ಸಿನಿಮಾ ಲೇಖನ

ವೇಶ್ಯೆ ಭೂಷಣ

ವೇಶ್ಯಾ ಜಗತ್ತಿನಲ್ಲಿ ಚಿತ್ರನಟಿಯರು ಮೈ ಮಾರಿಕೊಳ್ಳುತ್ತಿದ್ದಾರೆಂಬ ಸುದ್ದಿಗಳಲ್ಲಿ...

ವೇಶ್ಯೆ ಭೂಷಣ
Published On :

ವೇಶ್ಯಾವಾಟಿಕೆ ಜಾಲದಲ್ಲಿ ಸಿನಿಮಾ ನಟಿಯರು...
ಹೀಗೊಂದು ಸುದ್ದಿ ಪತ್ರಿಕೆಗಳಲ್ಲಿ ಓದಿದ ನೆನಪು ಇರಬೇಕಲ್ಲವೇ? 'ಕ್ರೈಮ್‌' ಪತ್ರಿಕೆಗಳಲ್ಲೂ ಒಂದಲ್ಲ ಒಂದು ನಟಿಯ ಅರೆ ಬೆತ್ತಲೆ ಭಾವಚಿತ್ರದಡಿ 'ಚಿತ್ರ ನಟಿಯ ರಾಸಲೀಲೆ' ಎನ್ನುವ ಸಾಲುಗಳು ರಾರಾಜಿಸುತ್ತಿರುತ್ತವೆ. ಇನ್ನು ಎಸ್ಕಾರ್ಟ್ ಸೇವೆ, ಹೈಫೈ ರೆಸ್ಟೋರೆಂಟ್, ಮನರಂಜನಾ ಕ್ಲಬ್‌ಗಳ ವೆಬ್ ಸೈಟ್‌ಗಳ ಮೇಲೆ ಸುಮ್ಮನೆ ಕಣ್ಣಾಡಿಸಿದರೂ 'ಕಾಲ್ ಗರ್ಲ್ಸ್‌' ಎನ್ನುವ ಜಾಹಿರಾತುಗಳಲ್ಲಿ ಚಿತ್ರನಟಿಯರು ತುಂಬಿಕೊಂಡಿರುತ್ತಾರೆ. ಕನ್ನಡ ಚಿತ್ರದಲ್ಲಿ ಅಭಿನಯಿಸಿದ ನಟಿ ಸುಮಾ ಗುಹಾ ಹಾಗೂ ಸಂಚಿತಾ ಪಡುಕೋಣೆ ಭಾವಚಿತ್ರಗಳು ಕಾಲ್ ಗರ್ಲ್ಸ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡು ದೊಡ್ಡ ಸುದ್ದಿಯಾಯಿತು. ತೆಲುಗು ನಟಿ ಯಮುನಾ ಬೆಂಗಳೂರು ಹೋಟೆಲ್‌ನಲ್ಲಿ ಸಿಕ್ಕಿಬಿದ್ದಳು. ಹೀಗಾಗಿ ವೇಶ್ಯಾವಾಟಿಕೆ ಎಂದ ಕೂಡಲೇ ಚಿತ್ರ ನಟಿಯರಿಗಾಗಿ ಹುಡುಕಾಡುವವರಿಗೆ ಕಡಿಮೆ ಇಲ್ಲ.

