ಸಿನಿಮಾ ಲೇಖನ

ಹಾಡು ಹಕ್ಕಿ ಮನೋಹರ್

ಹಾಡು ಹಕ್ಕಿ ಮನೋಹರ್
Published On :

ನಾನು ಸಿನಿಮಾ ನಿರ್ದೇಶನ ಮಾಡಬೇಕು ಎಂದು ಹೊರಟಾಗಲೇ ನನಗೆ ಹೆಚ್ಚು ಹೆಚ್ಚು ಸಂಗೀತ ನಿರ್ದೇಶನದ  ಅವಕಾಶಗಳು ಬರುತ್ತವೆ. ಬಹುಷಃ ನಾನು ಸಿನಿಮಾ ಮಾಡದಂತೆ ತಡೆಯುತ್ತಿರುವ ಯಾವುದೋ ಕಾಣದ ಕೈ ಕೆಲಸ ಮಾಡುತ್ತಿದೆ ಎಂದು ತಮ್ಮದೇ ಟಿಪಿಕಲ್ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಹೇಳುತ್ತಾರೆ ವಿ.ಮನೋಹರ್.
ಸದ್ಯಕ್ಕೆ ಪ್ರಜ್ವಲ್ ಅಭಿನಯದ, ಧನಂಜಯ್ ಬಾಲಾಜಿ ನಿರ್ದೇಶನದ 'ಸವಾಲ್‌', ಸೃಜನ್ ಲೋಕೇಶ್ ನಾಯಕತ್ವದ, ನವೀನ್ ನಿರ್ದೇಶನದ 'ಟಿಪಿಕಲ್ ಕೈಲಾಸ್‌', ಸೋಲಿಗರ ಜನಾಂಗದ ಬಗೆಗಿನ ಹ. ಸೂ ರಾಜಶೇಖರ್ ನಿರ್ದೇಶನದ 'ಗೊರುಕನ', ಚಿತ್ರಗಳನ್ನು ಮುಗಿಸಿ, 'ಈ ಸಂಭಾಷಣೆ' ಮತ್ತು 'ಹಾಡು ಹಕ್ಕಿ ಹಾಡು' ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಮನೋಹರ್ ಬ್ಯುಸಿ.
ಕಲಾತ್ಮಕ ಚಿತ್ರಗಳೆಂದರೆ ಇತ್ತೀಚೆಗಂತೂ ಅದಕ್ಕೆ ಮನೋಹರ್ ಸಂಗೀತವೇ ಗ್ಯಾರಂಟಿ ಎನ್ನುವಂಥ  ಪರಿಸ್ಥಿತಿಯ ಬಗ್ಗೆ ಕೇಳಿದರೆ ಹೆಚ್ಚೂ ಕಮ್ಮಿ ಹಾಗೇ ಆಗಿದೆ. ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳಲ್ಲಿ ಹಾಡಿರುವುದಿಲ್ಲ. ಹಾಗಾಗಿ ಅವರ ಚಿತ್ರಗಳನ್ನು ಬಿಟ್ಟು ಉಳಿದ ಚಿತ್ರಗಳೆಲ್ಲಾ ನನ್ನ ಪಾಲಿಗೇ ಬರುತ್ತಿವೆ ಎನ್ನುತ್ತಾರೆ ಮನೋಹರ್.
ಕಮರ್ಷಿಯಲ್ ಚಿತ್ರಗಳಲ್ಲೂ ಬ್ಯುಸಿಯಾಗಿರುವ ಅವರು ಎರಡೂ ಬಗೆಯ ಚಿತ್ರಗಳ ಬಗ್ಗೆ ಹೇಳುವುದು ಹೀಗೆ: ಇದೊಂದು ರೀತಿ ತಂತಿಯ ಮೇಲಿನ ನಡಿಗೆ ಇದ್ದಂತೆ. ಸವಾಲಿನ ಕೆಲಸ ಕೂಡ. ಎರಡೂ ಕಡೆ ಬೇರೆ ಬೇರೆ ಸೌಂಡಿಂಗ್ ಬೇಕು. ಉದಾಹರಣೆಗೆ ಕಮರ್ಷಿಯಲ್ ಚಿತ್ರಗಳಲ್ಲಿ ಆರ್ಕೆಸ್ಟ್ರಾಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಆದರೆ ಕಲಾತ್ಮಕ ಚಿತ್ರಗಳಲ್ಲಿ ಸಂಗೀತ ಮನಸ್ಸಿಗೆ ನಾಟುವ ಕೆಲಸ ಆಗಬೇಕು. 