ಕೂಲ್ ಜಗ್ಗೇಶ
ಅದು ಕೂಲ್ ಗಣೇಶ ಚಿತ್ರದ ಪತ್ರಿಕಾಗೋಷ್ಠಿ. ಬಹಳ ದಿನಗಳಿಂದ ಕಾದು ಕುಳಿತಿದ್ದ ಜಗ್ಗೇಶ್‌ರ ಮೂರು ಚಿತ್ರಗಳಲ್ಲಿ ಒಂದಕ್ಕೆ ಇಂದು...

ಸ್ಕೂಲ್‌ನಲ್ಲಿ ಕೆಲವು ಮೇಷ್ಟ್ರುಗಳಿರ್ತಾರೆ. ವಿದ್ಯಾರ್ಥಿಗಳು ಅವರ ಕ್ಲಾಸ್ ಯಾವತ್ತೂ ಮಿಸ್ ಮಾಡಿಕೊಳ್ಳಲ್ಲ. ಬೇರೆ ಯಾವ ಮೇಷ್ಟ್ರ ಕ್ಲಾಸ್‌ಗೆ ಚಕ್ಕರ್ ಹೊಡೆದರೂ ಈ ಮೇಷ್ಟರ ಕ್ಲಾಸಿಗೆ ಮಾತ್ರ ಹಾಜರ್. ನವರಸನಾಯಕ ಜಗ್ಗೇಶ್‌ರ ಸಿನಿಮಾ ಪತ್ರಿಕಾಗೋಷ್ಠಿ ಕೂಡ ಒಂಥರಾ ಅಂಥ ಮೇಷ್ಟ್ರುಗಳ ಕ್ಲಾಸ್ ಇದ್ದಂತೆ.
ಅದು ಕೂಲ್ ಗಣೇಶ ಚಿತ್ರದ ಪತ್ರಿಕಾಗೋಷ್ಠಿ. ಬಹಳ ದಿನಗಳಿಂದ ಕಾದು ಕುಳಿತಿದ್ದ ಜಗ್ಗೇಶ್‌ರ ಮೂರು ಚಿತ್ರಗಳಲ್ಲಿ ಒಂದಕ್ಕೆ ಇಂದು ಬಿಡುಗಡೆಯ ಸಂಭ್ರಮ. ಆದರೆ, ಅಂದು ಚಿತ್ರದ ಬಿಡುಗಡೆಯ ಜೊತೆಗೆ ಜಗ್ಗೇಶ್‌ರ ಮಾತಿನ ಒಗ್ಗರಣೆ ಕೂಡ ಇತ್ತು. ಸುಮ್ನೆ, ಭೋಧನೆ, ಉಪದೇಶ ಎಲ್ಲ ಇಲ್ಲದೆ ಟಿಪಿಕಲ್ ಜಗ್ಗೇಶ್ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ಒಂದು ಹಾಡನ್ನೂ ಹಾಡಿದ್ದೇನೆ. ಜೊತೆಗೆ ಥ್ರಿಲ್ಲರ್ ಮಂಜು ಅವರ ಆ್ಯಕ್ಷನ್ ಇದೆ. ನಿರ್ಮಾಪಕರು ಹೊಸಬರು, ಅವರಲ್ಲಿದ್ದ ಗೊಂದಲಗಳಿಂದಾಗಿ ಸಿನಿಮಾ ತಡ ಆಯ್ತು. ಆದರೆ 'ಕೂಲ್ ಗಣೇಶ' ಒಂದು ಪರಿಪೂರ್ಣವಾದ ಜಗ್ಗೇಶ್ ಸಿನಿಮಾ ಎಂಬುದು ಅವರೇ ಹೇಳುವ ಮಾತು.
ಜಗ್ಗೇಶ್‌ರ ವ್ಯಕ್ತಿತ್ವಕ್ಕೆ ಈ ಚಿತ್ರದ ಟೈಟಲ್ ಅತ್ಯಂತ ಸೂಕ್ತ ಎನಿಸುವುದು ಸುಳ್ಳಲ್ಲ. ಏಕೆಂದರೆ ಅದೆಷ್ಟೇ ಕೋಪ ತರಿಸುವಂಥ ವಿಷಯ ಇರಲಿ ಅದನ್ನು ತಮ್ಮದೇ ಆದ ಕಾಮಿಡಿ ಶೈಲಿಯಲ್ಲಿ ಹೇಳುವ 'ಕೂಲ್ ಜಗ್ಗೇಶ್' ಅವರು.
