ಗಣೇಶ ಬಂದ ಸಕ್ಕರೆ ತಂದ
ನಿರ್ದೇಶಕ ಅಭಯ್ ಸಿಂಹ 'ಗುಬ್ಬಚ್ಚಿಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದವರು. ನಂತರ...

ನಿರ್ದೇಶಕ ಅಭಯ್ ಸಿಂಹ 'ಗುಬ್ಬಚ್ಚಿಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದವರು. ನಂತರ ಮಲೆಯಾಳಂನ ಸ್ಟಾರ್ ನಟ ಮಮ್ಮೂಟ್ಟಿ ಅವರನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತಂದು 'ಶಿಕಾರಿ' ಮಾಡಿ ಸೈ ಎನಿಸಿಕೊಂಡವರು. ಮೊದಲ ಚಿತ್ರ ಕಲಾತ್ಮಕತೆಯ ಬಿರುದು ಕೊಟ್ಟರೆ, ಎರಡನೆಯದು ಕಮರ್ಷಿಯಲ್ ಟಚ್ ಕೊಟ್ಟಿತು. ಈ ಎರಡೂ ಚಿತ್ರಗಳ ನಂತರ ಮತ್ತೆ ಮೀಡಿಯಾ ಹೌಸ್ನಲ್ಲಿ ಅಭಯ್ ಸಿಂಹ ಕಾಣಿಸಿಕೊಂಡು ಸಿಹಿ ಸಿಹಿಯಾದ ಸಕ್ಕರೆ ಮಾಡಿಕೊಟ್ಟಿದ್ದಾರೆ. 'ಗೋಲ್ಡನ್ ಸ್ಟಾರ್' ಗಣೇಶ್ ಮೂಲಕ ಪ್ರೇಕ್ಷಕ ಈ ವಾರ ಎಲ್ಲ ಚಿತ್ರಮಂದಿರಗಳಲ್ಲಿ 'ಸಕ್ಕರೆ' ಸವಿಯಲಿದ್ದಾರೆ. 'ವಿ ಮಿಸ್ ಯೂ ಗಣೇಶ್' ಎನ್ನುತ್ತಿದ್ದ ಅವರ ಅಭಿಮಾನಿಗಳು ಇನ್ನು ಖುಷಿಪಡಲು ಅಡ್ಡಿಯಿಲ್ಲ.
ಇಡೀ ಚಿತ್ರತಂಡ ಮಾತ್ರವಲ್ಲ, ಗಾಂಧಿನಗರವೂ ಈ ಚಿತ್ರದ ಬಗ್ಗೆ ಮಾತನಾಡಿಕೊಳ್ಳುತ್ತಿದೆ ಎಂದರೆ ಅದಕ್ಕೆ ಕಾರಣ ಮೀಡಿಯಾ ಹೌಸ್ನ ಬಿ. ಸುರೇಶ್ ಹಾಗೂ ಮತ್ತವರ ಪತ್ನಿ ಶೈಲಜಾ ನಾಗ್ ದಂಪತಿಯ ಸಿನಿಮಾ ಪ್ರೀತಿ, ನಿರ್ದೇಶಕ ಅಭಯ್ ಸಿಂಹರ ಸಿನಿಮಾಭಿರುಚಿ ಹಾಗೂ ಗೆಲ್ಲಲೇಬೇಕಾದ ಅನಿವಾರ್ಯತೆಯಿಂದ ಅಭಿನಯಿಸಿರುವ ಗಣೇಶ್ರ ನಟನೆ. ಈ ಎಲ್ಲ ಕಾರಣಗಳೂ ಸೇರಿಕೊಂಡು 'ಸಕ್ಕರೆ' ಪ್ರೇಕ್ಷಕನ ನಿರೀಕ್ಷೆಯ ಒಡಲನ್ನು ಸೇರಲಿದೆ.
