ಅಚ್ಚು ಮಚ್ಚು
ಚಿತ್ರದ ಶೀರ್ಷಿಕೆ ಮೇಲಿನ ಹಕ್ಕುಗಳಿಗಾಗಿ ಆಗಾಗ ಗಾಂಧಿನಗರದಲ್ಲಿ ಹಗ್ಗಜಗ್ಗಾಟ ನಡೆಯುವುದು ಕಾಮನ್. ಒಮ್ಮೊಮ್ಮೆ ಈ ಗುದ್ದಾಟ...

ಮುಂದೆ ಸಿನಿಮಾ ಸಾಧಕರನ್ನು, ಸಮಾಜ ಸೇವಕರು, ತ್ಯಾಗಿಗಳನ್ನು ನಾವು ಮರೆಯಬಹುದು. ಆದರೆ ಮಚ್ಚು, ಲಾಂಗು ಹಿಡಿದ 'ರೌಡಿ' ರಾಥೋಡ್ ಗಳನ್ನು ಮರೆಯಲುಂಟೆ!?
ಚಿತ್ರದ ಶೀರ್ಷಿಕೆ ಮೇಲಿನ ಹಕ್ಕುಗಳಿಗಾಗಿ ಆಗಾಗ ಗಾಂಧಿನಗರದಲ್ಲಿ ಹಗ್ಗಜಗ್ಗಾಟ ನಡೆಯುವುದು ಕಾಮನ್. ಒಮ್ಮೊಮ್ಮೆ ಈ ಗುದ್ದಾಟ ಪ್ರಚಾರದ ಅಮಲಿಗಾಗಿ ನಡೆಯುವುದೂ ಇದೆ. ಇರಲಿ. ಆದರೆ, ಇತ್ತೀಚೆಗೆ ಚಿತ್ರವೊಂದರ ಟೈಟಲ್ಗಾಗಿ ಇಬ್ಬರ ನಡುವೆ ಮಾತಿನ ಸಮರ, ಸುದ್ದಿ ಸಮರ ನಡೆಯಿತು. ಹಾಗೆ ನೋಡಿದರೆ ಅದೇನು ಮಹಾತ್ಮರ ಕಥೆಯಾಧರಿತ ಚಿತ್ರಕ್ಕೆ ಈ ಜಗಳ ನಡೆದಿಲ್ಲ. ಒಬ್ಬ 'ರಕ್ತಮಂಗಲ' ಎಂದರೆ, ಮತ್ತೊಬ್ಬರು 'ಬೆತ್ತನಗೆರೆ ಸೀನ' ಅಂತ ಮೈ ಕೊಡವಿಕೊಂಡು ಎದ್ದು ನಿಂತರು. ಹೌದು, ನಿಮ್ಮ ಊಹೆ ಸರಿಯಾಗಿದೆ.
ಕೆಲ ತಿಂಗಳುಗಳ ಹಿಂದೆ ಕೊಲೆಯಾದ ರೌಡಿ ಶೀಟರ್ ಬೆತ್ತನಗೆರೆ ಸೀನ ಬದುಕಿನ ಕಥೆಯನ್ನು ತೆರೆ ಮೇಲೆ ತರಲು ಗಾಂಧಿನಗರದಲ್ಲಿ ಮುಹೂರ್ತ ಫಿಕ್ಸ್ ಆಗಿದೆ.