ಕೂಲ್ ಗಣೇಶ ಚಿತ್ರದ ಬಗೆಗೂ ಅವರು ಅದೇ ಧಾಟಿಯಲ್ಲೇ ಮಾತನಾಡಿದರು. ಗಾಂಧಿ ನಗರದಲ್ಲಿ ಕೆಲವು ಕ್ಯಾಚ್ ಆಫೀಸರ್ಸ್ ಹುಟ್ಟಿಕೊಂಡಿದ್ದಾರೆ. ಹೊಸ ನಿರ್ಮಾಪಕರನ್ನು ದಾರಿ ತಪ್ಪಿಸಿ ತಮ್ಮ ಕೆಲಸ ಮಾಡಿಕೊಳ್ಳುವುದು ಅವರ ಕೆಲಸ. ಒಬ್ಬ ನಿರ್ಮಾಪಕರು ನನ್ ಜೊತೆ ಒಂದ್ ಸಿನಿಮಾ ಮಾಡ್ತಿದಾರೆ ಅಂತ ಗೊತ್ತಾದ್ರೆ ಅವರತ್ರ ಹೋಗಿ 'ಏನು ಜಗ್ಗೇಶಾ? ಅವರತ್ರ ಹೋಗಬೇಡ್ರಿ' ಅಂತ ಕಿವಿ ಚುಚ್ತಾರೆ. ಯಾಕಂದ್ರೆ ನಾನಿದ್ರೆ ಅವರ ವ್ಯವಹಾರ ನಡೆಯೋಕೆ ಬಿಡಲ್ಲವಲ್ಲ. ಆದರೂ ಕೆಲವೊಮ್ಮೆ ಹೀಗಾಗುತ್ತದೆ. ಈ ಚಿತ್ರದ ಡಿಐ ವಿಷಯದಲ್ಲೂ ಅದೇ ಆಗಿದ್ದು. ನನ್ನ ಮಾತು ಕೇಳಿ ಪ್ರಸಾದ್ ಲ್ಯಾಬ್‌ನಲ್ಲಿ ಮಾಡಿದ್ದಿದ್ರೆ ಇಷ್ಟೊತ್ತಿಗೆ ಸಿನಿಮಾ ಯಾವಾಗ್ಲೋ ಬಿಡುಗಡೆ ಆಗ್ತಿತ್ತು. ಎಲ್ಲೋ ಹೋಗಿ ಒಂದಿಷ್ಟು ಕಳಕೊಂಡ ಮೇಲೆ ನಿರ್ಮಾಪಕರಿಗೆ ಬುದ್ಧಿ ಬಂತು. ಈಗ ಸಿನಿಮಾ ಬಿಡುಗಡೆ ಆಗ್ತಿದೆ ಎನ್ನುತ್ತಾ ಗಣೇಶನ ಪ್ರವರಗಳನ್ನು ಹೇಳಿಕೊಂಡರು ಜಗ್ಗೇಶ್.
