ವಿನಾಯಕ ಜೋಶಿ ಜೋಶ್

ವಿನಾಯಕ ಜೋಶಿ ಅಂದ್ರೆ ಒಂದು ಕಾಲದ ದುಂಡು ಮುಖದ ದಢೂತಿ ಶರೀರ. ಬದಲಾದ ಕಾಲದ ವೇಗಕ್ಕೆ ಸರಿಯಾಗಿ ಓಡುತ್ತಾ ಕಟ್ಟುಮಸ್ತಾದ ಮೈಕಟ್ಟು ಮಾಡಿಸಿಕೊಂಡ ಜೋಶಿ ಮುಖ ಈಗ ಚಿರಪರಿಚಿತ. ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ ಇವರ ಸಿಟ್ಟು, ಸಂತೋಷ, ಸಂಭ್ರಮ, ದುಃಖ ಎಲ್ಲ ಮುಖಗಳನ್ನು ಕನ್ನಡಿಗರು ನೋಡಿದ್ದಾರೆ. ಆದರೆ ಅವರ ಇನ್ನೊಂದು ಮುಖದ ಪರಿಚಯ ಆಗಿದ್ದು ಪುತ್ತೂರಿನಲ್ಲಿ.
ಎಂಡೋ ಸಂತ್ರಸ್ತರ ನೆರವಿಗಾಗಿ ಸೋಮವಾರ ರಾತ್ರಿ ಉಚಿತ ಪ್ರದರ್ಶನ ನೀಡಲು ಬೆಂಗಳೂರಿಂದ ಬಂದಿದ್ದ ವಿನಾಯಕ್ ಜೊತೆ, ಉದಯೋನ್ಮುಖ ನಾಯಕ ಲಿಖಿತ್ ಶೆಟ್ಟಿ ಕೂಡಾ ಇದ್ದರು. ಎಂಡೋ ಪೀಡಿತರನ್ನು ನೋಡಿದ ಬಳಿಕ ಭಾವುಕರಾದ ಜೋಶಿ, ಯಾರೋ ಮಾಡುವ ಲಾಭಕ್ಕೆ ತಮ್ಮ ಬದುಕು ಕಳೆದುಕೊಂಡು ಬುದ್ಧಿಮಾಂದ್ಯರಾಗಿ ಬದುಕುವ ಮಕ್ಕಳನ್ನು ನೋಡಿ ಕಂಬನಿ ಮಿಡಿದರು. ಸಂತ್ರಸ್ತರ ಬದುಕಿಗೆ ನೆರವಾಗುವುದಾದರೆ ಮತ್ತೊಮ್ಮೆ ಉಚಿತವಾಗಿ ಕಾರ್ಯಕ್ರಮ ನೀಡುತ್ತೇವೆ ಎಂಬುದನ್ನು ಹೇಳಲು ಮರೆಯಲಿಲ್ಲ.
ಆರ್ಜೆ ಆಗಿದ್ದಾಗ 18 ಮಂದಿಗೆ ಉಚಿತವಾಗಿ ಶ್ರವಣ ಯಂತ್ರ ವಿತರಿಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗೆ ಕಾಲೇಜ್ ಫೀಸ್ಗೆ ಗೆಳೆಯರಿಂದ ಒಟ್ಟುಗೂಡಿಸಿ 32 ಸಾವಿರ ನೀಡಿ, 350 ಮಂದಿಯಿಂದ ರಕ್ತ ಸಂಗ್ರಹಿಸಿ ಅಗತ್ಯ ಇದ್ದವರಿಗೆ ನೀಡಿರುವ, ವಿನಾಯಕ ಜೋಶಿ ಹೇಳುವ ಮಾತು 'ನೆರವು ನೀಡಬೇಕಿದ್ರೆ ಸೆಲೆಬ್ರೆಟಿಯೇ ಆಗಬೇಕೆಂದಿಲ್ಲ, ಮಾನವೀಯತೆ ಇದ್ದರೆ ಸಾಕು'
ವಿನಾಯಕ್ ಟಾಕ್ ಶೋ
ಬಿಗ್ ಬಾಸ್ ಬಳಿಕ ಏನಾದ್ರೂ ಬದಲಾವಣೆ?
