ಸಿನಿಮಾ ಲೇಖನ

ನೀನಾದೆ ನಾ

ನಟ ಡೈನಮಿಕ್ ಸ್ಟಾರ್ ದೇವರಾಜ್ ಈಗ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಪುತ್ರ ಪ್ರಜ್ವಲ್ ಅದರಲ್ಲಿ ನಾಯಕರಾಗಿ...

ನೀನಾದೆ ನಾ
Published On :

ಇತ್ತೀಚೆಗೆ ನವರಸನಾಯಕ ಜಗ್ಗೇಶ್ ತಮ್ಮ ಪುತ್ರನಿಗಾಗಿ ನಿರ್ಮಾಪಕ, ನಿರ್ದೇಶಕ ಕಮ್ 'ಗುರು' ಆಗಿದ್ದರು. ಈಗ ಇನ್ನೊಬ್ಬ ಸೀನಿಯರ್ ನಟ ಡೈನಮಿಕ್ ಸ್ಟಾರ್ ದೇವರಾಜ್ ಈಗ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಪುತ್ರ ಪ್ರಜ್ವಲ್ ಅದರಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್‌ರ ಮುರಳಿ ಮೀಟ್ಸ್ ಮೀರಾ ಚಿತ್ರದ 'ನೀನಾದೆ ನಾ' ಎಂಬ ಹಾಡಿನ ಸಾಲನ್ನಿಟ್ಟುಕೊಂಡ ಈ ಚಿತ್ರದ ನಿರ್ದೇಶಕ ಕಂದಹಾಸ್.

ದೇವರಾಜ್ ಎಂದರೆ ತಮ್ಮ ಕೆಂಡದ ಮಳೆ ಸುರಿಸುವ 'ಕಣ್ಣೋಟ'ಕ್ಕೆ ಫೇಮಸ್. ಈಗ ತಮ್ಮ ನಿರ್ಮಾಣದ ಚಿತ್ರಕ್ಕೆ ಅದೇ ಡೈನಾಮಿಕ್ 'ವಿಶನ್‌'ನೊಂದಿಗೆ ಬರುತ್ತಿದ್ದಾರೆ ಅವರು. 'ಡೈನಾಮಿಕ್ ವಿಶನ್ಸ್‌' ಎಂಬ ಬ್ಯಾನರ್‌ನ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಅಂಕಿತಾ ಮಹೇಶ್ವರಿ, ಪ್ರಿಯಾಂಕ ಖಂಡೇವಾಲ್, ದೊಡ್ಡಣ್ಣ, ಅವಿನಾಶ್, ಪವಿತ್ರಾ ಲೋಕೇಶ್, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ.

ತಮ್ಮ ಪ್ರಥಮ ನಿರ್ಮಾಣದ ಯೋಜನೆಯಲ್ಲಿ ಮಂದಹಾಸ ಬೀರಲು ರೆಡಿಯಾಗಿರುವ ದೇವರಾಜ್ ಅವರೊಂದಿಗೆ ಒಂದು ಸಣ್ಣ ಚಿಟ್ ಚಾಟ್.

ಸಿನಿಮಾ ನಿರ್ಮಾಣ ಮಾಡಬೇಕು ಅನಿಸಿದ್ದು ಯಾಕೆ?
ತುಂಬಾ ದಿನಗಳಿಂದ ನಿರ್ಮಾಣದ ಆಸೆ ಇತ್ತು. 30 ವರ್ಷಗಳನ್ನು ಚಿತ್ರರಂಗದಲ್ಲೇ ಕಳೆದಿರೋದ್ರಿಂದ ನನಗೆ ಬೇರೇನೂ ಬರೋದಿಲ್ಲ. ಸಿನಿಮಾನೇ ಮಾಡಬೇಕು.

ಪ್ರಜ್ವಲ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಮಗನಿಗಾಗಿಯೇ ಸಿನಿಮಾ ಮಾಡಬೇಕು ಎನ್ನುವ ಅಗತ್ಯವೇನೂ ಇರಲಿಲ್ಲ...
ಖಂಡಿತ ಹೌದು. ಅವನು ಬ್ಯುಸಿಯಾಗಿಯೇ ಇದ್ದಾನೆ. ಆದರೆ ನಮ್ಮ ನಿರ್ಮಾಣದ ಚಿತ್ರದಲ್ಲಿ ಅವನೇ ಇರಲಿ ಅನ್ನೋ ಆಸೆ ಅಷ್ಟೆ.