 ಆದರೆ ವೇಶ್ಯಾ ಜಗತ್ತಿನಲ್ಲಿ ಚಿತ್ರನಟಿಯರು ಮೈ ಮಾರಿಕೊಳ್ಳುತ್ತಿದ್ದಾರೆಂಬ ಸುದ್ದಿಗಳಲ್ಲಿ ನಿಜವೆಷ್ಟು, ಸುಳ್ಳೆಷ್ಟು ಎಂಬುದು ಯಾರಿಗೆ ಗೊತ್ತು? ಆದರೆ ನಟಿಯರು ಬೆಳ್ಳಿತೆರೆ ಮೇಲೆ ವೇಶ್ಯೆಯರಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದಂತೂ ಸತ್ಯ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ... ಹೀಗೆ ಭಾಷೆಯ ಗಡಿ  ಇಲ್ಲದೆ ಹತ್ತಾರು ನಟಿಯರು 'ಮಸಣದ ಹೂವು'ಗಳಾಗಿ ಕತ್ತಲ ಕೋಣೆಯಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಅಲ್ಲದೆ ವೇಶ್ಯಾ ಪಾತ್ರಗಳನ್ನು ಒಳಗೊಂಡ ಚಿತ್ರಗಳು ಸಾಕಷ್ಟು ಬಂದಿವೆ. ಹಿಂದಿಯಲ್ಲಿ 'ಮಂಡಿ', 'ಆಸ್ತಾ' 'ಉತ್ಸವ್‌' ಹಾಗೂ ಕನ್ನಡದಲ್ಲಿ 'ಗೆಜ್ಜೆಪೂಜೆ', 'ಮಸಣದ ಹೂವು', 'ಹೂವು ಹಣ್ಣು' ಮುಂತಾದ ಚಿತ್ರಗಳು ವೇಶ್ಯಾ ಲೋಕವನ್ನು ಅನಾವರಣಗೊಳಿಸಿವೆ. ಆದರೆ 'ಇಂತಿ ನಿನ್ನ ಪ್ರೀತಿಯ' ವೇಶ್ಯಾ ಪಾತ್ರಧಾರಿ ಅದರ ತೀವ್ರತೆಯನ್ನು ಸ್ಪರ್ಶಿಸದೇ ಹೋದರೂ ಅಲ್ಲಿನ 'ಕೆಂಗುಲಾಬಿ'ಯರನ್ನು ಪ್ರೇಕ್ಷಕರಿಗೆ ಪರಿಚಯಿಸಿವೆ. ಬಿಡುಗಡೆಗೆ ಸಿದ್ಧವಾಗಿರುವ 'ಕಡ್ಡಿಪುಡಿ' ಚಿತ್ರದಲ್ಲಿ ಐಂದ್ರಿತಾ ರೇಳನ್ನು ನೋಡಿದರೆ ಬ್ರಾಥಲ್‌ನಲ್ಲಿ ನಿರ್ದೇಶಕ ಸೂರಿ ವೇಶ್ಯೆಯನ್ನು ಮತ್ತಷ್ಟು ರಂಗಾಗಿಸಿರುವಂತೆ ಕಾಣುತ್ತದೆ.

ತೆಲುಗಿನಲ್ಲಿ 'ಕನ್ಯಾಶುಲ್ಕಂ' ಚಿತ್ರದಿಂದ ಆರಂಭಗೊಂಡು 'ವೇದಂ' ಚಿತ್ರದ ತನಕ ಹತ್ತಾರು ವೇಶ್ಯಾ ಪಾತ್ರಗಳ ಚಿತ್ರಗಳು ಬಂದಿವೆ. ಆದರೆ 'ಪ್ರೇಮಾಭಿಷೇಕಂ', 'ಪ್ರೇಮಮಂದಿರಂ' ಚಿತ್ರಗಳಲ್ಲಿನ ವೇಶ್ಯಾ ಪಾತ್ರಗಳಂತೆ ಹೆಣ್ಣಿನ ಅಂತರಂಗವನ್ನು ತೆರೆದಿಡಲಿಲ್ಲ. ತಮಿಳಿನಲ್ಲಿ ಕೆ. ಬಾಲಚಂದರ್ 'ಆರಂಗೆಟ್ರಂ' ಚಿತ್ರದ ಮೂಲಕ ವೇಶ್ಯೆಯನ್ನು ತೆರೆಗೆ ತಂದರು.
ದಕ್ಷಿಣ ಭಾರತೀಯ ಚಿತ್ರರಂಗದ ಮಟ್ಟಿಗೆ ಅತಿ ಹೆಚ್ಚು ವೇಶ್ಯಾ ಜಗತ್ತಿಗೆ ಕೈ ಹಾಕಿದ್ದು ಹಿಂದಿ ಚಿತ್ರರಂಗ. ಸಾಲು ಸಾಲು ವೇಶ್ಯಾ ಪಾತ್ರಗಳನ್ನು ಒಳಗೊಂಡ ಚಿತ್ರಗಳು ಅಲ್ಲಿ ಬಂದಿವೆ. ಬಾಲಿವುಡ್‌ನಲ್ಲಿ ರೇಖಾ, ಸ್ಮಿತಾ ಪಾಟೀಲ್, ಶಬನಾ ಅಜ್ಮಿ ಮುಂತಾದವರ ಸಾಲಿನಲ್ಲಿ ಕರಿನಾ ಕಪೂರ್, ವಿದ್ಯಾಬಾಲನ್, ಟಬು ಹೆಚ್ಚಾಗಿ ಇಂಥ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸಾವಿತ್ರಿ, ಲಕ್ಷ್ಮಿ, ಶ್ರೀದೇವಿ, ಜಯಸುಧಾ, ಜಯಪ್ರದಾ, ಲಕ್ಷ್ಮಿ ಹಾಗೂ ಅನುಷ್ಕಾ, ಹರಿಪ್ರಿಯಾ ವೇಶ್ಯಾ ಪಾತ್ರಗಳಿಗೆ ಮೈ ಒಡ್ಡಿದರೆ, ಚಾರ್ಮಿ ಕೌರ್ ಇತ್ತೀಚೆಗಷ್ಟೆ ಶುರುವಾಗಿರುವ 'ಪ್ರೇಮ ಒಕ ಮೈಕಂ' ಚಿತ್ರಕ್ಕೆ ಗೆಜ್ಜೆ ಕಟ್ಟಲು ಸಿದ್ಧವಾಗುತ್ತಿದ್ದಾಳೆ. ಆದರೆ ಕನ್ನಡದ ಮಟ್ಟಿಗೆ ವೇಶ್ಯಾ ಪಾತ್ರಗಳನ್ನು ಮಾಡಿದವರು ಕಡಿಮೆ. ಜಯಂತಿ, ಲೀಲಾವತಿ, ಲಕ್ಷ್ಮಿ ಹೊರತಾಗಿ ಬೇರೊಬ್ಬರನ್ನು ಕನ್ನಡ ಪ್ರೇಕ್ಷಕ ಆ ಪಾತ್ರದಲ್ಲಿ ನೋಡಲಿಲ್ಲ.