ಆದರೆ, ಬೆತ್ತನಗೆರೆ ಸೀನನ ಕಥೆ ಹಿಡಿದು ಏಕಕಾಲಕ್ಕೆ ಇಬ್ಬರು ನಿರ್ದೇಶಕರು ಚಿತ್ರ ಮಾಡಲು ಹೊರಟಿದ್ದಾರೆ. ಹೀಗಾಗಿ ಒಬ್ಬರು 'ಸೀನನ ಕಥೆ ನಮ್ಮದು. ನಾನು ಅವರ ಸಂಬಂಧಿಕ' ಅಂತ ಹೇಳಿಕೊಂಡರೆ, ಮತ್ತೊಬ್ಬರು 'ಇಲ್ಲ, ಈಗಾಗಲೇ ಇದರ ಕಥೆ ಪೂರ್ತಿಯಾಗಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳಬೇಕಿದೆ ಅಷ್ಟೇ. ಮೂವರು ನಾಯಕ ನಟರೂ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಕಥೆ ನಮ್ಮದೇ' ಎನ್ನುತ್ತಾರೆ. ಅಂದಹಾಗೆ 'ರಕ್ತಮಂಗಲ' ಶೀರ್ಷಿಕೆ ನಿರ್ದೇಶನ ವಿ. ಲವ. ಈಗಾಗಲೇ ಇವರು 'ಕರ್ನಾಟಕ ಅಯೋಧ್ಯಪುರ' ಚಿತ್ರ ಮಾಡಿದ್ದಾರೆ. ಅದು ಬಿಡುಗಡೆಯ ಹಂತದಲ್ಲಿದೆ. 'ರಕ್ತಮಂಗಲ'ಕ್ಕೆ ತನಿಶ್, ರಾಕೇಶ್ ಅಡಿಗ ಹಾಗೂ ತಮಿಳಿನ ಅಥರ್ವ ನಾಯಕರು. ಈ ಪೈಕಿ ಅಥರ್ವ ಜೊತೆ ಮಾತುಕತೆ ನಡೆಯುತ್ತಿದೆ. ಜೊತೆಗೆ 'ಆ ದಿನಗಳು' ಸತ್ಯ ಇಲ್ಲಿ ಮುಖ್ಯ ಪಾತ್ರಧಾರಿ. ಮತ್ತೊಂದು ಶೀರ್ಷಿಕೆಗೆ 'ಬೆತ್ತನಗೆರೆ ಸೀನ'ಕ್ಕೆ ಮೋಹನ್ ನಿರ್ದೇಶಕರು. ಇಲ್ಲಿ 'ಸಿಲ್ಕ್' ಅಕ್ಷಯ್ ಹಾಗೂ ಸುಮಂತ್ ಶೈಲೇಂದ್ರ ನಾಯಕನಟರು. ವಿ. ಲವ ಹಾಗೂ ಮೋಹನ್ ನಡುವೆ ಬೆತ್ತನಗೆರೆ ಸೀನನ ರಕ್ತ ಚರಿತ್ರೆಗಾಗಿ ಹೋರಾಟ ನಡೆಯುತ್ತಿದೆ.
ಹಾಗೆ ನೋಡಿದರೆ, ಸಿನಿಮಾ ಜಗತ್ತು ಹೀಗೆ ರೌಡಿಗಳ ಹಿಂದೆ ಬಿದ್ದಿರುವುದು ಇದೇನೂ ಹೊಸದಲ್ಲ. ರಿಯಲ್ ಸ್ಟಾರ್ ಉಪೇಂದ್ರ 'ಓಂ' ಚಿತ್ರದ ಮೂಲಕ ಭೂಗತ ಜಗತ್ತಿನ ಹೊಸ ಕತ್ತಲ ಕೋಣೆಗಳನ್ನು ತೆರೆದಿಟ್ಟರು. 'ಓಂ' ಚಿತ್ರದ ಕ್ರೇಜು ಯಾವ ಮಟ್ಟಕ್ಕಿತ್ತು ಎಂಬುದನ್ನು ಪ್ರತ್ಯೇಕ್ಷವಾಗಿ ಹೇಳಬೇಕಿಲ್ಲ. ಚಿತ್ರದ ನಾಯಕ ಶಿವರಾಜ್ಕುಮಾರರ ಹೇರ್ಸ್ಟೈಲ್ ಫಾಲೋ ಮಾಡದ ಪಡ್ಡೆಗಳೇ ಇಲ್ಲ ಅನ್ನಿ. 