ನಿರ್ದೇಶನ ಡಿ. ರಾಜೇಂದ್ರ ಬಾಬು B.Sc., D.F.A
ಕನ್ನಡ ಚಿತ್ರಪ್ರೇಮಿಗಳು ಬೆಳ್ಳಿತೆರೆಯ ಮೇಲೆ ಡಿ. ರಾಜೇಂದ್ರ ಬಾಬು ಅವರ ಹೆಸರನ್ನು ನೋಡಿದ್ದೇ ಹೀಗೆ. ಅವರ ವಿದ್ಯಾರ್ಹತೆಯ...

ಕನ್ನಡ ಚಿತ್ರಪ್ರೇಮಿಗಳು ಬೆಳ್ಳಿತೆರೆಯ ಮೇಲೆ ಡಿ. ರಾಜೇಂದ್ರ ಬಾಬು ಅವರ ಹೆಸರನ್ನು ನೋಡಿದ್ದೇ ಹೀಗೆ. ಅವರ ವಿದ್ಯಾರ್ಹತೆಯ ವಿವರದ ಸಮೇತ. ಕನ್ನಡ ಚಿತ್ರ ನಿರ್ದೇಶಕರ ಪೈಕಿ ಬಹುಶಃ ತಮ್ಮ ವಿದ್ಯಾರ್ಹತೆ ವಿವರದ ಸಮೇತ ಹೆಸರು ಛಾಪಿಸಿಕೊಳ್ಳುತ್ತಿದ್ದವರಲ್ಲಿ ಬಾಬು ಮೊದಲಿಗರು.
ಚಿತ್ರನಿರ್ದೇಶನದ ಕನಸು ಕಂಡವನಿಗೆ ಡಿ.ರಾಜೇಂದ್ರಬಾಬು ಅವರ ಈ ರೀತಿಯ ಹೆಸರು ನೋಡಿದಾಗೆಲ್ಲ, ಓಹೋ.. ನಿರ್ದೇಶನ ಎಂಬುದು ಯಾರುಬೇಕಾದರೂ ಮಾಡಬಲ್ಲದ್ದಲ್ಲ. ಇದಕ್ಕೊಂದು ಅರ್ಹತೆ ಅಗತ್ಯ. ಉಋಆ ಅಂದ್ರೇನು ಅಂತ ತಿಳ್ಕೋಬೇಕು, ಈ ಥರದ ಯೋಚನೆಗಳು ಹುಟ್ಟುತ್ತಿದ್ದವು.
ಬಾಬುಗಳು ಇರೋದು ಬೆಂಗಾಲೀ ಚಿತ್ರರಂಗಕ್ಕೆ ಮಾತ್ರ ಅಲ್ಲ, ಕನ್ನಡದಲ್ಲೂ ಬಾಬುಗಳಿದ್ದಾರೆ ಎಂಬುದು ನಮ್ಮ ಹೆಮ್ಮೆ. ನಮ್ಮಲ್ಲಿ ನಮ್ಮವರೇ ಆಗಿ ಕನ್ನಡ ಚಿತ್ರರಂಗದ ಶುರುವಿನಿಂದ ಈಗಿನತನಕವೂ ಒಂದಲ್ಲ ಒಂಥರ ಸೇವೆ ಸಲ್ಲಿಸುತ್ತಲೇ ಇರುವ ಶಂಕರ್ಸಿಂಗ್ ಕುಟುಂಬದ ರಾಜೇಂದ್ರ ಸಿಂಗ್ ಬಾಬು ಇದ್ದಾರೆ. ಕೇರಳದಿಂದ ಬಂದರೂ ಕನ್ನಡಚಿತ್ರರಂಗದಲ್ಲೇ ತಮ್ಮ ವೃತ್ತಿಜೀವನವನ್ನು ಗಂಭೀರವಾಗಿಸಿಕೊಂಡ ದಿನೇಶ್ ಬಾಬು ಇದ್ದಾರೆ. ಅಳಿಲುಸೇವೆ ಗೈಯ್ಯುತ್ತಿರುವ ಎ.ಆರ್.ಬಾಬು ಇದ್ದಾರೆ. ಹಾಗೂ ಇಲ್ಲ ಅಂತ ಇನ್ನಾದರೂ ನಂಬಲಾಗುತ್ತಿಲ್ಲದ ಡಿ.ರಾಜೇಂದ್ರ ಬಾಬು ಇದ್ದಾರೆ.