'ಗೊರುಕನ' ಚಿತ್ರಕ್ಕೆ ಹಾಡು ಮಾಡುವಾಗ ಸೋಲಿಗರ ಜನಾಂಗದ ಗಾಯಕರನ್ನೇ ಕರೆಸಿ, ಅದೇ ಸೌಂಡಿಂಗ್ ಬಳಸಿ ಹಾಡುಗಳನ್ನು ಸಂಯೋಜಿಸಿದೆ. ಆದರೆ ಅದೂ ಕೂಡ ಸಿನಿಮಾ ಹಾಡು ಎನಿಸಿಕೊಳ್ಳಬೇಕು. ಆದರೂ ಸಹಜ ಎನಿಸಬೇಕು ಎಂಬ ಎಚ್ಚರ ಬೇಕು. ಶೇಷಾದ್ರಿಯಂಥವರ ಚಿತ್ರ ಮಾಡುವಾಗ ಭಾವಗೀತೆಯ ಮೂಡಿಗೆ ಹೋಗಿಬಿಡುತ್ತೇನೆ.
ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೂ ತಮ್ಮ ಹಳೆಯ ಹವ್ಯಾಸದ ಬೆನ್ನು ಹತ್ತಿ ಕಾರ್ಟೂನ್ ಗ್ಯಾಲರಿ ಮಾಡುವ ಯೋಚನೆಯಲ್ಲಿದ್ದರು ಮನೋಹರ್. ಈ ಬಗ್ಗೆ ಗೆಳೆಯ ನರೇಂದ್ರ ಅವರೊಂದಿಗೆ ಚರ್ಚೆಯೂ ನಡೆದಿತ್ತು. ಆದರೆ ನನ್ನ ಕಾರ್ಟೂನ್‌ಗಳ ಮೂಲಪ್ರತಿಯ ಸಮಸ್ಯೆಯಾಗಿ ಯೋಜನೆ ಕೈಬಿಡಬೇಕಾಯಿತು ಎನ್ನುವ ಅವರದು ಈಗ ಕೇವಲ ಸಿನಿಮಾ ಸಂಗೀತದತ್ತ ಗಮನ.
ಸಂಗೀತ ನಿರ್ದೇಶನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಎಷ್ಟೇ ತೃಪ್ತಿ ಇದ್ದರೂ ನನ್ನದೇ ನಿರ್ದೇಶನದ ಚಿತ್ರ ಮಾಡುವಾಗ ಇರುವ ಸ್ವಾತಂತ್ರ್ಯ ಇನ್ನೊಬ್ಬರ ಚಿತ್ರದಲ್ಲಿ ಸಿಗುವುದು ಕಷ್ಟ. ಹಾಗಾಗಿ, ಒಂದಷ್ಟು ಕಥೆಗಳನ್ನು ರೆಡಿ ಮಾಡಿಟ್ಟುಕೊಂಡಿದ್ದೇನೆ ಎಂಬುದು ಮನೋಹರ್ ಕಂಡುಕೊಂಡಿರುವ ಸತ್ಯ. ಹಾಗಾಗಿ, ಅವರು ಆದಷ್ಟು ಬೇಗ ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ ಎಂಬುದು ಸಿಹಿ ಸುದ್ದಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.