ಬುಲ್ ಬುಲ್... ಓಡ್ತಾ ಐತೆ ನೋಡ್ಲಾ ಮಗಾ
ದರ್ಶನ್ ಅಭಿನಯದ 'ಬುಲ್ಬುಲ್' ಚಿತ್ರ ಗಳಿಕೆಯಲ್ಲಿ ಎಲ್ಲ ಹಳೆಯ ರೆಕಾರ್ಡ್ಗಳನ್ನು ಬ್ರೇಕ್ ಮಾಡಿದೆ ಎಂದು ಹೆಮ್ಮೆಯಿಂದ...

ದರ್ಶನ್ ಅಭಿನಯದ 'ಬುಲ್ಬುಲ್' ಚಿತ್ರ ಗಳಿಕೆಯಲ್ಲಿ ಎಲ್ಲ ಹಳೆಯ ರೆಕಾರ್ಡ್ಗಳನ್ನು ಬ್ರೇಕ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅಂದು ವೇದಿಕೆ ಸಜ್ಜಾಗಿತ್ತು. ವೇದಿಕೆಯಲ್ಲಿ 'ಬುಲ್ಬುಲ್' ನಿರ್ಮಾಪಕರು ಕಮ್ ತಂತ್ರಜ್ಞರು ದಿಲ್ಕುಷ್. ಚಿತ್ರ ಒಂದು ವಾರದಲ್ಲಿ 10 ಕೋಟಿ ಗಳಿಕೆ ಮಾಡಿದೆಯಂತೆ. ಅದರಲ್ಲಿ ಥಿಯೇಟರ್ ಬಾಡಿಗೆ ಕಟ್ಟಿ ನಿರ್ಮಾಪಕರಿಗೆ ಉಳಿದ ಹಣ ಸುಮಾರು 7 ಕೋಟಿ. ಅದರ ಜೊತೆಗೆ 4 ಚಿಲ್ಲರೆ ಕೋಟಿಯ ಟಿವಿ ಹಕ್ಕು. ಹಾಗಾಗಿ ದರ್ಶನ್ ಅಂಡ್ ಕಂಪನಿ ಗೆಲುವಿನ ರುಚಿ ನೋಡುತ್ತಿದೆ.
ಸಾಮಾನ್ಯವಾಗಿ ಎಲ್ಲ ಚಿತ್ರಗಳೂ ಮೊದಲ ವಾರದ ನಂತರ ತಮ್ಮ ಚಿತ್ರ ಇಷ್ಟು ದುಡ್ಡು ಮಾಡಿದೆ ಎಂದು ಹೇಳಿಕೊಳ್ಳುವುದು ಸಹಜ. ಆದರೆ ಬುಲ್ ಬುಲ್ನ ಸಕ್ಸಸ್ ವಿಷಯದಲ್ಲಿ ಅದನ್ನೆಲ್ಲ ಮೀರಿದ ಎರಡು ವಿಶೇಷಗಳಿವೆ. ಒಂದು, ಚಿತ್ರವನ್ನು ಗೆಲ್ಲಿಸಿರುವ ಪ್ರೇಕ್ಷಕನಿಂದ ಗಳಿಸಿರುವ ಎಲ್ಲ ದುಡ್ಡೂ ಕಷ್ಟಪಟ್ಟು ದುಡಿದ ಕಲಾವಿದ, ತಂತ್ರಜ್ಞರಿಗೇ ಸಂದಿದೆ. ಇನ್ನೊಂದು ಅಂದರೆ 'ಬುಲ್ಬುಲ್' ಗಳಿಸಿದ ಲಾಭ, ವಿತರಕರ ವಲಯದಲ್ಲಿ ಹಂಚಿಕೆಯಾಗದೇ ಈ ನಿರ್ಮಾಪಕ ಗೆಳೆಯರಿಗೇ ಸೇರಿದೆ.