ಹೌದು. ಬಾಬು ದೈಹಿಕವಾಗಿಯಷ್ಟೇ ನವೆಂಬರ್ ಎರಡರಿಂದ ಇಲ್ಲವಾಗಿದ್ದಾರೆ. ಅವರ ನೆನಪುಗಳು ಅವರ ಚಿತ್ರಗಳ ಮೂಲಕ ಎಂದೆಂದೂ ಜೀವಂತವೇ. ಡಿ.ರಾಜೇಂದ್ರಬಾಬು ಇಂಡಸ್ಟ್ರಿಗೆ ಅದೆಷ್ಟೇ ಪರಿಚಿತ ಹಾಗೂ ಖ್ಯಾತ ಹೆಸರಾದರೂ ಮಾಮೂಲು ಸಿನಿಮಾ ವೀಕ್ಷಕನ ಪಾಲಿಗೆ ಅವರು ಎಂದಿಗೂ ಎಲೆಮರೆಯಕಾಯಿಯಂಥ ಸಾಧಕ. ನಿರ್ದೇಶಿಸಿದ ಸುಮಾರು ಅರ್ಧಶತಕದಷ್ಟು ಚಿತ್ರಗಳಲ್ಲಿ ಯಶಸ್ಸನ್ನೇ ಕಂಡವರು ಬಾಬು. ಆದರೆ ಯಶಸ್ಸಿನ ಪಾಲು ಮಾತ್ರ ಸಂಪೂರ್ಣವಾಗಿ ದಕ್ಕಿದ್ದು ತೆರೆಮೇಲಿನ ತಾರೆಗಳಿಗೆ. ರವಿಚಂದ್ರನ್ ಹಂಸಲೇಖಾ ಜೋಡಿಯ ಅಣ್ಣಯ್ಯ, ರಾಮಾಚಾರಿಗಳಿರಬಹುದು, ನಾನು ನನ್ನ ಹೆಂಡ್ತಿಯಿರಬಹುದು, ಒಲವಿನ ಉಡುಗೊರೆಯಿರಬಹುದು, ಹಬ್ಬ, ಪ್ರೀತ್ಸೇ ಇರಬಹುದು. ಆ ಎಲ್ಲ ಯಶಸ್ಸಿನ ಸಿಂಹಪಾಲು ದಕ್ಕಿದ್ದು ಸಂಗೀತ ನಿರ್ದೇಶಕರಿಗೆ ಹಾಗೂ ತೆರೆಮೇಲೆ ಕಾಣಿಸಿದ ನಟನಟಿಯರಿಗೆ. ರಾಜೇಂದ್ರಬಾಬು ಹೆಸರಲ್ಲಿ ರಾಜನಿದ್ದರೂ ಕಿಂಗೂ ಅನಿಸಿಕೊಳ್ಳಲಿಲ್ಲ. ಕಿಂಗ್ ಮೇಕರ್ರೂ ಅನಿಸಿಕೊಳ್ಳಲಿಲ್ಲ. ತೆರೆಮರೆಯಲ್ಲೇ ಸದ್ದಿಲ್ಲದೇ ಸಾಧನೆ ಮಾಡಿ ತೃಪ್ತಿ ಅನುಭವಿಸಿದರು.
ಅವರ ಚಿತ್ರಗಳಲ್ಲಿ ರೀಮೇಕ್ಗಳೇ ಹೆಚ್ಚು. ಹೌದು. ರಿಮೇಕ್ ಸ್ಪೆಷಲಿಸ್ಟ್ ಎಂದಾಗ ಬಾಬು ಸ್ವಮೇಕ್ಗಳನ್ನು ಮಾಡಿ ಗೆದ್ದು ಬಾಯಿಮುಚ್ಚಿಸಿದರು. ಆದರೆ ಒಂದು ಮಾತು. ರಿಮೇಕ್ ಸ್ಪೆಶಲಿಸ್ಟ್ ಎಂಬ ಬಿರುದನ್ನು ಖಂಡಿತವಾಗಿಯೂ ಡಿ.ರಾಜೇಂದ್ರ ಬಾಬು ಹೆಮ್ಮೆಯಿಂದ ಸ್ವೀಕರಿಸಬಹುದು. ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳೋದು ಅಂದ್ರೆ ಏನು ಅನ್ನೋದನ್ನು ರಾಜೇಂದ್ರ ಬಾಬು ಅವರ ಚಿತ್ರ ನೋಡಿ ಕಲಿಯಬೇಕಿತ್ತು. ಆ ಕಾರಣಕ್ಕೆ ರವಿಚಂದ್ರನ್, ವಿಷ್ಣು, ರಾಕ್ಲೈನ್ ವೆಂಕಟೇಶ್, ಹೀಗೆ ಪ್ರತಿಯೊಬ್ಬರಿಗೂ ರಾಜೇಂದ್ರ ಬಾಬು ಮೊದಲ ಆಯ್ಕೆ ಎಂಬಂತಿದ್ದರು. ಹಲವು ನಟರ ಸಿನಿಮಾ ಗ್ರಾಫ್ ಇಳಿಮುಖವಾದಾಗ ಮತ್ತೆ ಅದಕ್ಕೆ ಮೇಲ್ಮುಖ ಚಾಲನೆ ಕೊಟ್ಟವರು ಡಿ.ರಾ.ಬಾಬು.
