ಅಂದು ಯಾರಿಗೂ ಬೇಡದ ಕೂಸು
'ಸಿಂಪಲ್ಲಾಗೊಂದ್ ಲವ್ಸ್ಟೋರಿ' ಆಡಂಬರವಿಲ್ಲದೆ 50 ದಿನ ಪೂರೈಸಿದೆ. ಕೆಂಪೇಗೌಡ ರಸ್ತೆಯಲ್ಲಿ ಕಾಣಿಸದಿದ್ದರೂ...

'ಸಿಂಪಲ್ಲಾಗೊಂದ್ ಲವ್ಸ್ಟೋರಿ' ಆಡಂಬರವಿಲ್ಲದೆ 50 ದಿನ ಪೂರೈಸಿದೆ. ಕೆಂಪೇಗೌಡ ರಸ್ತೆಯಲ್ಲಿ ಕಾಣಿಸದಿದ್ದರೂ ಮಲ್ಟಿಪ್ಲೆಕ್ಸ್ಗಳಲ್ಲಿ ರಾರಾಜಿಸುತ್ತ ಶತದಿನೋತ್ಸವದ ಹಾದಿಯಲ್ಲಿದೆ. ಈ ಮೂಲಕ ಸುನಿ ಎಂಬ ನಿರ್ದೇಶಕ, ರಕ್ಷಿತ್, ಶ್ವೇತಾ ಎಂಬ ನಾಯಕ- ನಾಯಕಿ, ಭರತ್ ಎಂಬ ಸಂಗೀತ ನಿರ್ದೇಶಕ... ಈ ಎಲ್ಲರ ಪ್ರಯತ್ನದ ಫಲವಾಗಿ ಪ್ರೇಕ್ಷಕರ ಮನಸ್ಸಿಗೆ ಈ 'ಸಿನಿಮಾ ತಾಗಿದೆ'. ಹಾಗಾಗಿ ಈ ಎಲ್ಲರ ಹೆಸರೂ 'ಸಿನಿ ಮಾತಾ'ಗಿದೆ.
ಆದರೆ, ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರ 50 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಥೇಟ್ ಸಿನಿಮಾ ಶೈಲಿಯಲ್ಲಿ ಒಂದು ಸಣ್ಣ ಫ್ಲ್ಯಾಷ್ಬ್ಯಾಕ್ಗೆ ಹೊದರೆ ಅಲ್ಲಿ ಒಂದಷ್ಟು ಸ್ವಾರಸ್ಯಗಳಿವೆ. ಇದು ಸುನಿಕತೆ.
ಬೇಡ ಎಂದವರ ಕಥೆ. ಈ ಫ್ಲ್ಯಾಷ್ಬ್ಯಾಕ್ನಲ್ಲಿ ಈ ಸಿನಿಮಾ ಬೇಡ ಎಂದು ಬ್ಯಾಕ್ ತಿರುಗಿಸಿದವರ ಪಟ್ಟಿ ದೊಡ್ಡದೇ ಇದೆ. ಆದರೆ ಈಗ ಈ ಚಿತ್ರದ ಯಶಸ್ಸಿನ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗಾಗಿ ಅಂದು ಹಾಗೆ ಯಾರಿಗೂ ಬೇಡವಾದ ಕೂಸು, ಇಂದು ಮಾಸ್ಟರ್ ಪೀಸು.
ಎಲ್ಲವೂ ಸರಿಹೋಗಿದ್ದಿದ್ದರೆ ತರುಣ್ ಚಂದ್ರ 'ಸಿಂಪಲ್ಲಾಗೊಂದ್ ಲವ್ಸ್ಟೋರಿ'ಗೆ ನಾಯಕನಾಗಬೇಕಿತ್ತು. ಐಂದ್ರಿತಾ ರೇ ಅಥವಾ ಹರಿಪ್ರಿಯಾ ನಾಯಕಿಯಾಗಬೇಕಿತ್ತು. ಹಾಗಾಗಿದ್ದಿದ್ದರೆ ಚಿತ್ರದ ಯಶಸ್ಸಿನ ವಿಷಯದಲ್ಲಿ ಎಲ್ಲವೂ ಸರಿಹೋಗುತ್ತಿತ್ತೋ ಏನೋ ಗೊತ್ತಿಲ್ಲ. ಆದರೂ ಅದು ಆಗಲಿಲ್ಲ ಎಂಬುದು ಮಾತ್ರ ನಿಜ.
