ಸಿನಿಮಾ ಲೇಖನ

ಕಾಂಟ್ರೊವರ್ಸಿ ಪ್ಲೀಸ್...

ಕಾಂಟ್ರೊವರ್ಸಿ ಪ್ಲೀಸ್...
Published On :

'ಹಲೋ ಸಾರ್, ಪತ್ರಕರ್ತರೇ, ನಿಮ್ ಪೇಪರ್‌ಲಿ ನಮ್ ಸಿನಿಮಾಕ್ಕೆ ಪ್ರಚಾರ ಕೊಡಿ ಸರ್‌'.
'ಖಂಡಿತ ಕೊಡೋಣ ಹೇಳಿ ಏನಾಗ್‌ಬೇಕಿದೆ?'
'ನಮ್ ಸಿನಿಮಾ ಬಗ್ಗೆ ಒಂದು ಸುದ್ದಿ ಮಾಡಿಕೊಡಿ'
'ಸರಿ, ಯಾವ್ ಸಿನಿಮಾ?'
'ಅದು, 'ಅಯೋಗ್ಯಾ'ಪುರಂ ಅಂತ ಒಂದ್ ಸಿನಿಮಾ ಮಾಡಿದೀನಿ. ಈ ಸಿನಿಮಾಗೆ ಆಮೇಲೆ ನನ್ ಮುಂದಿನ ಸಿನಿಮಾಗೆ ಹೆಲ್ಪ್ ಆಗೋ ಥರಾ ಒಂದು ಆರ್ಟಿಕಲ್ ಮಾಡಿಕೊಡಿ'
'ಅದೇನ್ರಿ ಅದು, ಈಗಿಂದು, ಮುಂದಿಂದು? ಮೊದಲು ಹಿಂದಿನ ಸಿನಿಮಾ ಹೇಳ್ರಿ, ಆಮೇಲ್ ಮುಂದಿಂದು  ನೋಡೋಣಂತೆ'
'ಅಲ್ಲ ಸಾರ್, ಅದು ಈಗ ಈ ಸಿನಿಮಾ ಮಾಡ್ತಿದೀನಿ. ಇದಾದ್ ಮೇಲೆ ಇನ್ನೊಂದ್ ಸಿನಿಮಾ ಶುರು ಮಾಡ್ತಾ ಇದೀನಿ. ಪ್ರೊಡ್ಯೂಸರ್ ಜೊತೆ ಮಾತುಕತೆ ನಡೀತಿದೆ. ಈ ಟೈಮಲ್ಲಿ ನಾನು ಮತ್ತು ನನ್ನ ಸದ್ಯದ ಚಿತ್ರ ಸ್ವಲ್ಪ ಫೇಮಸ್ ಆದ್ರೆ ಅನುಕೂಲ ಆಗುತ್ತೆ. ಮುಂದಿನ ಚಿತ್ರದ ನಿರ್ಮಾಪಕರು ಇಂಪ್ರೆಸ್ ಆಗ್ತಾರೆ. ಅದಕ್ಕೆ ಒಂದಿಷ್ಟ್ ಕಾಂಟ್ರೊವರ್ಸಿ ಆಗೋ ಥರಾ, ಬರ್‌ಕೊಡಿ ಸರ್‌'
'ರೀ, ನಮ್ ಸಿನಿಮಾ ಬಗ್ಗೆ ಕಾಂಟ್ರೋವರ್ಸಿ ಆಗ್ಲಿ ಅಂತ ಬಯಸೋ ನಿರ್ದೇಶಕರೂ ಇದಾರಾ ಅಂತ ಆಶ್ಚರ್ಯ ಆಗ್ತಿದೆ'
'ಅದೆಲ್ಲ ಬಿಡಿ ಸರ್, ಈಗ, ನಾನು ಮಾಡಿರೋ ಸಬ್ಜೆಕ್ಟ್ ವಿವಾದ ಎಬ್ಬಿಸಿದೆ. ನನಗೆ ಯಾರೋ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ, ನಮ್ ಸಿನಿಮಾ ಬಗ್ಗೆ ಅನೇಕ ಸಂಘಟನೆಗಳು ಕಿರಿಕ್ ಮಾಡ್ತಾ ಇವೆ ಅಂತ ಒಂದು ನ್ಯೂಸ್ ಮಾಡಿಕೊಡಿ'.
ಇದು ತಾವು ಮಾಡಿರೋ ಸಿನಿಮಾಗೆ ಇಲ್ಲದೇ ಇರೋ ಕಾಂಟ್ರೋವರ್ಸಿ ಕ್ರಿಯೇಟ್ ಮಾಡಿಸೋಕೆ ಪ್ರಯತ್ನಿಸ್ತಾ ಇರೋ ನಿರ್ದೇಶಕ ಮತ್ತು ಪತ್ರಕರ್ತರೊಬ್ಬರ ಜೊತೆ ನಡೆದ ಸಂಭಾಷಣೆ. ಮುಂದೇನಾಗುತ್ತೆ? ಪತ್ರಕರ್ತನಿಗೆ ಇಷ್ಟ ಇದ್ರೆ ಅದು ಪತ್ರಿಕೇಲಿ ಸುದ್ದಿಯಾಗುತ್ತೆ. ಇಲ್ಲಾಂದ್ರೆ 'ಇನ್ನೊಂದ್ಸಲ ಈ ಕಡೆ ಬಂದ್ರೆ ಅಷ್ಟೆ' ಅಂತ ಆ ನಿರ್ದೇಶಕನಿಗೆ ಪತ್ರಕರ್ತನ ಕಡೆಯಿಂದಲೇ ಕೊಲೆ ಬೆದರಿಕೆ ಬೀಳುತ್ತೆ!

