ಸಿನಿಮಾ ಲೇಖನ

ಚಲನಛತ್ರಿ

ಚಲನಛತ್ರಿ
Published On :

ಇನ್ನೇನು ಯುಗಾದಿ ಹತ್ತಿರ ಬರ್ತಾ ಇದೆ. ಮಕ್ಕಳಿಗೆ ರಜವೂ ಶುರುವಾಗಿದೆ. 'ಬೇವು ಬೆಲ್ಲ ತಿಂದು ರೆಡಿಯಾಗಿರಿ. ರಜಾದಲ್ಲಿ ನಗಿಸೋಕೆ ನಾವು ಬರ್ತಿದ್ದೀವಿ' ಅಂದರು ಎಸ್. ನಾರಾಯಣ್.
ಅರ್ಥವಾಗಲಿಲ್ವೆ? ಎಸ್.ನಾರಾಯಣ್ ನಿರ್ದೇಶನ, ನಟನೆಯ 'ಛತ್ರಿಗಳು ಸಾರ್ ಛತ್ರಿಗಳು' ಬಿಡುಗಡೆಗೆ ಸಿದ್ಧವಾಗಿದೆ. ಯುಗಾದಿ ಬಳಿಕ ರಿಲೀಸ್ ದಿನಾಂಕ ಘೋಷಣೆಯಾಗಲಿದೆ. ನಾರಾಯಣ್ ನಿರ್ದೇಶನದ 'ಅಪ್ಪಯ್ಯ' ಕೂಡ ತೆರೆ ಕಾಣಲು ರೆಡಿಯಾಗಿದೆ. ಆದರೆ ನಾರಾಯಣ್‌ಗೆ 'ಛತ್ರಿಗಳು...' ಮೊದಲು ಜನರ ಮುಂದೆ ಬರಲಿ ಎನ್ನುವ ಆಸೆ. 'ಈ ಚಿತ್ರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಪ್ರೇಕ್ಷಕರು ಎಂಜಾಯ್ ಮಾಡ್ತಾರೆ ಅನ್ನೋ ವಿಶ್ವಾಸವಿದೆ' ಅಂತಾರೆ ಅವರು.
ಇದನ್ನೆಲ್ಲ ಅವರು ಹೇಳಿಕೊಂಡಿದ್ದು ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಾಚಿ ಕುಳಿತಿದ್ದರು. ಶುರುವಿನಲ್ಲಿ ಅವರು ನಾರಾಯಣರ ಫೋನ್ ಕರೆ ಸ್ವೀಕರಿಸುತ್ತಲೇ ಇರಲಿಲ್ಲವಂತೆ. ಇವರಿಗೋ ಅವರ ಸಂಗೀತವೇ ಬೇಕೆಂಬ ಹಠ.
'ಬಹುಶಃ ನನ್ನ ಬಗ್ಗೆ ಹೆದರಿಕೆ ಇತ್ತೋ ಏನೋ. ಅದಕ್ಕೆ ನನ್ನ ಕಾಲ್ ರಿಸೀವ್ ಮಾಡ್ತಾನೇ ಇರ್ಲಿಲ್ಲ ಪಾರ್ಟಿ. ಆಮೇಲೆ ಜಾಣತನದಿಂದ ಕರೆಸಿ ಮಾತನಾಡಿದಾಗ ಒಪ್ಪಿಕೊಂಡರು. ಬಹಳ ಚೆನ್ನಾಗಿ ಸಂಗೀತ ನೀಡಿದ್ದಾರೆ' ಎಂದರು ನಾರಾಯಣ್. ಅದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಅರ್ಜುನ್ ಜನ್ಯ, 'ನಾರಾಯಣ್ ಸಾರ್ ಜತೆ ಕೆಲಸ ಮಾಡಿ ತುಂಬಾ ಕಲಿತೆ. ತುಂಬಾ ಪ್ರೊಫೆಶನಲ್ ನಿರ್ದೇಶಕ ಅವರು. ಮೊದಲೇ ಸಾಹಿತ್ಯ ಒದಗಿಸಿದ್ದರಿಂದ ಸಮಸ್ಯೆಯಾಗಲಿಲ್ಲ. ಅದಕ್ಕೆ ತಕ್ಕಂತೆ ಟ್ಯೂನ್ ಮಾಡಿದೆ' ಎಂದರು.