ತರುಣ್ ಚಂದ್ರ ಏನೋ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ ನಾಯಕಿಯ ಪಾತ್ರಕ್ಕೆ ಐಂದ್ರಿತಾ ರೇ ಅವರನ್ನು ಸಂಪರ್ಕಿಸಿದಾಗ ಐಂದ್ರಿತಾ, 'ತರುಣ್ರಂಥ ಸ್ಮಾಲ್ ಸ್ಟಾರ್ ಜೊತೆ ನಾನು ಅಭಿನಯಿಸುವುದಿಲ್ಲ' ಎಂದು ಸಿಂಪಲ್ಲಾಗಿ ಆಫರ್ ಅನ್ನು ನಿರಾಕರಿಸಿದರಂತೆ. ಅದಾದ ನಂತರ ಹರಿಪ್ರಿಯಾ ಅಂಗಳದಲ್ಲಿ ನಿಂತ ಸುನಿ ಅವರಿಗೆ ಎದುರಾಗಿದ್ದು ಹರಿಪ್ರಿಯಾ ಅವರ ದುಬಾರಿ ಸಂಭಾವನೆಯ ವಿಷಯ. ಹಾಗಾಗಿ, 'ನಮ್ದು ಸಿಂಪಲ್ ಲವ್ಸ್ಟೋರಿ, ರಾಯಲ್ ಲವ್ ಸ್ಟೋರಿ ಮಾಡುವಾಗ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇವೆ' ಎಂದು ಸಿಂಪಲ್ ಟೀಮ್ ಅಲ್ಲಿಂದ ಸೆಲ್ಫ್ ಗೆಟ್ ಔಟ್ ಆಗಿದೆ.
ಇದೆಲ್ಲದರ ನಂತರ, ಚಿತ್ರದ ನಾಯಕ, ನಾಯಕಿಯ ಹಿಂದೆ ಎಷ್ಟು ಅಲೆಯುತ್ತಾನೋ ಅದಕ್ಕಿಂತ ಹೆಚ್ಚಾಗಿ ನಾಯಕಿಗಾಗಿ ಅಲೆದಿದೆ ಚಿತ್ರತಂಡ.
ಮುಂದಿನ ಹಂತದಲ್ಲಿ 'ವಿರಾಟ್' ಚಿತ್ರದಲ್ಲಿ ಅಭಿನಯಿಸಿರುವ ಹುಡುಗಿಯನ್ನು ಕೇಳಿದ್ದೂ ಉಂಟು. ಆದರೆ, ಮೊದಲ ಚಿತ್ರದಲ್ಲೇ ದರ್ಶನ್ಗೆ ನಾಯಕಿಯಾದ ನಂತರ ಆ ಹೈಟ್ನಿಂದ ಕೆಳಗಿಳಿಯಲು ಆಕೆಯೂ ಒಪ್ಪಿಲ್ಲ. ಹಾಗಾಗಿ ಎಲ್ಲ ಅಲೆದಾಟದ ನಂತರ ಸುನಿಗೆ ಕೊನೆಗೆ ಸಿಕ್ಕಿದ ದಡ ಶ್ವೇತಾ ಶ್ರೀವಾಸ್ತವ್. ನಾಯಕರಾಗಿ ಅವರಿಗೆ ಸಾಥ್ ಕೊಡಲು ಆಯ್ಕೆಯಾಗಿದ್ದು ರಕ್ಷಿತ್ ಶೆಟ್ಟಿ.
