ತೆರೆದ ಬಾಗಿಲು
ಸಮಸ್ತ ಕನ್ನಡ ಸಿನಿ ಪ್ರೇಕ್ಷಕರು 'ಕಾವೇರಿ ನಗರ'ದಲ್ಲಿ 'ಜಿಂಕೆಮರಿ' 'ಎಲೆಕ್ಷನ್'ಗೆ ನಿಲ್ಲುವ 'ಸ್ಟೋರಿಕಥೆ'ಯನ್ನು ಕೇಳಬೇಕಿದೆ. ಜೊತೆಗೆ ಪುರುಸೊತ್ತು ಇದ್ದರೆ ನೋಡಲೂಬೇಕಿದೆ. ಯಾವ ಕಾವೇರಿ, ಯಾವ ಜಿಂಕೆ, ಏನ್ ಎಲೆಕ್ಷನ್, ಯಾವ ಸ್ಟೋರಿ ಅಂತ ಫುಲ್ ಕನ್‌ಫ್ಯೂಸ್ ಆಗಬೇಡಿ. ಗಾಂಧಿನಗರದ ಮೂರೂ ಮತ್ತೊಂದರ ಕಥೆ ಇದು. ಅಂದರೆ ಈ ವಾರ ಒಟ್ಟಿಗೆ ನಾಲ್ಕು ಚಿತ್ರಗಳು ತೆರೆಯ ಬಾಗಿಲಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡುತ್ತಿವೆ. 'ತೆರೆದಿದೆ ಬಾಗಿಲು ಬಾ ಪ್ರೇಕ್ಷಕ' ಎನ್ನುತ್ತಿರುವ ಈ ನಾಲ್ಕು ಚಿತ್ರಗಳ ಪೈಕಿ ಪ್ರದರ್ಶನದ ಪರೀಕ್ಷೆಯಲ್ಲಿ ಯಾವ ಚಿತ್ರಕ್ಕೆ ಎಷ್ಟು ಮತ ಬೀಳುತ್ತವೋ!
ಚುನಾವಣೆ ಮುಗಿದು ಜನ ಪ್ರತಿನಿಧಿಗಳು ಎನ್ನಿಸಿಕೊಂಡವರ ಹಣೆ ಬರಹವೂ ಹೊರಬಿದ್ದು, ಸಿದ್ದು ಗದ್ದುಗೆಗೇರಿದ್ದಾಯಿತು. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ವಿಕ್ಟರಿ ನಗೆ ಬೀರಿದರು. ಆದರೂ ಅದೇ ಗಾಂಧಿನಗರ ಇನ್ನೂ 'ಎಲೆಕ್ಷನ್' ಗುಂಗಿನಿಂದ ಹೊರಬಂದಿಲ್ಲ ಎಂದರೆ ಅಚ್ಚರಿ ಪಡಬೇಡಿ. ಆದರೆ ಈ ಎಲೆಕ್ಷನ್ ಚಿತ್ರ ನಟಿ ಮಾಲಾಶ್ರೀ ಅವರಿಗೆ ಮಾತ್ರ. ಹೌದು, ಕೋಟಿ ನಿರ್ಮಾಪಕ ರಾಮುರ 'ಎಲೆಕ್ಷನ್' ಚಿತ್ರದ ಮೂಲಕ ಮಾಲಾಶ್ರೀ ಮತ್ತೆ 'ವೀರ' ರಾಣಿಯಾಗಲು ಬರುತ್ತಿದ್ದಾರೆ. ಮಾಲಾಶ್ರೀ ಸಿನಿಮಾಗಳೆಂದರೆ ಹೊಡಿ, ಬಡಿ ಅಂಶಗಳು ಹೆಚ್ಚಾಗಿರುತ್ತವೆ. ಆ ಎಲ್ಲ ಮಸಾಲಾ ಅಂಶಗಳನ್ನು ಒಟ್ಟು ಮಾಡಿರುವ ಚಿತ್ರ ಇದಾಗಿದೆ. ಅದರಲ್ಲೂ ಓಂ ಪ್ರಕಾಶ್ ರಾವ್ ನಿರ್ದೇಶನ ಎಂದ ಮೇಲೆ ಕೇಳಬೇಕೆ?
ಖಡಕ್ ಅಧಿಕಾರಿಣಿಯಾಗಿ ಮಾಲಾಶ್ರೀ ಅಭಿನಯಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ರಾಜೇಶ್ ಕಟ್ಟರ ಛಾಯಾಗ್ರಹಣ, ಮನೋಹರ್ ಸಂಗಕಲ, ಆನಂದ್ ಸಂಭಾಷಣೆ ಚಿತ್ರಕ್ಕಿದೆ. ಶ್ರೀನಿವಾಸ ಮೂರ್ತಿ, ಲೋಕ್‌ನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಶೋಭರಾಜ್, ಪ್ರದೀಪ್ ರಾವತ್, ಜಿ.ಕೆ. ಗೋವಿಂದ್ ರಾವ್ ಮತ್ತಿತರರು ಚಿತ್ರದ ಪ್ರಮುಖ ಪಾತ್ರಧಾರಿಗಳು. 'ಚಿತ್ರದಲ್ಲಿ ಸಾಹಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಜೊತೆಗೆ ಇಂದಿನ ವ್ಯವಸ್ಥೆಯ ಮುಖವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ' ಎಂಬುದು ಮಾಲಾಶ್ರೀ ಅವರ ಮಾತು.
ಹೀಗೆ 'ಎಲೆಕ್ಷನ್' ಗುಂಗಿನಲ್ಲಿರುವ ಪ್ರೇಕ್ಷಕರ ಮುಂದೆ ಕುಣಿಯಲಿರುವ ಮತ್ತೊಂದು ಚಿತ್ರ 'ಜಿಂಕೆಮರಿ'. ಲೂಸ್‌ಮಾದ ಯೋಗೀಶ್, ಸೋನಿಯಾ ಗೌಡ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರದ ನಿರ್ದೇಶಕರು, ಕೆ.ವಿ. ನವೀನ್ ಕುಮಾರ್. ಮಹೇಶ್ ಬಾಳೆಕುಂದ್ರಿ ನಿರ್ಮಾಪಕರು. ಅಂದಹಾಗೆ ಇದು ತೆಲುಗಿನ 'ಬಿಂದಾಸ್' ಚಿತ್ರದ ಕನ್ನಡ 'ಚಿತ್ರಾ'ನ್ನ. ಬೆಂಗಳೂರು ಸೇರಿದಂತೆ ಬಾಕಾಂಕ್‌ನಲ್ಲೂ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನೀಡಿದ್ದಾರೆ. 5 ಹಾಡುಗಳಿವೆ. ನವೀನ್‌ಗೆ ಇದು ಮೊದಲ ಚಿತ್ರ. ಅವಿನಾಶ್, ಶರತ್ ಲೋಹಿತಾಶ್ವ, ಶೋಭರಾಜ್, ರಮೇಶ್ ಭಟ್, ಜೈ ಜಗದೀಶ್, ಅಚ್ಯುತ್ ಕುಮಾರ್, ನಿನಾಸಂ ಅಶ್ವತ್ಥ್, ಹರೀಶ್ ರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸುಮನ್ ರಂಗನಾಥ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 'ಪಕ್ಕಾ ಮನರಂಜನೆಯ ಚಿತ್ರವಿದು. ಎಲ್ಲ ವರ್ಗದ ಪ್ರೇಕ್ಷಕರು ನೋಡುವಂಥ ಸಿನಿಮಾ ಮಾಡಿದ್ದೇವೆ' ಎಂಬುದು ನಿರ್ದೇಶಕರ ವಿವರಣೆ.