ರಾಜೇಂದ್ರಬಾಬು ಅವರನ್ನು ತುಂಬ ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಬಾಬು ಅವರಲ್ಲೊಬ್ಬ ಅದ್ಭುತ ನಟನೂ ಇದ್ದನಂತೆ. ಪ್ರತಿ ಕಲಾವಿದರ ಪಾತ್ರವನ್ನು ಸ್ವತಃ ಅಭಿನಯಿಸಿ ನಟರಿಗೆ ಆ ಪಾತ್ರದ ಗಹನತೆಯನ್ನು ಮನದಟ್ಟು ಮಾಡಿಕೊಡುವಷ್ಟು ಸಾಮರ್ಥ್ಯವುಳ್ಳವರಾಗಿದ್ದರಂತೆ ಬಾಬು.
ರಿಮೇಕ್ ನಿರ್ದೇಶಕ ಎಂಬ ಹಣೆಪಟ್ಟಿ ಹೊತ್ತರೂ ನಟನೆಗೆ ಇಲ್ಲಿನ ಕಲಾವಿದರಿಗೇ ಆದ್ಯತೆ ನೀಡುತ್ತಿದ್ದ ಬಾಬು ಹಲವು ರಂಗಭೂಮಿ ಕಲಾವಿದರನ್ನು ಪರಿಚಯಿಸಿದವರು. ಮುಖ್ಯಮಂತ್ರಿ ಚಂದ್ರು ಆ ಕಾಲಕ್ಕೇ ರಂಗಭೂಮಿಯಲ್ಲಿ ದೊಡ್ಡ ಹೆಸರು. ತಮ್ಮ ಮುಖ್ಯಮಂತ್ರಿ ನಾಟಕದ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿದ್ದರು. ವಿ.ಸೋಮಶೇಖರ್ ಅವರೊಂದಿಗೆ ಚಕ್ರವ್ಯೂಹ ಚಿತ್ರಕ್ಕೆ ಡಿ.ರಾಜೇಂದ್ರಬಾಬು ಸಹನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾಗ, ಅತಿ ಮುಖ್ಯ ಪಾತ್ರವೊಂದಕ್ಕೆ ಮುಖ್ಯಮಂತ್ರಿ ಚಂದ್ರು ಅವರನ್ನು ಶಿಫಾರಸು ಮಾಡಿ
ಚಂದ್ರು ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟರು. ಚಿತ್ರದಲ್ಲಿ ಹಲವು ಘಟಾನುಘಟಿ ನಟರಿದ್ದರೂ ಚಂದ್ರು ಅವರು ಇಡೀ ಚಿತ್ರವನ್ನು ಅಂಬರೀಶ್ ಅವರಷ್ಟೇ ಆವರಿಸಿದ್ದರು. ಹಿರಿಯ ನಟ ಲಕ್ಷ್ಮಣ್ ಅವರಿಗೂ ರಾಜೇಂದ್ರಬಾಬು ಅವರ ಚಿತ್ರದಲ್ಲಿ ಒಂದು ಪ್ರಮುಖಪಾತ್ರ ಇದ್ದೇ ಇರುತ್ತಿತ್ತು. ಮೊನ್ನೆ ಬಾಬು ಅವರ ನಿಧನದ ಸುದ್ದಿ ತಿಳಿದು ದುಃಖಿಸಿದ ಲಕ್ಷ್ಮಣ್ ಅವರ ಕಣ್ಣೀರಲ್ಲಿ ತೀರಿಸಲಾಗದ ಕೃತಜ್ಞತೆಯಿತ್ತು.
