ರಾಜರ ವಂಶ ನಮ್ದು
ಸುದೀಪ್ ಮತ್ತು ಅಂಬರೀಶ್ 'ಬ್ರಹ್ಮ' ಎನ್ನುವ ಸಿನಿಮಾ ಮಾಡ್ತಾರೆ ಎಂದು ಸುದೀಪ್ರ 'ತಾಯವ್ವ' ಚಿತ್ರದ ಸಮಯದಲ್ಲೇ ಸುದ್ದಿ ಆಗಿತ್ತು. ಅದಾದ ಮೇಲೂ ಎಷ್ಟೋ ಜನ ತಮ್ಮ ಚಿತ್ರಕ್ಕೆ ಈ ಹೆಸರಿಟ್ಟುಕೊಳ್ಳುವ ಪ್ರಯತ್ನ ಮಾಡಿದರೇ ಹೊರತು ಆ ಹೆಸರಿನಲ್ಲೊಂದು ಸಿನಿಮಾ ಮಾತ್ರ ಶುರುವಾಗಲಿಲ್ಲ. ಹಾಗಾಗಿ, ಚಿತ್ರರಂಗದಲ್ಲಿ 'ಬ್ರಹ್ಮ' ಅನ್ನೋ ಹೆಸರೇ ಅಪಶಕುನ ಅಂತ ಈ ಹೆಸರಿಗೇ ಕೆಟ್ಟ ಹೆಸರು ಬಂತು. ಆದರೆ, ಈ ಎಲ್ಲ ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲದವರಂತೆ, ಈಗ ಅದೇ ಹೆಸರನ್ನಿಟ್ಟುಕೊಂಡು ನಿರ್ದೇಶಕ ಆರ್.ಚಂದ್ರು ತಮ್ಮ ಹೊಸ ಸಿನಿಮಾ ಶುರುಮಾಡಿದ್ದಾರೆ. ಬ್ರಹ್ಮ ಬರೆದ ಹಣೆಬರಹ ಇದ್ದಂಗಾಗ್ಲಿ ಎಂಬ ಧೈರ್ಯದಿಂದ.
ವಿಶೇಷ ಎಂದರೆ 'ಬ್ರಹ್ಮ' ಚಿತ್ರದ 'ಸೃಷ್ಠಿಕರ್ತ' ಆರ್. ಚಂದ್ರು ಆದರೂ ನಾಯಕರಾಗಿ ಅಭಿನಯಿಸುತ್ತಿರುವುದು, ಇನ್ನೊಬ್ಬ ಸಿನಿಮಾ 'ಸೃಷ್ಟಿಕರ್ತ' ಉಪೇಂದ್ರ. 'ಚಾರ್ಮಿನಾರ್'ನ ಗೆಲುವಿನ ಸಂಭ್ರಮದಲ್ಲಿರುವ ಚಂದ್ರು ಮೊನ್ನೆ 'ಬ್ರಹ್ಮ' ಚಿತ್ರದ ಹಾಡುಗಳ ರೆಕಾರ್ಡಿಂಗ್ ಮಾಡುವುದರೊಂದಿಗೆ, ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದಂತೆ, ಯಾರೂ ಪೂಜೆ ಮಾಡದ 'ಬ್ರಹ ್ಮ'ನಿಗೇ ಪೂಜೆ ಮಾಡಿದರು.
ಗುರುಕಿರಣ್ ಮನೆ ಕಮ್ ಸ್ಟುಡಿಯೋದಲ್ಲಿ ಮಾಧ್ಯಮದವರನ್ನು ವೆಲ್ಕಮ್ ಮಾಡಿದ ಚಂದ್ರು, ಚಾರ್ಮಿನಾರ್ ಇದೇ 15ಕ್ಕೆ ನೂರುದಿನ ಪೂರೈಸಿದ ಕೂಡಲೇ 'ಬ್ರಹ್ಮ'ನ ಶೂಟಿಂಗ್ ಶುರು ಎಂಬ ವಿಷಯ ಹೇಳಿಕೊಂಡರು.