ಹೊಸ ರೆಕಾರ್ಡ್
ಹಾಡು: ಬಾಸು, ನಮ್ ಬಾಸು
ಚಿತ್ರ: ಭಜರಂಗಿ
ಗಾಯಕರು: ಅರ್ಜುನ್ ಜನ್ಯ
ಸಾಹಿತ್ಯ: ಮೋಹನ್, ಚಂದನ್, ಚೇತನ್
ಸಂಗೀತ: ಅರ್ಜುನ್ ಜನ್ಯ

ಹೊಡೆದ್‌ಬಿಟ್ಟರೆ ಒಂದೇಟು ಬಿದ್ದಂಗೆ ಬುಲೆಟ್ಟು
ಸ್ಟೆಪ್ ಹಾಕಿದ್ಮೇಲೇನೆ ಹುಟ್ಕೊಂತು ಎರಡೇಟು
ರಾಜಾ ರಾಕೆಟ್ ರೋರರ್ ಲೇಡಿ
ಅಣ್ಣಾವ್ರ ಹಾಡಿ ಹೋದ್ರು ನೋಡಿ
ಸಿಕ್ಕಿದ್ದೆಲ್ಲ ಬಿಟ್ಕೊಂಬೇಡಿ
ಖಾಲಿ ಕ್ವಾರ್ಟರ್ ಸಾಂಗು ನೋಡಿ

