ವಿಜಿ ನಿಖಿತ
'ಮಹಿಳೆಯರೇ ಮತ್ತು ಮಹಿಳೆಯರೇ' ಎನ್ನುತ್ತ ಮಾತು ಶುರುಮಾಡಿದ ರಿಂಗ್ರೋಡ್ ಶುಭಾ ಚಿತ್ರದ ಇನ್ನೊಂದಿಷ್ಟು ವಿಷಯಗಳ...

ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಟ್ಲೀಸ್ಟ್ ಎಲ್ಲರಿಗೂ ಗೊತ್ತಿರದ ಒಂದು ಸುದ್ದಿ ಎಂದರೆ ಈ ಚಿತ್ರಕ್ಕೆ ನಟಿ ನಿಖಿತಾ ಎಂಟ್ರಿ ಕೊಟ್ಟಿರುವುದು.
'ಮಹಿಳೆಯರೇ ಮತ್ತು ಮಹಿಳೆಯರೇ' ಎನ್ನುತ್ತ ಮಾತು ಶುರುಮಾಡಿದ ರಿಂಗ್ರೋಡ್ ಶುಭಾ ಚಿತ್ರದ ಇನ್ನೊಂದಿಷ್ಟು ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಮಾತನಾಡುವ ಸಮಯ ಇದು. ಸಹಜವಾಗಿ ಮಹಿಳೆಯರು ಸೇರಿದ ಕಡೆ ಮಾತು ಜಾಸ್ತಿ ಎನ್ನುತ್ತಾರೆ. ಆದರೆ ಈ ಮಹಿಳೆಯರ ತಂಡದಲ್ಲಿ ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುತ್ತವೆ ಚಿತ್ರತಂಡದ ಮೂಲಗಳು. ನಾಲ್ಕು ಜಡೆ ಸೇರಿದ ಕಡೆ ಜಗಳಗಳಾಗುತ್ತವೆ ಎಂಬುದೂ ಈ ತಂಡದಿಂದ ಸುಳ್ಳು ಎಂದು ಸಾಬೀತಾಗಿದೆ. ಪ್ರಿಯಾ ಬೆಳ್ಳಿಯಪ್ಪ ನಿರ್ದೇಶನದ ರಿಂಗ್ರೋಡ್ ಶುಭಾ ಚಿತ್ರದಲ್ಲಿ ಚಿಕ್ಕಪುಟ್ಟ ತಂತ್ರಜ್ಞರೂ ಮಹಿಳೆಯರೇ ಎಂಬುದು ಎಲ್ಲರಿಗೂ ಗೊತ್ತು.
ಆದರೆ ಸುದ್ದಿ ಇದಲ್ಲ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಟ್ಲೀಸ್ಟ್ ಎಲ್ಲರಿಗೂ ಗೊತ್ತಿರದ ಒಂದು ಸುದ್ದಿ ಎಂದರೆ ಈ ಚಿತ್ರಕ್ಕೆ ನಟಿ ನಿಖಿತಾ ಎಂಟ್ರಿ ಕೊಟ್ಟಿರುವುದು. ಈ ಮುಂಚೆ ದುನಿಯಾ ವಿಜಯ್ ರಿಂಗ್ರೋಡ್ಗೆ ಎಂಟ್ರಿ ಕೊಟ್ಟ ಮೇಲೆ ಈಗ ನಿಖಿತಾ ಸರದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮತ್ತು ನಿಖಿತಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದರ ಜೊತೆಗೆ ವಿಜಯ್ ಈ ಚಿತ್ರಕ್ಕೆ ಕೇವಲ ಒಂದು ರುಪಾಯಿ ಸಂಭಾವನೆ ತೆಗೆದುಕೊಂಡು ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಇಲ್ಲಿನ ಪ್ರಶ್ನೆ ಎಂದರೆ ರಿಂಗ್ರೋಡ್ ಶುಭಾ ಚಿತ್ರತಂಡ ದುನಿಯಾ ವಿಜಯ್ಗೆ ತೀರಾ ಪರಿಚಿತವಾದದ್ದೇನಲ್ಲ. ಈ ತಂಡದ ಯಾರೂ ಕೂಡ ವಿಜಿಗೆ ಅಷ್ಟೊಂದು ಆತ್ಮೀಯರಲ್ಲ. ಹಾಗಿದ್ದಾಗ ವಿಜಿ ಕೇವಲ ಒಂದು ರುಪಾಯಿಗೆ ಅಭಿನಯಿಸುತ್ತಿರುವುದು ಏಕೆ ಎಂಬ ಕುತೂಹಲ ಸಹಜ. ವಿಜಿ ಅವರೇನೋ 'ಇದು ಹುಡುಗಿಯರೇ ಮಾಡುತ್ತಿರುವ ಚಿತ್ರ. ಅವರ ಕಮಿಟ್ಮೆಂಟ್ ನೋಡಿ ಖುಷಿಯಾಗುತ್ತಿದೆ ಅದಕ್ಕೆ ಒಂದು ರುಪಾಯಿಗೆ ಅಭಿನಯಿಸುತ್ತಿದ್ದೇನೆ' ಎಂದರೂ ಬೇರೇ ಏನೋ ಇರಬಹುದಾ ಎನಿಸುವುದು ಬಿಡುಗಡೆಗೆ ರೆಡಿಯಾಗಿರುವ ಚಿತ್ರದ ಕೆಲವು ಜಾಹೀರಾತುಗಳನ್ನು ನೋಡಿದಾಗ! ಈ ಚಿತ್ರದಲ್ಲಿ ವಿಜಯ್ ಅವರ ವೈಯಕ್ತಿಕ ಜೀವನಕ್ಕೆ ಹತ್ತಿರವಾದ ವಿಷಯಗಳ ಹೋಲಿಕೆ ಇರುವ ಕಾರಣಕ್ಕೆ ವಿಜಯ್ಗೆ ಚಿತ್ರ ಇಷ್ಟವಾಗಿರಬಹುದೇ ಎಂಬ ಪ್ರಶ್ನೆಗಳು ಸಹಜ.
ಒಂದು ಜಾಹೀರಾತಿನಲ್ಲಿ ವಿಜಯ್ ಹೇಳುತ್ತಾರೆ 'ಶುಭಾ, ಶುಭಾ ಶುಭಾ...ಎಷ್ಟ್ ಸಲ ಹೇಳೋದು. ನಂಗೂ ಶುಭಾಗೂ ಇರೋದು ಕೇವಲ ಪ್ರೊಫೆಷನಲ್ ರಿಲೇಶನ್ ಅಷ್ಟೇ'. ಇದನ್ನು ನೋಡಿದರೆ ವಿಜಯ್ ಇಲ್ಲಿ ಯಾವ 'ಶುಭಾ' ಬಗ್ಗೆ ಮಾತಾಡ್ತಿದಾರೆ ಎಂಬ ಅನುಮಾನ ಮೂಡುವ ಹೊತ್ತಲ್ಲೇ ನಿಖಿತಾ ಅವರ ಇನ್ನೊಂದು ಜಾಹೀರಾತು ಗಮನಿಸಬೇಕು. ಅಲ್ಲಿ ಈ ಚಿತ್ರಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ನಿಖಿತಾ ಹೇಳುತ್ತಿದ್ದಾರೆ 'ನನ್ನ ಎಂಟ್ರಿಯಿಂದ 'ಯಾರ ಮ್ಯಾರೀಡ್ ಲೈಫೂ' ಹಾಳಾಗಿಲ್ಲ. ಇನ್ಫ್ಯಾಕ್ಟ್ ನನಗೇ ಅದರಿಂದ ತುಂಬಾ ತೊಂದರೆ ಆಗಿದೆ'. ಇಲ್ಲೂ ಕೂಡ ನಿಖಿತಾ ಮಾತಿನ ಅರ್ಥವನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಅಲ್ಲಿಗೆ ಇಷ್ಟು