ಸಿನಿಮಾ ಲೇಖನ

ಹೊಸತು ಇದೀಗ ಬರುತ್ತಿದೆ

ಹೊಸತು ಇದೀಗ ಬರುತ್ತಿದೆ
Published On :

'ಈ ವರ್ಷದ ಮೊದಲ ಹಿಟ್‌' ಎಂದು ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿರುವ 'ಚಾರ್‌ಮಿನಾರ್‌' ಚಿತ್ರದ ಚಂದ್ರು, ಕಲೆಕ್ಷನ್‌ಗೆ ಕೊನೆಯೇ ಇಲ್ಲ ಎಂಬಂತೆ ಮುನ್ನುಗ್ಗುತ್ತಿರುವ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ಚಿತ್ರದ ನಿರ್ದೇಶಕ ಸುನಿ, ಮತ್ತು 'ಚಾರ್‌ಮಿನಾರ್‌'ನಿಂದ ಹೊಸಕಳೆ ಬಂದಂತಿರುವ ಚಿತ್ರದ ನಾಯಕ ಪ್ರೇಮ್, ಈ ಮೂರೂ ಜನ ತಮ್ಮ ಇತ್ತೀಚಿನ ಗೆಲುವಿನಲ್ಲಿ ಸಂಭ್ರಮಿಸುತ್ತಲೇ, ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ಮೂರೂ ಜನ ಗೆದ್ದ ಮಕ್ಕಳು ಈಗ ತಮ್ಮ ತಮ್ಮ ಹೊಸ ಚಿತ್ರಗಳ ಆರಂಭಕ್ಕಾಗಿ ಕ್ಷಣಗಣನೆ ಮಾಡುತ್ತಿದ್ದಾರೆ.
'ಚಾರ್‌ಮಿನಾರ್‌'ನ ತೆಲುಗು ವರ್ಷನ್ ಶುರುವಾಗುವುದು ಇನ್ನೂ ಸಮಯವಿದೆ ಎಂಬ ಕಾರಣಕ್ಕೆ, ಅಷ್ಟರಲ್ಲಿ ಒಂದು ಕನ್ನಡ ಚಿತ್ರ ಮಾಡಿ ಮುಗಿಸುವ ಪ್ಲ್ಯಾನ್ ಚಂದ್ರು ಅವರದ್ದು. ಮೊದಲ ಬಾರಿಯ ನಿರ್ಮಾಣದಲ್ಲಿ ಗೆಲುವಿನ ರುಚಿ ಕಂಡ ನಿರ್ದೇಶಕ ಚಂದ್ರು ಈಗ ಮುಂದಿನ ಚಿತ್ರದಲ್ಲಿ ಕೇವಲ ನಿರ್ದೇಶಕರಾಗುತ್ತಿದ್ದಾರೆ. ಆದರೆ ಇಲ್ಲಿ ವಿಶೇಷ ಸುದ್ದಿ ಎಂದರೆ ಚಂದ್ರು ಅವರ ಮುಂದಿನ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಹೆಸರು 'ಬ್ರಹ್ಮ'. ಹಿಂದೊಮ್ಮೆ ಸುದೀಪ್, ಅಂಬರೀಶ್ ಅಭಿನಯದಲ್ಲಿ ಶುರುವಾಗಿದ್ದ 'ಬ್ರಹ್ಮ' ಎಂಬ ಚಿತ್ರ ಮತ್ತೆ ಮುಂದುವರಿದಿರಲಿಲ್ಲ. ಆದರೆ ಈಗ ಅದೇ ಟೈಟಲ್ ಇಟ್ಟುಕೊಂಡು ಚಂದ್ರು ಮತ್ತು ಉಪೇಂದ್ರ ಚಿತ್ರಬ್ರಹ್ಮರಾಗಲು ಹೊರಟಿದ್ದಾರೆ. ಮಂಜುನಾಥ್ ನಿರ್ಮಾಣದ ಈ ಚಿತ್ರದ ಬಜೆಟ್, ತೆಲುಗು ಕನ್ನಡ ವರ್ಷನ್ ಸೇರಿ ಒಟ್ಟು 30 ಕೋಟಿ ಬಜೆಟ್ ಆಗಬಹುದು ಎನ್ನುತ್ತಾರೆ ಚಂದ್ರು. ಚಿತ್ರದ ನಾಯಕಿಯ ಪಾತ್ರಕ್ಕೆ ತೆಲುಗಿನ ಸ್ಟಾರ್ ನಟಿಯೊಬ್ಬರು ಆಯ್ಕೆಯಾಗುವ ಸಾಧ್ಯತೆಯಿದೆಯಂತೆ.