ಸದ್ಯಕ್ಕೆ ಭಜರಂಗಿ ಹಾಡುಗಳು ಆಡಿಯೋ ಮಾರ್ಕೆಟ್‌ನಲ್ಲಿ ಬ್ಯಾಂಡ್ ಬಜಾಯಿಸುತ್ತಿವೆ. ಅಪರೂಪಕ್ಕೆಂಬಂತೆ ಆಡಿಯೋ ಸಿಡಿಗಳು ಭರ್ಜರಿ ಸೇಲ್ ಆಗುತ್ತಿವೆ. ಅರ್ಜುನ್ ಜನ್ಯ ಸಂಗೀತದ ಎಲ್ಲ ಹಾಡುಗಳಲ್ಲೂ ವಿಶೇಷವಿದ್ದರೂ ಈ ಹಾಡು ಅಭಿಮಾನಿಗಳಿಗಾಗಿ ಹೇಳಿ ಮಾಡಿಸಿದ್ದು. ಆರಂಭದಲ್ಲಿ ಬಾಸು ನಮ್ ಬಾಸು ಅಂತ ಶುರುವಾದದ್ದು ನೋಡಿ ಅಭಿಮಾನಿಗಳಲ್ಲದವರಿಗೆ ಇಷ್ಟವಾಗಲ್ಲ ಎನಿಸಿದರೂ ನಂತರ ಬರುವ 'ರಿಪೀಟ್, ರಿಪೀಟ್, ರಿಪೀಟ್, ರಿಪೀಟ್ ದ ಸಾಂಗು' ಎನ್ನುವ ಸಾಲುಗಳನ್ನು ಹಾಡಿನ ಒನ್‌ಲೈನ್ ವಿಮರ್ಶೆ ಎನ್ನಬಹುದು.

ಹಳೆ ರೆಕಾರ್ಡ್
ಹಾಡು: ಹೋದೆಯ ದೂರ ಓ ಜೊತೆಗಾರ
ಚಿತ್ರ: ಅನುಭವ
ಗಾಯಕರು:
ವಾಣಿ ಜಯರಾಂ
ಸಾಹಿತ್ಯ: ವಿ.ಮನೋಹರ್
ಸಂಗೀತ: ಎಲ್. ವೈದ್ಯನಾಥನ್

ನನ್ನ ಬಳಿ ಸಾರಿ ಬೆನ್ನ ಬಿಗಿದಾಗ,
ತಳ್ಳಿ ದೂರಾದೆ, ಅರಿಯದೆ ನಾ
ಮದನ ನೀನಾಗಿ ಮುದದಿ ಕರೆದಾಗ
ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ
ಮೋಹದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ
ನೀಡದೆ ನಿನಗೆ ಉಲ್ಲಾಸ

ಈ ಹಾಡು ಕೇಳದೇ ಇರೋ ಕನ್ನಡಿಗರು ಇಲ್ಲ ಅನ್ನೋ ಲೆವೆಲ್‌ಗೆ ಫೇಮಸ್ ಆಗಿರೋ ಹಾಡಿದು. ಆಗಿನ ಕಾಲಕ್ಕೆ ಯಾವ ಸ್ಟಾರುಗಳೂ ಇಲ್ಲದೇ ಇದ್ದ ಸಿನಿಮಾ. ವೈದ್ಯನಾಥನ್ ಸಂಗೀತವಿದ್ದರೂ, ವಾಣಿ ಜಯರಾಂ ಅವರು ಹಾಡಿದ್ದರೂ, ಹಾಡು ಬರೆದಿದ್ದು ವಿ. ಮನೋಹರ್ ಎಂಬ ಆಗಿನ ಕಾಲದ ಹೊಸಬರು. ಸಿನಿಮಾದಲ್ಲಿ ಇದ್ದಿದ್ದು ಕಾಶೀನಾಥ್ ಮತ್ತು ಅಭಿನಯ ಎಂಬ ನಟ, ನಟಿಯರು. ಆದರೆ ಮಿಮಿಕ್ರಿ ದಯಾನಂದ್ ಅವರ ಸ್ಟೈಲಲ್ಲಿ ಹೇಳೋದಾದ್ರೆ, ಹಾಡು ಮಾಡಿದ ಸೌಂಡು ಮಾತ್ರ ಬೊಂಬಾಟ್. ಸದ್ಯಕ್ಕೆ ಇದು ಹೊಸ ರೆಕಾರ್ಡೋ ಅಥವಾ ಹಳೇ ರೆಕಾರ್ಡೋ ಹೇಳೋದ್ ಕಷ್ಟ. ಯಾಕಂದ್ರೆ ಈಗ 'ಅನುಭವ' ಸಿನಿಮಾ ಈಗ ಮತ್ತೆ ಬಿಡುಗಡೆ ಆಗಿದೆ

-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.