ಸಿನಿಮಾ ಲೇಖನ

ಮನಿ ಈಸ್ ಪಾಯಿಸನ್!

ಮನಿ ಈಸ್ ಪಾಯಿಸನ್!
Published On :

ಬುಡಗಟ್ಟು ಜನ ಅಂದ್ರೆ ಹೀಗೆಲ್ಲ...
ಕಾಡಿನ ಹುಡುಗನನ್ನು ಬಲಿ ಪಡೆದ ನಾಡು...
ಸಿನಿಮಾ ನಟ ಎನ್ನುವ ಪೂರ್ಣ ಮುದ್ರೆ ಬೀಳುವ ಮುನ್ನವೇ ಕಣ್ಮುಚ್ಚಿದ ರಾಜೇಶನ ಸಾವಿನ ನಂತರ ಕೇಳಿಬರುತ್ತಿರುವ ಕೂಗು ಇದು. ರಾಜೇಶನ ಸಾವಿಗೆ ಮಾಧ್ಯಮಗಳೇ ಕಾರಣ ಎನ್ನುವುದು ಕೆಲ ಫೇಸ್‌ಬುಕ್ ವರದಿಗಾರರ ಕಾಮೆಂಟ್‌ಗಳು. ನಿಜ, ರಾಜೇಶ ಪೂರ್ಣ ಪ್ರಮಾದ ಕಾಡಿನ ಹುಡುಗ ಅಲ್ಲದಿದ್ದರೂ ಅದಿವಾಸಿ ಸಮುದಾಯಕ್ಕೆ ಸೇರಿದ ಜೇನು ಕುರುಬರ ಹುಡುಗ. ಮುಗ್ಧ, ಅಮಾಯಕ. ಇದರ ಜೊತೆಗೆ ದಡ್ಡತನ, ಪೆದ್ದ್ದು ಪೆದ್ದನಂತೆ ವರ್ತಿಸುತ್ತಿದ್ದ. ಕಾಡಿನ ಹುಡುಗನಂತೆ ಇದ್ದರೂ, ನಿಜವಾದ ಆದಿವಾಸಿಗಳಲ್ಲಿ ಇಲ್ಲದ್ದನ್ನು ಮೈ ಗೂಡಿಸಿಕೊಂಡಿದ್ದ ರಾಜೇಶನನ್ನು ಖಾಸಗಿ ವಾಹಿನಿಗಳು ಬಳಸಿಕೊಂಡವು. ಅವನಿಂದಲೇ ತಮ್ಮ ವಾಹಿನಿಯ ರಿಯಾಲಿಟಿ ಶೋನ ಟಿಆರ್‌ಪಿಯನ್ನೂ ಹೆಚ್ಚಿಸಿಕೊಂಡವು. ಯಾವಾಗ ಟಿವಿ ಮೂಲಕ ಮನೆ ಮನೆಗೂ ರಾಜೇಶ ತಲುಪಿದನೋ, ಸಿನಿಮಾ ನಿರ್ದೇಶಕನಾಗಲು ತಿರುಗುತ್ತಿದ್ದ ರವಿ ಕಡೂರು ರಾಜೇಶನ ಬೆನ್ನಿಗೆ ಬಿದ್ದ. 'ಜಂಗಲ್ ಜಾಕಿ' ಚಿತ್ರವನ್ನು ಮಾಡಿದ. ತನ್ನ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎನ್ನುವ ಕೊರಗು ಆತನನ್ನು ಅವರಿಸಿಕೊಂಡಿತು. ಮೊದಲೇ ತಲೆ ಕೆಡಿಸಿಕೊಂಡಿದ್ದ ಈ ಹುಡುಗ ಮತ್ತಷ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡ. ಹೇಗೋ ಸಿನಿಮಾ ತೆರೆಕಂಡಿತು. ಈ ನಡುವೆ ಮತ್ತೊಬ್ಬ ನಿರ್ದೇಶಕ ನಂದನ್ ಪ್ರಭು ತಮ್ಮ 'ಲವ್ ಈಸ್ ಪಾಯಿಸನ್‌' ಚಿತ್ರಕ್ಕೆ ರಾಜೇಶನನ್ನು ಕರೆತಂದರು. ಸಾಲದ್ದಕ್ಕೆ ಪೂನಂ ಪಾಂಡೆಯಂಥ ಬೆತ್ತಲೆ ಶಿಲೆ ಜೊತೆ ಡ್ಯಾನ್ಸ್ ಮಾಡಿಸಿದರು.
ಎಲ್ಲರೂ ಹೇಳುವಂತೆ ಹಳ್ಳಿ ಹೈದನ ತಲೆ ಕೆಡಿಸಿದ್ದೇ ಈ ಪ್ಯಾಟೆ ಮಂದಿಯ ಬದುಕು. ಮುಂದೆ ಅವನೇ ಬಣ್ಣದ ಕನಸುಗಳಿಗೆ ಬೀಳುವಂಥ ವಾತಾವರಣ ಸೃಷ್ಟಿ ಮಾಡಿದರು. ಈಗ ಆತನ ಸಾವಿನಲ್ಲಿ ಇವರ ಪಾತ್ರವೂ ಇದೆ ಎನ್ನುವುದು ನಿಜ. ಆದರೆ, ಇದು ಒಂದೆನಾ ರಾಜೇಶನ ಸಾವಿಗೆ ಕಾರಣ? ಆತನ ಸಾವಿನ ನಂತರ ನಡೆಯುತ್ತಿರುವ ಚರ್ಚೆ, ಅರೋಪಗಳಲ್ಲಿ ಕೇವಲ ಒಂದು ಮುಖ ಮಾತ್ರ ಇದೆ. ರಾಜೇಶನನ್ನು ಮಾತ್ರವಲ್ಲ, ಆತನ ಮುಗ್ಧತೆಯನ್ನೂ ಟಿವಿ ಮಾಧ್ಯಮಗಳು ಬಳಸಿಕೊಂಡವು. ರಿಯಾಲಿಟಿ ಶೋನಲ್ಲಿ ಕೊಟ್ಟಿದ್ದ ಟಾಸ್ಕ್‌ಗಳು ಮನುಷ್ಯತ್ವ ಮರೆತು ಟಿಆರ್‌ಪಿಯನ್ನೇ ಟಾರ್ಗೆಟ್ ಮಾಡಿದ್ದವು. ಇದರಲ್ಲಿ ಅನುಮಾನವಿಲ್ಲ. ಆದರೆ, ಈ ಕಾಡಿನ ಹುಡುಗನಲ್ಲಿ ಎಲ್ಲ ಸರಿ ಇರಲಿಲ್ಲ ಎಂಬುದು 'ಹಳ್ಳಿ ಹೈದ ಪ್ಯಾಟೆಗ್ ಬಂದ' ಶೋನ ಆರಂಭದಿಂದಲೂ ನೋಡಿದಾಗಲೇ ಗೊತ್ತಾಗುತ್ತದೆ. ರಾಜೇಶ ಯಾವ ಮಟ್ಟಕ್ಕೆ ಕಿರುಕ್ಕು ಮಾಡುತ್ತಿದ್ದ ಎಂಬುದನ್ನು ಆ ಶೋನ ನಿರೂಪಕರಿಗೇ ಗೊತ್ತು. ವೈದ್ಯರ ಪ್ರಕಾರ ಆಗಲೇ ಹತ್ತಾರು ಒತ್ತಡಗಳಿಂದ ಬಳಲುತ್ತಿದ್ದ ರಾಜೇಶ. ಕೈಗೆ ಸಿಕ್ಕವರನ್ನು ಹೊಡೆಯೋದು, ಬೈಯ್ಯುವುದು, ಎಲ್ಲೆಂದರಲ್ಲಿ   ಮುಂಗೋಪಿತನ ಪ್ರದರ್ಶಿಸುವುದು, ತಾಳ್ಮೆ ಕೆಟ್ಟವನಂತೆ ವರ್ತಿಸುವುದು, ಅಮ್ಮನನ್ನೇ ಹೊಡೆಯುವುದು, ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವುದು... ಇದ್ಯಾವುದೂ ಆದಿವಾಸಿಗಳ ಸಂಸ್ಕೃತಿ ಅಲ್ಲ. ಕಾಡು ಹುಡುಗರ ಬದುಕಿನ ರೀತಿ ಕೂಡ ಇದಲ್ಲ. ಆದರೂ ರಾಜೇಶ ಹೀಗೆಲ್ಲ ಆಡುತ್ತಿದ್ದ. ಇದಕ್ಕೆ ಕಾರಣ...?