ಬಿಗ್ ಬಾಸ್ನಿಂದ ಬಹಳ ಕಲಿತಿದ್ದೇನೆ. ಈಗ ಲಕ್ಷಾಂತರ ಅಭಿಮಾನಿಗಳಿದ್ದಾರೆ, ಸಾವಿರಾರು ಮಂದಿ ಟೀಕಿಸುವವರಿದ್ದಾರೆ. ಟೀಕೆಗೆ ತಲೆ ಬಿಸಿ ಮಾಡಿಕೊಳ್ಳುವುದಿಲ್ಲ. ಲಕ್ಷಾಂತರ ಕನ್ನಡಿಗರ ಮನಸ್ಸಿನಲ್ಲಿ ಅಲ್ಲವಾದ್ರೂ ತಲೆಯಲ್ಲಾದರೂ ಇದ್ದೇನೆ ಎಂಬುದೇ ಖುಷಿ. ಎಲ್ಲಿ ಸೋತಿದ್ದೇನೊ ಅಲ್ಲೇ ಗೆಲ್ಲುತ್ತೇನೆ ಎಂದು ಹೇಳುತ್ತಾರೆ, ಈಗ ನಾನು ಗೆದ್ದಿದ್ದೇನೆ ಎಂದು ಎದೆ ಉಬ್ಬಿಸಿ ಹೇಳಬಲ್ಲೆ.
ಚಿತ್ರರಂಗದಲ್ಲಿ ಬಿಗ್ ಬಾಸ್ (ಕಿಚ್ಚ ಸುದೀಪ್) ಬೆಂಬಲ ಸಿಕ್ಕಿಲ್ವಾ?
ಬೆಂಬಲ ನೀಡಿದ್ದಾರೆ. ಆದರೆ ಸಿನಿಮಾ ಸ್ಟಾರ್ ಬೆಂಬಲ ಮಾತ್ರ ಇದ್ರೆ ಸಾಲದು, ನಮ್ಮ ಪ್ರಯತ್ನವೂ ಬೇಕು. ಗೆಳೆಯ ಎಂದು ಒಂದು ದಿನ ಕರೆದು ಊಟ ಕೊಡಬಹುದು, ದಿನಾ ಊಟ ಕೇಳಕ್ಕೆ ಆಗುತ್ತಾ. ಹಾಗೆ ಕೇಳಿದ್ರೆ ಭಿಕ್ಷೆ ಆಗುತ್ತೆ.
ಚಿತ್ರರಂಗದಲ್ಲಿ ತೃಪ್ತಿ ಇದೆಯೇ?
ಬೇಜಾರಂತೂ ಇಲ್ಲ. ಸಿನಿಮಾ ಹಿಟ್ ಆದ್ರೆ ಆತ ಕಲಾವಿದ ಎಂಬುದು ಸರಿ ಅಲ್ಲ. ಅಪ್ರತಿಮ ಪ್ರತಿಭೆ ಇದ್ದರೂ ಚಿತ್ರರಂಗ ಬೆಂಬಲಿಸದೆ ಇರುವುದೂ ಇದೆ.
60 ಚಿತ್ರಗಳ ಬಳಿಕ ನಾಯಕ ನಟರಾಗಿದ್ದೀರಿ ನಿಮ್ಮ 'ನಮ್ಮ ದುನಿಯಾ ನಮ್ಮ ಸ್ಟೈಲ್' ಸಿನಿಮಾ ಹೇಗೆ ಬಂದಿದೆ?
ನಿರ್ದೇಶಕ ಪ್ರೀತಂ ಗುಬ್ಬಿ ಹೊಸ ನಾಯಕ ನಟರನ್ನು ಹಾಕಿ ರಿಸ್ಕ್ ತೆಗೆದುಕೊಂಡಿದ್ದಾರೆ. ರೋಮ್ಯಾಂಟಿಕ್ ಯುವಜನರಿಗೆ ಮಾಡಿದ ಲೈಟ್ಹಾರ್ಟ್ ಸಿನಿಮಾ. ಕಾಶ್ಮೀರ, ಮಲೇಶಿಯಾ, ಬೆಂಗಳೂರು ಶೂಟಿಂಗ್ ಆಗಿದೆ ಮೂರು ಜೋಡಿಗಳಿವೆ. ಬಾಲ್ಯದ ಗೆಳೆಯರ ಪ್ರೀತಿ ಮತ್ತು ಗೆಳೆತನ. ಲಿಖಿತ್ ಶೆಟ್ಟಿ, ಸುನೀಲ್ ಮತ್ತು ನಾನು ನಾಯಕರು. ಕಾವ್ಯ ಶೆಟ್ಟಿ, ಸೋನಿಯಾ ಗೌಡ, ಮಿಲನ ನಾಯಕಿಯರು. ಒಳ್ಳೆ ಹಾಸ್ಯವೂ ಇದೆ. ಜೂ.14ಕ್ಕೆ ಚಿತ್ರ ಬಿಡುಗಡೆ.
- ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


