾಡು ತಾನಾಗಿಯೇ ಪ್ಲೇ ಆಗುತ್ತದೆ. ಬಹುಶಃ ಶಚಿನಾ ಮತ್ತು ಜಯಶ್ರೀ ಅವರ ಕಂಠದಲ್ಲಿರುವ ಹೋಲಿಕೆ ಇದಕ್ಕೆ ಕಾರಣವಿರಬಹುದು. ಜನಪ್ರಿಯರಾಗಿರುವುದು ಗಾಯಕಿ ಎಂಬ ಕಾರಣಕ್ಕಾದರೂ ಶಚಿನಾ ಬಹಳ ಹಿಂದಿನಿಂದಲೇ ಸಿನಿಮಾಗಳಲ್ಲಿ ಕೆಲಸ ಮಾಡಿದವರು. ಆದರೆ ವಸ್ತ್ರವಿನ್ಯಾಸಕಿಯಾಗಿ ಎಂಬುದು ವಿಶೇಷ. ಜಂಗ್ಲಿ, ಮನಸಾರೆ, ದೇವ್ರು, ಪಂಚರಂಗಿ ಮುಂತಾದ ಅನೇಕ ಚಿತ್ರಗಳಿಗೆ ಡಿಸೈನರ್ ಆಗಿ ಕೆಲಸ ಮಾಡಿದ ಶಚಿನಾ ಗಾಯಕಿಯಾಗಿದ್ದು ಆಕಸ್ಮಿಕ. ಅಣ್ಣಾಬಾಂಡ್ ಚಿತ್ರಕ್ಕೆ ಸೂರಿ ಅವರ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಶಚಿನಾ ಕಡ್ಡಿಪುಡಿ ಚಿತ್ರಕ್ಕೆ ಒಂದು ಜಾನಪದ ಹಾಡು ಬೇಕು ಎಂದಾಗ ಹೆದರಬ್ಯಾಡ್ರಿ ಹಾಡನ್ನು ಸಜೆಸ್ಟ್ ಮಾಡಿದ್ದರಂತೆ. ಸರಿ ಅದನ್ನು ನಿನ್ನ ವಾಯ್ಸ್ನಲ್ಲೇ ರೆಕಾರ್ಡ್ ಮಾಡಿಕೊಡು ಎಂದರು ಸೂರಿ. ಅದನ್ನು ಕೇಳಿದ ಮೇಲೆ ಎಲ್ಲರಿಗೂ 'ಈ ವಾಯ್ಸೇ ಒಂಥರಾ' ಎನಿಸಿದ್ದರಿಂದ ಆ ಹಾಡನ್ನು ಶಚಿನಾ ಅವರೇ ಹಾಡುಬೇಕು ಎಂದು ನಿರ್ಧಾರ ಆಯ್ತಂತೆ. ನಾನು ತರಬೇತಿ ಪಡೆದ ಗಾಯಕಿ ಅಲ್ಲ ಎನ್ನುವ ಶಚಿನಾಗೆ ಈಗ ಹೆಚ್ಚು ಹೆಚ್ಚು ಹಾಡುವ ಅವಕಾಶಗಳು ಬರುತ್ತಿವೆ. ಹಾಗಾಗಿ, ಈಗ ಶ್ರಾವಣಿ ಸುಬ್ರಮಣ್ಯ, ಗಜಕೇಸರಿ ಚಿತ್ರಗಳಲ್ಲಿ ವಸ್ತ್ರ ವಿನ್ಯಾಸ ಮಾಡುತ್ತ ತಮ್ಮ ಕಂಠಕ್ಕೂ ತರಬೇತಿ ಕೊಡುತ್ತಿದ್ದಾರೆ ಶಚಿನಾ. ಹಾಗಾಗಿ ಅವರ ಕಂಠದಲ್ಲಿ ಇನ್ನಷ್ಟು ಹಾಡುಗಳನ್ನು ಕೇಳಬೇಕೆನ್ನುವ ಕೇಳುಗರ ಆಸೆಗೆ ಮೋಸವಿಲ್ಲ ಎನ್ನಬಹುದು.