ಬಾಬು ಅವರ ಕಾರ್ಯಕ್ಷಮತೆಯ ಬಗ್ಗೆ ಹಲವು ಆಸಕ್ತಿಕರ ವಿಷಯಗಳಿವೆ. ಹಾಲುಂಡ ತವರು ಎಂಬ ಯಶಸ್ವೀ ಚಿತ್ರದ ನಂತರ ಅವರು ಅದೇ ಕಾಂಬಿನೇಷನ್ನಲ್ಲಿ ಕೈಗೆತ್ತಿಕೊಂಡಿದ್ದ ಚಿತ್ರ ದೀರ್ಘಸುಮಂಗಲಿ. ಚಿತ್ರ ದೊಡ್ಡ ಸೋಲು ಕಂಡಿತು. ಮಾಧ್ಯಮಗಳಲ್ಲಿ ಬಾಬು ಬಗ್ಗೆ ಟೀಕಾಪ್ರಹಾರವಾಯ್ತು. ಬಾಬು ಚಿತ್ರವನ್ನು ತೀರಾ ನಿರಾಸಕ್ತಿಯಿಂದ ಬೇಕಾಬಿಟ್ಟಿಯಾಗಿ ಮಾಡಿ ಸೋಲಿಗೆ ಕಾರಣರಾದರು ಅಂತೆಲ್ಲ ಪ್ರತಿಕ್ರಿಯೆಗಳು ಬಂದವು. ಆದರೆ ವಸ್ತುಸ್ಥಿತಿ ಹತ್ತಿರದಿಂದ ಕಂಡವರು ಅದನ್ನು ಒಪ್ಪುವುದಿಲ್ಲ.
ಬಾಬು ಆ ಚಿತ್ರದ ಚಿತ್ರೀಕರಣ ಸಮಯದಲ್ಲಿ ತಮ್ಮ ಕೈ ಕೊಡುತ್ತಿದ್ದ ಅನಾರೋಗ್ಯದ ನಡುವೆಯೂ ಶೂಟಿಂಗ್ ಪ್ಯಾಕಪ್ ಹೇಳದೆ, ಅಸೋಸಿಯೇಟ್ಗಳಿಗೆ ಸೂಚನೆಗಳನ್ನು ಕೊಡುತ್ತಾ, ಅವರ ಮೂಲಕ ಕೆಲಸ ಮಾಡಿಸಿ ಕೊಡುತ್ತಾ ಶೂಟಿಂಗ್ ನಡೆಯುವಂತೆ, ತಮ್ಮ ಕಲ್ಪನೆಯಂತೆಯೇ ಮೂಡಿಬರುವಂತೆ ನೋಡಿಕೊಂಡಿದ್ದರು. ವಿಷ್ಣುವರ್ಧನ್ ಅವರನ್ನು ಪುಟ್ಟಾ ಅಂತಲೇ ಸಂಬೋಧಿಸುತ್ತಿದ್ದ ಬಾಬು ಅವರಿಗೆ ವಿಷ್ಣು ಅವರೇ 'ನೀವು ಆರೋಗ್ಯ ನೋಡಿಕೊಳ್ಳಿ, ಶೂಟಿಂಗ್ ಒಂದುದಿನದ ಮಟ್ಟಿಗೆ ಮುಂದೂಡೋಣ ಅಂದಾಗಲೂ ಒಪ್ಪದೇ ಕರ್ತವ್ಯ ನಿರ್ವಹಿಸಿದವರು ರಾಜೇಂದ್ರಬಾಬು. ಹಬ್ಬ, ಯಾರೇ ನೀನು ಚೆಲುವೆ, ಥರದ ಮಲ್ಟಿಸ್ಟಾರರ್ ಚಿತ್ರಗಳನ್ನು ಎಲ್ಲ ಸ್ಟಾರ್ಗಳ ಸಮನ್ವಯದೊಡನೆ ಕಡಿಮೆ ಅವಧಿಯಲ್ಲಿ ಮುಗಿಸಿ ಅವನ್ನು ಯಶಸ್ವೀ ಚಿತ್ರವಾಗಿಸಿದ ಹೆಮ್ಮೆ ರಾಜೇಂದ್ರಬಾಬು ಅವರದು.
