KISS

ಪಾಕಿಸ್ತಾನದ ಮೂಲದ ನಟಿ ವೀಣಾ ಮಲ್ಲಿಕ್ ಕನ್ನಡದಲ್ಲಿ ತುಟಿಗಳ ಜತೆ ತುಂಟಾಟವಾಡಿದರು. ಈಕೆಯ ಲಿಪ್ ಲಾಕ್ ಮಾಡಿದ ನಟ ಅಕ್ಷಯ್ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದರು. 'ತುಪ್ಪ ಬೇಕಾ ತುಪ್ಪಾ' ಎಂದ ನಟಿ ರಾಗಿಣಿ 'ನಾನು ಕಿಸ್ ಮಾಡಲಿಕ್ಕೂ, ಕಿಸ್ ಮಾಡಿಸಿಕೊಳ್ಳುವುದಕ್ಕೂ ಸೈ' ಎಂದರು. ಅತ್ತ ದಕ್ಷಿಣ ಭಾರತದ ಖ್ಯಾತ ತಾರೆ ಶ್ರೇಯಾ ಶರಣ್ ಕೂಡ 'ಐ ಯಾಮ್ ನಾಟ್ ಎಗೆನೆಸ್ಟ್ ಕಿಸಿಂಗ್ ಆಂಡ್ ಬಿಕಿನಿ' ಎಂದು ಹಾಟ್ ಬಾಂಬ್ ಸಿಡಿಸಿದರು. 'ತಾನು ಯಾರಿಗೂ ಕಮ್ಮಿ ಇಲ್ಲ' ಎಂದುಕೊಂಡ ಬಿಚ್ಚು ಮನಸ್ಸಿನ ನಟಿ ಮಲ್ಲಿಕಾ ಶೆರಾವತ್ ನಾಗರಹಾವಿಗೆ 'ಹಿಸ್ ಹಿಸ್ ಬುಸ್ ಬುಸ್' ಎನ್ನುತ್ತಲೇ ಕಿಸ್ ಮಾಡಿಬಿಟ್ಟಳು. ಅದನ್ನು ನೋಡಿ ಪಡ್ಡೆ ಹುಡುಗರು ಬೆಕ್ಕಸ ಬೆರಗಾಗಿಬಿಟ್ಟರು.
ಇದೆಲ್ಲಕ್ಕಿಂತ ಸಾಕಷ್ಟು ಮೊದಲೇ ಕನ್ನಡದ ಹುಡುಗಿ ಸ್ಮಿತಾ ಅಲಿಯಾಸ್ ನಿವೇದಿತಾಳಿಗೆ 'ದುನಿಯಾ' ವಿಜಯ್ 'ಅವ್ವ' ಎನ್ನುತ್ತಲೇ 'ಮುತ್ತಿನ' ಮಳೆ ಸುರಿಸಿದರು. ತೆರೆ ಮೇಲೆ ಹೀಗೆ ಸಿರೀಯಲ್ ಕಿಸ್ಸರ್ನನ್ನು ನೋಡಿ ಸ್ವತಃ ಸ್ಮಿತಾ ಬೆಚ್ಚಿ ಬಿದ್ದಳು. 'ನಾನೇನು ಕಮ್ಮಿನಾ' ಎಂದು 'ನೆನಪಿರಲಿ' ಪ್ರೇಮ್ ಬಾಂಬೆ ಬೆಡಗಿ ಕರಿಷ್ಮಾ ತನ್ನಾಳನ್ನು ದೀರ್ಘವಾಗಿ ಚುಂಬಿಸಿಬಿಟ್ಟು, 'ಮತ್ತೆ ಬನ್ನಿ ಪ್ರೀತ್ಸೋಣ' ಎಂದು ನಕ್ಕರು. ಇನ್ನು ನಿರ್ದೇಶಕ ರವಿ ಶ್ರೀವತ್ಸ 'ಗಂಡ ಹೆಂಡತಿ' ಚಿತ್ರದಲ್ಲಿ ತಿಲಕ್ ಹಾಗೂ ಸಂಜನಾ ನಡುವೆ 'ಕಿಸ್ಸಿಂಗ್ ಕೋರ್ಸ್' ಅನ್ನೇ ಆರಂಭಿಸಿಬಿಟ್ಟರು. ಮಡಿವಂತಿಕೆ ಬಿಟ್ಟು ಸಿನಿಪರದೆ ನಟ, ನಟಿಯರ ಮುತ್ತಿನ ಮಳೆಯಲ್ಲಿ ತೋಯ್ದು ಪುನೀತರಾಗುತ್ತಿರುವುದು ಹೀಗೆ. ಬೆಡ್ರೂಮ್ ಗಲಾಟೆಗಳು ತೆರೆ ತುಂಬಾ ತುಂಬಿಕೊಳ್ಳುತ್ತಿವೆ. ಹೀಗಾಗಿ ಈಗ ಯಾವುದೂ ನಿಷಿದ್ಧವಲ್ಲ, ಎಲ್ಲವೂ 'ಓಪನ್'!