ಆದರೆ ವೇಶ್ಯೆಯೊಬ್ಬಳ ಬದುಕೇ ಚಿತ್ರದ ಕೇಂದ್ರ ವಸ್ತುವಾಗಿದ್ದ ಸಂದರ್ಭದಲ್ಲಿ ಆ ಪಾತ್ರ ಮತ್ತು ಅದರ ಹಾದಿಯನ್ನು ತೀರಾ ಆಪ್ತವಾಗಿ ಹಾಗೂ ಮನೋಜ್ಞವಾಗಿ ತೆರೆದಿಡುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಸಾಕಷ್ಟು ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. ಹಿಂದಿಯ 'ಆಸ್ತಾ', 'ಚಿಂಗಾರಿ', 'ಉತ್ಸವ್‌', 'ಚಾಂದಿನಿ ಬಾರ್‌'. ತೆಲುಗಿನಲ್ಲಿ 'ಪ್ರೇಮಾಭಿಷೇಕಂ', 'ಕನ್ಯಾಶುಲ್ಕಂ' ಹಾಗೂ ತಮಿಳಿನಲ್ಲಿ 'ಆರಂಗೆಟ್ರಂ', ಕನ್ನಡದಲ್ಲಿ 'ಗೆಜ್ಜೆಪೂಜೆ', 'ಮಸಣದ ಹೂವು' ಚಿತ್ರಗಳ ನಂತರ ವೇಶ್ಯಾ ಪಾತ್ರಗಳ ಮೂಲಕ ನಿಜವಾಗಲೂ ಹೆಣ್ಣಿನ ಅಂತರಂಗವನ್ನು ತೆರೆದಿಡಲು ಸಾಧ್ಯವಾಗಲಿಲ್ಲ.

 ಹೀಗಾಗಿ 'ಚಮೇಲಿ', 'ತಲಾಶ್‌', 'ಕಡ್ಡಿಪುಡಿ', 'ಪ್ರೇಮ ಒಕ ಮೈಕಂ' ಚಿತ್ರಗಳನ್ನು ಆಗಿನ ವೇಶ್ಯಾ ಪಾತ್ರಗಳನ್ನು ಒಳಗೊಂಡ ಚಿತ್ರಗಳ ಜೊತೆ ಹೋಲಿಸಿ ನೋಡಲಾಗದು. ಯಾಕೆಂದರೆ ಸಿನಿಮಾ ತಯಾರಕನು ಮಹಿಳೆಯನ್ನು ನೋಡುವ ವಿವಿಧ ರೂಪಗಳಲ್ಲಿ ವೇಶ್ಯಾ ಪಾತ್ರವೂ ಒಂದು. ಹೀಗಾಗಿ ಈಗಿನ ಸಿನಿಮಾಗಳಲ್ಲಿ ವೇಶ್ಯಾ ಪಾತ್ರಗಳನ್ನು ತೆರೆ ಮೇಲೆ ಕಟ್ಟಿಕೊಡುವುದಕ್ಕೆ ಯಾವುದೇ ಸಾಂಸ್ಕೃತಿಕ ಆಯಾಮವಿಲ್ಲ. ಇಲ್ಲಿ ಎಲ್ಲವೂ ಹಣದ ಗಳಿಕೆಯ ಆಯಾಮಗಳೇ. ಅಥವಾ ಗಂಡಿಸಿನ ತೆವಲುಗಳು ಹಾಗೂ ಆತನ ಆಸೆ, ಅಭಿರುಚಿಗಳು ಇಲ್ಲಿ ಕೆಲಸ ಮಾಡುತ್ತವೆ ಎಂಬುದು ಸತ್ಯ. ಹೀಗಾಗಿ ಕೇವಲ ನೋಟಕ್ಕೆ ಮಾತ್ರ ಸೀಮಿತಗೊಳ್ಳುವ ಮಹಿಳಾ ಪಾತ್ರಗಳಿಗೆ ತೆರೆ ಮೇಲೆ ಹೆಚ್ಚಿನ ಜವಾಬ್ದಾರಿಯೇನು ಇರಲ್ಲ. ಅವರೇನಿದ್ದರೂ 'ತೆರೆದು' ತೋರಿಸುವ ಕೆಲಸವಷ್ಟೇ.