ರಾಜೇಶ ತೀರಾ ಅಮಾಯಕನೇನು ಅಲ್ಲ. ಹಾಗೊಂದು ವೇಳೆ ಆತ ಮುಗ್ಧನೇ ಆಗಿದ್ದರೆ, ಕೈಗೆ ದುಡ್ಡು ಬಂದ ಕೂಡಲೇ ಊರಿನ ಜನರನ್ನು, ತನ್ನ ಜೊತೆಯಲ್ಲೇ ಇದ್ದ ಗೆಳೆಯರನ್ನು ದೂರ ಮಾಡಿಕೊಂಡು ಮನೆಗೆ ಟಿವಿ, ಪಲ್ಸರ್ ಗಾಡಿ ತೆಗೆದುಕೊಂಡು ಬಂದು ಶೋಕಿ ಮಾಡುತ್ತಿರಲಿಲ್ಲ. ಊರಿನ ಮುಖಂಡರು ದೇವಸ್ಥಾನದ ಮುಂದೆ 'ಸನ್ಮಾನ ಮಾಡುತ್ತೇವೆ ಬಾರಪ್ಪ' ಅಂದಾಗ 'ನಿಮ್ ಸನ್ಮಾನದ ಹಾರ ತಕೊಂಡು ನಾನೇನ್ ಮಾಡ್ಲಿ. ದುಡ್ಡು ಕೊಡ್ತಿರಾ?' ಎಂದು ಕೇಳುವಷ್ಟು ದುರಹಂಕಾರಿಯಾಗುತ್ತಿರಲಿಲ್ಲ. ಮೆಚ್ಚಿ ಕೈ ಹಿಡಿದ ಹೆಂಡತಿಯನ್ನೇ ಮನೆಯಿಂದ ಓಡಿಸುವಷ್ಟು ಕಾಟ ಕೊಡುತ್ತಿರಲಿಲ್ಲ. 'ಜಂಗಲ್ ಜಾಕಿ' ಚಿತ್ರದ ಶೂಟಿಂಗ್ ವೇಳೆ ಈತ ಮಾಡಿದ ಕಿರುಕ್ಕುಗಳು ಒಂದೆರಡಲ್ಲ. 'ಯಾವನ್ರಿ ಲೈಟ್ ಹಾಕಿದ್ದು. ಆಫ್ ಮಾಡ್ರಿ ನನ್ ಕಣ್ಣು ಉರಿಯುತ್ತವೆ' ಎಂದು ಚಿತ್ರದ ಛಾಯಾಗ್ರಹಕನ ಜೊತೆಗೆ ಜಗಳಕ್ಕಿಳಿಯುತ್ತಿದ್ದ. ಹಳ್ಳಿಯಲ್ಲಿ ಲೋಕಲ್ ಸಾರಾಯಿ ಕುಡಿಯುತ್ತಿದ್ದ ರಾಜೇಶನಿಗೆ ಬ್ರಾಂಡೆಡ್ ಕುಡಿ ಅಂತ ಯಾವ ಟಿಮಿನವ್ರು ಹೇಳಲಿಲ್ಲ. ಬಂದ ಹಣದಲ್ಲಿ ಹೆತ್ತಮ್ಮನನ್ನೇ ಮರೆತು ಶೋಕಿ ಮಾಡು ಅಂತಲೂ ಹೇಳಲಿಲ್ಲ. ಆದರೂ ಅದನ್ನೆಲ್ಲ ರಾಜೇಶ ಮಾಡಿದ. ಇಲ್ಲಸಲ್ಲದ ತೆವಲುಗಳನ್ನು ಅಂಟಿಸಿಕೊಂಡ. ಅದರ ಜೊತೆಗೆ ವೈದ್ಯರಿಂದ ಕೌನ್ಸೆಲಿಂಗ್ ಮಾಡಿಸಿಕೊಳ್ಳಬೇಕಿದ್ದವನು ಮತ್ತಷ್ಟು ತಲೆ ಕೆಡಸಿಕೊಂಡ. ಅಂತಿಮವಾಗಿ ಸಾವನ್ನು ಅಹ್ವಾನಿಸಿಕೊಂಡ.
