ಸಿನಿಮಾ ಲೇಖನ

ಯೋಗವಿಲ್ಲ

ಯೋಗವಿಲ್ಲ
Published On :

'ನಾವು ಅವರನ್ನ ಚಿತ್ರದಿಂದ ತೆಗೆದು ಹಾಕಿಲ್ಲ. ಗೇಟ್ ಪಾಸ್ ಕೊಟ್ಟಿಲ್ಲ. ಆರೋಗ್ಯದ ಸಮಸ್ಯೆಯಿಂದ ಸದ್ಯ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ' ಹೀಗೆಂದು ನಿರ್ದೇಶಕ ಮಹೇಶ್ ಸುಖದರೆ ಹೇಳುವಷ್ಟರಲ್ಲಿ ಹತ್ತಾರು ಊಹಪೋಗಳು ಹುಟ್ಟಿಕೊಂಡವು. ಚಿತ್ರತಂಡದಲ್ಲಿ ಸಮಸ್ಯೆಯಾಗಿದೆಯಂತೆ, ನಾಯಕಿ ಕಿರಿಕ್ ಮಾಡಿದ್ದಾಳಂತೆ, ಆಕೆಗೆ ನಟನೆ ಬರಲ್ಲವಂತೆ. ಹೀಗೆ ಅಂತೆಕಂತೆಗಳು ಜೋರಾಗಿ ಸದ್ದು ಮಾಡಿದವು. ಇನ್ನು ಸುಮ್ಮನಿದ್ದರೆ ಸರಿ ಹೋಗಲ್ಲ ಅಂದುಕೊಂಡು ಮಹೇಶ್ ಸುಖದರೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡರು. ನಡೆದದ್ದು ಏನು? ಎಂಬುದನ್ನು ಸ್ಪಷ್ಟವಾಗಿ ಸ್ಪಷ್ಟೀಕರಣ ಕೊಡುವ ಪ್ರಯತ್ನಮಾಡಿದರು. ಅಂದ ಹಾಗೆ ಇದು 'ಅಂಬರೀಶ' ಚಿತ್ರದಿಂದ ನಾಯಕಿ ನಿಶಾ ಯೋಗೇಶ್ವರ್ ಹೊರಗೆ ಬಂದ ಸುದ್ದಿಯ ಎಪಿಸೋಡ್. ನಿಶಾ ತಾಯಿ ಮಾಳವಿಕ ಅವರೊಂದಿಗೆ ಮಹೇಶ್ ಸುಖದರೆ ಪತ್ರಿಕಾಗೋಷ್ಟಿಗೆ ಹಾಜರಾದರು.
ಚಿತ್ರಕ್ಕೆ ಒಮ್ಮೆ ನಾಯಕಿಯಾಗಿ ಆಯ್ಕೆಯಾಗುವುದು, ಮತ್ತೆ ಆ ಚಿತ್ರದಿಂದ ಔಟ್ ಗೋಯಿಂಗ್ ಆಗುವುದು, ಅವರ ಜಾಗಗಕ್ಕೆ ಮತ್ತೊಬ್ಬರು ಇನ್ ಕಮಿಂಗ್ ಆಗುವುದು ಗಾಂಧಿನಗರದಲ್ಲಿ ಸಾಮಾನ್ಯ. ಇತ್ತೀಚಿಗೆ ಇಂಥ ಔಟ್ ಫೋಕಸ್ ಹಾಗೂ ಇನ್ ಫೋಕಸ್‌ಗಳಿಂದಲೇ ವಿವಾದ ಮಾಡಿಕೊಂಡು ಕೆಲವರು ಪ್ರಚಾರ ಪಡೆಯುತ್ತಾರೆ ಎನ್ನುವುದು ಮತ್ತೊಂದು ಗಾಸಿಪ್. ಆದರೆ ನಿಶಾ 'ಅಂಬರೀಶ' ಚಿತ್ರದಿಂದ ಹೊರಗೆ ಬಂದಿದ್ದು ಇಂಥ ಪ್ರಚಾರಕ್ಕಾಗಿ ಅಲ್ಲ ಎಂಬುದು ನಿರ್ದೇಶಕರ ವಿವರಣೆ. ಹಾಗಿದ್ದರೆ ತುಂಬಾ ನಿರೀಕ್ಷೆ ಇಟ್ಟುಕೊಂಡು, ಮೊದಲ ಚಿತ್ರವೇ ಸ್ಟಾರ್ ನಟನೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕ ಖುಷಿಯಲ್ಲಿದ್ದ ನಿಶಾ ಚಿತ್ರದಿಂದ ಔಟ್ ಆಗಿದ್ದು ಯಾಕೆ? ನಿರ್ದೇಶಕ ಮಹೇಶ್ ಸುಖದರೆ ಹೇಳ್ತಾರೆ ಕೇಳಿ, 'ನಾನು ನಿಶಾ ಅವರ ತಂದೆ ಜೊತೆ ಸಿನಿಮಾ ಮಾಡಿದ್ದೇನೆ. ಅವರ ಕುಟುಂಬದ ಮೇಲೆ ನನಗೆ  ಪ್ರೀತಿ ಇದೆ. ಈ ಕಾರಣಕ್ಕೆ ಅವರ ಮಗಳನ್ನು ನಾಯಕಿ ಮಾಡಬೇಕು ಎಂದುಕೊಂಡು ನಿಶಾಳನ್ನು ನಮ್ಮ ಅಂಬರೀಶ ಚಿತ್ರಕ್ಕೆ ನಾಯಕಿಯನ್ನಾಗಿಸಿದ್ದು. ಆದರೆ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲಿ ಅವರ ಆರೋಗ್ಯ ಕೈ ಕೊಟ್ಟಿದೆ. ಬೆಳಗ್ಗೆ ಜಾಗಿಂಗ್ ಮಾಡುವಾಗ ಆಯಾ ತಪ್ಪಿ ಬಿದ್ದ ಪರಿಣಾಮ ಎರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಆದರೆ, ನಟ ದರ್ಶನ್ ಸೇರಿದಂತೆ ಎಲ್ಲ ಕಲಾವಿದರ ಡೇಟ್ ಬದಲಾಯಿಸಲು ಆಗಲ್ಲ. ಎರಡು ತಿಂಗಳು ಎಲ್ಲರನ್ನು ಕಾಯಿಸಲು ಸಾಧ್ಯವಿಲ್ಲ. ಹೀಗಾಗಿ ನಿಶಾ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಈ ವಿಚಾರದಲ್ಲಿ ಬೇರೆ ಅನುಮಾನಗಳು ಬೇಡ' ಎಂದರು. ನಿಶಾರ ತಾಯಿ ಮಾಳವಿಕ ಕೂಡ ನಿರ್ದೇಶಕರ ಈ ವಿವರಣೆಯನ್ನು ಅನುಮೋದಿಸಿದರು.
ಒಳ್ಳೆಯ ಸಿನಿಮಾ ಕೈ ತಪ್ಪಿ ಹೊಗಿದ್ದಕ್ಕೆ ನಿಶಾಗೂ ಬೇಸರ ಇದೆ. ಆಕೆ ಈ ಚಿತ್ರದಲ್ಲಿ ಅಭಿನಯಿಸುವ ಸಂತಸದಲ್ಲಿದ್ದಳು. ನಿರ್ದೇಶಕರು ಕೂಡ ಹೇಗೋ ನಿಭಾಯಿಸುತ್ತೇನೆ ಅಂದಿದ್ದರು. ಆದರೆ, ಕಾಲಿಗೆ ಪೆಟ್ಟಾಗಿರುವ ಕಾರಣ ಡ್ಯಾನ್ಸ್ ಮಾಡಲು ಆಗಲ್ಲ. ಚಿತ್ರದ ಕೊನೆವರೆಗೂ ನಿಶಾ ಪಾತ್ರ ಇದೆ. ಹೀಗಾಗಿ ಚಿತ್ರಕ್ಕೆ ತೊಂದರೆಯಾಗುವುದು ಬೇಡ ಅಂತ ನಾವೇ ಚಿತ್ರದಿಂದ ಹೊರಗುಳಿಯುವ ನಿರ್ಧಾರಕ್ಕೆ ಬಂದಿದ್ದು ಎನ್ನುತ್ತಾರೆ ಮಾಳವಿಕ. ಸದ್ಯ ನಿಶಾ ಬೆಡ್ ರೆಸ್ಟ್‌ನಲ್ಲಿದ್ದಾರೆ. ಅಂದ ಹಾಗೆ ನಿಶಾ ಜಾಗಕ್ಕೆ ಬೇರೆ ಯಾರು? 'ನಟಿ ರಚಿತಾರಾಮ್ ಅವರ ಬಳಿ ಒಂದು ಸುತ್ತಿನ ಮಾತುಕತೆ ಮಾಡಿದ್ದೇವೆ. ಅವರೇ ಅಂತಿಮವಾಗುತ್ತಾರೆ' ಎಂದರು  ಮಹೇಶ್ ಸುಖದರೆ. ಒಂದು ವೇಳೆ ರಚಿತಾರಾಮ್ 'ಅಂಬರೀಶ'ನೊಂದಿಗೆ ಹೆಜ್ಜೆ ಹಾಕಿದರೆ 'ಬುಲ್ ಬುಲ್‌' ರಾಣಿಗೆ ದರ್ಶನ್ ಜೊತೆಗೆ ಎರಡನೇ ಇನ್ನಿಂಗ್ಸ್ ಇದಾಗಲಿದೆ. ಒಟ್ಟಿನಲ್ಲಿ ರಾಜಕಾರಣಿ ಸಿ.ಪಿ. ಯೋಗೇಶ್ವರ್ ಮಗಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎನ್ನುವ ವಿಚಾರ ಎಷ್ಟು ಬೇಗ ದೊಡ್ಡ ಪ್ರಚಾರ ಪಡೆಯಿತೋ ಅಷ್ಟೇ ವೇಗವಾಗಿ ನಿಶಾ ಮೊದಲ ಚಿತ್ರದ ಅವಕಾಶವನ್ನು ಕಳೆದುಕೊಂಡಿದ್ದಾಳೆ. ಹೀಗಾಗಿ ಹೆಸರಿನಲ್ಲಿ ಯೋಗೇಶ್ವರ್ ಇದ್ದರೂ ಯಾಕೋ ನಿಶಾಗೆ 'ಅಂಬರೀಶ'ನಲ್ಲಿ ನಟಿಸುವ ಯೋಗ ಮಾತ್ರ ಸಿಗಲಿಲ್ಲ.

- ಕೇಶವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.