ಸಿನಿಮಾ ಲೇಖನ

ನಿಮ್ಮಲ್ಲೇ ನಾವು

ನಿಮ್ಮಲ್ಲೇ ನಾವು
Published On :

ನಮ್ಮ ದೇಶವನ್ನು ಮಾತ್ರವಲ್ಲ ಚಿತ್ರೋದ್ಯಮವನ್ನೂ ಮುಕ್ತ ಮಾರುಕಟ್ಟೆ, ಮುಕ್ತ ಆರ್ಥಿಕ ನೀತಿಗಳು ನಿರಂತರವಾಗಿ ಕಚ್ಚುತ್ತಿವೆ. ಅದರಲ್ಲೂ ಕನ್ನಡ ಸಿನಿಮಾ ಪರದೆಗೆ ಯಾವುದೇ ರಕ್ಷಣೆ ಇಲ್ಲ. ಹೀಗಾಗಿ ಇಲ್ಲಿಗೆ ಯಾರು ಬೇಕಾದರೂ ಬರಬಹುದು. ಅಷ್ಟರ ಮಟ್ಟಿಗೆ ನಮ್ಮ ಗಾಂಧಿನಗರದ ಬಾಗಿಲಿನ ಒಡೆಯರು ಉದಾರಿಗಳು!

ಇತ್ತೀಚೆಗಷ್ಟೆ ಚಿತ್ರವೊಂದರ ಮುಹೂರ್ತ ನಡೆಯಿತು. ಅದರ ನಾಯಕ, ನಾಯಕಿ ಎಲ್ಲರೂ ಪರಭಾಷೆಯವರೇ. ಆದರೂ ಅದು ಕನ್ನಡ ಚಿತ್ರ. ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಸೆಟ್ಟೇರುತ್ತಿರುವ ಆ ಚಿತ್ರದ ಹೆಸರು 'ನಿನ್ನಲ್ಲೇ ನಾನು'. ತೆಲುಗಿನ ವರುಣ್ ಸಂದೇಶ್ ನಾಯಕ, ಬಾಂಬೆ ಹುಡುಗಿ ಬಾರ್ಬಿ ಚೋಪ್ರಾ ನಾಯಕಿ. ಪ್ರಿಯಾಂಕ ಚೋಪ್ರಾಳ ಸೋದರಿ ಈಕೆ. ಅಜಯ್ ಸೂರ್ಯ ನಿರ್ಮಾಪಕರು. ರವಿರಾಜ್ ನಿರ್ದೇಶಕರು. ತೆಲುಗಿನ ಚಕ್ರಿ ಸಂಗೀತ. ಡಾ. ಬ್ರಹ್ಮನಂದಂ, ತಾಗುಪೋತು ರಮೇಶ್, ಶಾಂತನಂ, ಸತ್ಯನಾರಾಯಣ, ಸುಮನ್ ಶೆಟ್ಟಿ ಹೀಗೆ ಪಕ್ಕದೂರಿನ ಪೋಷಕ ನಟರೊಂದಿಗೆ ನಮ್ಮೂರಿನ ಸಾಧುಕೋಕಿಲಾ, ತಬಲ ನಾಣಿ ಇದ್ದಾರೆ.