ಅಲ್ಲದೆ, ಚಿತ್ರ ಶುರು ಮಾಡಬೇಕು ಎಂದುಕೊಂಡ ಸಮಯದಲ್ಲಿ ಸುನಿ ಅಂಡ್ ಟೀಮ್ ಸಾಕಷ್ಟು ಮಾತುಗಳನ್ನು ಕೇಳಿದೆ. ಹೇಳಿ ಕೇಳಿ ಹೊಸಬರು. ಸಿನಿಮಾ ನಿರ್ಮಾಣದ ವಿಷಯದಲ್ಲಿ ಸುನಿಯ ಸ್ನೇಹಿತರು ನಿರ್ಮಾಪಕರೊಬ್ಬರ ಬಳಿಗೆ ಕರೆದುಕೊಂಡು ಹೋದಾಗ ಕೇಳಬೇಕಾಗಿ ಬಂದಿದ್ದು 'ಅಯ್ಯೋ, ಈ ಹೊಸಬರೆಲ್ಲಾ ಯಾಕಪ್ಪಾ ಸಿನಿಮಾ ಮಾಡ್ತಾರೆ, ಇವ್ರನ್ನ ನಂಬಿಕೊಂಡು ನಾನು ದುಡ್ಡು ಹಾಕೋದಾ' ಎಂಬ ಅಪನಂಬಿಕೆಯ ಅಡ್ವಾನ್ಸ್ ವಿಷಸ್. ಆದರೆ ಈಗ 'ಸಿಂಪಲ್ಲಾಗೊಂದ್...' ಯಶಸ್ಸಿನ ನಂತರ ಅದೇ ನಿರ್ಮಾಪಕರು ಸುನಿಗೆ ತಮ್ಮ ಎರಡೂ ಕೈಯಲ್ಲಿ ಅಡ್ವಾನ್ಸ್ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದು ಸಿನಿಮಾದ ಯಶಸ್ಸೊಂದು ಮಾಡುವ ಮ್ಯಾಜಿಕ್. ಇತ್ತೀಚೆಗೆ ಬಿಡುಗಡೆಯಾದ 'ಜನ್ಮ' ಸುನಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮೊದಲ ಚಿತ್ರ. ಆದರೆ ಯಶಸ್ಸಿನ ವಿಷಯದಲ್ಲಿ ಅವರು ಸಿಂಪಲ್ ಆಗಿ ಸಾಧಿಸಿದ್ದು ದೊಡ್ಡ ಮಟ್ಟದಲ್ಲಿ. ಹಾಗಾಗಿ ಹೊಸ ಹುಡುಗರ ಈ ಪ್ರಯತ್ನಕ್ಕೆ ಪ್ರೇಕ್ಷಕರಂತೂ ಬಹುಪರಾಕ್ ಹೇಳಿ ಆಗಿದೆ. ಹಾಗಾಗಿ, ಇದೇ ಜೋಷ್ನಲ್ಲಿ ಸಿಂಪಲ್ಲಾಗಿ ಸಕ್ಸಸ್ ಕಂಡವರೆಲ್ಲಾ ಹೊಸ ಹೊಸ ಸಾಹಸಗಳಲ್ಲಿ ತೊಡಗಿಕೊಂಡಿದ್ದಾರೆ.
'ಸಿಂಪಲ್ಲಾಗೊಂದ್...' ಚಿತ್ರ 50 ದಿನ ಪೂರೈಸಿದ ಸಂದರ್ಭದಲ್ಲಿ ಚಿತ್ರದ ಪೈರಸಿ ಸಿಡಿ ಕೂಡ ಬಿಡುಗಡೆಯಾಗಿದೆ ಎಂಬುದು ಇನ್ನೊಂದು 'ಖುಷಿ' ಎನ್ನುವ ಸುನಿ 'ಖುಷಿ ಖುಷಿಯಲಿ' ಎಂಬ ಇನ್ನೊಂದು ಚಿತ್ರದ ನಿರ್ದೇಶನಕ್ಕೂ ತಯಾರಾಗಿದ್ದಾರೆ. ಅದಕ್ಕೂ ಮುಂಚೆ 'ಬಹುಪರಾಕ್' ಹೇಳಲು ಸಿದ್ಧರಾಗಿದ್ದಾರೆ. ನಾಯಕ ರಕ್ಷಿತ್ 'ಉಳಿದವರು ಕಂಡಂತೆ' ಎಂಬ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ನಾಯಕಿ ಶ್ವೇತಾಗೆ ಆಯ್ಕೆಯ ವಿಷಯದಲ್ಲಿ ಗೊಂದಲ ಹುಟ್ಟಿಸುವಷ್ಟು ಅವಕಾಶಗಳು ಬರುತ್ತಿವೆ. ಭರತ್ ಸಂಗೀತ ನಿರ್ದೇಶನದ ಕನಿಷ್ಠ ಮೂರು ಚಿತ್ರಗಳು ಶುರುವಾಗಿವೆ. ಒಟ್ಟಿನಲ್ಲಿ, ಸಿಂಪಲ್ ಆಗಿದ್ದ ಈ ಎಲ್ಲರ ಪ್ರಪಂಚ ಈಗ ಗ್ರ್ಯಾಂಡ್ ಆಗಿದೆ.
-ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