ಜೀವಮಾನದ ಸಾಧನೆಗಾಗಿ ಕೊಡುವ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಇವುಗಳು ಸಿಕ್ಕಿತು ಅಂತಾದರೆ ಅದು ನಿರ್ದೇಶಕರಿಗೆ ಇನ್ನು ಸಾಧಿಸುವುದೇನೂ ಉಳಿದಿಲ್ಲ ಅಥವಾ ನಿವೃತ್ತಿಯ ಸಮಯ ಎನಿಸುತ್ತದೆ. ಆದರೆ ಬಾಬು ಅದನ್ನು ಒಪ್ಪಿಕೊಳ್ಳಲಿಲ್ಲ. ಅವಾರ್ಡುಗಳು ಬಂದ ನಂತರ ಮತ್ತೆ ಸಕ್ರಿಯರಾದರು. ಆರ್ಯನ್, ಕುಚಿಕೂ ಹೀಗೆ ಮತ್ತಷ್ಟು ಹೊಸಥರದ ಸಿನಿಮಾ ಕನಸು ಕಂಡರು. ಆದರೆ ನನಸಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿರನಿದ್ರೆಗೆ ಜಾರಿದರು.
ಸಾಂಸಾರಿಕ ಜೀವನದಲ್ಲಿ ಎಲ್ಲವೂ ಸರಿಯಿದಿದ್ದರೆ ಡಿ.ರಾಜೇಂದ್ರಬಾಬು ಅವರು ಇನ್ನಷ್ಟು ವರ್ಷ ನಮ್ಮೊಂದಿಗಿರುತ್ತಿದ್ದರಂತೆ ಎಂಬ ಮಾತುಗಳು ಚಿತ್ರಾಭಿಮಾನಿಗಳ ವಲಯದಲ್ಲಿ ಕೇಳಿಬಂದಿದ್ದರಿಂದ ಕೊನೆಯದಾಗಿ ಒಂದು ಮಾತು. ಸುಮಿತ್ರಾ-ರಾಜೇಂದ್ರಬಾಬು ಅವರದು ಸುಖೀ ಸಂಸಾರವಾಗಿತ್ತು. ಹೆಣ್ಮಕ್ಕಳು ನಕ್ಷತ್ರ ಹಾಗೂ ಉಮಾಶಂಕರಿ ಅವರಿಂದ ಅವರದೊಂದು ಕಂಪ್ಲೀಟ್ ಎನಿಸುವಂಥ ಕುಟುಂಬವಾಗಿತ್ತು. ಎಲ್ಲರೂ ವೃತ್ತಿಜೀವನದಲ್ಲಿ ನಿರತರಾಗಿದ್ದರಿಂದ ಎಲ್ಲ ಸಂಸಾರಗಳಲ್ಲಿರುವಂತೆಯೇ ಅವರಲ್ಲೂ ಸಣ್ಣಪುಟ್ಟ ಏರುಪೇರುಗಳಿದ್ದಿರಬಹುದು. ಆದರೆ ಅದ್ಯಾವತ್ತೂ ಅವರ ಸಂಸಾರದ ಸಾಮರಸ್ಯದ ಮೇಲೆ ಪರಿಣಾಮ ಬೀರಲಿಲ್ಲ. ಸುಮಿತ್ರಾ ಅವರು ಇಂದು ದಕ್ಷಿಣಭಾರತದಲ್ಲಿ ಅತಿ ಬೇಡಿಕೆಯ ಪೋಷಕನಟಿಯಾಗಿ ಬೆಳೆದಿರುವುದರಲ್ಲಿ ಪತಿ ರಾಜೇಂದ್ರಬಾಬು ಅವರ ಸಹಕಾರವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಅದೇನೇ ಇರಲಿ ಹಬ್ಬದ ದಿನದಂದೇ ನಮ್ಮನ್ನಗಲಿದ 'ಹಬ್ಬ' ಚಿತ್ರದ ಸ್ವಾಭಿಮಾನಿ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರನ್ನು ಚಿತ್ರರಂಗ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದೆ.