ಸಿನಿಮಾ ಕನ್ನಡಿಯಲ್ಲಿ ಮೂಡಿ ಬರುವ ರೋಮ್ಯಾನ್ಸ್, ಹಾಟ್, ಡ್ಯೂಯೆಟ್ ದೃಶ್ಯಗಳನ್ನು ಹೀಗೆ ಒಂದೇ ಸಾಲಿನಲ್ಲಿ ವರ್ಣಿಸಬಹದು. ಆದರೆ ಈ 'ಓಪನ್' ಎನ್ನುವ ಮಾತಿನಲ್ಲಿ ಅಡಗಿರುವ ಗಮ್ಮತ್ತು ಮಾತ್ರ ತೆರೆ ಮೇಲೆ ಮತ್ತು ತೆರೆಯಾಚೆಗೂ ಸಾಕಷ್ಟು ಬಿಸಿಯೇರಿಸುತ್ತಿದೆ. ತುಟಿಯಂಚಿನ 'ತುಂಟಾಟ'ದ ಚಮತ್ಕಾರಗಳೇ ಹಾಗೆ. ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿ 'ಕಿಸ್'ಗೆ ಎಸ್ ಎನ್ನದೆ 'ನೋ' ಎಂದಿದ್ದೇ ಹೆಚ್ಚು. ಹೀಗಾಗಿ ಮೈ ತುಂಬಾ ಬಟ್ಟೆ ಹೊತ್ತ ನಾಯಕಿಯರ ಕಾಲದಲ್ಲಿ 'ಕಿಸ್ ಬಾಯ್'ಗಳಿಗೆ ಕೆಲಸವಿರಲಿಲ್ಲ. ಆಗ ಸಸ್ಯಹಾರಿ ಪ್ರೇಕ್ಷಕ ವರ್ಗ ಕೂಡ ದೊಡ್ಡ ಸಂಖ್ಯೆಯಲ್ಲಿತ್ತು. ಆಗ ಹೆಚ್ಚೆಂದರೆ ಹೀರೊಯಿನ್ಗಳು ಮಳೆಯಲ್ಲಿ ನೆನೆಯುತ್ತ ಬೀರುವ ಮಾದಕ ನೋಟಗಳೇ ಕಿಸ್ಗಿಂಥ ಪರಿಣಾಮಕಾರಿಯಾಗಿತ್ತು.
ಆದರೆ ತೆರೆ ಮೇಲೆ ನಟಿಯರಿಗೆ ಬರುಬರುತ್ತಾ ಬಟ್ಟೆ ಎಂದರೆ ಅಲರ್ಜಿ ಎನ್ನಿಸಿದಾಗ ಮುತ್ತಿನ ಗಮ್ಮುತ್ತು ಆರಂಭವಾಯಿತು. ಕನ್ನಡದ ಮಟ್ಟಿಗೆ 'ಮುತ್ತಿ'ನಂಥ ದೃಶ್ಯಗಳನ್ನು ಕೊಂಚ ಬಿಸಿಬಿಸಿಯಾಗಿ ಕಟ್ಟಿಕೊಟ್ಟವರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ರಿಗೆ ಹೆಚ್ಚಿನ ಪಾಲು ಸಲ್ಲುತ್ತದೆ. 'ಮಲ್ಲ' ಚಿತ್ರದಲ್ಲಿ ನಟಿ ಪ್ರಿಯಾಂಕಾ ತುಟಿಗೆ ತುಟಿ ಒತ್ತಿದ್ದು ಪಡ್ಡೆ ಹುಡುಗರು ಮರೆಯುವ ಹಾಗಿಲ್ಲ. ಹಾಲಿವುಡ್ನಲ್ಲಿ ಕಿಸ್ಗೆ ಪ್ರತ್ಯೇಕ ಸ್ಥಾನ ಅಥವಾ ಮಹತ್ವ ಇಲ್ಲದಿದ್ದರೂ ಕಿಸ್ಗಳಿಗೇನೂ ಅಲ್ಲಿ ಬರವಿಲ್ಲ. ಆದರೆ ಗ್ರಾಮರ್ಗಿಂತ ಗ್ಲಾಮರ್ ಅನ್ನೇ ಹೆಚ್ಚು ನೆಚ್ಚಿಕೊಂಡ ಬಾಲಿವುಡ್ ಇಂಥ ಮುತ್ತಿನಂತ ಪರಂಪರೆಯನ್ನು ಬೇಗ ಅಪ್ಪಿಕೊಂಡಿತು. ಹೀಗಾಗಿ ಸೀರಿಯಲ್ ಕಿಲ್ಲರ್ಗಳ ಹಾಗೆ ಸೀರಿಯಲ್ ಕಿಸ್ಸರ್ ಬಾಯ್ ಹಿಮೇಶ್ ರಶ್ಮಿಯಾ ಹುಟ್ಟಿಕೊಂಡ. ಇತ್ತೀಚೆಗಂತೂ ಬಾಲಿವುಡ್ ಖಾಂದಾನ್ನಲ್ಲಿ ಕಿಸ್ಸಿಂಗ್ ಪುರಾಣಗಳಿಲ್ಲದೆ ಸಿನಿಮಾ ಮುಗಿಯಲ್ಲ ಅಂದರೆ ನಂಬಿ!