ಇಲ್ಲಿ ಗಮನಿಸಬೇಕಾದ ಸಂಗತಿ ಮತ್ತೊಂದಿದೆ. ಮೊದಲ ಬಾರಿಗೆ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಾಗ ಅವನನ್ನು ಸುಮ್ಮನೆ ಬಿಟ್ಟುಬಿಡಬೇಕಿತ್ತು. ಯಾಕೆಂದರೆ ಆಗಲೇ ವೈದ್ಯರು ಈತ 'ಅಕ್ಯೂಟ್ ಮೇನಿಯಾ' ಎನ್ನುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ ಅಂತ ಹೇಳಿದ್ದರು. ಆದರೂ ಈ ನಗರದ ಮಂದಿ ಅವನನ್ನ  ಬಿಡಲಿಲ್ಲ. ಇದೇ ಈ ನಾಗರಿಕ ಜಗತ್ತು ರಾಜೇಶನ ವಿಚಾರದಲ್ಲಿ ಮಾಡಿದ ದೊಡ್ಡ ತಪ್ಪು. ಅಲ್ಲದೆ ಆತನನ್ನು ರಿಯಾಲಿಟಿ ಶೋಗೆ ಕರೆತಂದವರು, ಬುಡಕಟ್ಟು ಜನರ ಬದುಕನ್ನು ಕೀಳು ಎನ್ನುವಂತೆ ತೋರಿಸುವ ಬದಲು ಕಾಡಿನ ಜನರ ಉತ್ಸಾಹಿ ಜೀವನವನ್ನು ತೋರಿಸಬೇಕಿತ್ತು. ದಕ್ಷಿಣ ಆಫ್ರಿಕದ 'ದ ಗಾಡ್ಸ್ ಮಸ್ಟ್ ಬಿ ಕ್ರೇಝಿ' ಚಿತ್ರದ ಕಥೆ ನೆನಪಾಗಿದಿದ್ದರೆ ಕಾಡಿನ ಜನರ ಬದುಕನ್ನು ಹಿಯಾಳಿಸುವ ಸಾಹಸ ಶೋನ ಆಯೋಜಕರಿಂದ ನಡೆಯುತ್ತಿರಲಿಲ್ಲ. ಆದೇನೆ ಆಗಲಿ, ರಾಜೇಶನ ಸಾವಿಗೆ ಅತನನ್ನು ಬಳಸಿಕೊಂಡ ಮಾಧ್ಯಮಗಳು, ಆತನನ್ನು ನೋಡಿ ಎಂಜಾಯ್ ಮಾಡಿ, ಟಿವಿ ಟಿಆರ್‌ಪಿ ಹೆಚ್ಚಿಸಿದ ಜನ ಎಷ್ಟು ಕಾರಣಕರ್ತರೋ ಆತನ ಮಾನಸಿಕ ಸ್ಥಿತಿಯೂ ಅಷ್ಟೇ ಕಾರಣ. ಆದರೆ, ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎನ್ನುವ ಸಂಪ್ರದಾಯಕ್ಕೆ ಕಟ್ಟುಬಿದ್ದಿರುವ ನಾವು ರಾಜೇಶನ ಸಾವಿನಲ್ಲಿ ಒಂದೇ ಮುಖವನ್ನು ಹುಡುಕುತ್ತಿದ್ದೇವೆ. ಆ ಮೂಲಕ ಬುಡಕಟ್ಟು ಜನ ಅಂದ್ರೆ ರಾಜೇಶನ ಹಾಗೆ ಎನ್ನುವಂತೆ ಪರೋಕ್ಷವಾಗಿ ಬಿಂಬಿಸುತ್ತಿದ್ದೇವೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.