ಹೀಗಾಗಿ ನಟ ಗಣೇಶ್ ಮತ್ತೆ ಫೀನಿಕ್ಸ್ನಂತೆ ಎದ್ದು ಬರಬೇಕಿದೆ. ಗಣೇಶ್ರಿಗೆ ಮಾತ್ರವಲ್ಲ, ಅವರ ಅಭಿಮಾನಿಗಳಿಗೂ ಮತ್ತೊಮ್ಮೆ 'ಗೋಲ್ಡನ್ ಸ್ಟಾರ್'ರ ಗೆಲುವಿನ ಗ್ರಾಫ್ ಹೆಚ್ಚಾಗುವ ಅನಿವಾರ್ಯತೆ ಇದೆ. ಮಳೆ, ಗಾಳಿ ಕಾರಣಕ್ಕಾಗಿ 'ಬೊಂಬಾಟ್' ಆಗಿ ಗೆಲುವಿನ 'ಸರ್ಕಸ್', 'ಅರಮನೆ' ಕಟ್ಟಿಕೊಂಡವರು ಗಣೇಶ್. ಭಟ್ಟರ ಮಳೆ ನಂತರ ಮತ್ತೆ ಮತ್ತೆ ಅದೇ ಮಳೆಯಲ್ಲಿ ನೆನೆದರೂ ಗಣೇಶ್ರ ಚಿತ್ರಗಳು ಅಬ್ಬರ ಮಾಡದೆ, 'ಕೂಲ್' ಆಗಿಯೇ ಇದ್ದವು. ಹೀಗಾಗಿ ಗಾಂಧಿನಗರದಲ್ಲೂ ಗಣೇಶ್ರ ಚಿತ್ರಗಳ ಬಗ್ಗೆ 'ಏನೋ ಒಂಥರಾ' ಮಾತನಾಡಿಕೊಳ್ಳಲು ಶುರುಮಾಡಿದರು. ಆದರೆ, ತನ್ನಲ್ಲಿ 'ಉಲ್ಲಾಸ ಉತ್ಸಾಹ' ಇನ್ನೂ ಕಡಿಮೆಯಾಗಿಲ್ಲ ಎಂದು ತೋರಿಸುವ ನಿಟ್ಟಿನಲ್ಲಿ ಕೈಯಲ್ಲಿ 'ಸಕ್ಕರೆ' ಹಿಡಿದು ಬರುತ್ತಿದ್ದಾರೆ. ಗಣೇಶ್ ಕೊಡುವ ಈ 'ಸಕ್ಕರೆ'ಯನ್ನು ಪ್ರೇಕ್ಷಕರು ಅಕ್ಕರೆಯಿಂದ ಸ್ವೀಕರಿಸುತ್ತಾರೆಂಬ ನಂಬಿಕೆ ನಿರ್ಮಾಪಕ ಬಿ. ಸುರೇಶ್ ಹಾಗೂ ನಿರ್ದೇಶಕ ಅಭಯ್ ಸಿಂಹ ಅವರದ್ದು.
ಒಟ್ಟಿನಲ್ಲಿ ಮತ್ತೆ ಗಾಂಧಿನಗರದಲ್ಲಿ ಗೋಲ್ಡನ್ ಸ್ಟಾರ್ನ ಆಟ ಶುರುವಾಗಲಿದೆಯೇ? ಗೊತ್ತಿಲ್ಲ. ಆದರೆ, ಮೊದಲ ಚಿತ್ರದಲ್ಲೇ (ಗುಬ್ಬಚ್ಚಿಗಳು) ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಅಭಯ್ ಸಿಂಹ ಹಾಗೂ ಸಿನಿಮಾದ ಎಲ್ಲ ವ್ಯಾಕರಣಗಳನ್ನು ಬಲ್ಲ, ಸ್ವತಃ ನಿರ್ದೇಶಕರೂ ಆಗಿರುವ ಬಿ. ಸುರೇಶ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಾರಣ 'ಸಕ್ಕರೆ' ಚಿತ್ರ ಸಹಜವಾಗಿ ಒಂದಿಷ್ಟು ನಿರೀಕ್ಷೆ ಹೆಚ್ಚು ಮಾಡಿದೆ. ಗಣೇಶ್ ಜೊತೆ ಗ್ಲ್ಯಾಮರ್ ನಾಯಕಿ ದೀಪಾ ಸನ್ನಿಧಿ ಹೆಜ್ಜೆ ಹಾಕಿದ್ದಾರೆ. 'ಕಥೆ ಮತ್ತು ಚಿತ್ರಕಥೆಯಲ್ಲಿ ಸಾಕಷ್ಟು ಭಿನ್ನತೆ ಇದೆ. ನನ್ನ ಮಟ್ಟಿಗೆ ಇದು ಒಂದು ರೆಗ್ಯುಲರ್ ಸಿನಿಮಾ ಅಲ್ಲ. ಅಭಯ್ ಸಿಂಹರ ಸ್ಕ್ರೀನ್ ಪ್ಲೇ ಚಿತ್ರದ ನಿಜವಾದ ಜೀವಾಳ. ಸಾಕಷ್ಟು ತಿರುವುಗಳು ಇಲ್ಲಿವೆ. ಪ್ರತಿ ತಿರುವು ನೋಡುಗನನ್ನು ಕುತೂಹಲದಲ್ಲಿ ಮುಳಗಿಸುತ್ತದೆ. ಚಿತ್ರ ಏಕಕಾಲದಲ್ಲಿ ಎರಡು ಮೂರು ಆಯಾಮಗಳಲ್ಲಿ ಸಾಗುತ್ತದೆ. ಹೀಗಾಗಿ ಬೋರ್ ಹೊಡೆಸಲ್ಲ' ಎಂಬುದು ಗಣೇಶ್ರ ಭರವಸೆ. ನೇರವಾಗಿ ಮತ್ತು ಲೈವ್ಲಿ ಆಗಿ ನಡೆಯುವ ರೋಮ್ಯಾಂಟಿಕ್ ಸಿನಿಮಾ. ಆದರೆ, ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರಾಗಿದ್ದರಿಂದ ಗಣೇಶ್ರಿಗೆ 'ಸಕ್ಕರೆ' ಮಾಮೂಲಿ ಚಿತ್ರ ಎನಿಸುತ್ತಿಲ್ಲ. ಅಂದಹಾಗೆ, ಇಲ್ಲಿ ಗಣೇಶ್ ಲವರ್ ಬಾಯ್ ಪಾತ್ರ ಮಾಡುತ್ತಿದ್ದಾರೆ. ಎಂದಿನಂತೆ ಅವರ ಫ್ಲೇವರ್ ಕೂಡ ಇಲ್ಲಿದೆ. ಮೆಲೋಡಿ ಹಾಡು, ಪ್ರೀತಿ, ಪ್ರೇಮ, ಫ್ಯಾಮಿಲಿ ಡ್ರಾಮಾ... ಹೀಗೆ ಹತ್ತಾರು ಕೋನಗಳು ಇಲ್ಲಿವೆ. ಅಲ್ಲದೆ, ಪ್ರತಿ ಪ್ರೇಮಕಥೆಯಲ್ಲೂ ನಾಯಕನ ಪಾತ್ರದೊಟ್ಟಿಗೆ ಬೆಸೆದುಕೊಂಡಿರುತ್ತದೆ. ಹೀಗಾಗಿ, ಚಿತ್ರದಲ್ಲಿನ ಪ್ರತಿ ಸನ್ನಿವೇಶಕ್ಕೂ ನಾಯಕನೇ ರೂಪಕನಾಗಿರುತ್ತಾನೆ. 'ಈ ಚಿತ್ರದಲ್ಲಿ ಇಬ್ಬರು ಘಟಾನುಘಟಿಗಳಿದ್ದಾರೆ. ಇಬ್ಬರೂ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು. ನನ್ನ ಪ್ರಕಾರ, ಬಿ. ಸುರೇಶ್ರ ಮೀಡಿಯಾ ಹೌಸ್ ಸಂಸ್ಥೆಗೆ ಸಿನಿಮಾ ಅಂದರೆ ಫ್ಯಾಷನ್. ತುಂಬಾ ನಾಜೂಕಾಗಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅದರಲ್ಲೂ ಸುರೇಶ್, ಮೊದಲ ಬಾರಿಗೆ ರೋಮ್ಯಾಂಟಿಕ್ ಚಿತ್ರ ಮಾಡಿರುವುದು ವಿಶೇಷ' ಎನ್ನುತ್ತಾರೆ ಗಣೇಶ್. ಬೆಂಗಳೂರು, ಮಂಗಳೂರು, ಮಡಿಕೇರಿ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 'ಚಿತ್ರದಲ್ಲಿ ನಿಮ್ಮ ಮಳೆ ಗಣೇಶ್ನ ಹೆಜ್ಜೆ ಗುರುತುಗಳನ್ನೂ ನೋಡಬಹುದು. ಅಲ್ಲಲ್ಲಿ ನನ್ನ ಪ್ಲೇವರ್ ಕೂಡ ಇದೆ' ಎನ್ನುವ ಗಣೇಶ್, ಶೀರ್ಷಿಕೆಗೆ ತಕ್ಕಂತೆ ಪ್ರೇಕ್ಷಕರಿಗೆ ಚಿತ್ರದಲ್ಲಿ ಹಲವು ಸಿಹಿ ಅಂಶಗಳಿವೆ. ಖಂಡಿತ ಎಲ್ಲ ವರ್ಗದ ಪ್ರೇಕ್ಷಕರೂ ನೋಡುವಂಥ ಚಿತ್ರ ಇದಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸುತ್ತಾರೆ.
ಈ ಹಿಂದೆ ಬಂದ 'ಕೂಲ್', 'ಶೈಲೂ', 'ಮುಂಜಾನೆ', 'ರೋಮಿಯೋ' ಚಿತ್ರಗಳ ನಂತರ ಗಣೇಶ್ 'ಸಕ್ಕರೆ' ಮೂಲಕ ಪ್ರೇಕ್ಷನಿಗೆ ದರ್ಶನವಾಗುತ್ತಿದ್ದಾರೆ. ತುಂಬಾ ಗ್ಯಾಪ್ ಅನಿಸಿದರೂ ಅದರ ಕೊರತೆಯನ್ನು ಈ ಚಿತ್ರ ನೀಗಿಸಲಿದೆ ಎಂಬ ನಂಬಿಕೆ ಗಣೇಶ್ ಸೇರಿದಂತೆ ಇಡೀ ಚಿತ್ರತಂಡದ್ದು.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