ಇನ್ನು ಕನ್ನಡಕ್ಕೆ ಬರುವುದಾದರೆ... ಹೊರಗಿನ ನಾಯಕಿಯರೊಂದಿಗೆ ನಟ ರವಿಚಂದ್ರನ್ ಹೆಚ್ಚು 'ಆಟ'ವಾಡಿದ್ದಾರೆ. ಅಂಥ ನಾಯಕಿಯರ ಪೈಕಿ ಖುಷ್ಬೂ ಕೂಡ ಒಬ್ಬರು. 'ಅಂಜದಗಂಡು' ಚಿತ್ರದ ಹೊತ್ತಿಗೆ ರವಿಚಂದ್ರನ್ ಹಾಗೂ ಖುಷ್ಬೂ ಕನ್ನಡದಲ್ಲಿ ಹಾಟ್ ಫೇವರೆಟ್ ಜೋಡಿಯಾಗಿತ್ತು. ರೇಣುಕಾ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಖುಷ್ಬೂಗೆ ಲಿಪ್ ಲಾಕ್ ಮಾಡಿದ್ದು ಆಗ ದೊಡ್ಡ ಸುದ್ದಿಯಾಗದಿದ್ದರೂ ಚಿತ್ರದ ಹೈಲೆಟ್ ಎನ್ನಿಸಿಕೊಂಡಿತು. 'ಅವ್ವ' ಚಿತ್ರದಲ್ಲಿ ವಿಜಯ್- ನಿವೇದಿತಾ, 'ಇದೇನಿದು ಹೃದಯದಲ್ಲಿ' ನಟ ರಾಹುಲ್- ನಟಿ ಕೀರ್ತಿ, 'ವರದನಾಯಕ' ಚಿತ್ರದಲ್ಲಿ ಚಿರಂಜೀವಿ ಸರ್ಜಾ- ನಿಖಿಶಾ ಪಟೇಲ್, 'ವೀರಮದಕರಿ' ಚಿತ್ರದಲ್ಲಿ ಸುದೀಪ್- ರಾಗಿಣಿ, 'ಲೈಫು ಇಷ್ಟೇನೆ' ಚಿತ್ರದ ಹಾಡಿನಲ್ಲಿ ದಿಗಂತ್- ಸಂಯುಕ್ತಾ ಬೆಳವಾಡಿ, 'ಚಂದ್ರ' ಚಿತ್ರದಲ್ಲಿ ಪ್ರೇಮ್- ಶ್ರೇಯಾ ಶರಣ್... ಹೀಗೆ ಲಿಪ್ ಲಾಕ್ ಗಮ್ಮತ್ತಿನ ಪಟ್ಟಿ ದೊಡ್ಡದಾಗುತ್ತ ಬೆಳೆಯುತ್ತದೆ.
ಬದಲಾಗುತ್ತಿರುವ ಸಿನಿಮಾ ನೋಡುವ ಪ್ರೇಕ್ಷಕ ವರ್ಗ, 80 ಮತ್ತು 90ರ ದಶಕದಲ್ಲೇ ಇಂಥ ಕಿಸ್ಸಿಂಗ್ ದೃಶ್ಯಗಳನ್ನು ಹೆಚ್ಚು ಚಾಲ್ತಿಗೆ ತಂದ ರವಿಚಂದ್ರನ್ರಂಥ ನಟರಿಂದ ಕನ್ನಡದಲ್ಲೂ ಸಿನಿ ಪ್ರಿಯರು ಮುತ್ತಿನ ಘಾಟು ಅನುಭವಿಸುವ ಅದೃಷ್ಟಕ್ಕೆ ಪಾತ್ರರಾಗಿದ್ದಾರೆ. 'ತುಟಿ'ಯಂಚಿನ ಇಂಥ ಚಮತ್ಕಾರಗಳಿಗೆ ನಟರು ಮಾತ್ರ ಆಸಕ್ತಿ ತೋರಿಸುತ್ತಿಲ್ಲ. ನಟಿಯರೂ ಕೂಡ 'ನಾವ್ ಎಲ್ಲದಕ್ಕೂ ರೆಡಿ ಕಣಪ್ಪ' ಎನ್ನುತ್ತಿದ್ದಾರೆ. ಹೀಗಾಗಿ ಕಿಸ್ 'ಬಾಯ್'ಗಳ ಜತೆಗೆ ಕಿಸ್'ರಾಣಿ'ಯರ ಸಂಖ್ಯೆಯೂ ಹೆಚ್ಚುತ್ತಿದೆ. ಒಟ್ಟಿನಲ್ಲಿ ಹಿಂದಿನಂತೆ 'ಮುತ್ತು' ಈಗ ಆಪತ್ತಲ್ಲ, ಅದು ಚಿತ್ರತಂಡದಪಾಲಿಗೆ ವರ!
- ಆರ್.ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