ಸಂಸಾರನೌಕೆ ಚಿತ್ರದಲ್ಲಿ ಅಂಬರೀಷ್, ಮಹಾಲಕ್ಷ್ಮಿ ಮತ್ತಿತರರಿದ್ದರೂ, ಬಾಲಕೃಷ್ಣ ಅವರನ್ನೇ ರಾಜೇಂದ್ರಬಾಬು ಅವರು ಹೀರೋ ಎಂದು ಪರಿಗಣಿಸಿದ್ದರು. ಅಷ್ಟು ಮುಖ್ಯಪಾತ್ರ ಬಾಲಣ್ಣ ಅವರದಾಗಿತ್ತು. ಬಾಲಣ್ಣ ಅವರಿಗಾಗಿ ಒಂದು ಹಾಡು ಕೂಡ ಆ ಚಿತ್ರಕ್ಕಾಗಿ ಮಾಡಿಸಲಾಗಿತ್ತು. ಬಾಲಣ್ಣ ಅವರ ಶ್ರವಣ ಸಮಸ್ಯೆ ಎಲ್ಲರಿಗೂ ಗೊತ್ತಿರುವಂಥದ್ದೇ. ಈ ಸಿನಿಮಾದಲ್ಲಿ ತಮಗೊಂದು ಹಾಡು ಹಾಡುವುದಿದೆ ಎಂದಾಗ ಸಾಮಾನ್ಯವಾಗಿ ನಟನೊಬ್ಬನಿಗೆ ತುಂಬ ಸಂತೋಷವಾಗುತ್ತದೆ. ಆದರೆ ಬಾಲಣ್ಣ ಇದು ನನ್ನಿಂದ ಸಾಧ್ಯವೇ ಎಂಬ ಅನುಮಾನದಲ್ಲಿ ಅದನ್ನು ನಿರಾಕರಿಸಿದರು. ಬಾಬು ಪಟ್ಟು ಹಿಡಿದು ಕೂತರು. ಎಷ್ಟು ದಿನ ಶೂಟ್ ಮಾಡಬೇಕೆಂದಿದ್ದೀರಿ ಈ ಹಾಡನ್ನು ನನಗೆ ಹಾಡು ಕೇಳಿಸೋಲ್ಲ, ಅದರ ಏರಿಳಿತಗಳು ಗ್ರಹಿಸಲಾಗೋದಿಲ್ಲ. ಯಾಕೆ ಈ ರಿಸ್ಕ್ ತಗೋತಿದೀರ ಅಂತ ಬಾಲಕೃಷ್ಣ ಅವರು ಕೇಳಿದಾಗ, ಬಾಬು ಹೇಳಿದ್ದಿಷ್ಟು 'ಇದು ನನ್ನ ಪರಿಕಲ್ಪನೆ. ಅದನ್ನು ಸಾಕಾರಗೊಳಿಸಲಿಕ್ಕೆ ನಾ ಎಂಥ ರಿಸ್ಕಿಗೂ ರೆಡಿ. ನೀವು ಒಪ್ಪಿಕೊಂಡು ಮಾಡಿ ಪ್ಲೀಸ್'. ನಂತರದಲ್ಲಿ ಬಾಲಣ್ಣ ಅವರಿಗೆ ಚೂರಾದರೂ ಕೇಳೀತು ಎಂಬ ನಂಬಿಕೆಯೊಂದಿಗೆ ತುಂಬ ವಾಲ್ಯೂಮ್ ಕೊಟ್ಟು ಹಾಡು ಪ್ಲೇ ಮಾಡಿ, ತಮ್ಮ ಸಹನಿರ್ದೇಶಕರಿಂದ ಹಾಡಿನ ಸಾಲುಗಳನ್ನು ಕಾಗದದಲ್ಲಿ ಬರೆಸಿಕೊಟ್ಟು ಏರಿಳಿತಗಳನ್ನು ಸಿಂಬಲ್ಗಳ ಮೂಲಕ ಸೂಚಿಸಿ, ಎದುರಲ್ಲಿ ನಿಂತು ಲಿಪ್ ಮೂವ್ಮೆಂಟ್ ಮೂಲಕ ಅರ್ಥ ಮಾಡಿಸಿ, ಒಂದೇ ಒಂದು ದಿನದಲ್ಲಿ ಹಾಡಿನ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ, ಮಂದಹಾಸ ಬೀರಿದ್ದರು ಬಾಬು. ಅವತ್ತು ಬಾಲಣ್ಣನ ಕಣ್ಣಲ್ಲಿ ಆನಂದಭಾಷ್ಪವಿತ್ತಂತೆ.
- ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