ನೆನಪಿರಲಿ ಪ್ರೇಮ್ ಎಂದು ಕರೆಸಿಕೊಳ್ಳುವ ಅಭ್ಯಾಸ ತಪ್ಪಿದಂತೆ ಕಾಣುತ್ತಿರುವ ಪ್ರೇಮ್ ಚಾರ್‌ಮಿನಾರ್‌ನಿಂದ ಹೊಸ ಐಡೆಂಟಿಟಿ ಗಿಟ್ಟಿಸಿಕೊಂಡಿದ್ದಾರೆ. ಇದೇ ಜೋಷ್‌ನಲ್ಲಿ ಮತ್ತೆ ಸ್ಟಾರ್‌ಗಿರಿಗೆ ಮರಳಿರುವ ಪ್ರೇಮ್ ಅವರ ಮುಂದಿನ ಚಿತ್ರದ ನಿರ್ದೇಶಕ ಪ್ರೀತಮ್ ಗುಬ್ಬಿ. ಸದ್ಯಕ್ಕೆ ಹೊಸಬರ ಜೊತೆ ಸೇರಿ 'ನಮ್ ದುನಿಯಾ ನಮ್ ಸ್ಟೈಲ್‌' ತೋರಿಸುತ್ತಿರುವ ಪ್ರೀತಂ, ಅದಾದ ನಂತರ ಪ್ರೇಮ್ ದುನಿಯಾ ಮತ್ತು ಪ್ರೇಮ್ ಸ್ಟೈಲ್‌ಗೆ ಹೊಸ ಟಚ್ ಕೊಡಲಿದ್ದಾರೆ. ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಈ ಚಿತ್ರಕ್ಕಿದೆ. ಆ್ಯಕ್ಷನ್ ಕಮ್ ಲವ್ ಸಬ್ಜೆಕ್ಟ್ ಹೊಂದಿದ ಈ ಚಿತ್ರದ ಉಳಿದ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ. ಚಿತ್ರದ ಟೈಟಲ್ ಕೂಡಾ ಇನ್ನೂ ಪಕ್ಕಾ ಆಗಿಲ್ಲ ಎಂಬುದು ಸದ್ಯದ ವಿವರಗಳು.
ಸಿಂಪಲ್ಲಾಗ್ ಹೇಳ್ತೀನ್ ಕೇಳಿ ಎನ್ನುವ ತಮ್ಮ ಸಂಪ್ರದಾಯವನ್ನು ಮುಂದುವರಿಸಿದಂತೆ ಕಾಣುವ ನಿರ್ದೇಶಕ ಸುನಿ ಕೂಡ ಈಗ ಹೊಸ ಚಿತ್ರದ ಹಾದಿಯಲ್ಲಿದ್ದಾರೆ. 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ'ಯ ಯಶಸ್ಸಿನ ನಂತರ ಅವರು ಮತ್ತೊಂದು ಸೀದಾ ಸಾದಾ ಕಥೆ ಹೇಳಲು ಹೊರಟಿದ್ದಾರೆ. ಸುನಿ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ 'ಸೀದಾ ಸಾದಾ'. ಆದರೆ ಸದ್ಯಕ್ಕೆ ಈ ಚಿತ್ರದ ವಿವರಗಳು ಕೇವಲ ಚಿತ್ರದ ಶೀರ್ಷಿಕೆಗೆ ಮಾತ್ರ ಸೀಮಿತವಾಗಿದೆ. ಆದರೆ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ರೀತಿಯಲ್ಲೇ ಇದೂ ಕೂಡ ಒಂದು ಸರಳವಾದ ಕತೆ ಎನ್ನುವ ಸುನಿ, ಈ ಚಿತ್ರದ ಕಥೆ ಮೊದಲಾರ್ಧದಲ್ಲಿ ಒಂದಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿ ನಂತರ ಅದನ್ನು ಬಿಡಿಸಿಕೊಳ್ಳುತ್ತಾ ಹೋಗುತ್ತದೆ ಎನ್ನುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.