ಸಾಯಿಪ್ರಕಾಶ್ ಸಿನಿಮಾ
ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಒಂದರ ಹಿಂದೊಂದರಂತೆ ಸಿನಿಮಾ ಮಾಡುತ್ತಿದ್ದಾರೆ. 'ನಾಗಶಕ್ತಿ', 'ಸಂಸಾರದಲ್ಲಿ ಗೋಲ್ ಮಾಲ್', ಚಿತ್ರಗಳಿಂದ ಯಾವ ಲಾಭ ಆಗದಿದ್ದರೂ ಸಾಯಿ, ರನ್ನಿಂಗ್ ರೇಸ್ನಲ್ಲಿ ಓಡುತ್ತಲೇ ಇದ್ದಾರೆ. ಅವರ ಇತ್ತೀಚಿನ ಎರಡು ಹೊಸ ಚಿತ್ರಗಳ ಹೆಸರು 'ಗರ್ಭದ ಗುಡಿ', 'ಕಲಿಗಾಲ'. ಈ ಪೈಕಿ 'ಗರ್ಭದ ಗುಡಿ', ಭ್ರೂಣ ಹತ್ಯೆಯ ಬಗೆಗಿನ ಕಥೆ ಹೊಂದಿದೆಯಂತೆ. 'ಕಲಿಗಾಲ'ದ ಕಥೆ ಇನ್ನೂ ಗೊತ್ತಿಲ್ಲ. ಆದರೆ ಈ ಎರಡೂ ಇಂದಿನ ಗಾಂಧಿನಗರದ ಕಲಿಗಾಲದ ಟ್ರೆಂಡ್ಗೆ ಹೊಂದುವಂಥಹ ಚಿತ್ರಗಳಾ? ಎನ್ನುವುದರ ಬಗ್ಗೆ ಎಲ್ಲರಿಗೂ ಅನುಮಾನಗಳಿವೆ. ಅತ್ಲಾಗೆ ಕಮರ್ಷಿಯಲ್ ವ್ಯಾಲ್ಯೂನೂ ಇಲ್ಲ, ಇತ್ಲಾಗೆ ಕಲಾತ್ಮಕ ಚಿತ್ರವೂ ಅಲ್ಲ ಎಂಬಂತಿರುವ ಈ ಚಿತ್ರಗಳಿಂದ ಸಾಯಿಪ್ರಕಾಶ್ಗೆ ಏನು ಲಾಭ ಆಗಬಹುದು. ಏನೆಲ್ಲಾ ಸರ್ಕಸ್ ಮಾಡಿದರೂ ಸಿನಿಮಾಗಳು ಗೆಲ್ಲುವುದು ಕಷ್ಟ ಎಂಬ ಈ ಕಾಲದಲ್ಲಿ ಸಾಯಿಪ್ರಕಾಶ್ ತಮ್ಮ ಈ ಚಿತ್ರಗಳು ನೂರುದಿನ ಓಡಿ ದಾಖಲೆ ನಿರ್ಮಿಸುತ್ತವೆ ಎಂದುಕೊಳ್ಳುವಷ್ಟು ದಡ್ಡರಲ್ಲ ಎಂಬುದು ಎಲ್ಲರಿಗೂ ಗೊತ್ತು. ಅಂದರೆ, ಒಂದು ಕಾಲದಲ್ಲಿ ಎಲ್ಲ ದೊಡ್ಡ ಸ್ಟಾರ್ಗಳ ಸ್ಟಾರ್ವ್ಯಾಲ್ಯೂ ಹೆಚ್ಚಿಸಿದ ಸಾಯಿಪ್ರಕಾಶ್ ಈಗ ಡಲ್ ಆಗಿದ್ದಾರೆಯೇ? ಕೇವಲ ನಂಬರ್ಗಾಗಿ ಸಿನಿಮಾ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಈ ಹೊತ್ತಿನಲ್ಲಿ ಬಂದರೆ ಸಾಯಿಪ್ರಕಾಶ್ ನೂರರ ಹೊಸ್ತಿಲಲ್ಲಿರುವುದೇ ಅದಕ್ಕೆ ಕಾರಣವಿರಬಹುದೇ? ಎನಿಸುತ್ತದೆ. ಹೌದು, ಇತ್ತೀಚೆಗೆ ತಮ್ಮ ನಿರ್ದೇಶನದ ಚಿತ್ರಗಳ ಸಂಖ್ಯೆ 90 ಚಿಲ್ಲರೆ ದಾಟಿರುವುದನ್ನು ಹೇಳಿಕೊಂಡಿದ್ದ ಸಾಯಿಪ್ರಕಾಶ್ ತಾನು ಇನ್ನೇನುಸೆಂಚುರಿ ಡೈರೆಕ್ಟರ್ ಆಗುತ್ತೇನೆ ಎಂಬ ಖುಷಿಯಲ್ಲಿದ್ದರು. ಈಗ ಆ ನೂರರ ಕನಸನ್ನು ಬೆನ್ನತ್ತಿದ ನೈಂಟಿ ನರ್ವಸ್ನಿಂದಾಗಿ ಕೇವಲ ಸಂಖ್ಯೆಗಳತ್ತ ಗಮನ ಕೊಡುತ್ತಿದ್ದಾರೆಯೇ ಸಾಯಿಪ್ರಕಾಶ್? ಎಂಬ ಪ್ರಶ್ನೆ ಸಹಜ. ಒಟ್ಟಿನಲ್ಲಿ, ನೂರು ಸಿನಿಮಾಗಳ ಸರದಾರ, ನೂರುದಿನ ಓಡುವಂಥ ಸಿನಿಮಾ ಮಾಡುವ ಕಾಲ ಆದಷ್ಟು ಬೇಗ ಬರಲಿ ಎಂಬುದು ಸಾಯಿ ನಿರ್ದೇಶನದ ಚಿತ್ರಗಳ ಸಿಹಿ ಸವಿದವರ ಆಶಯ.
-ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