ಇನ್ನು ಚಿತ್ರದಲ್ಲಿ ಐಟಂ ಸಾಂಗ್ ಇದೆಯೋ ಏನೋ, ಪೋಸ್ಟರ್‌ನಲ್ಲಿ ನಟಿ ಚಾರ್ಮಿ ಕೌರ್‌ರ ಫೋಟೋ ಇತ್ತು. ಕನ್ನಡ, ತೆಲುಗು, ತಮಿಳಿನಲ್ಲಿ ತಯಾರಾಗಲಿದೆ. ಚಿತ್ರದ ನಾಯಕ ವರುಣ್ ಸಂದೇಶ್ ಕನ್ನಡಿಗರಿಗೆ ಅಪರಿಚಿತ. ಆದರೆ, ಈತ ಅಭಿನಯಿಸುವ ತೆಲುಗು ಚಿತ್ರಗಳು ಮಿನಿಮಣ್ ಗ್ಯಾರಂಟಿಯವು. ಈತನ ಮೊದಲ ಚಿತ್ರ 'ಹ್ಯಾಪಿ ಡೇಸ್‌' ಕನ್ನಡದಲ್ಲಿ 'ಜಾಲಿಡೇಸ್‌' ಆಗಿದ್ದು ಎಲ್ಲರಿಗೂ ಗೊತ್ತಿದೆ. 'ಚಿತ್ರದ ಕಥೆ ಚೆನ್ನಾಗಿದೆ. ಮೊದಲ ಕನ್ನಡ  ಸಿನಿಮಾ ಎನ್ನುವ ಸಂಭ್ರಮ ಇದೆ. ಜೊತೆಗೆ ಏಕಕಾಲಕ್ಕೆ ಮೂರು ಭಾಷೆಯಲ್ಲಿ ನನ್ನ ಚಿತ್ರ ಸಿದ್ಧವಾಗುತ್ತಿದೆ. ನಿರ್ದೇಶಕ ರವಿರಾಜ್ ಹಾಗೂ ನಿರ್ಮಾಪಕ ಅಜಯ್ ಸೂರ್ಯ ನನ್ನ ಸ್ನೇಹಿತರು. ನಾನು ನಟ ಆಗುವುದಕ್ಕೂ ಮೊದಲೇ ಪರಿಚಯ. ಒಂದು ಸಿನಿಮಾ ಮಾಡೋಣ. ಮೊದಲು ಕನ್ನಡದಲ್ಲಿ ಮಾಡಿ, ನಂತರ ಬೇರೆ ಭಾಷೆಗಳಲ್ಲಿ ಮಾಡೋಣ ಅಂತಂದ್ರು. ನಾನು ಕಥೆ ಕೇಳಿ ಓಕೆ ಅಂದೆ. ನಿರ್ದೇಶಕರು ತುಂಬಾ ಸ್ಕ್ರೀನ್ ಪ್ಲೇ ಮಾಡಿಕೊಂಡಿದ್ದಾರೆ. ನನ್ನ ಮಟ್ಟಿಗೆ ಇದು ಒಳ್ಳೆಯ ಚಿತ್ರ ಆಗುತ್ತದೆ' ಎಂದರು ವರುಣ್.