'ನಮ್ದೂ ಒಂಥರಾ ಬಿಗ್‌ಬಾಸ್‌ನಲ್ಲಿನ 13 ಜನ ಸೆಲೆಬ್ರಿಟಿಗಳ ಕಿತಾಪತಿ ಕಥೆ. ಸಖತ್ ನಗಿಸ್ತೀವಿ. ನೀವೂ ನಕ್ಕುಬಿಡಿ' ಎಂದರು ರಮೇಶ್ ಅರವಿಂದ್. ಮತ್ತೊಬ್ಬ ನಾಯಕ ಮೋಹನ್ ಹೆಚ್ಚೇನೂ ಮಾತನಾಡಲಿಲ್ಲ. ಬುಲ್ಲೆಟ್ ಪ್ರಕಾಶ್, ಸಾಧು ಕೋಕಿಲ, ರಂಗಾಯಣ ರಘು ಅವರು 'ನಾರಾಯಣ್ ಸಿನಿಮಾಗಳಲ್ಲಿ ನಮಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಅವರ ಶಿಸ್ತಿನ ಬಗ್ಗೆ ಯಾರ್ಯಾರೋ ಏನೇನೋ ಹೇಳ್ತಿದ್ದುದು ಕೇಳಿ ಹೆದರಿಕೊಂಡಿದ್ದೆವು. ಇನ್ನು ಮುಂದೆ ಅವರು ಯಾವಾಗ ಕರೆದರೂ ಬಂದು ನಟಿಸುತ್ತೇವೆ' ಎಂದು ವಾಗ್ದಾನ ಮಾಡಿದರು.
ಅಷ್ಟು ಮಾತು ಮುಗಿಯುತ್ತಿದ್ದಂತೆ ಛತ್ರಿ ಬಂತು, ಅದರೊಳಗಿಂದ ಸಿ.ಡಿ ಕೂಡ. ಹೀರೋಯಿನ್‌ಗಳಾದ ಪವಿತ್ರಾ ಗೌಡ, ಮಾನಸಿ, ಸನಾತನಿ, ನಿರ್ಮಾಪಕ ಪವನ್ ಕಾರ್ತಿಕ್ ಮತ್ತು ನಾರಾಯಣ್ ಪತ್ನಿ ಭಾಗ್ಯವತಿ ಉಪಸ್ಥಿತರಿದ್ದರು.
ಎಸ್.ನಾರಾಯಣ್ ಅವರು ವರನಟ ಡಾ.ರಾಜ್‌ಕುಮಾರ್ ಬಗ್ಗೆ ಬರೆದಿರುವ ಪುಸ್ತಕ 'ಮುತ್ತು' ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಯಿತು. 'ಶಬ್ದವೇಧಿ ಸಿನಿಮಾಗೆ ಮುಂಚೆ ನಡೆದ ಚರ್ಚೆಗಳಿಂದ ಹಿಡಿದು ಸಿನಿಮಾ ಬಿಡುಗಡೆಯಾದ ನಂತರವೂ ಅಣ್ಣಾವ್ರ ಜೊತೆ ಇದ್ದ ಒಡನಾಟ, ಬಾಲ್ಯದಿಂದ ಹಿಡಿದು ಪಂಚಭೂತಗಳಲ್ಲಿ ಲೀನವಾಗುವವರೆಗೆ ಅವರ ಬಗ್ಗೆ ನನಗೆ ಗೊತ್ತಿದ್ದ ಕತೆಗಳನ್ನು, ಅವರ ಬಂಧುಬಳಗ ನೆನಪಿಸಿಕೊಂಡ ಘಟನೆಗಳನ್ನು ಇಲ್ಲಿ ದಾಖಲಿಸಿದ್ದೇನೆ' ಎಂದು ಕೃತಿ ಕುರಿತು ಹೇಳಿಕೊಂಡರು.

-ರಾಜೇಶ್ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.