ರಾಜಕೀಯದ ಕೆಲಸ ಇದ್ದರೂ ಸಿನಿಮಾ ಪತ್ರಿಕಾಗೋಷ್ಠಿಗೆ ಬಂದಿದ್ದಾರೆ ಜಗ್ಗೇಶ್ ಅಂತ ನಟ ಸಂಗಮೇಶ ಉಪಾಸಿ ಹೇಳಿದ ಮೇಲೆ ಜಗ್ಗೇಶ್‌ರ ಮಾತು ಬೇರೆ ಕಡೆ ತಿರುಗಿತು. 'ಬರದೇ ಇರೋಕೆ ಹೇಗೆ ಸಾಧ್ಯ? ಸಿನಿಮಾ ನನ್ನ ತಾಯಿ. ಹೆಂಡ್ತಿ ಬಂದಮೇಲೆ ತಾಯಿಯನ್ನು ಮರೆಯುವಂಥ ಮನುಷ್ಯ ನಾನಲ್ಲ. ಇವತ್ತು ನಾನು ಯಾರು ಅಂತ ಎಲ್ಲರಿಗೂ ಗೊತ್ತಿರೋದು ಸಿನಿಮಾದಿಂದ. ಬೆಳೆದ ಹಾದಿಯನ್ನು ಎಂದೂ ಮರೆತವನಲ್ಲ ನಾನು. ಸಿನಿಮಾರಂಗದಲ್ಲಿ ನಾನು ಪ್ರಾಮಾಣಿಕ, ಡವ್ ಮಾಡಲ್ಲ. ರಾಜಕೀಯದಲ್ಲಿ ಒಂದಿಷ್ಟು ಮಾಡ್ಲೇಬೇಕಾಗುತ್ತದೆ, ಮಾಡ್ತೀನಿ' ಎನ್ನುವ ಜಗ್ಗೇಶ್ ಅವರಿಗೆ ಚಿತ್ರರಂಗದಲ್ಲಿ ಇನ್ನೂ 25 ವರ್ಷ ಬಣ್ಣ ಹಾಕ್ತೀನಿ ಅಂತ ಅಗಾಧ ನಂಬಿಕೆ ಇದೆ.
ನಾನು ಜೀವನದಲ್ಲಿ ಪ್ರೀತಿಸಿದ ಮೂರು ವಿಷಯಗಳೆಂದರೆ ತಂದೆ ತಾಯಿ, ಸಿನಿಮಾ ಮತ್ತು ಹೆಂಡ್ತಿ ಎಂದು ಮುಕ್ತವಾಗಿ ಹೇಳುವ ಜಗ್ಗೇಶ್‌ರ ತಾಯಿಗೆ 'ತರ್ಲೆ ನನ್ಮಗ' ಚಿತ್ರ ಇಷ್ಟವಾಗಿರಲಿಲ್ಲವಂತೆ. ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿ ಅರ್ಧಕ್ಕೆ ಎದ್ದು ಬಂದ ಜಗ್ಗೇಶ್‌ರ ಅಮ್ಮ 'ಥೂ ಏನ್ ಸಿನಿಮಾ ಅಂತ ಮಾಡಿದ್ದೀಯಾ. ಬರೀ ಪೋಲಿ ಮಾತುಗಳು, ಪೋಲಿ ದೃಶ್ಯಗಳು. ಮಗ ಹೀರೋ ಆಗಿದಾನೆ ಅಂತ ನೋಡೋಕೆ ಹೋದ್ರೆ ಹೋಗಿ ಹೋಗಿ ಎಂಥ ಸಿನಿಮಾ ಮಾಡಿದೀಯಾ' ಅಂತ ಬಯ್ದಿದ್ದನ್ನು ಜಗ್ಗೇಶ್ ನೆನಪಿಸಿಕೊಂಡರು. ಅದರ ಜೊತೆಗೆ 'ಇನ್ನೂ ಆ ಪಿಕ್ಚರ್‌ಲಿ ಏನೇನೋ ಶೂಟ್ ಮಾಡಿದ್ವಿ. ಆಮೇಲೆ ಅದನ್ನೆಲ್ಲ ಎಡಿಟ್ ಮಾಡಿದ್ವಿ. ಅದನ್ನೆಲ್ಲಾ ನೋಡಿದ್ದಿದ್ರೆ ಅಮ್ಮ ಇನ್ನೇನ್ ಏನಂತಿದ್ರೋ ಏನೋ' ಎನ್ನುವುದನ್ನೂ ಮರೆಯಲಿಲ್ಲ. ಹಾಗಾಗಿ, ನಿಮ್ ತರ್ಲೆ ನನ್ಮಗ ಚಿತ್ರವನ್ನು