ಅಂದಹಾಗೆ, 'ಬ್ರಹ್ಮ'ನ ಕಥೆ, ಕ್ರಿಸ್ತಶಕ 1600ರಿಂದ ಶುರುವಾಗುತ್ತದಂತೆ. ಆ ಕಾಲದ ರಾಜ ಮನೆತನವೊಂದರ ಹಿನ್ನೆಲೆಯಿಂದ 2013ರವರೆಗೂ ಕಥೆ ವಿಸ್ತಾರವಾಗಿದೆ. ಹಾಗಾಗಿ ನಾಯಕ ಉಪೇಂದ್ರ, ಪ್ರಕಾಶ್ ರೈ ಶೈಲಿಯಲ್ಲಿ 'ರಾಜರ ವಂಶ ನಮು'್ದ ಎನ್ನುತ್ತಿದ್ದಾರೆ. ಅವರ ವಿಭಿನ್ನ ಗೆಟಪ್ಗಳೂ ಕೂಡ ಚಂದ್ರು ರೇಸ್ಕೋರ್ಸ್ನಲ್ಲಿ ನಡೆಸಿದ ಪೋಟೋಶೂಟ್ನಲ್ಲಿ ಅನಾವರಣಗೊಂಡಿವೆ.
ನಿರ್ಮಾಪಕ ಮಂಜು ನಾಥ್ 'ತಾಜ್ಮಹಲ್' ಕಾಲದಿಂದಲೂ ಚಂದ್ರು ಜೊತೆಗಿರುವವರು. 'ಚಾರ್ಮಿನಾರ್'ಗೂ ಹಣಕಾಸಿನ ಸಹಾಯ ಮಾಡಿದವರು. ಈಗ 'ಬ್ರಹ್ಮ'ನ ಮೂಲಕ ಮೊದಲ ಬಾರಿಗೆ ಪೂರ್ಣಪ್ರಮಾಣದ ನಿರ್ಮಾಣಕ್ಕಿಳಿದಿದ್ದಾರೆ. ಇನ್ನು ಈ ಚಿತ್ರ ಕನ್ನಡ ಮತ್ತು ತೆಲುಗು, ಎರಡು ಭಾಷೆಯಲ್ಲಿ ತಯಾರಾಗುತ್ತಿರುವುದರಿಂದ ತ್ರಿಶಾ ಅವರನ್ನು ನಾಯಕಿಯಾಗಿಸಬೇಕು ಎಂಬ ಆಸೆಯಿತ್ತಂತೆ ಚಂದ್ರು ಅವರಿಗೆ. ಆದರೆ, ತ್ರಿಶಾ 'ನಾನು ಈಗಲೇ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ' ಎಂದರಂತೆ. ಆದರೆ, ಇತರ ಭಾಷೆಗಳಲ್ಲಿ ಅವರ ಮಾರ್ಕೆಟ್ ಕಡಿಮೆ ಆಗುವವರೆಗೂ ಕಾಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೋ ಏನೋ ಚಂದ್ರು ಪ್ಲಾನ್ ಛೇಂಜ್ ಆಗಿದೆ. ಹಾಗಾಗಿ, ದೀಕ್ಷಾ ಸೇಠ್ ಅಥವಾ ದೀಪಾ ಸನ್ನಿಧಿಯಲ್ಲಿ ತಮ್ಮ ಹೊಸ ಚಿತ್ರದ ನಾಯಕಿಯನ್ನು ಹುಡುಕುತ್ತಿದ್ದಾರೆ ಚಂದ್ರು.
ಸದ್ಯಕ್ಕೆ ಚಿತ್ರದ ನಾಲ್ಕು ಹಾಡುಗಳು ಫೈನಲ್ ಆಗಿವೆ, ಇನ್ನೊಂದು ಬಾಕಿ ಎಂದಿದ್ದು ಸಂಗೀತ ನಿರ್ದೇಶಕ ಗುರುಕಿರಣ್. ಸಾಹಸ ನಿರ್ದೇಶನ ಮಾಡುತ್ತಿರುವ ಥ್ರಿಲ್ಲರ್ ಮಂಜು, ಚಿತ್ರದಲ್ಲಿ ರೋಚಕವಾದ ಫೈಟ್ಗಳಿವೆ, ಗ್ರಾಫಿಕ್ಸ್ ಬಳಕೆ ಕೂಡ ಯಥೇಚ್ಚವಾಗಿರಲಿದೆ, ಎಲ್ಲದರ ತಯಾರಿ ನಡೆಯುತ್ತಿದೆ ಎನ್ನುತ್ತಾರೆ. ತಮ್ಮ ರೆಗ್ಯುಲರ್ ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಅವರು 'ಆರ್ಯನ್' ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಈಗ ಶೇಖರ್ ಚಂದ್ರು ಅವರನ್ನು ಜೊತೆಯಾಗಿಸಿಕೊಂಡಿದ್ದಾರೆ ಆರ್. ಚಂದ್ರು.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