ದಿನ ಇದು ಕೇವಲ ರಿಂಗ್ರೋಡ್ ಶುಭಾ ಕಥೆ ಎಂದುಕೊಂಡವರಿಗೆ ವಿಜಿ ನಿಖಿತಾ ಎಂಟ್ರಿ ನಂತರ ಈ ಕಥೆಯಲ್ಲೇನೋ ಹೊಸ ಟ್ವಿಸ್ಟ್ ಇದೆ ಎನಿಸುವುದು ಖಚಿತ. ಅದರ ಜೊತೆಗೆ, ಚಿತ್ರದ ನಿರ್ಮಾಪಕಿ ರಂಜಿನಿ ಅವರ ಪತಿ ರವೀಂದ್ರ ನಿರ್ದೇಶನದ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರದ 'ಹುಳ ಹುಳ ಹುಳ ಬಿಟ್ಟೆಯಲ್ಲೋ' ಹಾಡು ನೆನಪಾದರೂ ಅಚ್ಚರಿಯಿಲ್ಲ. ಹಾಗಾಗಿ ಸುವರ್ಣ ನ್ಯೂಸ್ ವಾಹಿನಿಯ ಸುವರ್ಣ ಸುಂದರಿ ಕಾರ್ಯಕ್ರಮದ ಮೂಲಕ ತನ್ನ
ಚಿತ್ರದ ನಾಯಕಿಯನ್ನು ಆಯ್ಕೆ ಮಾಡಿದ ರಿಂಗ್ರೋಡ್ ಶುಭಾ, ವಿಜಿ-ಲಿಖಿತಾ ಎಂಟ್ರಿ ಮೂಲಕ ಮತ್ತೆ ತಮ್ಮ ಚಿತ್ರಕ್ಕೊಂದು ಹೊಸ ಫ್ಲೇವರ್ ನೀಡಿದೆ ಎನ್ನಬಹುದು. ಹಾಗಾಗಿ ಶುಭಾಳ ರಿಂಗ್ ರೋಡ್ ಪ್ರವರದ ಕಾವು ಮತ್ತೆ ಏರುತ್ತಿದೆ, ವಿಜಿ- ನಿಖಿತಾರಿಂದಾಗಿ ಮತ್ತೇರುತ್ತಿದೆ ಎನ್ನಬಹುದು. ಇದಷ್ಟೇ ಅಲ್ಲದೆ, ಫೆಮಿನಾದ '35 ಮೋಸ್ಟ್ ಇನ್ಫ್ಲುಯೆನ್ಶಿಯಲ್ ವಿಮೆನ್ ಆಫ್ ದಿ ಇಯರ್' ಪಟ್ಟಿಯಲ್ಲಿ ರಿಂಗ್ರೋಡ್ ಶುಭಾ ಚಿತ್ರದ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಕೂಡ ಸ್ಥಾನ ಪಡೆದಿದ್ದಾರೆ. ಫೆಮಿನಾ ನಡೆಸಿದ ಸರ್ವೆಯಲ್ಲಿ ಮಹಿಳೆಯರಲ್ಲಿ ಒಗ್ಗಟ್ಟಿದೆ ಎಂದು ತೋರಿಸಲು ಹೊರಟಿರುವ ಪ್ರಿಯಾ ಅವರ ಪ್ರಯತ್ನದ ಬಗ್ಗೆ ಸಾಕಷ್ಟು ಮಹಿಳೆಯರು ಕುತೂಹಲ ವ್ಯಕ್ತಪಡಿಸಿದ್ದಾರಂತೆ. ಅದರ ಫಲವಾಗಿ ಪ್ರಿಯಾ ಬೆಳ್ಳಿಯಪ್ಪ ಈ 35ರ ಪಟ್ಟಿಯಲ್ಲಿದ್ದಾರೆ.
ಒಟ್ಟಾರೆ ಇದಿಷ್ಟೂ ರಿಂಗ್ ರೋಡ್ ಶುಭಾ ಚಿತ್ರದ ಬಗೆಗಿನ ಲೇಟೆಸ್ಟ್ ಸುದ್ದಿ. ಮುಂದೆ ಏನೇನು ಕುತೂಹಲಗಳು ಕಾದಿವೆಯೋ ಎಂಬುದು ಸದ್ಯಕ್ಕೆ ಆ ಚಿತ್ರತಂಡಕ್ಕಷ್ಟೇ ಗೊತ್ತು.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