ಹೇಳೀ ಕೇಳಿ, ದರ್ಶನ್ ಮಾರ್ಕೆಟ್ ಕಳೆದುಕೊಂಡ ಹೀರೋ ಅಲ್ಲ. ಸದ್ಯಕ್ಕೆ ಚಿತ್ರರಂಗದಲ್ಲಿ ಅತಿ ಹೆಚ್ಚು ಡಿಮ್ಯಾಂಡ್ನಲ್ಲಿರುವ ನಟ. ಜೊತೆಗೆ ದರ್ಶನ್ ನಿರ್ಮಾಪಕರು ಕೂಡ. ತಾನೇ ನಿರ್ಮಾಪಕನಾಗುವುದಾಗಿ ಹೇಳಿ ಹರಿಕೃಷ್ಣ, ಕವಿರಾಜ್, ಕೃಷ್ಣಕುಮಾರ್ ಅವರಿಗೆ 'ನೀವು ಸಂಭಾವನೆ ತೆಗೆದುಕೊಂಡು ಕೆಲಸ ಮಾಡಿ' ಎಂದಿದ್ದರೆ ಅವರು ಖಂಡಿತಾ ಮಾಡುತ್ತಿದ್ದರು. ಹಾಗೆ ಮಾಡಿದ್ದರೆ ಎಲ್ಲ ಲಾಭವನ್ನೂ ತಾವೇ ಬಾಚಿಕೊಳ್ಳಬಹುದಿತ್ತು. ಆದರೆ ದರ್ಶನ್ ಹಾಗೆ ಮಾಡಿಲ್ಲ ಎಂಬುದು ಪಾಸಿಟಿವ್ ಬೆಳವಣಿಗೆ. ಇಷ್ಟು ದಿನಗಳ ಯಶಸ್ಸಿನಲ್ಲಿ ತಮ್ಮ ಜೊತೆಗಿದ್ದ ಎಲ್ಲ ಒಲವಿನ ಗೆಳೆಯರಿಗೂ ಗೆಲುವಿನಲ್ಲಿ ಸಮಪಾಲು ಸಿಗುವಂತೆ ಮಾಡಿದ್ದಾರೆ. ಹಾಗಾಗಿ, ಇದು ಒಲವಿನ ಗೆಲುವು. ಈ ವಿಷಯದಲ್ಲಿ ದರ್ಶನ್ಗೆ ಖಂಡಿತಾ ಜೈ ಎನ್ನಬೇಕು.
ಇನ್ನು ಗಾಂಧಿನಗರದ ಇತ್ತೀ ಚಿನ ಯಶಸ್ವಿ ಸಿನಿಮಾಗಳತ್ತ ಗಮನಹರಿಸಿದರೆ ಅಲ್ಲಿ ನಿರ್ಮಾಪಕರಿಗಿಂತ ವಿತರಕರೇ ಹೆಚ್ಚು ಲಾಭ ಮಾಡಿಕೊಂಡ ಉದಾಹರಣೆಗಳೇ ಹೆಚ್ಚು. ಇತ್ತೀಚೆಗೆ, ಗೆಲುವಿನ ಹೆಸರು ಮಾಡಿದ ಸಿನಿಮಾವೊಂದು ತನ್ನ 50 ದಿನಗಳ ಪ್ರದರ್ಶನದಲ್ಲಿ ದುಡಿದಿದ್ದು ಮಿನಿಮಮ್ ಎಂದರೂ ಸುಮಾರು 7 ಕೋಟಿ. ಆದರೆ ಅದರಲ್ಲಿ ಚಿತ್ರದ ನಿರ್ಮಾಪಕರಿಗೆ ಸಿಕ್ಕಿದ್ದು ಕೇವಲ ಒಂದೂಕಾಲು ಕೋಟಿ.
ಚಿತ್ರಮಂದಿರಗಳ ಬಾಡಿಗೆ, ಶೇರುಗಳ ಬಗ್ಗೆ ಅರಿವಿಲ್ಲದ ನಿರ್ಮಾಪಕರುಗಳಿಗೆ ಕೃಷ್ಣನ ಲೆಕ್ಕ ತೋರಿಸಿ, ಬಂದ ಲಾಭವನ್ನೆಲ್ಲ ಬಾಚಿಕೊಳ್ಳುವುದು, ದೋಚಿಕೊಳ್ಳುವುದು ಕೆಲವು ವಿತರಕರ ವಿಶೇಷ.
ಇದಲ್ಲದೇ ಗೆದ್ದ ಸಿನಿಮಾವೊಂದರಿಂದ ಹೆಚ್ಚು ದುಡ್ಡು ಮಾಡಿಕೊಳ್ಳುವ ಇನ್ನೊಂದು ಕೆಟಗರಿ ಎಂದರೆ ಚಿತ್ರಮಂದಿರಗಳ ಮಾಲೀಕರದ್ದು. ಆದರೆ ಬುಲ್ಬುಲ್ ವಿಷಯದಲ್ಲಿ ಮಾತ್ರ, ಒಂದು ಸಲ ಥಿಯೇಟರ್ ಕಟ್ಟಿ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಿದರೂ ತಾನಾಗೇ ದುಡ್ಡು ಬರುತ್ತೆ ಎನ್ನುವ ಚಿತ್ರಮಂದಿರದ ಮಾಲೀಕನಿಗೋ, ಏನೂ ಕಷ್ಟಪಡದೆ ರಾಜ್ಯದ ಎಲ್ಲ ಚಿತ್ರಮಂದಿರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು, 'ನನ್ನ ಎದುರು ಹಾಕ್ಕೊಂಡ್ರೆ ನಿಂಗೆ ಥಿಯೇಟರ್ರೇ ಸಿಗಲ್ಲ' ಎಂದು ನಿರ್ಮಾಪಕರಿಗೆ ಸಂದೇಶ ರವಾನಿಸಿ, ನಿರ್ಮಾಪಕನಿಗಿಂತ ಹೆಚ್ಚು ದುಡ್ಡು ಮಾಡಿಕೊಳ್ಳುವ ವಿತರಕನಿಗೋ ಹೋಗಿಲ್ಲ ಎಂಬುದು ಗಾಂಧಿನಗರಕ್ಕೆ ಉತ್ಸಾಹ ತುಂಬುವ ಅಂಶ.
ಈ ಮಾದರಿಯ ಯಶಸ್ಸು ಗಾಂಧಿನಗರಕ್ಕೊಂದು ಮಾದರಿ ಆದರೆ ಎಷ್ಟು ಚೆನ್ನ. ನಿರ್ಮಾಪಕ ಸೊರಗಿ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕನ ಹೊಟ್ಟೆ ಮಾತ್ರ ತುಂಬುವಂತಿರುವ ಪರಿಸ್ಥಿತಿ ಹೋಗಿ, ಬರುವ ಲಾಭದಲ್ಲಿ ನಿರ್ಮಾಪಕರಿಗೇ ಸಿಂಹಪಾಲು ಸಿಕ್ಕರೆ ಅದಕ್ಕಿಂತ ಸಂತೋಷ ಇನ್ನೇನಿದೆ.
---
ಮುಂದೆ ಯಾವತ್ತಾದರೂ ಸಹಾಯ ಮಾಡುತ್ತಾರೆ ಎಂಬ ಕಾರಣಕ್ಕೆ ತಂತ್ರಜ್ಞರನ್ನೂ ನಾನು ನಿರ್ಮಾಪಕರನ್ನಾಗಿಸಲಿಲ್ಲ. ಹಂಚಿಕೊಂಡು ತಿನ್ನೋಣ ಎನ್ನುವ ಉದ್ದೇಶ ಅಷ್ಟೆ. ಇಷ್ಟು ದಿನ ನನ್ನ ಯಶಸ್ಸಿನಲ್ಲಿ ಪಾಲುದಾರರಾಗಿದ್ದವರು ಅವರು. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನಾನು ಋಣಿ. ನಾನು ತೂಗುದೀಪ ಶ್ರೀನಿವಾಸ್ ಅವರ ಮಗ ಆಗಿದ್ದರೂ, ಕ್ಯಾಮೆರಾ ಅಸಿಸ್ಟೆಂಟ್ ಆಗಿಯೋ, ಜೂನಿಯರ್ ನಟನಾಗಿಯೋ ಕೆಲಸ ಮಾಡುತ್ತಿದ್ದ ಕಾಲದಲ್ಲಿ 'ನೀನು ಯಾಕೋ ಇದೆಲ್ಲ ಮಾಡ್ತೀಯಾ?' ಎಂದು ಕಾಳಜಿ ತೋರಿಸಿದ್ದು ಅಂಬರೀಷ್. ಅವರ ಜೊತೆ ಮತ್ತೆ ಅಭಿನಯಿಸಿದ್ದು ಖುಷಿ.
-ದರ್ಶನ್
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


