ಸಿನಿಮಾ ಲೇಖನ

ಹೊಸ ರುಚಿಯ ಬರ್ಫಿ

ಹೊಸ ರುಚಿಯ ಬರ್ಫಿ
Published On :

ನಿರ್ದೇಶಕ ಶೇಖರ್ 'ಪೆರೋಲ್‌' ಮೇಲೆ ಬಂದು ಸಾಕಷ್ಟು ಕರಸತ್ತು ಮಾಡಿ 'ಬರ್ಫಿ' ತಯಾರಿಸಿದ್ದಾರೆ. ಸಿದ್ಧ ಮಾಡಿರುವ 'ಬರ್ಫಿ'ಯ ರುಚಿ ತೋರಿಸುವುದಾಗಿ ಹೇಳಿ 'ಈಗ ಬೇಡ ಆಮೇಲೆ ಮನೆ ಮನೆಗೂ ತಲುಪಿಸುತ್ತೇನೆ' ಎಂದಿದ್ದಾರೆ. ಅಲ್ಲಿಗೆ ಶೇಖರ್ 'ಮನೆ ಮನೆಗೂ ಬರ್ಫಿ' ತಲುಪಿಸುವ ಹೊಸ ಯೋಜನೆ ಹಮ್ಮಿಕೊಂಡಂತಾಗಿದೆ. ಗೊಂದಲ ಬೇಡ, ವಿಷಯ ಇಷ್ಟೇ. ಇತ್ತೀಚೆಗೆ 'ಬರ್ಫಿ' ಚಿತ್ರದ ಆಡಿಯೋ ಬಿಡುಗಡೆ ನಡೆಯಿತು... ಅಲ್ಲಲ್ಲ, ಬಿಡುಗಡೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
 ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಎಂದ ಮೇಲೆ ಅಲ್ಲಿ ಬಿಡುಗಡೆ ಆಗಬೇಕಿರುವುದು ಕಾಮನ್. ಆದರೆ ಸಿಡಿ ಇಲ್ಲದೇ ಕಾರ್ಯಕ್ರಮ ಮುಗಿಸಿದ ಖ್ಯಾತಿಗೆ 'ಬರ್ಫಿ' ಚಿತ್ರದ ನಿರ್ದೇಶಕ ಶೇಖರ್ ಪಾತ್ರರಾಗುತ್ತಾರೆ. ಅವರ ಪ್ರಕಾರ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಿಡಿ ಹಂಚಿದರೆ ಯಾರೂ ಅದನ್ನು ಕೇಳಲ್ಲ. ದಾರಿಯಲ್ಲೇ ಬಿಸಾಕಿ ಹೋಗುತ್ತಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸಿದವರ ಮನೆಗೇ ಸಿಡಿ ತಲುಪಿಸುವುದಾಗಿ ಘೋಷಿಸಿದರು. ಅಲ್ಲಿಗೆ ಭಿನ್ನವಾಗಿ ಸಿಡಿ ಅನಾವರಣ ಮಾಡಬೇಕು ಎಂದುಕೊಂಡ ನಿರ್ದೇಶಕರ ಆಸೆ ಈಡೇರಿತು. ಆದರೆ ಆಡಿಯೋ ಸಿಡಿಗಳನ್ನು ದಾರಿಯಲ್ಲಿ ಬಿಸಾಕಿ ಹೋಗುತ್ತಾರೆ ಎಂದು ನಿರ್ದೇಶಕರಿಗೆ ಹೇಳಿದ್ದು ಯಾರು ಎಂಬುದು ಕಾರ್ಯಕ್ರಮಕ್ಕೆ ಬಂದವರು ಪ್ರಶ್ನೆ.