ಕೌಟುಂಬಿಕ ಮನರಂಜನೆ ಚಿತ್ರದ ಪ್ರಧಾನ ಬಂಡವಾಳ. ಈ ಹಿಂದೆ 'ನೀನೆಲ್ಲೋ ನಾನಲ್ಲೇ' ಎನ್ನುವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಹಾಗೂ 'ಶತೃ' ಚಿತ್ರಕ್ಕೆ ನಿರ್ಮಾಪಕರಾಗಿದ್ದ ಜೆಕೆ ಈ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ. 'ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ವಿಶೇಷವೆಂದರೆ, ದಕ್ಷಿಣ ಭಾರತದ ನಾಲ್ಕು ಮಹಾನ್ ಸಂಗೀತ ದಿಗ್ಗಜರು ಈ ಚಿತ್ರದಲ್ಲಿ ಹಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಪ್ರೀತಿ ಇರುವಂಥ ಒಳ್ಳೆಯ ತಂಡ ಸೇರಿ ಮಾಡುತ್ತಿರುವ ಚಿತ್ರವಿದು' ಎಂದರು ಜೆಕೆ. ಡಿಫರೆಂಟ್ ಡ್ಯಾನಿ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ತೆಲುಗು ಸಾಹಸಗಳು ಗಾಳಿಯಲ್ಲೇ ನಡೆಯುವಂಥವು. ಆದರೆ, ಡ್ಯಾನಿ ಇಲ್ಲಿ ತುಂಬಾ ನ್ಯಾಚುರಲ್ ಫೈಟ್‌ಗಳನ್ನು ಸಂಯೋಜಿಸಿದ್ದಾರಂತೆ. ಒಟ್ಟು ನಾಲ್ಕು ಫೈಟ್‌ಗಳಿವೆ. ಮಹೇಶ್ ಗಾಂಧಿ, ಅರುಣ್ ದೇವಸ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಐಡಿಬಿ ಬ್ಯಾಂಕ್ ಮ್ಯಾನೇಜರ್ ನೀತಾ ಸಿಂಗ್ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ರಾಘವೇಂದ್ರ ಛಾಯಾಗ್ರಹಣ. ನಿರ್ಮಾಪಕ ಅಜಯ್ ಸೂರ್ಯ, ಕೆ. ಮಂಜು ಜೊತೆ ಸೇರಿ ಚಿತ್ರ ನಿರ್ಮಾಣ ಮಾಡಿದವರು. ಮಂಜು ಜೊತೆ ಇದ್ದ ಮೇಲೆ ನಿರ್ಮಾಣದ ಎಲ್ಲ ದಾರಿಗಳನ್ನೂ ಬಲ್ಲವರೇ ಆಗಿರುತ್ತಾರೆ. 'ನಾನು ಮತ್ತು ನನ್ನ ಸ್ನೇಹಿತ ಮಣಿಕುಮಾರ್ ಸೇರಿ ಈ ಚಿತ್ರ ಮಾಡುತ್ತಿದ್ದೇವೆ. ಎಂಟು ವರ್ಷಗಳ ನಂತರ ನಿರ್ಮಾಣಕ್ಕೆ ಬಂದಿದ್ದೇನೆ. ಪಕ್ಕಾ ಯೂನಿವರ್ಸಲ್ ಕಥೆ ಇದು' ಎಂದರು ಅಜಯ್.
ಚಿತ್ರದ ನಾಯಕಿ ಬಾರ್ಬಿ ಚೋಪ್ರಾ ಈಗಾಗಲೇ ಹಿಂದಿ ಹಾಗೂ ತೆಲುಗಿನಲ್ಲಿ ಒಂದೊಂದು ಚಿತ್ರ ಮಾಡಿದ್ದಾರೆ. ಜಾಹೀರಾತು ಜಗತ್ತಿನಲ್ಲಿ ಗುರುತಿಸಿಕೊಂಡು ಪೇಜ್ ತ್ರಿ ಪಾರ್ಟಿಗಳಲ್ಲಿ ಜಗಮಗಿಸುತ್ತಿದ್ದ ಹುಡುಗಿ ಈಕೆ. 'ಪ್ರಿಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರೋಮ್ಯಾಂಟಿಕ್ ಕಾಮಿಡಿ ಪಾತ್ರ. ಕತೆ ತುಂಬಾ ಚೆನ್ನಾಗಿದೆ' ಎನ್ನುತ್ತಾಳೆ ಬಾರ್ಬಿ. ಅಚ್ಚರಿ ಎಂದರೆ, ನಿರ್ದೇಶಕ ರವಿರಾಜ್ ಒಂದೇ ಒಂದು ಮಾತು ಆಡಲಿಲ್ಲ. ಕಾರಣ ಜೋತಿಷ್ಯ. ಹೌದು, ಅವರ ನಿರ್ದೇಶನದ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರೆ ಸಿನಿಮಾ ಸೋಲುತ್ತದೆಂಬ ಮೂಢನಂಬಿಕೆ. ಯಾರು ತಲೆಗೆ ತುಂಬಿದರೋ ಏನೋ, ರವಿರಾಜ್ ಮೌನಿಯಾಗಿದ್ದರು.

- ಕೇಶವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.