'ಕರಿಯ', 'ಮೆಜೆಸ್ಟಿಕ್', 'ಡೆಡ್ಲಿ ಸೋಮ', 'ಜೋಗಿ' ಸೇರಿದಂತೆ ಇತ್ತೀಚೆಗೆ 'ಕಡ್ಡಿಪುಡಿ'ಯಂಥ ಬಹಳಷ್ಟು ಚಿತ್ರಗಳಲ್ಲಿ ರೌಡಿಗಳ ಜಗತ್ತು ತೆರೆದುಕೊಂಡಿದೆ. ಆದರೆ, ರೌಡಿಗಳ ಕತ್ತಲ ಬದುಕನ್ನು ಹೊಸ ನೆಲೆಯಲ್ಲಿ ನೋಡಬಹುದು ಅಂತ ಅಗ್ನಿ ಶ್ರೀಧರ್ ಮತ್ತವರ ತಂಡ 'ಆ ದಿನಗಳು', 'ಸ್ಲಂಬಾಲ', 'ಎದೆಗಾರಿಕೆ' ಚಿತ್ರಗಳ ಮೂಲಕ ತೋರಿಸಿಕೊಟ್ಟಿತು. ಇದರ ನಡುವೆ 'ಜೇಡ್ರಳ್ಳಿ' ಚಿತ್ರದ ಮಾಡಿ 'ನಾನು ಅವನಲ್ಲ. ನಾನು ಒಳ್ಳೆಯವ' ಎಂದು ಹೇಳಿದ್ದು ಜೇಡ್ರಳ್ಳಿ ಕೃಷ್ಣಪ್ಪ. ಇನ್ನು ಸಾಮೂಹಿಕ ಪಾತಕಿಗಳಾದ 'ದಂಡುಪಾಳ್ಯ'ದ ಗ್ಯಾಂಗ್, ರೇಪಿಸ್ಟ್ 'ಉಮೇಶ್ ರೆಡ್ಡಿ' ಕೂಡ ಬೆಳ್ಳಿತೆರೆ ಮೇಲೆ ಬಂದು ಹೋದ. ವಿಶೇಷವೋ, ದುರಂತವೋ... ಈ ಉಮೇಶ್ ರೆಡ್ಡಿ ಗಾಂಧಿನಗರದಲ್ಲಿ ಎರಡು ಚಿತ್ರಗಳಿಗೆ ಜೀವ ನೀಡುವಷ್ಟು ಲೆಜೆಂಡ್ ಆಗಿದ್ದಾನೆ ನೋಡಿ!
ಭೂಗತ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಮೆರೆದವರ ಕಥೆಗಳನ್ನು ಸಿನಿಮಾ ಮಾಡುವುದರಲ್ಲಿ ಅಚ್ಚರಿ ಇಲ್ಲ. ಅದೇ ಸಂದರ್ಭದಲ್ಲಿ ಈ ಕತ್ತಲ ಜಗತ್ತಿನ ಕುಳಗಳಲ್ಲೂ ಮಾನವೀಯತೆ ಇದೆ ಎನ್ನುವ 'ಆ ದಿನಗಳ'ಂಥ ಚಿತ್ರಗಳನ್ನು ಒಂದು ಮಟ್ಟಕ್ಕೆ ಒಪ್ಪಿಕೊಳ್ಳಬಹುದು. ಆದರೆ, ತುಕ್ಕು ಹಿಡಿದ ಲಾಂಗು, ಹಳೇ ಬ್ಲೇಡು, ರೇಜರ್ ಕೈಯಲ್ಲಿ ಹಿಡಿದು ಪಾತಕ ಜಗತ್ತಿಗೆ ಪ್ರವೇಶಿಸುತ್ತಿರುವವರು ಬೆಳ್ಳಿತೆರೆಯನ್ನು ಅಲಂಕರಿಸುತ್ತಿದ್ದಾರಲ್ಲವೆ? ಎನ್ನುವ ಅನುಮಾನ ಕಾಡುತ್ತಿರುವುದು ಉಮೇಶ್ ರೆಡ್ಡಿ, ದಂಡುಪಾಳ್ಯದ ಕಿರಾತಕರನ್ನು ಹಾಗೂ 'ಬೆತ್ತನಗೆರೆ ಸೀನ'ನ ಕಥೆಗಾಗಿ ಒದ್ದಾಡುತ್ತಿರುವವರನ್ನು ಕಂಡಾಗ. ಕನ್ನಡ ಸಾಹಿತ್ಯ ಲೋಕದಲ್ಲಿ ಬೀದಿ ರೌಡಿಗಳ ಬಗ್ಗೆ ಆತ್ಮಕತೆಗಳು, ಕಾದಂಬರಿಗಳು (ದಾದಾಗಿರಿ ದಿನಗಳು, ಎದೆಗಾರಿಕೆ ಹೊರತಾಗಿ) ಈ ಮಟ್ಟಕ್ಕೆ ಬರುತ್ತವೋ ಇಲ್ಲವೋ ಗೊತ್ತಿಲ್ಲ. ಸಿನಿಮಾ ಮಂದಿ ಮಾತ್ರ ರೌಡಿಗಳ ಬೆನ್ನು ಬಿದ್ದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಹಾತ್ಮರಿಗೂ ಸಿಗದಷ್ಟು ಮಹತ್ವ ಈ ಕತ್ತಲ ಸಾಮ್ರಾಜ್ಯ ಸಾಮ್ರಾಟರಿಗೆ ಸಿಗುತ್ತಿದೆ. ಮುಂದೊಂದಿನ ಸಿನಿಮಾ ಜಗತ್ತಿನ ಸಾಧಕರು, ಹೊರ ಪ್ರಪಂಚದ ಮಹಾತ್ಮರು ನಮ್ಮಿಂದ ಮರೆಯಾಗಬಹುದು. ಆದರೆ, ಮಚ್ಚು ಹಿಡಿದು ನಾಲ್ಕೈದು ಮಂದಿಯನ್ನು ಕೊಲೆ ಮಾಡಿದವನೋ, ಹತ್ತಾರು ರೇಪ್ ಮಾಡಿದ ವಿಕೃತರು, ದರೋಡೆಕೋರರು ಮರೆಯಾಗಲ್ಲ. ಯಾಕೆಂದರೆ ನಿಧಾನಕ್ಕೆ ಅವರು 'ಸಿಲ್ವರ್ ಸ್ಕ್ರೀನ್' ವೀರರಾಗುತ್ತಿದ್ದಾರೆ.
ಅಂದಹಾಗೆ, ಸಿನಿಮಾ ಮಂದಿ ಕಥೆಗಳಿಗಾಗಿ ಈ ಪಾಟಿ ರೌಡಿಗಳ ಹಿಂದೆ ಬಿದ್ದಿರುವುದನ್ನು ನೋಡಿರುತ್ತಿರುವ ಒಂದಿಷ್ಟು ಹಳೇ ಪಂಟರ್ಗಳಾದ ಸೈಲೆಂಟ್ ಸುನೀಲ, ಜೆಸಿಬಿ ನಾರಾಯಣ, ಹಂದಿ ಅಣ್ಣಿ ಗ್ಯಾಂಗ್ ಗಾಂಧಿನಗರದ ನಿರ್ದೇಶಕರಿಗಾಗಿ ಕಾದು ಕುಳಿತಿದ್ದಾರಂತೆ. ಇನ್ನು ಶಿವಮೊಗ್ಗದ ಲವ-ಕುಶ, ತಮಿಳ್ಕುಮಾರ, ಹೆಬ್ಬೆಟ್ಟು ಮಂಜ, ಕತ್ತರಿಗುಪ್ಪೆ ಸೀನನ ಆತ್ಮಗಳೂ ಡೈರೆಕ್ಟರ್ಗಳ ಬರುವಿಕೆಗಾಗಿ ಎದುರು ನೋಡುತ್ತಿವೆ. ಮಹಾತ್ಮರಿಗೆ ಬದಲಾಗಿ ಇಂಥವರಿಗೆ ಚಿತ್ರಜಗತ್ತು ಒಂದು ಸ್ಥಾನ ಕಲ್ಪಿಸಲು ಪಣ ತೊಟ್ಟಿದೆ ಎಂದು ಉಮೇಶ್ ರೆಡ್ಡಿ, ಬೆತ್ತನಗೆರೆ ಸೀನ ಕಥೆಗಾಗಿ ಕಾದಾಡುತ್ತಿರುವವರನ್ನು ನೋಡಿದಾಗ ಹೀಗನಿಸುತ್ತಿದೆ. 'ರೌಡಿ' ರಾಥೋಡ್ಗೆ ಜೈ!
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