 ದಿಗಂತ್ ಚಿತ್ರದ ನಾಯಕ. ಭಾಮಾ ನಾಯಕಿ. ಗುಂಡ್ಲುಪೇಟೆ ಸುರೇಶ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು, ಗೋವಾ, ಪಂಜಾಬ್, ಚಂಡಿಗಢ, ವಾಘಾ ಗಡಿ, ಅಮೃತಸರ, ಶಿಮ್ಲಾ ಹೀಗೆ ಭಾರತದ ಪ್ರಮುಖ ನೆಲೆಗಳಲ್ಲಿ ಚಿತ್ರೀಕರಣಗೊಂಡಿರುವ 'ಬರ್ಫಿ' ತುಂಬಾ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ನಿರ್ದೇಶಕ ಶೇಖರ್ 'ಪೆರೋಲ್‌' ಚಿತ್ರದ ಮೂಲಕ ಹೊಸ ರೀತಿಯ ಸಿನಿಮಾವನ್ನು ಪ್ರೇಕ್ಷಕರ ಮುಂದಿಟ್ಟರೂ ಯಾಕೋ ಅದು ಅಷ್ಟಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲ. ಆದರೂ ಪಟ್ಟು ಬಿಡದ ತ್ರಿವಿಕ್ರಮನ ಹಾಗೆ ಹೊಸ ಕಥೆ, ಹೊಸ ತಂಡದೊಂದಿಗೆ ಮತ್ತೆ ಬಂದು 'ಬರ್ಫಿ' ಮಾಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಅವರ ಸ್ನೇಹಿತರು ಸಾಥ್ ನೀಡಿರುವುದರಿಂದ ಧೈರ್ಯವಾಗಿ 'ಬರ್ಫಿ'ಯ ನಿರ್ಮಾಣ ಕಾರ್ಯವನ್ನು ಮುಗಿಸಿದ್ದಾರೆ.
'ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ಯೂಟ್ ಲವ್ ಸ್ಟೋರಿಯಾದರೂ ಅದನ್ನು ನಿರೂಪಣೆ ಮಾಡಿರುವ ವಿಧಾನ ಕೂಡ ತುಂಬಾ ಭಿನ್ನವಾಗಿದೆ. ದಿಗಂತ್, ಭಾಮಾ ಅವರ ಕಾಂಬಿನೇಷನ್ ಈ ಚಿತ್ರದ ನಂತರ ತುಂಬಾ ಹಿಟ್ ಆಗುತ್ತದೆ. ನಿರೀಕ್ಷೆಯಂತೆ ಚಿತ್ರ ಮೂಡಿ ಬಂದಿದೆ. ಈ ಹಿಂದೆ ನಮ್ಮ ಚಿತ್ರದ ಆಡಿಯೋ ಸಿಡಿ ತೆಗೆದುಕೊಳ್ಳದ ಆನಂದ್ ಆಡಿಯೋ ಮೋಹನ್ ಅವರೇ ಈಗ ಮುಂದೆ ಬಂದು 'ಬರ್ಫಿ' ಚಿತ್ರದ ಆಡಿಯೋ ಮಾರುಕಟ್ಟೆ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ. ಇದು ಚಿತ್ರದ ಹಾಡುಗಳು ಎಷ್ಟು ಚೆನ್ನಾಗಿವೆ ಎಂಬುದಕ್ಕೆ ಸಾಕ್ಷಿ' ಎನ್ನುವುದು ಶೇಖರ್ ಅವರ ವಿವರಣೆ. ಚಿತ್ರದಲ್ಲಿ ತಮ್ಮ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿರೀಕ್ಷೆಗೂ ಮೀರಿ ಸಿನಿಮಾ ಮೂಡಿ ಬಂದಿದೆ ಎಂದರು ದಿಗಂತ್. ಅಲ್ಲಿಗೆ ಸಿಡಿಯೇ ಇಲ್ಲದೆ 'ಬರ್ಫಿ' ಆಡಿಯೋ ಬಿಡುಗಡೆ ಕಾರ್ಯಕ್ರಮ ಮುಗಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.