ಸಿನಿಮಾ ಲೇಖನ

ಮತ್ತೆ ಮೆಜೆಸ್ಟಿಕ್!

ಮತ್ತೆ ಮೆಜೆಸ್ಟಿಕ್!
Published On :

ಬಲಗೈಯ್ಯಲ್ಲಿ ಲಾಂಗು. ಎಡಗೈಯ್ಯಲ್ಲಿ ಕೆಂಗುಲಾಬಿ ಮತ್ತು ಮಲ್ಲಿಗೆ ಮಾಲೆ. ಕೊರಳಲ್ಲಿ ಹೂಹಾರದ ಜತೆ ಬಿಯರ್ ಬಾಟಲಿ!

ವಿಜಯದಶಮಿಯ ಶುಭ ದಿವಸದಂದು ಇಂಥ ಅವತಾರ ತಾಳಿದ್ದರು ನಿರ್ಮಾಪಕ ಉಮೇಶ್ ಬಣಕಾರ್. 'ಗಾಬರಿ ಬೀಳ್ಬೇಡಿ ಸ್ವಾಮಿ. 'ಮೆಜೆಸ್ಟಿಕ್ ಎಕ್ಸ್‌ಪ್ರೆಸ್‌'ಗಾಗಿ ನನ್ನ ವೇಷ ಇದು' ಎಂದು ಸ್ವತಃ ಬಣಕಾರ್ ಸ್ಪಷ್ಟನೆ ನೀಡಿದಾಗಲೇ ಪತ್ರಕರ್ತರೂ ಸೇರಿದಂತೆ ಅಲ್ಲಿ ಸೇರಿದ್ದವರಿಗೆಲ್ಲ ನಿರಾಳ ಭಾವ.

ಕನ್ನಡ ಚಿತ್ರೋದ್ಯಮದ ಸಕ್ರಿಯ ನಿರ್ಮಾಪಕರಲ್ಲಿ ಉಮೇಶ್ ಬಣಕಾರ್ ಒಬ್ಬರು. ಚಿತ್ರೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸದಾ ಮುಂದು. ಹಾಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ. ನಟನೆ ಅವರಿಗೆ ಹೊಸತೇನೂ ಅಲ್ಲ. 'ರಂಜಿತಾ', 'ಗಾಜಿನಮನೆ' ಮೊದಲಾದ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತೀರಾ ಇತ್ತೀಚೆಗೆ 'ಬಹುಪರಾಕ್‌' ಚಿತ್ರಕ್ಕಾಗಿಯೂ ಕ್ಯಾಮೆರಾ ಎದುರಿಸಿದ್ದಾರೆ. ಇಂತಿಪ್ಪ ಬಣಕಾರ್ ಎನ್ನುವ ಪ್ರತಿಭೆ ಈಗ ನಾಯಕನಾಗಿ ಮಿಂಚಲು ಸಿದ್ಧವಾಗಿದೆ. 'ಮೆಜೆಸ್ಟಿಕ್ ಎಕ್ಸ್‌ಪ್ರೆಸ್‌'ನಲ್ಲಿ ಅವರೇ ಹೀರೋ.