ನೀವೇ ನಿರ್ಮಾಪಕರಾಗಿರೋದ್ರಿಂದ ಇಲ್ಲಿಯವರೆಗಿನ ಪ್ರಜ್ವಲ್ ಚಿತ್ರಗಳಿಗೂ ನಿಮ್ಮ ನಿರ್ಮಾಣದ ಚಿತ್ರಕ್ಕೂ ಏನು ವ್ಯತ್ಯಾಸ ನಿರೀಕ್ಷೆ ಮಾಡಬಹುದು?
ನನ್ ಕೈಲಿ ಏನೂ ಇಲ್ಲ. ನಿರ್ಮಾಪಕನಾಗಿ ಕಥೆಗೆ ಏನು ಬೇಕೋ ಅದೆಲ್ಲವನ್ನೂ ಪ್ರಾಮಾಣಿಕವಾಗಿ ಒದಗಿಸಿಕೊಡಬಲ್ಲೆ. ಪ್ರಜ್ವಲ್‌ನಲ್ಲಿರುವ ಪ್ರತಿಭೆಯನ್ನು ಹೊರತರೋದು ನಿರ್ದೇಶಕರ ಕೆಲಸ.

ತಮಿಳಿನ ಕಂದಹಾಸ್ ಎನ್ನುವವರು ನಿರ್ದೇಶಕರಾಗಿದ್ದಾರೆ. ಅವರ ಆಯ್ಕೆ ನಡೆದಿದ್ದು ಹೇಗೆ?
ನಂಗೂ ಅವರು ಹೊಸಬರು. ಪ್ರಜ್ವಲ್‌ನ 'ಅಂಗಾರಕ' ಚಿತ್ರಕ್ಕೆ ಒಂದು ಹಾಡಿನ ಕೊರಿಯೋಗ್ರಾಫರ್ ಅವರು.
ತಮಿಳಿನಲ್ಲಿ 100ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ಅವರು ಪ್ರಜ್ವಲ್‌ನ ಬಳಿ ಒಂದು ಕಥೆ ಹೇಳಿದರಂತೆ. ಅದು ಅವನಿಗೆ ಇಷ್ಟ ಆಗಿ, ನನ್ನ ಬಳಿ ಹೇಳಿದ. ನಮ್ಮ ಮನೆಯವರೆಲ್ಲರಿಗೂ ಅದು ಇಷ್ಟವಾಯ್ತು. ಹಾಗಾಗಿ ನಿರ್ಮಾಣ ಮಾಡೋಕೆ ನಿರ್ಧಾರ ಮಾಡಿದೆವು.
 
ಮೊದಲ ನಿರ್ಮಾಣದ ಜೊತೆಗೆ ಮೊದಲ ನಿರ್ದೇಶನವನ್ನೂ ಕೈಗೆತ್ತಿಕೊಳ್ಳಬಹುದಿತ್ತಲ್ಲ?
ಖಂಡಿತಾ ಆ ಆಸೆಯೇನೋ ಇದೆ. ಆದರೆ ಒಂದು ತಳಪಾಯ ಅಂತ ಆಗಲಿ. ಮೊದಲು, ನಿರ್ಮಾಣದ ಸಮಸ್ಯೆಗಳನ್ನು ತಿಳ್ಕೊಂಡು, ನಂತರ ನಿರ್ದೇಶನ ಮಾಡೋ ಮೂಲಕ ಕ್ರಮಬದ್ಧವಾಗಿ ಕೆಲಸ ಮಾಡೋಣ ಅಂತ.

ಇನ್ನೊಬ್ಬ ಮಗನನ್ನ ಈ ಮುಂಚೆ ಬಾಲನಟನಾಗಿ ಪರಿಚಯ ಮಾಡಿಸಿದ್ರಿ. ಈಗ ನಿರ್ಮಾಣ ಸಂಸ್ಥೆ ಆರಂಭ ಆಗಿದೆ. ಅವನನ್ನು ಹೀರೋ ಮಾಡೋ ಪ್ಲ್ಯಾನ್ ಇದೆಯಾ?
ಸದ್ಯಕ್ಕೆ ಅವನು ಫೈನಲ್ ಇಯರ್ ಓದ್ತಾ ಇದ್ದಾನೆ. ಅದು ಮುಗಿದ ಮೇಲೆ ಅವನಿಗೆ ಆಸಕ್ತಿ ಇದ್ದರೆ ಮಾಡಬಹುದು.

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.