ರೀರಿಲೀಸ್ ಮಾಡ್ತೀರಾ ಅಂದ್ರೆ ಬೇಡಪ್ಪಾ ಎನ್ನುತ್ತಾರೆ ಅವರು. ಹಾಗೇನಾದರೂ ಅವರ ಯಾವುದಾದರೂ ಚಿತ್ರ ಮರುಬಿಡುಗಡೆ ಆಗುವುದಿದ್ದರೆ ಜಗ್ಗೇಶ್‌ರ ಛಾಯ್ಸ್ 'ಬೇವು ಬೆಲ್ಲ'. ಆ ಟೈಮಲ್ಲಿ ನನ್ನ ಚಿತ್ರಗಳು ಅಂದ್ರೆ ಬೇರೆನೇ ಇಮೇಜ್ ಇತ್ತು ಹಾಗಾಗಿ ಬೇವು ಬೆಲ್ಲ ಜನರಿಗೆ ಅಷ್ಟಾಗಿ ರುಚಿಸಲಿಲ್ಲ, ಆದ್ರೂ ಲಾಸ್ ಏನಿಲ್ಲ ಎನ್ನುವಂತೆ ಆ ಕಾಲದಲ್ಲಿ 5 ವಾರ ಓಡಿತ್ತು ಎನ್ನುತ್ತಾ ಬೇವು ಬೆಲ್ಲ ಚಿತ್ರೀಕರಣದ ವೇಳೆಯಲ್ಲಿ ಲೋಕೇಶ್, ನಾರಾಯಣ್ ಅವರೊಂದಿಗಿನ ತುಂಟ ಕ್ಷಣಗಳನ್ನೂ ಮೆಲುಕು ಹಾಕಿದರು ಜಗ್ಗೇಶ್.
ಎಷ್ಟೇ ಕೆಲಸ ಕೈಯಲ್ಲಿದ್ದರೂ, ಈಗಿನ ಸಿನಿಮಾ ಮತ್ತು ರಾಜಕೀಯದ ಬ್ಯುಸಿ ಶೆಡ್ಯೂಲ್‌ನಲ್ಲೂ ಜಗ್ಗೇಶ್ ಕೆಲವು ಅಭ್ಯಾಸಗಳನ್ನು ಮರೆತಿಲ್ಲವಂತೆ. ಬೆಳಗ್ಗೆ ಎದ್ದ ಕೂಡಲೇ ಮೊದಲು ಪೇಪರ್ ಓದದಿದ್ದರೆ ನನಗೆ ಸಮಾಧಾನ ಇರೊಲ್ಲ. 32 ವರ್ಷದಿಂದ ನನ್ನ ಮುಖ ಯಾರಿಗೂ ಗೊತ್ತಿಲ್ಲದಿದ್ದಾಗ ನನ್ನನ್ನು ಜಗತ್ತಿಗೆ ಪರಿಚಯಿಸಿದ್ದು ಪತ್ರಿಕೆಗಳು. ಹಾಗಾಗಿ, ನನಗೆ ಇಂಟರ್‌ನೆಟ್ಟು, ಫೇಸ್‌ಬುಕ್, ಟ್ವಿಟ್ಟರ್, ಟಿವಿ ಚಾನೆಲ್‌ಗಳ ಯುಗದಲ್ಲೂ ಪತ್ರಿಕೆಗಳನ್ನು ಕಂಡರೆ ಗೌರವ. ಎಲ್ಲಾ ಸ್ಪರ್ಧೆಗಳನ್ನು ತಡೆದುಕೊಂಡು ಪತ್ರಿಕೆಗಳು ಹೇಗೆ ಇನ್ನೂ ತಮ್ಮತನ ಉಳಿಸಿಕೊಂಡು ಗಟ್ಟಿಯಾಗಿ ನಿಂತಿವೆಯೋ, ಹಾಗೆಯೇ ನಾನೂ ಇಷ್ಟು ವರ್ಷಗಳ ನಂತರವೂ ಇಂದಿನ ಹೊಸ ನಟರ ಮುಂದೆ ಇನ್ನೂ ತಲೆ ಎತ್ತಿ ನಿಂತಿದ್ದೇನೆ. ಹಾಗಾಗಿ ನನಗೂ ಪತ್ರಿಕೆಗಳಿಗೂ ಒಂಥರಾ ಆತ್ಮೀಯತೆ ಎನ್ನುತ್ತಾ ಅಂದಿನ ಚಿನಕುರಳಿ ಮಾತಿಗೆ ಫುಲ್‌ಸ್ಟಾಪ್ ಇಟ್ಟರು ಜಗ್ಗೇಶ್.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