ನೀವು ಹಾಡಬಲ್ಲಿರಿ ಅಂತ ನಿಮಗ್ಗೊತ್ತಾಗಿದ್ದು ಯಾವಾಗ? ಮತ್ತು ಬೇರೆಯವರಿಗೆ ಗೊತ್ತಾಗಿದ್ದು ಯಾವಾಗ?
ನಾನು ಬಾತ್ರೂಮ್ ಸಿಂಗರ್ ಅಷ್ಟೇ ಆಗಿದ್ದೆ. ಹಾಗಾಗಿ ನನಗೆ ಗೊತ್ತಾಗಿದ್ದು ಬಾತ್ರೂಮ್ನಲ್ಲಿ ಎನ್ನಬಹುದು. ಬೇರೆಯವರಿಗೆ ಗೊತ್ತಾಗಿದ್ದು ಸೂರಿ ಅವರಿಗೆ ನನ್ನ ಹಾಡು ರೆಕಾರ್ಡ್ ಮಾಡಿಕೊಟ್ಟಾಗ.
ಮೊದಲನೇ ಸಿನಿಮಾ ಆದಮೇಲೆ ಹಾಡುವ ಅವಕಾಶಗಳು ಎಷ್ಟು ಸಿಕ್ಕಿವೆ?
ಸದ್ಯಕ್ಕೆ ಎರಡು ಆಫರ್ ಇದೆ. ಆದರೆ ಅದು ಹಾಡಿದ ಮೇಲೆಯೇ ಕನ್ಫರ್ಮ್ ಆಗುತ್ತೆ. ಹಾಗಾಗಿ ಆನಂತರವೇ ಹೇಳ್ತೀನಿ.
ನೀವು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಿದ್ದು ಯಾವ ಹಾಡು?
ನಮ್ಮಮ್ಮ ಚೆನ್ನಾಗಿ ಹಾಡ್ತಾರೆ. ನಂಗೆ ಹಾಡಿ ಅಭ್ಯಾಸ ಇಲ್ಲ. ಅಮ್ಮನಿಗೆ ಆಗಾಗ ಸಾಥ್ ಕೊಡುತ್ತಿದ್ದೆ ಅಷ್ಟೆ.
ನಿಮ್ಮ ಮೊದಲ ಸಿನಿಮಾ ಹಾಡಿಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್ ಯಾವುದು?
ಯಾರೋ ಒಬ್ಬ ನಾರ್ಥ್ ಇಂಡಿಯನ್ ವಿದ್ಯಾರ್ಥಿ ಅನ್ಸುತ್ತೆ. ನನ್ನ ಹಾಡನ್ನು ಎಲ್ಲೋ ಕೇಳಿ ಅದನ್ನು ರೆಕಾರ್ಡ್ ಮಾಡಿಕೊಂಡು ಇಟ್ಟುಕೊಂಡು, ಫೇಸ್ಬುಕ್ನಲ್ಲಿ ಬರೆದಿದ್ದ 'ನನಗೆ ಭಾಷೆ ಗೊತ್ತಿಲ್ಲ, ಹಾಗಾಗಿ ಹಾಡಿನ ಅರ್ಥ ಗೊತ್ತಿಲ್ಲ. ಆದರೆ ಐ ಜಸ್ಟ್ ಲವ್ ದಿಸ್ ವಾಯ್ಸ್' ಅಂತ. ಭಾಷೆ ಬರದಿದ್ದರೂ ನನ್ನ ಹಾಡನ್ನು ಇಷ್ಟ ಪಟ್ಟ ಆ ಹುಡುಗನ ಮಾತುಗಳೇ ನನಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್ ಎಂದುಕೊಳ್ಳುತ್ತೇನೆ.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