ದರ್ಶನ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಭದ್ರಗೊಳಿಸಿದ 'ಮೆಜೆಸ್ಟಿಕ್‌' ನಿರ್ಮಾಪಕ ಬಾ.ಮಾ.ಹರೀಶ್ ಅವರೇ ಈಗ 'ಮೆಜೆಸ್ಟಿಕ್ ಎಕ್ಸ್‌ಪ್ರೆಸ್‌' ನಿರ್ಮಿಸುತ್ತಿದ್ದಾರೆ. 'ಅಣ್ಣಾ, ನೀನು ಹೀರೋ ಆಗ್ಬೇಕು' ಎಂದು ಹರೀಶ್ ಫೋನ್ ಮಾಡಿ ಹೇಳಿದಾಗ ಬಣಕಾರ್ ಯಾವುದೋ ಮೀಟಿಂಗ್‌ನಲ್ಲಿದ್ದರಂತೆ. 'ಹೋಗಪ್ಪಾ, ಸುಮ್ನೆ ನನ್ನ ಟೈಮ್ ವೇಸ್ಟ್ ಮಾಡ್ಬೇಡ' ಎಂದು ಫೋನ್ ಇಟ್ಟರಂತೆ. ಹರೀಶ್ ಸುಮ್ಮನಿರುವ ಆಸಾಮಿಯೇ? ಬಣಕಾರ್ ಬೆನ್ನು ಬಿದ್ದರು. 'ನೀನು ಆ್ಯಕ್ಟ್ ಮಾಡ್ಲೇಬೇಕು' ಎಂದು ಹಠ ಹಿಡಿದರು. ಬಲವಂತದಿಂದ ಕೂರಿಸಿ ಕಥೆ ಹೇಳಿದರು. ಸ್ಟೋರಿ ಕೇಳುತ್ತಿದ್ದಂತೆ ಬಣಕಾರ್‌ರಿಂದ ಗ್ರೀನ್‌ಸಿಗ್ನಲ್ ಬಂತು. 'ಈ ಚಿತ್ರಕ್ಕಾಗಿ ನನ್ನ ಗೆಟಪ್ ಅನ್ನು ಜಾಸ್ತಿ ಬದಲಿಸಿಕೊಳ್ಳಬೇಕಿಲ್ಲ. ನನ್ನ ಸ್ಟೈಲ್ ಮತ್ತು ಮನೋಭಾವಕ್ಕೆ ಪಾತ್ರ ಚೆನ್ನಾಗಿ ಒಪ್ಪುತ್ತದೆ' ಎಂದು ಪತ್ರಕರ್ತರ ಬಳಿ ಹೇಳಿಕೊಂಡರು ಬಣಕಾರ್.

ಇನ್ನೊಂದು ವಿಶೇಷ ಎಂದರೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವವರೆಲ್ಲ ನಿರ್ಮಾಪಕರೇ. ಖುದ್ದು ಬಾ.ಮಾ.ಹರೀಶ್, ಬಿ.ಜಯಶ್ರೀ, ಜೈಜಗದೀಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರಿಸುಬ್ಬು ಸೇರಿದಂತೆ 15 ನಿರ್ಮಾಪಕರು ನಟಿಸಲಿದ್ದಾರೆ. 'ನಿರ್ಮಾಪಕರು ಒಳ್ಳೆಯ ನಟರು ಕೂಡ. ಅವರ ಪ್ರತಿಭೆಗೂ ಅವಕಾಶ ಕೊಡಬೇಡವೇ? ಹೀಗಾಗಿ ನಿರ್ಮಾಪಕರೇ ನಟಿಸಲಿದ್ದಾರೆ' ಎಂದರು ಹರೀಶ್.

ಸಿನಿಮಾಗಳಾದ 'ಆತ್ಮ' ಮತ್ತು 'ಕನಸು', ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವ ಇರುವ ಸುಶೀಲ್ ಅವರು ಈ ಸಿನಿಮಾದ ನಿರ್ದೇಶಕರು. 'ಇದು ಕಾಮಿಡಿ ಸಿನಿಮಾ. ಹೀರೋ ತನ್ನ ಕುಟುಂಬದ ಸಲುವಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡುವ ಕಥೆ ಇದೆ' ಎಂದು ವಿವರಿಸಿದರು ಅವರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಎಲ್.ಎನ್.ಶಾಸ್ತ್ರಿ ಸಂಗೀತ ನೀಡಲಿದ್ದಾರೆ. ನಾಯಕಿ ಆಯ್ಕೆ ನಡೆಯಬೇಕಿದೆ. ಬರೀಶ್ ಮತ್ತು ಬಣಕಾರ್‌ಗೆ ಶುಭ ಹಾರೈಸಲು ಮುಹೂರ್ತ ನಡೆದ ಬೆಂಗಳೂರು ರಾಜಾಜಿನಗರ ಆರನೇ ಹಂತದ ವೀರಾಂಜನೇಯ ದೇವಸ್ಥಾನಕ್ಕೆ ಚಿತ್ರರಂಗದ ಪ್ರಮುಖ ನಿರ್ಮಾಪಕರ ದಂಡೇ ಹಾಜರಿತ್ತು.

- ರಾಜೇಶ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.