ಐಸೀ
ಸ್ಟಾರ್‌ಗಳ ಸಿನಿಮಾ ಅಂದ್ರೆ ಮುಹೂರ್ತದ ದಿನವೇ ಒಂದು ಕಾಲನ್ನು ವಿದೇಶದಲ್ಲಿಟ್ಟುಕೊಂಡೇ ಶುರುವಾಗುವಂಥವು.

ಸ್ಟಾರ್‌ಗಳ ಸಿನಿಮಾ ಅಂದ್ರೆ ಮುಹೂರ್ತದ ದಿನವೇ ಒಂದು ಕಾಲನ್ನು ವಿದೇಶದಲ್ಲಿಟ್ಟುಕೊಂಡೇ ಶುರುವಾಗುವಂಥವು. ಸಿನಿಮಾಕ್ಕೆ ಅವಶ್ಯಕತೆ ಇರಲಿ ಬಿಡಲಿ. ಫಾರಿನ್ನಲ್ಲೊಂದು ಸಾಂಗು ಬೇಕೇ ಬೇಕು. ದರ್ಶನ್ ಅಭಿನಯದ ಹೊಸ ಚಿತ್ರ 'ಬೃಂದಾವನ' ಕೂಡ ಇದಕ್ಕೆ ಹೊರತಾಗಿಲ್ಲ. ಚಿತ್ರದ ಕಥೆ ಒಂದು ಕೂಡು ಕುಟುಂಬದ ಮನೆಯೊಂದರಲ್ಲಿ ನಡೆಯುತ್ತದಾದರೂ, 'ಇಲ್ಲಿದೆ ನಮ್ಮನೆ ಎಂದುಕೊಂಡು ಅಲ್ಲಿಗೆ ಸುಮ್ಮನೆ' ಹೋಗಿಬರುವ ಪ್ಲ್ಯಾನ್ ಬೃಂದಾವನದ್ದು. ಈ ಮೂಲಕ, ಐಸ್‌ಲ್ಯಾಂಡ್‌ನಲ್ಲಿ ಚಿತ್ರೀಕರಣವಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ 'ಬೃಂದಾವನ'.
ಈಗಾಗಲೇ ದರ್ಶನ್, ನಾಯಕಿಯರಾದ ಕೃತಿಕಾ, ಮಿಲನ ಅವರನ್ನೊಳಗೊಂಡ 25 ಜನರ ಬೃಂದಾವನ ಟೀಂ ಐಸ್‌ಲ್ಯಾಂಡ್ ತಲುಪಿದೆ. ಕಳೆದ 21ರಿಂದ ಚಿತ್ರದ ಶೂಟಿಂಗ್ ಶುರುವಾಗಿದೆ. ಜೂನ್ 2ರವರೆಗೂ 'ಬೃಂದಾವನ' ತಂಡ ಐಸ್‌ಲ್ಯಾಂಡ್‌ನಲ್ಲಿ ತಣ್ಣಗೆ ಶೂಟಿಂಗ್ ಮಾಡಲಿದೆಯಂತೆ. ಒಟ್ಟು 2 ಹಾಡುಗಳು ಮತ್ತು ನಾಲ್ಕು ದಿನದ ಟಾಕಿ ಪೋರ್ಷನ್ ಅನ್ನು ಈ ಅವಧಿಯಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಚಿತ್ರತಂಡದ್ದು.
ಐಸ್‌ಲ್ಯಾಂಡ್‌ನ ಈ ಪೋರ್ಷನ್‌ಗಾಗಿ ನಿರ್ಮಾಪಕರಾದ ಶ್ರೀನಿವಾಸಮೂರ್ತಿ ಖರ್ಚು ಮಾಡುತ್ತಿರುವುದು ಸುಮಾರು ಒಂದೂವರೆ ಕೋಟಿ ರುಪಾಯಿ. ತಮ್ಮ 'ಚಿತ್ರದ ನಾಯಕ, ನಾಯಕಿ ಫಾರಿನ್ನಿಗೋದರೆ ನನಗದೆ ಒಂದೂವರೆ ಕೋಟಿ ರುಪಾಯಿ' ಖರ್ಚು ಎನ್ನುತ್ತಿರುವ ಶ್ರೀನಿವಾಸಮೂರ್ತಿ ಅವರನ್ನು ಐಸ್ ಎಫೆಕ್ಟ್ ಕಾಶ್ಮೀರದಲ್ಲೇ ಸಿಗುತ್ತಲ್ಲ, ಅದಕ್ಕೆ ಅಲ್ಲಿಗೆ ಹೋಗಬೇಕೇ ಎಂದು ಕೇಳಿದರೆ ಅಲ್ಲಿನ ವಿಶೇಷಗಳನ್ನು ಹೇಳಲು ಶುರು ಮಾಡುತ್ತಾರೆ. 'ಕಾಶ್ಮೀರದಲ್ಲಿ ಐಸ್ ಇದೆ. ಆದರೆ ಐಸ್‌ಲ್ಯಾಂಡಿನಲ್ಲಿ ಸಿಗುವ ಮಂಜಿನ ನಡುವಿನ ವಾಟರ್ ಫಾಲ್ಸ್, ಬಿಸಿನೀರ ಬುಗ್ಗೆಗಳು ಕಾಶ್ಮೀರದಲ್ಲಿ ಸಿಗುವುದಿಲ್ಲ ಎನ್ನುವ ಚಿತ್ರದ ನಿರ್ಮಾಪಕ ಶ್ರೀನಿವಾಸ್‌ಮೂರ್ತಿ, ಐಸ್‌ಲ್ಯಾಂಡ್‌ನಲ್ಲಿ ಅಲ್ಲಿನ ಬ್ಲ್ಯಾಕ್ ಸೀಯಲ್ಲಿ ಸಿಗುವ ಕಪ್ಪು ಮರಳಿಗೆ ಮರುಳಾಗಿದ್ದಾರಂತೆ. ಐಸ್‌ಲ್ಯಾಂಡ್‌ನಲ್ಲಿ ಈಗ ಚಿತ್ರೀಕರಣ ನಡೆಸಲು ಸರಿಯಾದ ಸಮಯ ಎಂಬುದು ಅವರ ಅನಿಸಿಕೆ. 6 ತಿಂಗಳು ಹಗಲು, 6 ತಿಂಗಳು ಕತ್ತಲು ಇರುವ ಐಸ್‌ಲ್ಯಾಂಡ್‌ನಲ್ಲಿ ಬೆಳಗಾಗುವುದನ್ನೇ ಕಾಯುತ್ತಿದ್ದ ಅವರು, ಕೆಲವು ದಿನಗಳ ಮುಂಚೆ ಅಲ್ಲಿಗೆ ಹೋಗಿ ಲೊಕೇಶನ್ ನೋಡಿಕೊಂಡು ಬಂದಿದ್ದರಂತೆ. ಇನ್ನೂ ಮುಂಚೆಯೇ ಅಲ್ಲಿಗೆ ಹೋಗಿದ್ದರೆ ಚಿತ್ರೀಕರಣದ ಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ಈಗ ಹಡಗಿನಲ್ಲಿ ಹೋಗಬಹುದು ಎನ್ನುವ ಚಿತ್ರತಂಡ ಸದ್ಯಕ್ಕೆ ದರ್ಶನ್ ಮತ್ತು ಇಬ್ಬರು ನಾಯಕಿಯರ ಜೊತೆಗಿನ ಎರಡು ಹಾಡುಗಳ ಚಿತ್ರೀಕರಣ ನಡೆಸುತ್ತಿದೆ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