ವಿವಿಧ ರೂಪಗಳಲ್ಲಿ ಮಹಿಳೆ
ಚಿತ್ರರಂಗದಲ್ಲಿ ಮಹಿಳಾ ಪಾತ್ರಗಳು ಸೊರಗುತ್ತಿವೆ ಎಂಬುದು ಹಲವರ ವಾದ. ಕನ್ನಡದ ಮೊದಲ ಮಾತಿನ ಚಿತ್ರ 'ಸತಿ ಸುಲೋಚನಾ' ಶೀರ್ಷಿಕೆ ಮಹಿಳಾ ಪ್ರಧಾನ ಚಿತ್ರದಂತೆ ಕಂಡರೂ ಅಲ್ಲಿ ಮಿಂಚಿದ್ದು ಮಾತ್ರ ರಾಮ, ರಾವಣ, ಇಂದ್ರಜಿತು ಹಾಗೂ ಲಕ್ಷ್ಮಣ ಪಾತ್ರಗಳು. ಆರಂಭದಲ್ಲಿ ನಾಟಕಗಳಂತೆ ಸಿನಿಮಾಗಳಲ್ಲೂ ಮಹಿಳಾ ಪಾತ್ರಗಳನ್ನು ಕಟ್ಟಿಕೊಡಲಾಗುತ್ತಿತ್ತು. ಹೀಗಾಗಿ ಭಾಷೆಯ ಹಂಗು ಇಲ್ಲದೆ ಎಲ್ಲ ದೇಶಗಳ ಚಿತ್ರಗಳಲ್ಲಿ ಮಹಿಳಾ ಪಾತ್ರಗಳನ್ನು ಸೃಷ್ಟಿ ಮಾಡಲಾಗಿದೆ. ಆದರೆ ನಾಯಕನ ಹಿಂದೆ- ಮುಂದೆ ಸುತ್ತಾಡುವ ಗೊಂಬೆಯಾಗಿ, ಗಂಡನ ಹಿಂಸೆಯನ್ನು ಸಹಿಸಿಕೊಳ್ಳುವ ಸಹನಾ ಮೂರ್ತಿ, ಮಗನ ಉಪಟಳಕ್ಕೆ ಮರುಗುವ ತಾಯಿಯಾಗಿ, ಖಳ ನಾಯಕನೋ, ಅವನ ತಮ್ಮನೋ, ಅವನ ಗುಂಪಿನವರಿಂದ ಅತ್ಯಾಚಾರಕ್ಕೀಡಾಗುವುದಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಹೆಚ್ಚು ಕಮ್ಮಿ ತೆರೆ ಮೇಲೆ ಮಹಿಳಾ ಪಾತ್ರಧಾರಿಗಳಿಗೆ ಸ್ವಾತಂತ್ರ್ಯ ವ್ಯಕ್ತಿತ್ವ ಇಲ್ಲದಂತೆ ಮಾಡಿರುವು ಸ್ಪಷ್ಟ ಎಂಬುದು ಚಿತ್ರ ಇತಿಹಾಸದ ಶೋದನೆ.