ಕಾವೇರಿ ನೀರಿಗಾಗಿ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. ಆದರೂ ರಾಜಕೀಯದ ಮೇಲಾಟದಿಂದ ಮಣ್ಣಿನ ಮಕ್ಕಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂಬುದೇ ನೋವಿನ ಸಂಗತಿ. ಇರಲಿ, ಕಾವೇರಿ ನೀರು ಸರಿಯಾಗಿ ಸಿಗದಿದ್ದರೇ ಏನಂತೆ, 'ಕಾವೇರಿ ನಗರ' ಹೆಸರಿನ ಚಿತ್ರವನ್ನು ನೋಡಲು ಪ್ರೇಕ್ಷಕನಿಗೆ ಅದ್ದೂರಿ ಸ್ವಾಗತ ಕೋರುತ್ತಿದೆ ಗಾಂಧಿನಗರ. ರಾಜ್ಯದ 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಜಯಂತ್, ಸುಪ್ರಿತಾ, ದೇವರಾಜ್, ಉಮಾಶ್ರೀ, ರಮೇಶ್ ಪಂಡಿತ್, ಅರವಿಂದ್ ಮುಂತಾದವರು ಅಭಿನಯಿಸಿದ್ದು, ರವಿ ಮಂಜುನಾಥ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ರವಿ ಅವರದ್ದೇ. ಬಿ. ಎನ್. ಕೃಷ್ಣಮೂರ್ತಿ ನಿರ್ಮಾಪಕರು. ಪ್ರದೀಪ್ ರಾಜ್ ಸಂಗೀತ, ಶಂಕರ್ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಸಾಹಸ ಇದೆ. 'ನನಗೆ ಇದು ಮೊದಲ ಚಿತ್ರ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೊಸಬರ ಚಿತ್ರಗಳಿಗೆ ನಿಮ್ಮ ಬೆಂಬಲ ಬೇಕಿದೆ' ಎಂಬುದು ನಿರ್ದೇಶಕರ ಮಾತು.
ಈ ಮೂರು ಚಿತ್ರಗಳ ನಡುವೆ ನಮ್ಮದು ತುಂಬಾ ವಿಭಿನ್ನ ಎಂದುಕೊಂಡು ಬರುತ್ತಿರುವ ಚಿತ್ರ 'ಸ್ಟೋರಿ ಕಥೆ'. ಜಗದೀಶ್ ಚಿತ್ರದ ನಿರ್ದೇಶಕರು. ತಿಲಕ್, ನೇಹಾ ಪಾಟೀಲ್, ಪಾರ್ವತಿ ನಾಯರ್, ಪ್ರತಾಪ್ ನಾರಾಯಣ್ ಚಿತ್ರದ ಜೋಡಿ. ಎರಡು ಚಿತ್ರಕಥೆಗಳು ಒಟ್ಟಿಗೆ ಒಂದೇ ಚಿತ್ರದಲ್ಲಿ ಸಾಗುತ್ತವೆ. ಇದು ಚಿತ್ರದ ವಿಶೇಷತೆ ಎಂಬುದು ನಿರ್ದೇಶಕರ ವಿವರಣೆ. 'ಒಂದು ವರ್ಗದ ಚಿತ್ರವಲ್ಲ. ಆದರೆ ಒಂಚೂರು ಸಸ್ಪೆನ್ಸ್ ಇದ್ದೇ ಇರುತ್ತದೆ. ಹೊಸ ರೀತಿಯ ಸಿನಿಮಾ ಇದು' ಎನ್ನುತ್ತಾರೆ ಜಗದೀಶ್. ಸತೀಶ್ ಕುಮಾರ್ ಛಾಯಾಗ್ರಹಣ, ವಸು ದೀಕ್ಷಿತ್ ಸಂಗೀತ ಚಿತ್ರಕ್ಕಿದೆ. ಒಟ್ಟಿನಲ್ಲಿ ನಾಲ್ಕು ಚಿತ್ರಗಳು ಈ ವಾರ ಏಕಕಾಲದಲ್ಲಿ ಬರುತ್ತಿವೆ. ನೋಡುವ ಸಂಭ್ರಮಕ್ಕೆ ಪ್ರೇಕ್ಷಕ ಸಿದ್ಧಗೊಳ್ಳಬೇಕು.
-ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