ಒಂದು ಕಡೆ ಸಂಪ್ರದಾಯಕ್ಕೆ ಕಟ್ಟು ಬಿದ್ದು ಕುಟುಂಬಕ್ಕೆ ನೆರಳಾಗಿ, ನೋಯುತ್ತಾ, ತ್ಯಾಗಜೀವಿಯಾಗಿ ಮಹಿಳೆಯನ್ನು ಚಿತ್ರಿಸಿದರೆ, ಅದೇ ಸಂದರ್ಭದಲ್ಲಿ ಸಂಸಾರವನ್ನು ಒಡೆಯುವ, ಪುರುಷರನ್ನು ಎತ್ತಿ ಕಟ್ಟುವ, ಮೋಹಿಸಿ ಅವರನ್ನು ಅಡ್ಡದಾರಿಗೆ ಏಳೆಯುವಂಥ ಶೂರ್ಪನಖಿಯರ ಪಾತ್ರಗಳೂ ತೆರೆಯನ್ನು ಮರೆಯದೆ ಅಂಟಿಕೊಂಡಿವೆ. ಇದರ ನಡುವೆ ಅಮಾಯಕ ಹೆಣ್ಣು ಮಕ್ಕಳನ್ನು ಕಾಡುವ ಬಜಾರಿ ಅತ್ತೆಯರು, ಮಲತಾಯಿಯರು, ಅತ್ತಿಗೆ, ನಾದಿನಿಯರನ್ನು ತೋರಿಸುತ್ತಲೇ ಪುರುಷರಂತೆ ಸಮಾನರಾಗಲು ಹೋಗಿ ಸಮಾಜದ ಕಟ್ಟಳೆಗಳನ್ನು ಮೀರಿ ಗಂಡು ಬೀರಿಯಾರಾಗಿ, ಹಾದಿ ತಪ್ಪಿದವರಾಗಿ, ಗಂಡಸಿನ ಕ್ಷಮೆಗೆ ಓಡಿ ಬರುವ, ಆತ್ಮಹತ್ಯೆ ಹಾದಿ ಹಿಡಿಯುವ ದುರಂತ ನಾರಿಮಣಿಯರನ್ನು ಕಟ್ಟಿಕೊಡಲಾಗುತ್ತದೆ. ಇನ್ನು 'ಹೆತ್ತರೆ ಹೆಣ್ಣನ್ನೆ ಹೇರಬೇಕು' ಎನ್ನುವ ಸಾಯಿಪ್ರಕಾಶ್‌ರ ಕಣ್ಣೀರಿಗೆ, ಅವರ ಕೊಟ್ಟ 'ದೇವರ ತಂಗಿ'ಗೆ ಜನ ಕರಗಿದ್ದು ಕಡಿಮೆ. ಹೀಗಾಗಿ ಗಂಡಿನ ಆಸೆಯಂತೆ, ಆತನ ಮೂಗಿನ ನೇರಕ್ಕೆ ಮೈ ತುಂಬಾ ಸೀರೆ, ಹಣೆ ತುಂಬಾ ಕುಂಕುಮ ಬಳಿದುಕೊಂಡ ಗೌರಮ್ಮಂದಿರು ಹಾಗೂ ಜೀನ್ಸ್, ಮಿನಿ ಸ್ಕರ್ಟ್, ಸ್ಲೀವ್ ಲೆಸ್, ಬಿಗಿ ಉಡುಪು, ಕ್ಯಾಬರೆಯಲ್ಲೇ ಅವರು ಚಿತ್ರೀಕರಣಗೊಂಡಿದ್ದಾರೆ.

ತನಗೆ ಬೇಕಾದಂತೆ ಮಹಿಳಾ ಪಾತ್ರಗಳನ್ನು ಚಿತ್ರಿಸಿರುವ ಅದೇ ಗಂಡು, 'ಯೌವ್ವನದ ಹೊಳೆಯಲ್ಲಿ ಈಜಾಟ ಆಡಿದರೆ ಓ ಹೆಣ್ಣೆ ಸೋಲು ನಿನಗೆ' ಎಂದು ಹಾಡಿ, ಉಪದೇಶ ನೀಡುತ್ತಾನೆ. ಚಲನಚಿತ್ರರಂಗದಲ್ಲಿ ಮಹಿಳಾ ಪಾತ್ರಗಳು ಸೊರಗುತ್ತಿವೆ ಎಂದು ಹೇಳುತ್ತಿರುವ ಸಂದರ್ಭದಲ್ಲೇ ಆಕೆ; ಮಾಡ್ ಡ್ರೆಸ್, ವ್ಯಾಂಪ್, ಅರೆ ನಗ್ನ, ಖಳನಾಯಕರನ್ನು ಅಂಟಿ ಕೂರುವ ಪಾತ್ರಗಳ ಮೂಲಕ ನಿರ್ಮಾಪಕನ ಜೇಬಿಗೆ ಕಾಸು ಮಾಡಿಕೊಡುವ ಮಹತ್ವದ ಕಾರ್ಯಕ್ಕೆ ಬಳಕೆಯಾಗುತ್ತಿದ್ದಾಳೆ! ವೇಶ್ಯಾ ಪಾತ್ರಗಳನ್ನೂ ಈ ಹಿನ್ನೆಲೆಯಲ್ಲಿ ನೋಡಬೇಕೆ?

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.